More

    ವಿರೋಧಕ್ಕಾಗಿ ವಿರೋಧ ಬೇಡ: ಜನಮತ

    ‘ವ್ಯಕ್ತಿಯನ್ನು ಕೊಲ್ಲಬಹುದು ಆದರೆ, ಆತನ ವಿಚಾರ ಸಾಯಿಸಲು ಸಾಧ್ಯವಿಲ್ಲ’ ಇದು ಗ್ರೀಸ್​ನ ಶ್ರೇಷ್ಠ ತತ್ತ್ವಜ್ಞಾನಿ ಸಾಕ್ರೆಟಿಸನ ಮಾತು. ಈ ವಿಷಯ ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಕರ್ನಾಟಕ ಸರ್ಕಾರವು ಹತ್ತನೇ ತರಗತಿಯ ಕನ್ನಡ ಪಠ್ಯಕ್ಕೆ, ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎನ್ನುವ ಪಾಠವನ್ನು ಸೇರಿಸಿದೆ. ಅದರ ಬಗ್ಗೆ ಕೆಲವರು ವಿವಾದ ಸೃಷ್ಟಿಸಿದ್ದಾರೆ. ಇಲ್ಲಿ ಪ್ರಶ್ನೆ ಪಾಠದ ವಿಷಯದ ಬಗ್ಗೆಯಲ್ಲ, ಅದನ್ನು ಹೇಳಿದ ವ್ಯಕ್ತಿ ಯಾರು? ಎನ್ನುವುದೇ ವಿವಾದದ ವಸ್ತು. ಆ ಪಾಠವನ್ನು ಓದಿದರೆ ನಿಜವಾಗಿ, ನಾಯಕತ್ವ ವ್ಯಕ್ತಿಕೇಂದ್ರಿತವೇ ಅಥವಾ ವಿಚಾರಕೇಂದ್ರಿತವಾಗಿರಬೇಕೆ? ಎನ್ನುವ ಪ್ರಶ್ನೆಗೆ ಉತ್ತರ ಸಿಗುವಂಥದ್ದು. ನಾಲ್ಕು ದಿನ ಒಬ್ಬ ನಾಯಕ, ಉಳಿದ ದಿನ ಮತ್ತೊಬ್ಬ ನಾಯಕನನ್ನು ಅರಸಿ ಹೊರಡುವ ಈ ದಿನಮಾನದಲ್ಲಿ ವ್ಯಕ್ತಿಯ ಆಲೋಚನೆಗಳು ಉನ್ನತ ಆದರ್ಶವನ್ನು ಅನುಸರಿಸಲು ಈ ಪಾಠ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವಂಥದ್ದು. ವ್ಯಕ್ತಿಯೊಬ್ಬ ಅವನಿಗಿಂತ ದೊಡ್ಡ ವ್ಯಕ್ತಿಯನ್ನು ಅನುಸರಿಸಬೇಕಾ ಅಥವಾ ಶ್ರೇಷ್ಠ ವಿಚಾರಧಾರೆಗಳನ್ನು ಅನುಸರಿಸಬೇಕಾ? ಎಲ್ಲ ಕಾಲಮಾನದಲ್ಲೂ ಆತ ಅದೆಷ್ಟೇ ಉತ್ಕೃಷ್ಟ ಚಿಂತನೆಯವನಾಗಿರಲಿ ಆತ ದೋಷರಹಿತ ವ್ಯಕ್ತಿತ್ವದವನಾಗಿರಲು ಸಾಧ್ಯವೇ ಇಲ್ಲ. ನುಡಿದಂತೆ ನಡೆಯದೇ ಹೋದಾಗ ಅಂಥ ನಾಯಕತ್ವಕ್ಕೆ ಯಾವ ಕಿಮ್ಮತ್ತಿದೆ? ಹಾಗಾದರೆ ನಾವು ಅನುಸರಿಸುವ ಆದರ್ಶ ವ್ಯಕ್ತಿಯನ್ನು ಬದಲಿಸಬೇಕೆ? ಈ ಎಲ್ಲ ಗೊಂದಲಗಳಿಗೆ ಉತ್ತರಿಸುವ ಪ್ರಯತ್ನವೇ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಪಾಠ.

    ವ್ಯಕ್ತಿಯೊಬ್ಬ ಉನ್ನತ ಜೀವನ ನಡೆಸಿದಾಗ ಆತನಿಗೆ ದೈವತ್ವದ ಸ್ಥಾನ ಕೊಡುತ್ತೇವೆ. ನಮ್ಮ ಸಮಾಜದಲ್ಲಿ ಆಗಿಹೋದ ಬುದ್ಧ, ಬಸವ, ಅಂಬೇಡ್ಕರ್ ಸೇರಿ ಹಲವರನ್ನು ಆದರ್ಶ ಪುರುಷರಾಗಿ ಕಂಡರೂ ಅವರನ್ನು ಜಾತಿ, ಪಕ್ಷಗಳಿಗೆ ಸೀಮಿತಗೊಳಿಸಿ, ಅವರನ್ನು ದೇವರಾಗಿಸಿ ಪೂಜಿಸಿ, ಅವರಂತೆ ನಾವು ಬದುಕಲಾಗುತ್ತದೆಯೇ ಎಂದು ನಮಗೆ ನಾವೇ ಪ್ರಶ್ನಿಸಿಕೊಂಡು ಸುಮ್ಮನಾದವರು ನಾವು. ಹಾಗಾದರೆ ನಾವು ಅನುಸರಿಸಬೇಕಾಗಿದ್ದು ಯಾರನ್ನು?! ಈ ಪ್ರಶ್ನೆಗೆ ಡಾ. ಕೇಶವ ಬಲಿರಾಂ ಹೆಡಗೆವಾರರು ಅಪಾರ ಅಧ್ಯಯನ ಮತ್ತು ಆ ಕಾಲದ ಸಾಮಾಜಿಕ ಜೀವನ, ಅದರ ನಾಯಕತ್ವವನ್ನು ಅವಲೋಕಿಸಿ, ‘ವ್ಯಕ್ತಿ ಶಾಶ್ವತವಲ್ಲ, ಆದರೆ ದೇಶ ಶಾಶ್ವತ ಮತ್ತು ಶಾಶ್ವತವಾದ ಈ ದೇಶದ ಅಸ್ತಿತ್ವಕ್ಕೆ ಪರಂಪರಾಗತವಾಗಿ ಉಳಿಸಿ ಬೆಳೆಸಿಕೊಂಡ ಮೌಲ್ಯಗಳು, ಸಿದ್ಧಾಂತಗಳು ಕಾರಣ’ ಎಂದರು. ಹಾಗಾಗಿ ನಾವು ಅನುಸರಿಸಬೇಕಾಗಿರುವುದು ವ್ಯಕ್ತಿಯಲ್ಲ, ಉನ್ನತ ವಿಚಾರಧಾರೆ ಸಿದ್ಧಾಂತಗಳು ಎನ್ನುವುದಾದರೂ ಎಲ್ಲರ ವಿಚಾರಧಾರೆಗಳನ್ನು ಪಾಲಿಸುವುದು ಹೇಗೆ?

    ಹಾಗಾಗಿ ಡಾ. ಹೆಡಗೆವಾರರು ಹೇಳುತ್ತಾರೆ, ‘ನಾವು ಶಾಶ್ವತವಾಗಿರುವ ಮತ್ತು ಬದಲಾಗದ ದೋಷರಹಿತವಾಗಿರುವ ಭಗವಾಧ್ವಜವನ್ನು ಗುರುವೆಂದು ಗುರುಪೂರ್ಣಿಮೆ ದಿನ ಪೂಜಿಸುತ್ತೇವೆ. ನಾವು ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ. ಏಕೆಂದರೆ ಯಾರೇ ಆಗಲಿ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿಯೇ ಇರುತ್ತಾರೆಂಬ ಭರವಸೆಯಾದರೂ ಏನು? ಕೇವಲ ತತ್ತ್ವವೊಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಈ ಧ್ವಜ ಸಾಂಕೇತಿಸಬಲ್ಲದು. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಾಣುತ್ತವೆಯೋ, ಯಾವುದನ್ನು ಕಂಡ ಕೂಡಲೆ ನಮ್ಮ ಹೃದಯದಲ್ಲಿ ಅಪೂರ್ವ ಸ್ಪೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ’ ಎಂದು.

    ಇದು ಒಟ್ಟು ಪಾಠದ ಸಾರಾಂಶ. ಇದರಲ್ಲಿ ದೋಷ ಹುಡುಕುವಂಥದ್ದೇನಿದೆ? ಇನ್ನು ವ್ಯಕ್ತಿ ದೃಷ್ಟಿಯಿಂದ ನೋಡುವುದಾದರೂ ಡಾ. ಕೇಶವ ಬಲಿರಾಂ ಹೆಡಗೆವಾರರು ಜನ್ಮತಃ ದೇಶಭಕ್ತರು. ಕೇವಲ ಐದು ಜನರೊಡಗೂಡಿ 1925ರಲ್ಲಿ ಅವರು ರಾಷ್ಟ್ರಕಾರ್ಯಕ್ಕಾಗಿ ಕಟ್ಟಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಜಗತ್ತಿನ ಅತ್ಯಂತ ದೊಡ್ಡ ಸಂಘಟನೆಯಾಗಿ ಬೆಳೆದಿದೆ.

    | ಡ್ಯಾನಿ ಪಿರೇರಾ ಅಧ್ಯಾಪಕರು, ಹಳ್ಳಿಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts