More

    ‘ಬದುಕಿದ್ದಾಗ ಮನೆಯೂ ಇಲ್ಲ, ಸತ್ತಾಗ ಸ್ಮಶಾನವೂ ಇಲ್ಲ’

    ರಾಮನಗರ  : ನಾವು ಬದುಕಿದ್ದಾಗ ಇರಲು ಮನೆಯೂ ಇಲ್ಲ, ಸತ್ತಾಗ ಸ್ಮಶಾನವೂ ಇಲ್ಲ. ಕೊಟ್ಟಿರುವ ಜಾಗವನ್ನು ನಮಗೆ ಗುರುತು ಮಾಡಿಕೊಡಿ. ಇದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸದಸ್ಯರೊಬ್ಬರ ನೋವಿನ ನುಡಿ.

    ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಎಂ.ಎಸ್.ಅರ್ಚನಾ ನೇತೃತ್ವದಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಮಾಗಡಿಯ ದೊಡ್ಡಯ್ಯ, ಜಿಲ್ಲೆಯಲ್ಲಿ ಎಸ್‌ಸಿ /ಎಸ್‌ಟಿ ಸಮುದಾಯಕ್ಕೆ ಸೇರಿದ ಜಮೀನುಗಳಿಗೆ ಸಂಬಂಧಿಸಿ ಪೊಲೀಸ್ ಠಾಣೆಗೆ ಹೋದರೆ ಅವರು ಬಲಿಷ್ಠರು ಮತ್ತು ಉಳ್ಳವರ ಪರ ವಾಲುತ್ತಾರೆ. ಮಾಗಡಿ, ಕುದೂರು ಭಾಗದಲ್ಲಿ ಇಂತಹ ಘಟನೆ ಹೆಚ್ಚಾಗಿ ನಡೆಯುತ್ತಿವೆ. ಮತ್ತೊಂದೆಡೆ ಆದಿವಾಸಿ ಎಸ್‌ಸಿ, ಎಸ್‌ಟಿ ಸಮುದಾಯದವರು ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ ಇ-ಖಾತೆ ಮಾಡಿಕೊಡಿ ಎಂದು ಪಿಡಿಒಗಳನ್ನು ಕೇಳಿಕೊಂಡರೂ ಮಾಡಿಕೊಡುತ್ತಿಲ್ಲ. ಸ್ಮಶಾನ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದರೂ ಅವುಗಳನ್ನು ಗುರುತಿಸಿಕೊಡಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂದು ಬೇಸರಿಸಿದರು.

    ಅರಣ್ಯ ಇಲಾಖೆ ಕಿರುಕುಳ: ಮತ್ತೊಬ್ಬ ಸದಸ್ಯ ಡಾ.ಜಿ.ಗೋವಿಂದಯ್ಯ ಮಾತನಾಡಿ, 1960ರಲ್ಲಿ ಬೈರಮಂಗಲ ಕೆರೆ ನಿರ್ಮಾಣಕ್ಕಾಗಿ ಮುಳಗಡೆಯಾದ ನಿವಾಸಿಗಳಿಗೆ ಗೂಳಿಹಟ್ಟಿ ಕಾವಲ್‌ನಲ್ಲಿ 800 ಎಕರೆ ಜಮೀನು ಹಂಚಿಕೆಯಾಗಿದೆ. ಆದರೆ, ಇದರಲ್ಲಿ 300 ಎಕರೆಯನ್ನು ಮಾತ್ರ ನಿರಾಶ್ರಿತರು ಅನುಭವಿಸುತ್ತಿದ್ದು, ಉಳಿದ ಜಮೀನು ಪಡೆಯಲು ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ಇದರಿಂದಾಗಿ ಸಂತ್ರಸ್ತರು 60 ವರ್ಷಗಳ ನಂತರವೂ ಪರಿತಪಿಸುವಂತಾಗಿದೆ ಎಂದು ಸಭೆಯ ಗಮನ ಸೆಳೆದರು. ಸಾತನೂರಿನ ನಾಯಕನಹಳ್ಳಿಯಲ್ಲಿ 50 ವರ್ಷಗಳಿಂದ ದಲಿತರು ಕೃಷಿ ಮಾಡಿಕೊಂಡು ಬರುತ್ತಿದ್ದರೂ ಅರಣ್ಯ ಇಲಾಖೆ ವಿನಾಕಾರಣ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದೆ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

    ಬ್ಯಾಕ್ ಹುದ್ದೆಗಳು ಭರ್ತಿಯಾಗದಿದ್ದಾಗ ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ವೇಳೆ ಅಧಿಕಾರಿಗಳು ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡುವ ವೇಳೆಯೂ ಮೀಸಲಾತಿ ಪಾಲಿಸುತ್ತಿಲ್ಲ. ಬಗರ್‌ಹುಕುಂ ಸಾಗುವಳಿ ಚೀಟಿ ಮಂಜೂರು ಮಾಡುವಾಗಲೂ ಮೀಸಲಾತಿ ನೀಡಬೇಕು, ಗಣಿಗಾರಿಕೆ ಗುತ್ತಿಗೆ ನೀಡುವಾಗಲೂ ಮೀಸಲಾತಿ ನೀಡಬೇಕು ಎಂದು ಗೋವಿಂದಯ್ಯ ಒತ್ತಾಯ ಮಾಡಿದರು.
    ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಹೋರಾಟ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ಸುಳ್ಳು ಪ್ರಕರಣ ದಾಖಲಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅರಣ್ಯವಾಸಿಗಳಿಗೆ ಭೂಮಿ ಮಂಜೂರು ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಿದೆ. ಇದನ್ನು ತಪ್ಪಿಸಿ ಎಂದು ಮನವಿ ಮಾಡಿದರು. ಅಲ್ಲದೆ, 2014-15ರಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 1,795 ಅರ್ಜಿಗಳು ಸಲ್ಲಿಸಲ್ಪಟ್ಟಿದ್ದವು. ಈಗ ಈ ಸಂಖ್ಯೆ 1,170 ಆಗಿದೆ, ಉಳಿದ ಅರ್ಜಿಗಳು ಎಲ್ಲಿ ಹೋದವು ಎನ್ನುವುದನ್ನು ಅಧಿಕಾರಿಗಳು ತಿಳಿಸಬೇಕು ಎಂದು ಆಗ್ರಹಿಸಿದರು.

    ಎಲ್ಲವನ್ನು ಆಲಿಸಿದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತರುವ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ದೂರುಗಳನ್ನು ನೀಡುವಾಗ ಅಗತ್ಯ ದಾಖಲೆ ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.ಎಸ್‌ಪಿ ಎಸ್.ಗಿರೀಶ್, ಜಿಪಂ ಸಿಇಒ ಇಕ್ರಂ, ಮುಂತಾದವರು ಇದ್ದರು.

    ನ್ಯಾಯಬೆಲೆ ಅಂಗಡಿ ಹಂಚಿಕೆಯಲ್ಲಿ ಮೋಸ
    ಮತ್ತೊಂದೆಡೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕೆಎಸ್‌ಆರ್‌ಟಿಸಿ, ಟಿಎಪಿಸಿಎಂಸ್, ಎಪಿಎಂಸಿ, ನಗರಸಭೆ, ಪುರಸಭೆ, ನ್ಯಾಯಬೆಲೆ ಅಂಗಡಿಗಳ ಹಂಚಿಕೆಯಲ್ಲಿ ಎಸ್‌ಸಿ /ಎಸ್‌ಟಿ ಸಮುದಾಯಕ್ಕೆ ಮೋಸವಾಗಿದೆ. ನಿಯಮದಂತೆ ಹಂಚಿಕೆ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಸರ್ಕಾರವೂ ಸ್ಪಂದಿಸುತ್ತಿಲ್ಲ, ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಗಮನ ಹರಿಸಿ, ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾಗಿರುವ ಸಮುದಾಯದ ಯುವಕರ ನೆರವಿಗೆ ನಿಲ್ಲಬೇಕು ಎಂದು ದೊಡ್ಡಯ್ಯ ಮನವಿ ಮಾಡಿದರು.

    ಉಸ್ತುವಾರಿ ಸಮಿತಿಯೇ ಅಕ್ರಮ
    ಪ್ರಸ್ತುತ ನೇಮಕಗೊಂಡಿರುವ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಅಕ್ರಮವಾಗಿದ್ದು, ಇದನ್ನು ರದ್ದುಪಡಿಸಿ ಹೊಸ ಸಮಿತಿ ನೇಮಕ ಮಾಡುವಂತೆ ಜಿಲ್ಲಾ ಕಾಂಗ್ರೆಸ್‌ನ ಎಸ್‌ಸಿ ವಿಭಾಗದ ಅಧ್ಯಕ್ಷ ರಾಂಪುರ ನಾಗೇಶ್ ನೇತೃತ್ವದ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

    2020ರ ನ.25ರಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನೇಮಕ ಮಾಡಲಾಗಿದೆ. ಈ ಸಮಿತಿಗೆ ನೇಮಕ ಬಯಸಿ 48ಕ್ಕೂ ಹೆಚ್ಚು ಮಂದಿ ಮನವಿ ಸಲ್ಲಿಸಿದ್ದಾರೆ. ಇವರಲ್ಲಿ ಅರ್ಹತೆಯುಳ್ಳ ಹಲವರು ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸಿದ್ದರೆ, ಕೆಲವರನ್ನು ಜನಪ್ರತಿನಿಧಿಗಳು ಶಿಫಾರಸು ಮಾಡಿದ್ದಾರೆ. ಆದರೆ, ಆಯ್ಕೆ ಮಾನದಂಡ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಪ್ರಸ್ತುತ ಆಯ್ಕೆಗೊಂಡಿರುವವರು ಸರ್ಕಾರದ ಆದೇಶದ ಮೇಲೆ ಆಯ್ಕೆಗೊಂಡಿದ್ದಾರೆಯೇ, ಇಲ್ಲ ಜನಪ್ರತಿನಿಧಿಗಳ ಶಿಫಾರಸಿನಿಂದ ಆಯ್ಕೆ ಗೊಂಡವರೇ? ಅಥವಾ ಅವರ ಆಯ್ಕೆಗೆ ಮಾನದಂಡವೇನು ಎಂಬುದನ್ನು ಜಿಲ್ಲಾಧಿಕಾರಿಗಳು ತಿಳಿಸಬೇಕು ಎಂದು ನಾಗೇಶ್ ಒತ್ತಾಯಿಸಿದರು.

    ಸಮಿತಿ ಆಯ್ಕೆ ಪ್ರಶ್ನಿಸಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಗಮನಕ್ಕೂ ತರಲಾಗಿದೆ. ಈ ಆಯ್ಕೆ ಹಿಂದೆ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಕೆಂಚಯ್ಯ ಎನ್ನುವ ಸಿಬ್ಬಂದಿಯ ನೇರಪಾತ್ರವಿದ್ದು, ಈ ಮಾಹಿತಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾಬಾಯಿ ಗಮನಕ್ಕೂ ಬಂದಿದ್ದರೂ ಅವರು ಸಮಸ್ಯೆ ಸರಿಪಡಿಸಲು ಮುಂದಾಗಿಲ್ಲ ಎಂದು ಆರೋಪಿಸಿದರು.

    ತನಿಖೆ ನಡೆಸಿ ಸೂಕ್ತ ಕ್ರಮ: ಕೂಡಲೇ ಜಿಲ್ಲಾಧಿಕಾರಿಗಳು ಸಮಿತಿ ರದ್ದುಪಡಿಸಿ ನೂತನವಾಗಿ ಅರ್ಜಿ ಆಹ್ವಾನಿಸಿ ಪಾರದರ್ಶಕವಾಗಿ ಜಿಲ್ಲಾ ಜಾಗೃತಿ ಸಮಿತಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಸಂಬಂಧ ತನಿಖಾ ವರದಿ ಪಡೆಯಲಾಗುವುದು. ಒಂದು ವೇಳೆ ಅಕ್ರಮ ದೃಢಪಟ್ಟರೆ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts