More

    ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಕ್ಷೆ ನೀಡಿ

    ಜಮಖಂಡಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧ ನೀತಿ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

    ನಗರದ ಹಳೇ ತಹಸೀಲ್ದಾರ್ ಕಚೇರಿ ಆವರಣದಿಂದ ದೇಸಾಯಿ ವೃತ್ತವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.

    ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ರಾಜ್ಯದಲ್ಲಿ ನೆರೆ ಉಂಟಾಗಿ ಲಕ್ಷಾಂತರ ಜನರು ಸಂಕಷ್ಟ ಪಡುತಿದ್ದಾರೆ. ಕೇಂದ್ರ ಸರ್ಕಾರದಿಂದ ಪರಿಹಾರ ತರುವ ನಿಟ್ಟಿನಲ್ಲಿ ಸಂಸದ ಅನಂತಕುಮಾರ್ ಹೆಗಡೆ ಗಂಡಸುತನ ತೋರಿಸಬೇಕು. ಅದು ಬಿಟ್ಟು ಪ್ರಚಾರಕ್ಕಾಗಿ ದೇಶದ ಮಹಾನ್ ನಾಯಕರ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.

    ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಸ್ವಾತಂತ್ರೃಕ್ಕಾಗಿ 6.50 ಲಕ್ಷ ಜನರು ಸತ್ಯಾಗ್ರಹದಲ್ಲಿ ಸಾವನ್ನಪ್ಪಿದ್ದಾರೆ. ದೇಶಕ್ಕಾಗಿ ಹೋರಾಡಿದ ನಾಯಕರಿಗೆ ಹೆಗಡೆ ಅವಮಾನ ಮಾಡಿದ್ದಾರೆ. ಕೂಡಲೇ ಅವರ ಸಂಸತ್ ಸದಸ್ಯತ್ವವನ್ನು ರದ್ದು ಮಾಡಬೇಕು. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಹಿರಿಯ ನ್ಯಾಯವಾದಿ ಎನ್.ಎಸ್.ದೇವರವರ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ರಾಜು ಮನ್ನಿಕೇರಿ, ಅರ್ಜುನ ದಳವಾಯಿ, ನಗರಸಭೆ ಸದಸ್ಯ ರಾಜು ಪಿಸಾಳ, ರಾಹುಲ ಕಲೂತಿ, ರವಿ ಯಡಹಳ್ಳಿ, ಎನ್.ಬಿ. ಗಸ್ತಿ, ಬಿ.ಜಿ. ಪಾಟೀಲ, ಸುಭಾಷ ಸಾವಕಾರ, ಎಂ.ಎಸ್. ಜಕ್ಕನ್ನವರ, ಅಬುಬಕರ ಕುಡಚಿ, ಅಕ್ಬರ್ ಜಮಾದಾರ, ರಾಜು ಕಡಕೋಳ ಇತರರು ಇದ್ದರು.

    ದೇಶಕ್ಕೆ ಸ್ವಾತಂತ್ರೃ ಸಿಗಲು ಕಾಂಗ್ರೆಸ್ ಕೊಡುಗೆ ಬಹಳಷ್ಟು ಇದೆ. ದೇಶದಲ್ಲಿ ಮೀಸಲಾತಿ ಕಾಯ್ದೆಯನ್ನು ತೆಗೆಯುವ ಹುನ್ನಾರ ನಡೆದಿದೆ. ಶಾಂತಿ ಕದಡುವ ಹೇಳಿಕೆ ನೀಡುವ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.
    – ಆನಂದ ನ್ಯಾಮಗೌಡ ಶಾಸಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts