More

    ಜಗದ್ಗುರು ಪಂಡಿತಾರಾಧ್ಯರು ಪೂಜ್ಯರು

    ಶ್ರೀಶೈಲಂ(ಆಂಧ್ರಪ್ರದೇಶ): ಪಂಚಪೀಠಗಳ ಪೀಠಾಚಾರ್ಯರಲ್ಲಿ ಒಬ್ಬರಾದ ಶ್ರೀಶೈಲದ ಜಗದ್ಗುರು ಪಂಡಿತಾರಾಧ್ಯರು ತಮ್ಮಲ್ಲಿರುವ ಪಾಂಡಿತ್ಯ ಮತ್ತು ತಪಃಶಕ್ತಿಯ ಮೂಲಕ ಪಂಡಿತರೆಲ್ಲರಿಗೂ ಪೂಜ್ಯರಾಗಿದ್ದರೆಂದು ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಶ್ರೀಶೈಲದ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಜಗದ್ಗುರು ಪಂಡಿತಾರಾಧ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಶಿವಾಗಮಗಳ ಉಲ್ಲೇಖದನ್ವಯ ಕಲಿಯುಗದ ಪ್ರಾರಂಭದಲ್ಲಿ ಶಿವರಾತ್ರಿಯ ಪವಿತ್ರ ದಿನದಂದು ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಪ್ರಾದುರ್ಭವಿಸಿ ದೇವಸ್ಥಾನದ ನೈಋತ್ಯ ದಿಕ್ಕಿಗೆ ಸಮೀಪದಲ್ಲಿಯೇ ಸೂರ್ಯಸಿಂಹಾಸನ ಮಹಾಪೀಠ ಸಂಸ್ಥಾಪಿಸಿದರು ಎಂದು ತಿಳಿಸಿದರು.

    ಧರ್ಮ ಪ್ರಚಾರ: ಶ್ರೀಶೈಲ ಪೀಠದ ಮೂಲಕ ಆಂದ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ಅನೇಕ ರಾಜ್ಯಗಳಲ್ಲಿ ಸಂಚರಿಸಿ ವೀರಶೈವ ಲಿಂಗಾಯತ ಧರ್ಮವನ್ನು ಪ್ರಚಾರಗೊಳಿಸಿದರು. ಈ ಸಂದರ್ಭದಲ್ಲಿ ಸಂಪರ್ಕಕ್ಕೆ ಬಂದ ಎಲ್ಲ ಪಂಡಿತರಿಗೆ ಶಿವೋಪದಿಷ್ಟವಾದ ವೀರಶೈವ ಧರ್ಮದ ತತ್ತ್ವಸಿದ್ಧಾಂತ ಮನವರಿಕೆ ಮಾಡಿದರು. ಇವರಲ್ಲಿರುವ ಅಪ್ರತಿಮ ಶಿವಜ್ಞಾನವನ್ನು ಮನಗಂಡ ಪಂಡಿತರೆಲ್ಲರೂ ಇವರನ್ನು ಆರಾಧನೆ ಮಾಡಿದ ಕಾರಣ ಇವರು ಲೋಕದಲ್ಲಿ ಪಂಡಿತಾರಾಧ್ಯರೆಂದು ಹೆಸರುವಾಸಿಯಾದರು ಎಂದು ಹೇಳಿದರು.

    ಭಕ್ತರಿಗೆ ಶಿವಕೃಪೆ: ಶಿವರಾತ್ರಿಯ ಈ ದಿನದಂದು ಉಪವಾಸ ವ್ರತ ಆಚರಿಸಿ ಶಿವನಾಮ ಜಪ, ಶಿವಭಜನೆ ಮತ್ತು ಶಿವಧ್ಯಾನದಲ್ಲಿ ಕಾಲ ಕಳೆಯುತ್ತ ಮಹಾನಿಶಿಯವರೆಗೆ ಜಾಗರಣೆ ಮಾಡುವ ಶಿವಭಕ್ತರ ಮೇಲೆ ನಿಶ್ಚಿತವಾಗಿಯೂ ಶಿವ ಕೃಪೆಯಾಗುತ್ತದೆ. ಅವನ ಇಷ್ಟಾರ್ಥಗಳು ಸಿದ್ಧಿಯಾಗಿ ಕೊನೆಗೆ ಶಿವಸಾಕ್ಷಾತ್ಕಾರವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

    ಬಿಲ್ವಾರ್ಚನೆ: ಜಯಂತಿ ಅಂಗವಾಗಿ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ಪ್ರಾಃತಕಾಲ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ಪೂಜೆ ಜರುಗಿದವು. ಕಾರ್ಯಕ್ರಮದಲ್ಲಿ ಜೈನಾಪುರದ ಶ್ರೀರೇಣುಕ ಶಿವಾಚಾರ್ಯರು, ಹಿರೇಜೇವರ್ಗಿಯ ಜಯಶಾಂತಲಿಂಗ ಶಿವಾಚಾರ್ಯರು, ಗಂಗಾವತಿ ಕಟ್ಟಿಶ್ರೀಗಳು ಉಪದೇಶಾಮೃತ ನೀಡಿದರು. ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ, ಪ್ರಭುಗೌಡ ಜಂಗಮಶೆಟ್ಟಿ ಹಾಗೂ ನಂದಬಸಪ್ಪ ಚೌದ್ರಿ ಇತರರು ಇದ್ದರು. ಐನಳ್ಳಿಯ ಶರಣೆ ನೀಲಮ್ಮ ಪ್ರಾರ್ಥಿಸಿದರು. ಕಲ್ಲಯ್ಯ ಶಾಸ್ತ್ರಿ ವೇದಘೋಷ ಪಠಿಸಿದರು. ಅರಣ್ಯಾಧಿಕಾರಿ ಕೆ.ಎನ್. ರಾವ ಶಂಖನಾದ ಗೈದರು.

    ಶಕ್ತಿಪೀಠಗಳ ತ್ರಿವೇಣಿ ಸಂಗಮ

    ಶ್ರೀಶೈಲದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಎರಡನೆಯದಾದ ಮಲ್ಲಿಕಾರ್ಜುನ ಲಿಂಗವು, ಪಂಚಪೀಠಗಳಲ್ಲಿ ನಾಲ್ಕನೆಯದಾದ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠವು ಮತ್ತು ಹದಿನೆಂಟು ಶಕ್ತಿ ಪೀಠಗಳಲ್ಲಿ ಆರನೇಯದಾದ ಭ್ರಮರಾಂಬಾ ಶಕ್ತಿಪೀಠವು ಇರುವುದರಿಂದ ಶ್ರೀಶೈಲವು ಜ್ಯೋತಿರ್ಲಿಂಗ, ಗುರುಪೀಠ ಮತ್ತು ಶಕ್ತಿಪೀಠಗಳ ತ್ರಿವೇಣಿ ಸಂಗಮವಾಗಿದೆ. ಮಾಘ ಮಾಸದ ಕೃಷ್ಣಪಕ್ಷದ ತ್ರಯೋದಶಿಯ ದಿನದಂದು ಮಹಾನಿಶಿಯಲ್ಲಿ ಅಂದರೆ ರಾತ್ರಿ ಹನ್ನೆರಡರಿಂದ ಮೂರು ಗಂಟೆಯವರೆಗಿನ ಮಧ್ಯರಾತ್ರಿಯ ಸಮಯದಲ್ಲಿ ಶಿವನು ಕೋಟಿ ಸೂರ್ಯರ ಸಮಾನ ಪ್ರಭೆ ಹೊಂದಿದವನಾಗಿ ಜ್ಯೋತಿರ್ಲಿಂಗದ ರೂಪದಲ್ಲಿ ಪ್ರದುರ್ಭವಿಸಿದನು. ಆ ಕಾರಣಕ್ಕಾಗಿ ಈ ದಿನಕ್ಕೆ ಶಿವರಾತ್ರಿ ಎಂದು ಕರೆಯಲಾಗಿದೆ. ಆ ದೃಷ್ಟಿಯಿಂದ ಶಿವರಾತ್ರಿಯು ಗುರು ಮತ್ತು ಶಿವನ ಜಯಂತಿಯ ದಿನವಾಗಿದೆ ಎಂದು ಜಗದ್ಗುರುಗಳು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts