More

    ರಸ್ತೆಮಾಕುಂಟೆ ಶಾಲೆ ಸ್ವಲ್ಪ ನೋಡ್ರಣ್ಣಾ..!

    ಲೋಕೇಶ್ ಎಂ. ಐಹೊಳೆ ಜಗಳೂರು: ತಾಲೂಕಿನ ರಸ್ತೆಮಾಕುಂಟೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಶಿಥಿಲಾವಸ್ಥೆಯ ಕಟ್ಟಡಗಳಿಂದ ಶಿಕ್ಷಕರು, ಮಕ್ಕಳು ಜೀವಭಯದಲ್ಲೇ ಕೂರಬೇಕಾದ ದುಃಸ್ಥಿತಿ ಬಂದಿದೆ.

    ಅರ್ಧ ಶತಮಾನ ತುಂಬಿರುವ ಶಾಲೆಯಲ್ಲಿ 1ರಿಂದ 7ನೇ ತರಗತಿಯ 130 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಸೋರುತ್ತಿವೆ. ಚಾವಣಿಗಳು ಕಿತ್ತುಹೋಗುವಂತಿದ್ದು, ಸಿಮೆಂಟ್ ಪದರು ಕೀಳುತ್ತಿದೆ.

    ಶಾಲೆಯಲ್ಲಿ ಮುಖ್ಯಶಿಕ್ಷಕ ಸೇರಿ 6 ಬೋಧಕರು ಇದ್ದಾರೆ. ಆರು ಕೊಠಡಿಗಳು, 1 ಬಿಸಿಯೂಟ ಅಡುಗೆ ಕೋಣೆ ಇದೆ. ಇದರಲ್ಲಿ ಕೇವಲ 1 ಕೋಣೆ ಮಾತ್ರ ಸುಸ್ಥಿತಿಯಲ್ಲಿದೆ. ಉಳಿದವು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ತುಂಬ ಅಪಾಯದಂಚಿನಲ್ಲಿವೆ.

    ಸ್ಪಂದಿಸದ ಅಧಿಕಾರಿಗಳು: ಕಟ್ಟಡ ದುಸ್ಥಿತಿ ಬಗ್ಗೆ ಸಂಬಂಧಿತ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಮುಖ್ಯಶಿಕ್ಷಕರು ಶಿಥಿಲಗೊಂಡ ಕಟ್ಟಡ ನೆಲಸಮ ಮಾಡುವಂತೆ ಮೂರ್ನಾಲ್ಕು ಬಾರಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವಂತೆ ಗ್ರಾಮಸ್ಥರಾದ ಕಲಿಂಗಪ್ಪ, ರವಿಕುಮಾರ್, ನಾಗಭೂಷಣ್, ಚೌಡಪ್ಪ ಆಗ್ರಹಿಸಿದ್ದಾರೆ.

    ಉಳ್ಳವರು ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸಿದರೆ, ಬಡವರ ಮಕ್ಕಳಿಗೆ ಸರ್ಕಾರಿ ಶಾಲೆಯೇ ಅನಿವಾರ್ಯ. ಈ ಶಾಲೆಗಳು ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಶಾಲಾ ಕಟ್ಟಡದ ಚಾವಣಿ ಕುಸಿದು ಬೀಳುವಂತಿದೆ. ಇದರಿಂದ ವಿದ್ಯಾರ್ಥಿಗಳನ್ನು ಕಳುಹಿಸಲು ಭಯ ಆಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇವುಗಳತ್ತ ಗಮನ ಹರಿಸಬೇಕಿದೆ.
    l ನಾಗರಾಜ್ ಮೇಗಳಮನೆ, ಅಧ್ಯಕ್ಷರು, ಎಸ್‌ಡಿಎಂಸಿ.

    ಅಂದಾಜು 73 ವರ್ಷಗಳ ಹಳೆಯ ಶಾಲೆಯಾಗಿದ್ದು, ಇಲ್ಲಿ ನುರಿತ ಶಿಕ್ಷಕರಿದ್ದರೂ ಕೊಠಡಿಗಳ ಸಮಸ್ಯೆ ಕಾಡುತ್ತಿದೆ. ನೂರಾರು ಸಂಖ್ಯೆಯಲ್ಲಿ ಮಕ್ಕಳಿದ್ದರೂ ಸುಸಜ್ಜಿತ ಕಟ್ಟಡಗಳು ಇರದಿರುವುದು ಬೇಸರ ತಂದಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಿಸಿಕೊಡಬೇಕು.
    l ಈಶ್ವರಪ್ಪ, ಗ್ರಾಮಸ್ಥ.

    ರಸ್ತೆಮಾಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೀಘ್ರವೇ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಸರ್ಕಾರದಿಂದ ಬರುವ ಅನುದಾನ ನೋಡಿಕೊಂಡು ಹೊಸ ಕೊಠಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
    l ಹಾಲಮೂರ್ತಿ, ಬಿಇಒ, ಜಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts