More

    ಜಾಗ್ವಾರ್ ಕಾರು ಬೆಂಗಳೂರಲ್ಲಿ ಪತ್ತೆ,  ಸಿಸಿಬಿ ಪೊಲೀಸರ ವಿರುದ್ಧದ ಪ್ರಕರಣ ಸಿಐಡಿ ತನಿಖೆ

    ಮಂಗಳೂರು: ನಗರ ಅಪರಾಧ ಪತ್ತೆ ದಳದ ಕೆಲವು ಪೊಲೀಸರು ನಡೆಸಿದ್ದಾರೆ ಎನ್ನಲಾದ ಐಷಾರಾಮಿ ಕಾರು ಮಾರಾಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಜಾಗ್ವಾರ್ ಕಾರನ್ನು ಬೆಂಗಳೂರಿನಲ್ಲಿ ಸಿಐಡಿ ತನಿಖಾ ತಂಡ ಪತ್ತೆ ಮಾಡಿದೆ.

    ನೆಲ್ಯಾಡಿಯ ಎಲಿಜಾ ಕಂಪನಿಯ ಕೋಟ್ಯಂತರ ರೂ. ಹಣ ದ್ವಿಗುಣ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳು ಬಳಸುತ್ತಿದ್ದ ಮೂರು ಐಷಾರಾಮಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬಳಿಕ ಈ ಕಾರುಗಳು ಮಾರಾಟವಾಗಿದ್ದವು. ಸಿಸಿಬಿ ಪೊಲೀಸರು ಶಾಮೀಲಾಗಿ ಈ ಕಾರುಗಳನ್ನು ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ಎಡಿಜಿಪಿ ಸೂಚನೆ ಮೇರೆಗೆ ಡಿಸಿಪಿ ಪ್ರಾಥಮಿಕ ತನಿಖೆ ನಡೆಸಿದ್ದು, ಸತ್ಯಾಂಶ ಇರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ತಂಡ ತನಿಖೆ ಮುಂದುವರಿಸಿದ್ದು, ಬೆಂಗಳೂರಿನಲ್ಲಿ ಕಾರು ವಶಕ್ಕೆ ಪಡೆದಿರುವುದನ್ನು ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಜಾಗ್ವಾರ್ ಕಾರು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾರಿನ ಮಾಲೀಕರನ್ನು ಕರೆಸಿ ಸಿಐಡಿ ತಂಡ ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದೆ. ಜಾಗ್ವಾರ್ ಕಾರು ಖರೀದಿಸಿದ ಬಗ್ಗೆ ಕಾರಿನ ಮಾಲೀಕರಿಂದ ಮಹತ್ವದ ಮಾಹಿತಿಯನ್ನು ಸಿಐಡಿ ತಂಡ ಪಡೆದುಕೊಂಡಿದೆ. ಸಿಐಡಿ ಡಿವೈಎಸ್ಪಿ ಶ್ರೀನಿವಾಸ ರಾಜು ಮಂಗಳೂರಿಗೆ ಆಗಮಿಸಿ ಸಿಸಿಬಿ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು ಮರಳಿದ್ದಾರೆ.

    ಮುಖ್ಯವಾಗಿ ಮೂರು ಐಷಾರಾಮಿ ಕಾರು ಮಾರಾಟಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಇರುವ ಎರಡು ಕಾರುಗಳನ್ನು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಈ ಕಾರುಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದೇ ವೇಳೆ ನಾರ್ಕೊಟಿಕ್ ವಿಭಾಗದ ಹಿಂದಿನ ಅಧಿಕಾರಿಗಳಿಂದಲೂ ಕೆಲವೊಂದು ಮಾಹಿತಿಗಳನ್ನು ಕಲೆಹಾಕಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts