More

    ಉತ್ತಮ ರಸ್ತೆ ಕಿತ್ತು ಹಾಕಿ ಮತ್ತೆ ಡಾಂಬರೀಕರಣ…

    ಜಗಳೂರು: ಅಭಿವೃದ್ಧಿ ನೆಪದಲ್ಲಿ ಚನ್ನಾಗಿರುವ ರಸ್ತೆಯನ್ನು ಕಿತ್ತು ಸರ್ಕಾರದ ಹಣ ವ್ಯಯಿಸುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕ್ರಮಕ್ಕೆ ತಾಲೂಕಿನ ಖಿಲಾಕಣಕುಪ್ಪೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಪೇಟೆ ಕಣಕುಪ್ಪೆ-ಖಿಲಾ ಕಣಕುಪ್ಪೆ ಗ್ರಾಮಗಳ ಸಂಪರ್ಕ ರಸ್ತೆಯನ್ನು 2018-19ನೇ ಸಾಲಿನಲ್ಲಿ ನಬಾರ್ಡ್ ಯೋಜನೆಯಡಿ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಇದಿನ್ನೂ ಹೊಸದರಂತೇ ಇದೆ. ಇದನ್ನು ಕಿತ್ತು ಮತ್ತೆಡಾಂಬರೀಕರಣ ಮಾಡುವುದು ಎಷ್ಟು ಸರಿ. ತಾಲೂಕಿನಲ್ಲಿ ಅದೆಷ್ಟೋ ಹದಗೆಟ್ಟ ರಸ್ತೆಗಳಿವೆ. ಅಲ್ಲಿಗೆ ಹಣ ಹೂಡಿಕೆ ಮಾಡಿದರೆ ಸುಗಮ ಸಂಚಾರಕ್ಕಾದರೂ ಅನುಕೂಲವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಕಾಮಗಾರಿ ನಡೆಯದಂತೆ ತಡೆಯೊಡ್ಡಿದ್ದಾರೆ.

    ಈ ಮಾರ್ಗದಲ್ಲಿ ತಪೋ ಕ್ಷೇತ್ರ ಕಣ್ವಕುಪ್ಪೆ ಗವಿಮಠಕ್ಕೆ ಬರುತ್ತದೆ. ಭಕ್ತರ ಅನುಕೂಲಕ್ಕೆ ಕೊಟ್ಟೂರು, ಉಜ್ಜಯಿನಿ ಭಾಗದ ಜನರ ಒತ್ತಾಯಕ್ಕೆ ಮಣಿದ ಆಗಿನ ಶಾಸಕ ಎಚ್.ಪಿ.ರಾಜೇಶ್, ಕೆಳಗೋಟೆ-ಖಿಲಾ ಕಣಕುಪ್ಪೆ ರಸ್ತೆ ಅಭಿವೃದ್ಧಿಪಡಿಸಿದ್ದರು. ಇದೀಗ ಭದ್ರವಾಗಿರುವ ರಸ್ತೆ ಕಿತ್ತು ಹೊಸದಾಗಿ ನಿರ್ಮಿಸಲು ಹೊರಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಆಟಕ್ಕೆ ತಡೆಯೊಡ್ಡಿರುವ ಗ್ರಾಮಸ್ಥರು, ಸರ್ಕಾರದ ಹಣ ವ್ಯಯವಾಗುವುದಕ್ಕೆ ನಾವು ಬಿಡುವುದಿಲ್ಲ. ನಿಮಗೆ ರಸ್ತೆ ಮಾಡಿಸಲೇ ಬೇಕೆಂದಿದ್ದರೆ ತಾಲೂಕಿನಲ್ಲಿ ಡಾಂಬರ್ ಕಾಣದ ಬಹಳಷ್ಟು ರಸ್ತೆಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ ಎಂದು ವಕೀಲ ಸಣ್ಣ ಓಬಯ್ಯ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    12ರಿಂದ 15 ಕಿ.ಮೀ ದೂರದ ರಸ್ತೆಗೆ ಮಾತ್ರ ಪಿಎಂಜಿಎಸ್‌ವೈ ಯೋಜನೆಯಡಿ ಅನುಮೋದನೆ ಸಿಗುತ್ತದೆ. ಹೀಗಾಗಿ ಕಸ್ತೂರಿಪುರದಿಂದ ಖಿಲಾಕಣುಕುಪ್ಪೆ ವರೆಗೆ 7.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಇದು ಸರ್ಕಾರದ ಆದೇಶವಾದ್ದರಿಂದ ನಾನು ಪಾಲಿಸುತ್ತಿದ್ದೇನೆ.
    > ದೀಪಕ್ ಪಾಟೀಲ್ ಗುತ್ತಿಗೆದಾರ

    ಸರಿ ಇರುವ ರಸ್ತೆ ಕಿತ್ತು ಹಣ ವ್ಯಯಿಸುವುದಕ್ಕಿಂತ ತಾಲೂಕಿನ ಗ್ರಾಮೀಣ ಭಾಗದ ಅನೇಕ ರಸ್ತೆಗಳು ಮಣ್ಣಿನಿಂದ ಕೂಡಿವೆ. ಇವುಗಳ ಅಭಿವೃದ್ಧಿ ಹಣ ಹೂಡಿಕೆ ಮಾಡಿದರೆ ಅನುಕೂಲವಾಗುತ್ತದೆ.
    > ಚೌಡೇಶ್ ಖಿಲಾಕಣಕುಪ್ಪೆ ಗ್ರಾಮಸ್ಥ

    ಸರ್ಕಾರದಿಂದ ಮಂಜೂರಾದ ರಸ್ತೆ ಕಾಮಗಾರಿ ಮಾಡುವುದಕ್ಕೆ ನಮ್ಮ ಅಭ್ಯವಂತರವಿಲ್ಲ ಆದರೆ ಕ್ರಿಯಾಯೋಜನೆಗೆ ಸೇರಿಸುವಾಗ ರಸ್ತೆ ಚನ್ನಾಗಿದೇಯೇ ಅಥವಾ ಹಾಳಾಗಿದೆಯೇ ಎಂದು ಪರಿಶೀಲಿಸಿ ಅನುಮೋದನೆಗೆ ಕಳಿಸುವುದು ಸಾಮಾನ್ಯ. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಚನ್ನಾಗಿರುವ ರಸ್ತೆಯನ್ನು ಮತ್ತೊಮ್ಮೆ ಡಾಂಬರೀಕರಣ ಮಾಡುತ್ತಿರುವುದು ಅವರ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿ.
    > ಜಿ.ಎಚ್.ಮಾರನಾಯ್ಕ ಕೋಟೆ ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣಾ ಸಮಿತಿ ಕಾರ್ಯದರ್ಶಿ ಖಿಲಾಕಣಕುಪ್ಪೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts