More

    ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿಪಿ ಹತ್ಯೆ ಪ್ರಕರಣ: ಆರೋಪಿ ಡೈರಿಯಲ್ಲಿದ್ದ ಬರಹ ನೋಡಿ ದಂಗಾದ ಪೊಲೀಸರು

    ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಡಿಜಿಪಿ ಹೇಮಂತ್​ ಕುಮಾರ್​ ಲೋಹಿಯಾ ಅವರ ಮೃತದೇಹ ಕತ್ತು ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ ಸೋಮವಾರ (ಅ.03) ತಡರಾತ್ರಿ ಪತ್ತೆಯಾಗಿದ್ದು, ಡಿಜಿಪಿ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತಿದ್ದ ವ್ಯಕ್ತಿಯನ್ನು ಪ್ರಮುಖ ಶಂಕಿತ ಆರೋಪಿ ಎನ್ನಲಾಗಿದೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ಪತ್ತೆಯಾಗಿರುವ ಆತನ ಡೈರಿಯಲ್ಲಿ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ.

    57 ವರ್ಷದ ಲೋಹಿಯಾ ಅವರು ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ವಿಭಾಗದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಮೃತದೇಹ ಕತ್ತು ಸೀಳಿದ ಮತ್ತು ಸುಟ್ಟು ಗಾಯಗಳ ಸ್ಥಿತಿಯಲ್ಲಿ ಜಮ್ಮುವಿನ ಹೊರವಲಯದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಘಟನೆಯ ಬೆನ್ನಲ್ಲೇ ಲಷ್ಕರ್​ ಎ ತೊಯ್ಬಾ ಉಗ್ರ ಸಂಘಟನೆಯ ಭಾರತೀಯ ಉಪಶಾಖೆ ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಪೋರ್ಸ್​ (ಪಿಎಎಫ್​ಎಫ್​)
    ಹತ್ಯೆಯ ಹೊಣೆ ಹೊತ್ತುಕೊಂಡು ಪತ್ರಿಕಾ ಪ್ರಕಟಣೆ ಹೊರಡಿಸಿತು. ಆದರೆ, ಪೊಲೀಸರು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ ಮತ್ತು ಕೊಲೆಗೆ ಉಗ್ರರ ಸಂಪರ್ಕವನ್ನು ಸದ್ಯಕ್ಕೆ ತಳ್ಳಿ ಹಾಕಿದ್ದಾರೆ.

    ಅಂದಹಾಗೆ ಲೋಹಿಯಾ ಅವರನ್ನು ಕಳೆದ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ಕಾರಾಗೃಹ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಸೆಕ್ಯುರಿಟಿ ದೃಶ್ಯಾವಳಿ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸರು ಮೃತ ಡಿಜಿಪಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಯಾಸಿರ್​ ಅಹ್ಮದ್​ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆರೋಪಿ ಯಾಸಿರ್​, ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಎಂದು ತಿಳಿದುಬಂದಿದೆ.

    ಇದೀಗ ಇಡೀ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಅದಕ್ಕೆ ಕಾರಣ ಪೊಲೀಸರಿಗೆ ಲಭ್ಯವಾಗಿರುವ ಯಾಸಿರ್​ ಡೈರಿ. ಅದರಲ್ಲಿರುವಂತೆ ಯಾಸಿರ್​ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಜಮ್ಮುವಿನ ಹಿರಿಯ ಪೊಲೀಸ್​ ಅಧಿಕಾರಿ ಮುಕೇಶ್​ ಸಿಂಗ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕೊಲೆ ಮಾಡಲು ಬಳಸಲಾಗಿದೆ ಎನ್ನಲಾದ ಒಡೆದ ಕೆಚಪ್​ ಬಾಟಲ್​ ಮತ್ತು ಡೈರಿ ಸಾಕ್ಷ್ಯಾಧಾರವನ್ನು ಯಾಸಿರ್​ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ತಲೆ ಮರೆಸಿಕೊಂಡಿರುವ ಆರೋಪಿ ಯಾಸಿರ್ ಪತ್ತೆಗಾಗಿ ಆತನ​ ಫೋಟೋವನ್ನು ಸಹ ಪೊಲೀಸರು ಬಿಡುಗಡೆ ಮಾಡಿದ್ದಾರೆ.

    ಡಿಜಿಪಿ ಲೋಹಿಯಾ ಅವರು ದಾಳಿಗೆ ಒಳಗಾದಾಗ ತಮ್ಮ ಊದಿಕೊಂಡಿದ್ದ ಕಾಲಿಗೆ ಎಣ್ಣೆ ಹಚ್ಚುತ್ತಿದ್ದರು ಎಂದು ಮುಕೇಶ್​ ಸಿಂಗ್​ ಹೇಳಿದ್ದಾರೆ. ಮೊದಲು ಲೋಹಿಯಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪಿ, ನಂತರ ಒಡೆದ ಕೆಚಪ್​ ಬಾಟಲ್​ ಸಹಾಯದಿಂದ ಕತ್ತು ಸೀಳಿದ್ದಾನೆ. ಆ ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆಂದು ಸಿಂಗ್​ ತಿಳಿಸಿದ್ದಾರೆ.

    ಮನೆಯಲ್ಲಿ ಉರಿಯುತ್ತಿದ್ದ ಬೆಂಕಿಯ ಜ್ವಾಲೆಗಳನ್ನು ನೋಡಿದ ಬಳಿಕ ರಕ್ಷಣಾ ಸಿಬ್ಬಂದಿ, ಲೋಹಿಯಾ ಅವರ ಕೋಣೆಗೆ ನುಗ್ಗಿದರು. ಆದರೆ, ಕೊಠಡಿಯು ಒಳಗಿನಿಂದ ಲಾಕ್ ಆಗಿತ್ತು. ಆರೋಪಿಯು ಘಟನೆಯ ಬಳಿಕ ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಸಿಂಗ್ ಹೇಳಿದರು.

    ಆರೋಪಿಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಡೈರಿ ಸೇರಿದಂತೆ ಕೆಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿರುವಂತೆ ಆರೋಪಿ ಯಾಸಿರ್​ಗೆ ಸಾವಿನ ಮೇಲೆ ನಿಶ್ಚಲವಾಗಿರುವ ಖಿನ್ನತೆಯ ಮನಸ್ಸನ್ನು ಬಹಿರಂಗಪಡಿಸುತ್ತದೆ. ಸಾವು ನನ್ನ ಜೀವನಕ್ಕೆ ಬಂದಿದೆ. ನನ್ನನ್ನು ಕ್ಷಮಿಸಿ, ನಾನು ಕೆಟ್ಟ ದಿನ, ವಾರ, ತಿಂಗಳು, ವರ್ಷ, ಜೀವನವನ್ನು ಹೊಂದಿದ್ದೇನೆ ಎಂದು ಡೈರಿಯಲ್ಲಿ ಬರೆಯಲಾಗಿದೆ.

    ಅಷ್ಟೇ ಅಲ್ಲದೆ, ಡೈರಿಯಲ್ಲಿ ಹಿಂದಿ ಭಾಷೆಯಲ್ಲಿ ಹಾಡುಗಳಿವೆ. ಅದರಲ್ಲಿ ಒಂದು “ಭೂಲಾ ದೇನಾ ಮುಝೆ (ನನ್ನನ್ನು ಮರೆತುಬಿಡಿ)” ಎಂದು ಶೀರ್ಷಿಕೆ ನೀಡಲಾಗಿದೆ. ಮತ್ತೊಂದು ಪುಟದಲ್ಲಿ ಸಣ್ಣ ವಾಕ್ಯಗಳು ಮತ್ತು ಟಿಪ್ಪಣಿಗಳನ್ನು ಬರೆಯಲಾಗಿದೆ. ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ, ಜೀವನವು ಕೇವಲ ದುಃಖಮಯವಾಗಿದೆ ಎಂದು ಬರೆಯಲಾಗಿದೆ. ಅಲ್ಲದೆ, ಫೋನ್ ಬ್ಯಾಟರಿಯ ರೇಖಾಚಿತ್ರದೊಂದಿಗೆ ಪ್ರಾರಂಭವಾಗುವ ಚಾರ್ಟ್ ಸಹ ಡೈರಿಯಲ್ಲಿದ್ದು, ನನ್ನ ಜೀವನ 1%, ಪ್ರೀತಿ 0%, ಒತ್ತಡ 90%, ದುಃಖ 99% ಮತ್ತು ನಕಲಿ ನಗು 100% ಎಂದು ಬರೆಯಲಾಗಿದೆ. (ಏಜೆನ್ಸೀಸ್​)

    ಜಮ್ಮು ಕಾಶ್ಮೀರದ ಕಾರಾಗೃಹ ಡಿಜಿಪಿ ಭೀಕರ ಕೊಲೆ: ಹತ್ಯೆಯ ಹೊಣೆ ಹೊತ್ತ PAFF ನಿಂದ ಕೇಂದ್ರ ಸರ್ಕಾರಕ್ಕೆ ಸವಾಲು

    ಬೈಕ್​ನಲ್ಲಿ ಬಂದು ಭಾನುವಾರ ಮಾತ್ರ ಸರಗಳ್ಳತನ! ಖದೀಮನ ಹಿನ್ನೆಲೆ ತಿಳಿದು ಬೆರಗಾದ ಹಾಸನ ಪೊಲೀಸರು

    ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಮುಂಬೈನಲ್ಲಿ ಖರೀದಿಸಿರುವ ಐಷಾರಾಮಿ ಅಪಾರ್ಟ್​ಮೆಂಟ್​ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಪ್ರಧಾನಿ ಮೋದಿ ಕಾರ್ಯಕ್ರಮ ವರದಿ ಮಾಡಲು ಪತ್ರಕರ್ತರ ಬಳಿ ನಡತೆ ಪ್ರಮಾಣ ಪತ್ರ ಕೇಳಿದ ಜಿಲ್ಲಾಡಳಿತ! ವ್ಯಾಪಕ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts