More

    ಹಳ್ಳಿಗಳತ್ತ ಅಧಿಕಾರಿಗಳ ಹೆಜ್ಜೆ ಇರಲಿ; ಜಗಳೂರು ತಹಸೀಲ್ದಾರ್ ಸಂತೋಷ್ ಕುಮಾರ್ ಸೂಚನೆ

    ಜಗಳೂರು: ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂತು ಕೆಲಸ ಮಾಡುವ ಬದಲು ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಸಂತೋಷ್ ಕುಮಾರ್ ಸೂಚಿಸಿದರು.

    ತಾಲೂಕಿನ ಅಣಬೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಮಾತನಾಡಿದರು. ಅಧಿಕಾರಿಗಳ ತಂಡ ಜಗಳೂರಿನಿಂದ ಅಣಬೂರು ಗ್ರಾಮಕ್ಕೆ ಬೆಳಗ್ಗೆ 11 ಗಂಟೆಗೆ ಆಗಮಿಸಿದಾಗ ಆರತಿ ಬೆಳಗಿ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.

    ನಂತರ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು. ಜಗಳೂರಿನಿಂದ ಅಣಬೂರಿಗೆ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಉಪಕೇಂದ್ರದಲ್ಲಿ ಸಿಬ್ಬಂದಿ ನಿರಂತರ ಸೇವೆ ಸಲ್ಲಿಸಬೇಕು. ಪ್ರತಿ ಬೀದಿಗಳಲ್ಲಿ ಚರಂಡಿ ನಿರ್ಮಿಸಬೇಕು. ಸಿಸಿ ರಸ್ತೆಗಳಾಗಬೇಕು. ಶುದ್ಧ ನೀರು ಪೂರೈಕೆಯಾಗಬೇಕು, ನಿವೇಶನ, ವಸತಿ ನೀಡಬೇಕು, ಸ್ಮಶಾನ ನಿರ್ಮಿಸಿಕೊಡಬೇಕು ಎಂದು ಹಲವರು ಮನವಿ ಸಲ್ಲಿಸಿದರು.

    ಗ್ರಾಪಂ ಅಧ್ಯಕ್ಷೆ ಕವಿತಾ ರೇಣುಕೇಶ್, ಉಪಾಧ್ಯಕ್ಷೆ ಸಣ್ಣ ನಾಗಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಕೃಷಿ ಸಹಾಯಕ ನಿರ್ದೇಶಕ ಮಿಥುನ್, ವೆಂಕಟೇಶ್ ಮೂರ್ತಿ, ಡಾ.ಲಿಂಗರಾಜ್, ಗ್ರಾಪಂ ಸದಸ್ಯರಾದ ಶಿವಣ್ಣ, ಸೋಮಣ್ಣ, ವೀರೇಶ್, ಸಿದ್ದಪ್ಪ, ನಾಗರಾಜ್, ನಾಗೇಂದ್ರಪ್ಪ, ಕೃಷ್ಣನಾಯ್ಕ, ಸಿದ್ದಪ್ಪ, ಮಲ್ಲಿಕಾರ್ಜುನ, ಕಮಲಮ್ಮ, ಶಿವಮ್ಮ, ಶಿವಲಿಂಗಮ್ಮ, ಶಾರದಮ್ಮ, ಮೀನಾಕ್ಷಿ ಬಾಯಿ, ಸುನೀತಾ, ಇಂದಿರಮ್ಮ, ಅಕ್ಕಮ್ಮ, ದೇವಿರಮ್ಮ ಇತರರು ಇದ್ದರು.

    ದಲಿತ ಕೇರಿಗೆ ಭೇಟಿ

    ಮೊದಲು ದಲಿತ ಕೇರಿಗೆ ಭೇಟಿ ನೀಡಿದ ತಹಸೀಲ್ದಾರ್, ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿ ಜನರ ಸಮಸ್ಯೆಗಳಿಗೆ ಕಿವಿಯಾದರು. ನಿಮಗೆ ರೇಷನ್ ಕಾರ್ಡ್ ಇದೀಯಾ, ಅಕ್ಕಿ ಕೊಡ್ತಾರಾ, ವಿಧವಾ, ವೃದ್ಧಾಪ್ಯ, ಅಂಗವಿಕಲ ವೇತನ ಸರಿಯಾಗಿ ಕೊಡ್ತಾರಾ ಎಂದು ಅಲ್ಲಿದ್ದ ವೃದ್ಧರನ್ನು ಕೇಳಿದರು. ಅದಕ್ಕೆ ಕೆಲವರು ಸರಿಯಾಗಿ ಬರುತ್ತಿಲ್ಲ ಸ್ವಾಮಿ ಎಂದು ಉತ್ತರಿಸಿದರು.

    ಕರಡಿ ಹಾವಳಿ ತಪ್ಪಿಸಿ ಎಂದು ಅಳಲು

    ಗ್ರಾಮದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಬಿತ್ತನೆ ಕಾಲವಾಗಿರುವುದರಿಂದ ಕಷ್ಟವಾಗಿದೆ. ನಮ್ಮ ಪ್ರಾಣ ರಕ್ಷಿಸಿ ಎಂದು ಜನರು ಮನವಿ ಸಲ್ಲಿಸಿದರು. ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಶಾಸಕ ರಾಮಚಂದ್ರ, ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts