More

    ನೀರಿನ ಜಾಗೃತಿ ಮೂಡಿಸುವುದು ಅನಿವಾರ್ಯ: ಕಾರ್ಯಪಾಲಕ ಇಂಜಿನಿಯರ್ ಎಚ್.ಎಸ್.ನಾಗರಾಜು ಅಭಿಮತ

    ಮಂಡ್ಯ: ಪರಿಸರ ಹಾಗೂ ನೀರಿನ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ ವಿಶ್ವೇಶ್ವರಯ್ಯ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್.ಎಸ್.ನಾಗರಾಜು ಹೇಳಿದರು.
    ಇಲ್ಲಿನ ಕುವೆಂಪುನಗರ ಉದ್ಯಾನವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಧುರ ಮಂಡ್ಯ ಲಯನ್ಸ್ ಸಂಸ್ಥೆ, ಎನ್‌ಎಸ್‌ಎಸ್ ಘಟಕ (ಸ್ನಾತಕೋತ್ತರ) ಮಹಿಳಾ ಸರ್ಕಾರಿ ಕಾಲೇಜು, ಪರಿಸರ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ, ಯುವ ಮುನ್ನಡೆ ಮಂಗಲ ಸಹಯೋಗದಲ್ಲಿ ವಿಶ್ವ ಅರಣ್ಯ ದಿನ ಹಾಗೂ ವಿಶ್ವ ಜಲ ದಿನದ ಅಂಗವಾಗಿ ಆಯೋಜಿಸಿದ್ದ ಪರಿಸರ ನಡಿಗೆ, ಮಂಡ್ಯ ನಗರದಲ್ಲಿನ ಕಾವೇರಿ ಶಾಖಾ 8ನೇ ವಿತರಣಾ ನಾಲೆಯಲ್ಲಿನ ಸ್ವಚ್ಛತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಬೇಕು, ಬಟ್ಟೆ ಬ್ಯಾಗ್ ಬಳಸಬೇಕು. ಮುಂದಿನ ಪೀಳಿಗೆಗೆ ಪರಿಸರ ಉಳಿಸಿದರೆ ಅನುಕೂಲ ಆಗುತ್ತದೆ ಎಂದರು.
    ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಪ್ಲಾಸ್ಟಿಕ್ ಲೋಟದಲ್ಲಿ ಕಾಫಿ ಕುಡಿಯುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಇತ್ತೀಚಿನ ವರದಿ ಹೇಳುತ್ತವೆ. ಈ ನಿಟ್ಟಿನಲ್ಲಿ ನಾಗರಿಕರು ಪ್ಲಾಸ್ಟಿಕ್ ಹೋಗಲಾಡಿಸಲು ಹೆಚ್ಚಿನ ಗಮನ ಹರಿಸಬೇಕು. ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ಹೋಗುವಾಗ ಬಟ್ಟೆ ಬ್ಯಾಗ್ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
    ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೊಡ್ಡ ವೀರಯ್ಯ, ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು, ಎನ್‌ಎಸ್‌ಎಸ್ ಜಿಲ್ಲಾ ಸಂಯೋಜನಾಧಿಕಾರಿ ಪ್ರೊ.ವೈ.ಕೆ.ಭಾಗ್ಯ, ಕೆ.ಪಿ.ಅರುಣಕುಮಾರಿ ಇತರರಿದ್ದರು. ಸಂತೆ ಕಸಲಗೆರೆ ಬಸವರಾಜು ಮತ್ತು ತಂಡ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು. ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts