More

    ಜಾಹ್ನವಿ ಕತೆಗಳಲ್ಲಿದೆ ಕಾಡುವ ಗುಣ

    ಶಿವಮೊಗ್ಗ: ಒಬ್ಬ ಶ್ರೇಷ್ಠ ಲೇಖಕನ ಗುಣವೇ ಡಿಸ್ಟರ್ಬ್ ಮಾಡುವಂಥದ್ದು. ಅಂತಹ ಗುಣ ಕನ್ನಡದ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಕತೆಗಳಲ್ಲಿ ಕಾಣಬಹುದು ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

    ನಗರದಲ್ಲಿ ಗುರುವಾರ ಮಿಲಿಂದ ಸಂಸ್ಥೆ (ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ)ಯಿಂದ ಕನ್ನಡದ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಹ್ನವಿ ಅವರು ಕನ್ನಡದ ಅತ್ಯುತ್ತಮ ಲೇಖಕಿಯರಲ್ಲಿ ಒಬ್ಬರು. ಅಂತಹ ಕತೆಗಳನ್ನು ಅವರು ಮಾತ್ರ ಬರೆಯಲು ಸಾಧ್ಯ. ಅವರ ಕತೆಗಳಲ್ಲಿ ನಿಷ್ಠುರತೆ, ಜೀವ ಪರತೆ, ಶ್ರದ್ಧೆ ಕಾಣುತ್ತದೆ ಎಂದರು.
    ಬಹುಮುಖ್ಯವಾಗಿ ಅವರ ಕತೆಗಳು ಓದುಗರನ್ನು ಗೊಂದಲಕ್ಕೀಡು ಮಾಡುತ್ತವೆ. ತಲ್ಲಣಗಳನ್ನು ಸೃಷ್ಟಿಸಿ ಪ್ರಶ್ನೆ ಮಾಡುವಂತೆ ಮತ್ತೆ ಉತ್ತರ ಹುಡುಕುವ ದಾರಿ ತೋರಿಸುತ್ತವೆ. ನಂಬಿಕೆಗಳನ್ನು ಸ್ಫೋಟಗೊಳಿಸುವ, ಲೋಕ ವಿರೋಧಿತನ ತೋರುವ, ಸ್ತ್ರೀಯರ ತಲ್ಲಣಗಳನ್ನು ಕಟ್ಟಿಕೊಡುವ ಒಂದು ಸ್ತ್ರೀ ಮೀಮಾಂಸೆಯನ್ನೇ ಸೃಷ್ಟಿಸುವ ಅವರ ಬರಹಗಳು ನಿಜಕ್ಕೂ ಸೋಜಿಗ ಉಂಟುಮಾಡಿವೆ ಎಂದರು.
    ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್, ಜಾಹ್ನವಿ ಅವರು ಲಂಕೇಶರ ಬಯಲಲ್ಲಿ ಬೆಳಗಿದವರು. ಅವರ ಕುಲುಮೆಯಿಂದ ಎದ್ದು ಬಂದಂತೆ ಕತೆಗಳನ್ನು ಬರೆದ ಅವರು ಸ್ತ್ರೀ ಸ್ಪಂದನೆಗೆ ಒತ್ತು ಕೊಟ್ಟು ವಿಭಿನ್ನವಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡವರು. ಎರಡು ದಶಕಗಳ ಕಾಲ ಬರೆದಿರುವ ಅವರು ಒಬ್ಬ ಅಪರೂಪದ ಬರಹಗಾರ್ತಿ. ಅವರ ಬರವಣಿಗೆಯಲ್ಲಿ ಅವಸರವಿದೆ. ಸಂಪ್ರದಾಯಕ್ಕೆ ಹೊಡೆತವಿದೆ. ರೂಢಿಗತ ಮೌಲ್ಯಗಳನ್ನು ಧಿಕ್ಕರಿಸಿ ಮಾನವೀಯತೆಗಳು ಅವರ ಕೃತಿಯಲ್ಲಿ ಅಡಗಿವೆ ಎಂದು ಬಣ್ಣಿಸಿದರು.
    ಪ್ರಾಧ್ಯಾಪಕ, ಮಿಲಿಂದ ಸಂಸ್ಥೆ ಮುಖ್ಯಸ್ಥ ಬಿ.ಎಲ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಟಿ.ಜಾಹ್ನವಿ ಅವರನ್ನು ಸನ್ಮಾನಿಸಲಾಯಿತು. ಮಿಲಿಂದ ಸಂಸ್ಥೆ ಗೌರವಾಧ್ಯಕ್ಷ ಎ.ಕೆ.ಅಣ್ಣಪ್ಪ, ಪ್ರಮುಖರಾದ ಎ.ಬಿ.ರಾಮಚಂದ್ರಪ್ಪ, ಪ್ರೊ. ರಾಚಪ್ಪ, ರಜೀಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts