More

    ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳದ್ದೇ ಕಾರುಬಾರು

    ಲೋಕೇಶ್ ಎಂ.ಐಹೊಳೆ ಜಗಳೂರು
    ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳದ್ದೇ ಕಾರುಬಾರು. ಮಂಡಿಯುದ್ದ ನಿಲ್ಲುವ ನೀರು. ಇದು ತಾಲೂಕಿನ ಚಳ್ಳಕೆರೆ-ಅರಬಾವಿ ರಾಜ್ಯ ಹೆದ್ದಾರಿ 45ರ ದುಸ್ಥಿತಿ. ಜೀವ ಕೈಯಲ್ಲಿಡಿದು ಚಾಲನೆ ಮಾಡಬೇಕಾದ ಅನಿವಾರ್ಯತೆ ವಾಹನ ಸವಾರರದ್ದಾಗಿದೆ.

    ದೊಣೆಹಳ್ಳಿ-ಚಳ್ಳಕೆರೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದೊಣೆಹಳ್ಳಿ ಹಾಗೂ ಮುಸ್ಟೂರು ದಾಟುತ್ತಿದ್ದಂತೆ ದೊಡ್ಡ ಗುಂಡಿಗಳ ದರ್ಶನವಾಗುತ್ತದೆ. ಒಂದೆರಡು ಗುಂಡಿಗಳಾದರೆ ಹೇಗೋ ತಪ್ಪಿಸಿ ಹೋಗಬಹುದೇನೋ, ಆದರೆ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ, ಗುಂಡಿ ಯಾವುದೂ ಗೊತ್ತಾಗದೇ ವಾಹನ ಚಾಲಕರು ನಿಧಾನವಾಗಿ ಚಲಿಸಿಕೊಂಡು ಹೋಗಬೇಕು. ಸ್ವಲ್ಪ ಮೈ ಮರೆತರೂ ಅಪಾಯ ತಪ್ಪಿದ್ದಲ್ಲ.

    ರಾಜ್ಯ ಹೆದ್ದಾರಿಯಾದ್ದರಿಂದ ನಾಯಕನಹಟ್ಟಿ, ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿ, ಬೆಂಗಳೂರಿಗೆ ಪ್ರತಿನಿತ್ಯ ಬಸ್, ಲಾರಿ ಮತ್ತಿತರ ನೂರಾರು ವಾಹನಗಳು ಓಡಾಡುತ್ತವೆ. ಇಷ್ಟೆಲ್ಲ ವಾಹನ ದಟ್ಟಣೆ ಇರುವ ರಸ್ತೆ ದುರಸ್ತಿಪಡಿಸದಿರುವುದು ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿಯಾಗಿದೆ.

    ಸಂಸದರ ಆದರ್ಶ ಗ್ರಾಮ ಮುಸ್ಟೂರು ಸಹ ಇದೇ ಮಾರ್ಗದಲ್ಲಿ ಬರುತ್ತದೆ. ನಾನಾ ಕಾರ್ಯಕ್ರಮಗಳ ನಿಮಿತ್ತ ಸಂಸದರು ಸಾಕಷ್ಟು ಬಾರಿ ಓಡಾಡಿದ್ದಾರೆ. ಆದರೂ ರಸ್ತೆ ದುರಸ್ತಿಯಾಗದಿರುವ ಬಗ್ಗೆ ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದಿಂದ ಇದೇ ಸ್ಥಿತಿ ಇದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ದೊಣೆಹಳ್ಳಿ ಮತ್ತು ಮುಸ್ಟೂರು ಗ್ರಾಮಸ್ಥರು.

    ಅನಾಹುತಕ್ಕೂ ಮುನ್ನ ಸರಿಪಡಿಸಿ: ಅಪಘಾತ ಸಂಭವಿಸಿದ ಮೇಲೆ ಗೋಳಾಡಿ, ಮನಮರುಗುವ ಬದಲು ರಸ್ತೆ ಸರಿಪಡಿಸಿ ಅನಾಹುತ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು, ಅಧಿಕಾರಿಗಳು ಗಮನಹರಿಸಬೇಕೆಂದು ಮುಸ್ಟೂರು ಗ್ರಾಮದ ಕುಮಾರ್, ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

    ಜಗಳೂರು- ಚಳ್ಳಕೆರೆಯ ರಾಜ್ಯ ಹೆದ್ದಾರಿ ಹಲವು ಮಹಾನಗರಗಳ ಸಂಪರ್ಕ ಸೇತುವಾಗಿದೆ. ಇಂತಹ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕನಿಷ್ಠ ಗುಂಡಿಗಳನ್ನಾದರೂ ಮುಚ್ಚಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಆದರೆ ಒಂದು ವರ್ಷದಿಂದ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸದಿರುವುದು ಬೇಸರ ತರಿಸಿದೆ.
    > ದಿನೇಶ್ ದೊಣೆಹಳ್ಳಿ

    ಚಳ್ಳಕೆರೆಯಿಂದ ಮುಸ್ಟೂರು ಗಡಿ ವರೆಗೂ ಶಾಸಕ ಟಿ. ರಘುಮೂರ್ತಿ ಅವರು ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದಾರೆ. ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಸ್ಟೂರಿಂದ ದೊಣೆಹಳ್ಳಿಯ ರಸ್ತೆ ತುಂಬಾ ಹದಗೆಟ್ಟಿದೆ. ಒಮ್ಮೊಮ್ಮೆ ಬಸ್ಸಿನಲ್ಲಿ ಪ್ರಯಾಣಿಸಲು ಭಯವೆನಿಸುತ್ತದೆ. ಇನ್ನು ಆಸ್ಪತ್ರೆಗೆ ಬರುವ ರೋಗಿಗಳನ್ನು ದೇವರೆ ಕಾಪಾಡಬೇಕು.
    > ಮಹಾಂತೇಶ್ ವಕೀಲ ಜಗಳೂರು

    ಚಳ್ಳಕೆರೆ-ಅರಬಾವಿಯ ಹೊಸ ರಸ್ತೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಿರುವ ಕಾರಣ ಹೊಸ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿಲ್ಲ. ಸದ್ಯಕ್ಕೆ ತಗ್ಗು ಗುಂಡಿಗಳನ್ನು ಮುಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
    > ರುದ್ರಪ್ಪ ಎಇಇ ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts