More

    ಅನುದಾನ ಬಂದರೂ ಅಭಿವೃದ್ಧಿ ಅಷ್ಟಕಷ್ಟೆ

    ಜಗಳೂರು: ಪಟ್ಟಣದ ಕೆಲವೇ ಮುಖ್ಯ ರಸ್ತೆಗಳು ಬಿಟ್ಟರೆ ಉಳಿದವು ಹದಗೆಟ್ಟಿದ್ದು, ಮಳೆ ಬಂದಾಗ ಜನರಿಗೆ ಕೆಸರಿನ ಅಭಿಷೇಕವಾಗುವುದು ನಿಶ್ಚಿತ. ಅನುದಾನ ಹರಿದು ಬಂದರೂ ರಸ್ತೆ ಅಭಿವೃದ್ಧಿ ಮಾತ್ರ ಅಷ್ಟಕಷ್ಟೇ ಎಂಬಂತಾಗಿದೆ. ಜಗಳೂರು 18 ವಾರ್ಡ್‌ಗಳುಳ್ಳ ಪಟ್ಟಣ ಪಂಚಾಯಿತಿ. 17 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಬಡಾವಣೆಗಳು ನಾಯಿಕೊಡೆಯಂತೆ ನಿರ್ಮಾಣಗೊಂಡಿವೆ. ದುರಂತವೆಂದರೆ ಪ್ರತಿಷ್ಠಿತ ಬಡಾವಣೆಗಳು ಸೇರಿ ಇತರೆ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿವೆ.

    ಈಗಾಗಲೇ ಮಳೆ ಆರಂಭವಾಗಿದ್ದು ಜೆಸಿಆರ್, ಶರಣಬಸವೇಶ್ವರ, ಗಂಗಾಂಬಿಕಾ, ಎನ್‌ಜಿಒ, ಮೇಕಾ ಸೂರ್ಯನಾರಾಯಣ, ರಂಗನಾಥ ಬಡಾವಣೆ, ಅಬ್ದುಲ್ ಲತೀಫ್ ಸಾಬ್, ದೇವೇಗೌಡ, ಲೋಕೇಶ್‌ರೆಡ್ಡಿ, ಜೆಡಿ ಲೇಔಟ್, ತಮಾಟಿ ಲೇಔಟ್, ಜಟ್‌ಪಟ್ ನಗರ ಸೇರಿ ಹತ್ತಾರು ವಸತಿ ಪ್ರದೇಶಗಳ ರಸ್ತೆಗಳಲ್ಲಿ ತಗ್ಗು ಗುಂಡಿ ಬಿದ್ದು ನೀರು ನಿಂತಿವೆ.

    ಒಂದು ಬಾರಿ ಮಳೆ ಬಂದರೆ ನೀರು ಬತ್ತುವವರೆಗೂ ಬೈಕ್, ಕಾರು ಸೇರಿ ಇತರೆ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ. ಇನ್ನು ವಾರಗಟ್ಟಲೇ ಮಳೆ ಸುರಿದರೆ ಇಲ್ಲಿನ ಜನರ ಸ್ಥಿತಿ ಹೇಗೆ ಎಂಬುವುದು ಯಕ್ಷಪ್ರಶ್ನೆಯಾಗಿದೆ.

    ಕಾಮಗಾರಿಗಳು ನನೆಗುದಿಗೆ: ಈ ಹಿಂದೆ ಕೆಲವು ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಗುತ್ತಿಗೆದಾರರ ನಿರ್ಲಕ್ಷೃದಿಂದ ಎರಡ್ಮೂರು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನು ಕೆಲವು ಕಾಮಗಾರಿಗಳಾಗಿದ್ದರೂ ಕಳಪೆಯಾಗಿದ್ದು ರಸ್ತೆಗಳ ಹಾಳಾಗಿವೆ. ಇಷ್ಟೆಲ್ಲಾ ಸಮಸ್ಯೆಗಳು ಕಣ್ಣೆದುರಿಗಿದ್ದರೂ ಸಂಬಂಧಿತ ಅಧಿಕಾರಿಗಳ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

    ಬಡಾವಣೆಗಳಲ್ಲಿ ಚರಂಡಿ, ರಸ್ತೆ, ಬೀದಿದೀಪ, ಕುಡಿವ ನೀರಿನ ಸೌಲಭ್ಯ, ಉದ್ಯಾನ ನಿರ್ಮಿಸುವುದು ಲೇಔಟ್ ಮಾಲೀಕರ ಹೊಣೆ. ಆದರೆ, ಇದ್ಯಾವುದನ್ನು ಮಾಡದೆಯೇ ಖಾಲಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಅಲ್ಲಿ ಮನೆ ಮನೆ ಕಟ್ಟಿಕೊಂಡವರೆಲ್ಲ ರಸ್ತೆ, ಚರಂಡಿಗಳಿಲ್ಲದೇ ಪರಿತಪಿಸುತ್ತಿದ್ದಾರೆ.

    ಪಟ್ಟಣದ ಅಭಿವೃದ್ಧಿಗೆ ಪ್ರತಿ ವರ್ಷ ಐದಾರು ಕೋಟಿ ರೂ. ಅನುದಾನ ಬರುತ್ತಿದೆ. ಆದರೆ, ವಾರ್ಡ್‌ಗಳಲ್ಲಿನ ರಸ್ತೆಗಳು ಮಾತ್ರ ಇದ್ದಂತಿವೆ. ಓಡಾಡಲು ಒಂದು ರಸ್ತೆಗಳು ನೆಟ್ಟಗಿಲ್ಲ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೂ ಗಮನಹರಿಸಬೇಕಿದೆ ಎನ್ನುತ್ತಾರೆ ಜೆಸಿಆರ್ ಬಡಾವಣೆ ನಿವಾಸಿ ಆನಂದ, ಮಲ್ಲೇಶ್.

    ಪಟ್ಟಣದ ಎಲ್ಲ ರಸ್ತೆಗಳ ಅಭಿವೃದ್ಧಿಗೆ 15 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನೂ ಹಣ ಬಿಡುಗಡೆಯಾಗಿಲ್ಲ. ತೀರಾ ಸಮಸ್ಯೆ ಇರುವ ಕಡೆ ತುರ್ತಾಗಿ ರಸ್ತೆ ಸರಿಪಡಿಸಲಾಗುವುದು ಎನ್ನುತ್ತಾರೆ ಪ.ಪಂ ಮುಖ್ಯಾಧಿಕಾರಿ ರಾಜು.ಡಿ ಬಣಕಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts