More

    ಹನುಮಂತನಗರದಲ್ಲಿ ಜಲದೀಪಾವಳಿ

    ಬೇಲೂರು: ಪಟ್ಟಣಕ್ಕೆ ಸಮೀಪದ ಹನುಮಂತ ನಗರದಲ್ಲಿರುವ ಪುರಸಭೆಯ ಶುದ್ಧ ಕುಡಿಯುವ ನೀರು ಸರಬರಾಜು ಘಟಕದ ಆವರಣದಲ್ಲಿ ಗುರುವಾರ ಜಲ ದೀಪಾವಳಿ ಆಚರಿಸಲಾಯಿತು.

    ಸ್ವಸಹಾಯ ಸಂಘದ ಮಹಿಳೆಯರಿಗೆ ಕುಡಿಯುವ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಿ, ಬಿಸಿ ನೀರಿನ ಪ್ಲಾಸ್ಕ್, ಬಟ್ಟೆಬ್ಯಾಗ್ ಹಾಗೂ ನೋಟ್‌ಬುಕ್ ವಿತರಿಸಿ ಜಲ ದೀಪಾವಳಿ ಆಚರಿಸಲಾಯಿತು.

    ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿ ಹಲವು ಸೌಲಭ್ಯ ಕಲ್ಪಿಸಿದೆ. ಅಲ್ಲದೆ ಮಹಿಳೆಯರು ಅರ್ಥಿಕವಾಗಿ ಮುಂದೆ ಬರಬೇಕೆಂದು ಮಹಿಳಾ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಹಾಯ ನೀಡುತ್ತಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ನೆರವಾಗಿದೆ. ಜತೆಗೆ ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ ಮನೆಯ ಯಜಮಾನಿಗೆ ನೀಡುತ್ತಿರುವ 2 ಸಾವಿರ ರೂ. ಕುಟುಂಬ ನಿರ್ವಹಣೆಗೆ ಹೆಚ್ಚಿನ ಸಹಕಾರಿ ಆಗಿದೆ ಎಂದರು.

    ಈ ನಿಟ್ಟಿನಲ್ಲಿ ಪುರಸಭೆಯಿಂದಲೂ ಸ್ವಸಹಾಯ ಸಂಘದ ಮಹಿಳೆಯರಿಗೆ ಬಿಸಿ ನೀರಿನ ಪ್ಲಾಸ್ಕ್, ಬಟ್ಟೆಬ್ಯಾಗ್ ಹಾಗೂ ನೋಟ್‌ಬುಕ್ ವಿತರಿಸುತಿದ್ದೇವೆ. ಇದಲ್ಲದೆ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ತಮ್ಮ ಮನೆ, ಅಕಪಕ್ಕದ ಆವರಣವನ್ನು ಸ್ವಚ್ಛವಾಗಿಡಲು ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

    ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಪಟ್ಟಣದ ನಾಗರಿಕರಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಲ ದೀಪಾವಳಿ ಆಚರಿಸಲಾಗುತ್ತಿದೆ. ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಕೆಲಸ ಕಾರ್ಯಗಳೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಜತೆಗೆ ನಾಗರಿಕರು ಹಸಿ ಕಸ, ಒಣ ಕಸವನ್ನು ಪ್ರತ್ಯೇಕಿಸಿ ಪುರಸಭೆ ವಾಹನಗಳಿಗೆ ನೀಡಬೇಕು. ಇದರಿಂದ ನಮ್ಮ ಸಿಬ್ಬಂದಿಗೂ ಅನುಕೂಲವಾಗಲಿದೆ ಎಂದರು.

    ಪುರಸಭೆ ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ಜಗದೀಶ್, ಪ್ರಭಾಕರ್, ಶ್ರೀನಿವಾಸ್, ಆರೋಗ್ಯಾಧಿಕಾರಿ ಲೋಹಿತ್, ಹರೀಶ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts