More

    ದೇವಸ್ಥಾನ ರಸ್ತೆಗಾಗಿ ಭಕ್ತರ ತ್ಯಾಗ

    ಜಮಖಂಡಿ: ದೇವಸ್ಥಾನದ ರಸ್ತೆಗಾಗಿ ಮನೆಗಳನ್ನು ಬಿಟ್ಟುಕೊಟ್ಟ ಭಕ್ತರು… ಒಂದಲ್ಲ, ಎರಡಲ್ಲ 19 ಮನೆಗಳನ್ನು ನಾಲ್ಕೇ ದಿನಗಳಲ್ಲಿ ತೆರವುಗೊಳಿಸಿ 500 ಅಡಿ ಉದ್ದದ ನೇರ ರಸ್ತೆ ನಿರ್ಮಿಸಿದ ಗ್ರಾಮಸ್ಥರು.

    ಹೌದು, ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಗ್ರಾಮಸ್ಥರು ಊರಿನ ಅರಾಧ್ಯ ದೈವ ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕಾಗಿ ನೇರ ರಸ್ತೆ ನಿರ್ಮಿಸಲು ವಿಶೇಷ ಸಾಹಸ ಮೆರೆದಿದ್ದಾರೆ.

    ಗ್ರಾಮದ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನ ತೆರಳಲು ಇಕ್ಕಟ್ಟಾದ ಗಲ್ಲಿ ಮೂಲಕ ಹೋಗಬೇಕಾಗುತ್ತಿತ್ತು. ಪ್ರತಿ ವರ್ಷ ದವನದ ಹುಣ್ಣಿಮೆ ನಂತರ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ 8ರಿಂದ 10 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಮಹಾಲಕ್ಷ್ಮೀ ದರ್ಶನ ಪಡೆಯತ್ತಾರೆ. ಇಕಟ್ಟಾದ ಗಲ್ಲಿಯಿಂದಾಗಿ ಭಕ್ತರು ದೇವಸ್ಥಾನಕ್ಕೆ ತೆರಳಲು ಹಾಗೂ ಜಾತ್ರೆ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲು ತೀವ್ರ ತೊಂದರೆಯಾಗಿತ್ತು. ಈ ಸಮಸ್ಯೆ ನಿವಾರಣೆಗೆ ದೇವಸ್ಥಾನದ ಕಮಿಟಿಯವರು ಚಿಂತನೆ ನಡೆಸಿದಾಗ ಪೂರ್ವಾಭಿಮುಖವಾಗಿರುವ ದೇವಸ್ಥಾನದ ದ್ವಾರದಿಂದ ನೇರವಾಗಿ ಕಲ್ಹಳ್ಳಿ ರಸ್ತೆವರೆಗೆ ಪಶ್ಚಿಮ-ಪೂರ್ವ ದಿಕ್ಕಿನಲ್ಲಿ ದಾರಿ ನಿರ್ಮಿಸುವ ಯೋಚನೆ ಹೊಳೆದಿದೆ.

    ದೇವಸ್ಥಾನ ಮುಂಭಾಗದಲ್ಲಿ ಬಯಲು ಜಾಗವಿದೆ. ದ್ವಾರದಿಂದ ನೇರವಾಗಿ ಪೂರ್ವಭಾಗದಲ್ಲಿ ಅಂದಾಜು 100 ಅಡಿಗೂ ಅಧಿಕ ಅಂತರದಲ್ಲಿದ್ದ ಮೊದಲ ಮನೆಯಿಂದ ಹಿಡಿದು ಕಲ್ಹಳ್ಳಿ ರಸ್ತೆವರೆಗೆ 19 ಮನೆಗಳಿದ್ದವು. ಎಲ್ಲ ಮನೆಗಳ ಮಾಲೀಕರ ಎದುರು ಕಮಿಟಿಯವರು ತಮ್ಮ ವಿಚಾರವನ್ನು ಪ್ರಸ್ತಾಪಿಸಿದಾಗ ಪ್ರತಿಯೊಬ್ಬರೂ ದೇವಸ್ಥಾನದ ದಾರಿಗಾಗಿ ಮನೆಗಳನ್ನು ಸ್ವಇಚ್ಛೆಯಿಂದ ಬಿಟ್ಟು ಕೊಡುವುದಾಗಿ ತಿಳಿಸಿದ್ದಾರೆ. ಅವರ ಒಪ್ಪಿಗೆ ನಂತರ ಗ್ರಾಮದ ಪ್ರಮುಖರು ಸೇರಿ ಗ್ರಾಮಸ್ಥರ ನೆರವಿನಿಂದ ದೇವಸ್ಥಾನಕ್ಕೆ ಹೊಸ ರಸ್ತೆ ನಿರ್ಮಿಸುವ ಸಂಕಲ್ಪವನ್ನು ಈಡೇರಿಸಿದ್ದಾರೆ.

    ಉಚಿತ ಜಾಗ ನೀಡಿದರು
    ದೇವಸ್ಥಾನದ ದಾರಿಗೆ ಮನೆಗಳನ್ನು ಬಿಟ್ಟು ಕೊಟ್ಟ ಬಡ ಭಕ್ತರಿಗೆ ಗ್ರಾಮದ ಕೆಲ ಪ್ರಮುಖರು ತಮ್ಮ ಜಾಗಗಳನ್ನು ಉಚಿತವಾಗಿ ನೀಡಿ ತ್ಯಾಗಿಗಳೊಂದಿಗೆ ತಾವು ತ್ಯಾಗ ಮಾಡಿ ಮಾದರಿಯಾಗಿದ್ದಾರೆ. ಮನೆ ಬಿಟ್ಟು ಕೊಟ್ಟ ಆಸ್ತಿವಂತವರು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಕಮಿಟಿಯವರು ಪ್ರತಿಕೆಗೆ ತಿಳಿಸಿದರು.

    ಗ್ರಾಮಸ್ಥರ ಸಾಮೂಹಿಕ ಶ್ರಮದಾನ
    ಗ್ರಾಮದ ಎಲ್ಲ ಸಮಾಜದವರು ಒಂದೊಂದು ದಿನ ನಿಗದಿಪಡಿಸಿಕೊಂಡು ಟ್ರ್ಯಾಕ್ಟರ್, ಜೆಸಿಬಿಗಳೊಂದಿಗೆ ಶ್ರಮದಾನ ಮಾಡುವ ಮೂಲಕ ಕೇವಲ 8 ದಿನಗಳಲ್ಲಿ 23 ಅಡಿ ಅಗಲ 550 ಅಡಿ ಉದ್ದದ ರಸ್ತೆಯನ್ನು ನಿರ್ಮಿಸಿ ಶ್ರಮದಾನದ ಮಹತ್ವ ಸಾರಿದ್ದು ಇತರರಿಗೆ ಮಾದರಿಯಾಗಿದೆ.

    ಆರಾಧ್ಯ ದೈವ ಮಹಾಲಕ್ಷ್ಮೀ
    ಮಧುರಖಂಡಿ ಮಹಾಲಕ್ಷ್ಮೀ ಇಷ್ಟಾರ್ಥಗಳನ್ನು ಪೂರೈಸುವ ದೇವಿ ಎಂದೇ ಭಕ್ತರ ನಂಬಿಕೆಗೆ ಪಾತ್ರವಾಗಿದ್ದಾಳೆ. ಗ್ರಾಮಸ್ಥರ ಮನೆಗಳಲ್ಲಿ ಯಾವುದೇ ಶುಭ ಕಾರ್ಯಗಳಿದ್ದರೆ ಅದಕ್ಕಿಂತ ಮುಂಚೆ ಗ್ರಾಮದೇವತೆ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಪರಂಪರೆ ಇದೆ. ಪ್ರತಿ ವರ್ಷ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ಗ್ರಾಮಸ್ಥರೆಲ್ಲರೂ ಸೇರುತ್ತಾರೆ.

    ಉಪಾಹಾರ ನೀಡಿದ ತಾಯಂದಿರು
    ದಾರಿ ನಿರ್ಮಾಣದಲ್ಲಿ ಶ್ರಮದಾನ ಮಾಡಿದ ಗ್ರಾಮಸ್ಥರಿಗೆ ಗ್ರಾಮದ ತಾಯಂದಿರು ಮನೆಗಳಲ್ಲಿ ಸಿದ್ಧಪಡಿಸಿದ ತಿಂಡಿ ತಿನಿಸುಗಳನ್ನು ಉಣ ಬಡಿಸುವ ಮೂಲಕ ತಾವು ಕೂಡ ದೇವಿ ಸೇವೆ ಮಾಡಿದ್ದಾರೆ.

    ದೇವಸ್ಥಾನಕ್ಕೆ ಹತ್ತಾರು ಸಾವಿರ ಜನರು ಬರುತ್ತಿದ್ದರು. ಚಿಕ್ಕ ಗಲ್ಲಿಗಳಲ್ಲಿ ಪಲ್ಲಕ್ಕಿ ಸಂಚರಿಸುವಾಗ ಸಮಸ್ಯೆ ಅನುಭವಿಸಬೇಕಾಗುತ್ತಿತ್ತು. ಗ್ರಾಮದ ಪ್ರಮುಖರು ದಾರಿ ನಿರ್ಮಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಕೇಳಿದ್ದಕ್ಕೆ ಹಿರಿಯರ ನಿರೀಕ್ಷೆ ಮೀರಿ ಸಹಕಾರ ನೀಡಿದ್ದಾರೆ. ಅವರಿಗೆ ತಾಯಿ ಒಳ್ಳೇದು ಮಾಡುತ್ತಾಳೆ.
    ಭಾಸ್ಕರ ಬಡಿಗೇರ, ಗ್ರಾಮದ ಮುಖಂಡ

    ಸೇವೆ ಮಾಡುವ ಅವಕಾಶ
    ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿ ಎಂದು ಮನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ದೇವಿ ನಮಗೆ ಒಳ್ಳೇದು ಮಾಡಿದ್ದಾಳೆ, ಮುಂದೆ ಕೂಡ ಒಳ್ಳೇದು ಮಾಡುತ್ತಾಳೆ. ಈಗ ನಮಗೆ ದೇವರ ಸೇವೆ ಮಾಡುವ ಒಂದು ಅವಕಾಶ ಸಿಕ್ಕಿದೆ ಎಂದು ರಸ್ತೆಗಾಗಿ ಮನೆ ಬಿಟ್ಟು ಕೊಟ್ಟವರು ಪತ್ರಿಕೆಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts