More

    ರೇಷ್ಮೆ ಕೃಷಿಯಲ್ಲಿ ಹೊಳಪಿನ ಬದುಕು; ದೊಣೆಹಳ್ಳಿ ಕೃಷಿಕನ ಸಾಧನೆ

    ಜಗಳೂರು: ಬರ ಪೀಡಿತ ತಾಲೂಕಿನ ರೈತನೊಬ್ಬ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು 2 ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆದು ವರ್ಷಕ್ಕೆ 10 ಲಕ್ಷ ರೂ. ಲಾಭ ಪಡೆಯುತ್ತಿದ್ದಾರೆ.

    ತಾಲೂಕಿನ ದೊಣೆಹಳ್ಳಿ ಗ್ರಾಮದ ರೈತ ಎಂ.ಬಿ.ನಾಗರಾಜಪ್ಪ ಹಳೇ ತಳಿ ವಿ-1 ಬಿಟ್ಟು, ನಾಲ್ಕೇ ವರ್ಷಕ್ಕೆ ಆದಾಯ ತಂದುಕೊಡುವ ಹೊಸ ಜಿ-4 ರೇಷ್ಮೆ ತಳಿ ಬೆಳೆಯುತ್ತಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು, ಹೊಸ ಪ್ರಯೋಗ, ಪ್ರಸ್ತುತ ತಾಂತ್ರಿಕತೆ ಬಳಸುತ್ತಿದ್ದಾರೆ.
    1979 ರಿಂದಲೂ ರೇಷ್ಮೆ ಕೃಷಿಯಲ್ಲಿ ತೊಡಗಿದ್ದ ತಂದೆಯೇ ಇವರಿಗೆ ಪ್ರೇರಣೆ. 1994 ರಿಂದ ತಾವೂ ಅದೇ ಕಾಯಕದಲ್ಲಿ ತೊಡಗಿಕೊಂಡರು. ಕೃಷಿ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಸಿಕ್ಕಿತು.

    ಹನಿ ನೀರಾವರಿ ಪದ್ಧತಿ

    ಇರುವ 20 ಎಕರೆ ಜಮೀನಿನಲ್ಲಿ 2 ಬೋರ್‌ವೆಲ್ ಕೊರೆಸಿದ್ದು, 2 ಎಕರೆ ರೇಷ್ಮೆ ಬೆಳೆ, ಉಳಿದ ಜಮೀನಿನಲ್ಲಿ ಮೆಕ್ಕೆಜೋಳ, ರಾಗಿ, ಇನ್ನಿತರ ಬೆಳೆ ಬೆಳೆಯುತ್ತಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅಂತರ್ಜಲ ವೃದ್ಧಿಗಾಗಿ ಬಾವಿಗೆ ಮಳೆ ನೀರು ಕೊಯ್ಲು ಮಾಡಿದ್ದಾರೆ.

    ಉತ್ತಮ ಇಳುವರಿ

    ಈ ಹಿಂದೆ ನೂರು ಮೊಟ್ಟೆಗೆ 20 ರಿಂದ 30 ಕೆಜಿ ಇಳುವರಿ ಬರುತ್ತಿತ್ತು. ಹೊಸ ಪ್ರಯೋಗದಿಂದ 80 ರಿಂದ 90 ಕೆಜಿ ವರೆಗೆ ಇಳುವರಿ ಕಾಣುತ್ತಿದ್ದಾರೆ. 2020-21ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ರೇಷ್ಮೆ ಕೃಷಿ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ.

    ರೇಷ್ಮೆ ಲೈಫ್ ಟೈಮ್ ಬೆಳೆಯಾಗಿದ್ದು, ಹೊಸ ತಳಿಗಳು ಬಂದಾಗ ಅವಶ್ಯವಿದ್ದರೆ ಬದಲಾವಣೆ ಮಾಡಿಕೊಳ್ಳಹುದು. ಅಲ್ಲದೆ ಈ ಬೆಳೆ ಬೆಳೆಯಲು ತಿಂಗಳಿಗೆ ಸುಮಾರು 15,000 ರೂ. ಖರ್ಚು ಬರಲಿದ್ದು, ತಿಂಗಳಿಗೆ 70 ರಿಂದ 80 ಸಾವಿರ ರೂ. ಆದಾಯ ಬರುತ್ತದೆ. ಒಬ್ಬ ಇಂಜಿನಿಯರ್ ಪಡೆಯುವ ಸಂಬಳವನ್ನು ನಾನು ರೇಷ್ಮೆ ಬೆಳೆಯಿಂದ ಪಡೆಯುತ್ತಿದ್ದೇನೆ.
    -ಎಂ.ಬಿ.ನಾಗರಾಜಪ್ಪ ರೇಷ್ಮೆ ಕೃಷಿಕ

    ತರಬೇತಿದಾರರೂ ಹೌದು

    ರೇಷ್ಮೆ ಇಲಾಖೆಯಿಂದ ದಾಂಡೇಲಿ, ಉತ್ತರ ಕನ್ನಡ, ಚಾಮರಾಜ ನಗರ, ಕೊಪ್ಪಳ ಹೀಗೆ ಹಲವು ಜಿಲ್ಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರೈತರಿಗೆ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ದಾವಣಗೆರೆ, ತೋಳಹುಣಸೆ ರೇಷ್ಮೆ ತರಬೇತಿ ಸಂಸ್ಥೆಯಿಂದ ತರಬೇತಿಗಾಗಿ ರೈತರು ಬರುತ್ತಾರೆ.

    ಜಪಾನ್ ಮಾದರಿ ಚಂದ್ರಿಕೆ

    ಜಪಾನ್ ಮಾದರಿ ಚಂದ್ರಿಕೆಯಿಂದ ನೂರು ಮೊಟ್ಟೆಯ ಗೂಡಿಗೆ 20,000 ರೂ. ಆದಾಯ ಪಡೆಯಬಹುದು. ಪ್ಲಾಸ್ಟಿಕ್, ಬಿದಿರು ಚಂದ್ರಿಕೆ ಬಳಸಿದರೆ ಆದಾಯ ಕುಸಿಯುತ್ತದೆ. ಆದ್ದರಿಂದ ಜಪಾನ್ ಮಾದರಿಯ ಚಂದ್ರಿಕೆ (ರೋಟರಿ ಚಂದ್ರಿಕೆ)ಯಲ್ಲಿ ರೈತರಿಗೆ ಕೆಲಸ ಜಾಸ್ತಿಯಾದರೂ ಆದಾಯ ಹೆಚ್ಚು ಎನ್ನುತ್ತಾರವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts