More

    ಕರೊನಾ, ಕಳಪೆ ಟೆಸ್ಟಿಂಗ್ ಕಿಟ್ಸ್ ಚೀನಾದ ರಫ್ತುಗಳು!

    ವೂಹಾನ್​ನಲ್ಲಿ ಜನವರಿ 23ರಂದು ವಿಧಿಸಲಾದ ಲಾಕ್​ಡೌನ್​ನನ್ನು ಏಪ್ರಿಲ್ 8ರಂದು ತೆಗೆದುಹಾಕಿದ್ದನ್ನು, ಆ ಸಂಭ್ರಮಾಚರಣೆಗಾಗಿ ನಗರವನ್ನು ದೀಪಗಳಿಂದ ಅಲಂಕರಿಸಿದ್ದನ್ನು ಚೀನಾ ಹೊರಜಗತ್ತಿನ ಮುಂದೆ ದೊಡ್ಡದಾಗಿ ಪ್ರಚಾರ ಮಾಡಿತು. ಆದರೆ ಅದೇ ದಿನ ಅವಕಾಶ ಸಿಕ್ಕಿದ್ದೇ 55 ಸಾವಿರ ಜನ ವೂಹಾನ್ ತೊರೆದು ಓಡಿಹೋದದ್ದನ್ನು ಮಾತ್ರ ಚೀನೀ ಮಾಧ್ಯಮಗಳು ಮುಚ್ಚಿಟ್ಟವು.

    ಕರೋನಾ ಸೋಂಕು ಹೊರಬಿದ್ದದ್ದು ಚೀನಾದ ವೂಹಾನ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಜಿಯಿಂದ ಎನ್ನುವುದು ಈಗ ಖಚಿತವಾಗಿದೆ. ಅದಕ್ಕೆ ಕಾರಣವಾದದ್ದು ಈಗ ‘ಬ್ಯಾಟ್​ವುಮನ್’ ಎಂದು ವರ್ಣಿತವಾಗುತ್ತಿರುವ, ಬಾವಲಿಗಳಿಂದ ಕರೊನಾ ವೈರಸ್ ಸಂಗ್ರಹಿಸುತ್ತಿದ್ದ ಸಂಶೋಧಕಿಯೊಬ್ಬಳ ಅಜಾಗರೂಕತೆಯೇ ಅಥವಾ ಈ ರುದ್ರನಾಟಕದಲ್ಲಿ ಆಕೆಯನ್ನು ಬಲಿಪಶು ಆಗಿಸಲಾಗುತ್ತಿದೆಯೇ, ನಿಜವಾದ ಅಪರಾಧಿಗಳು ವ್ಯವಸ್ಥೆಯ ‘ಮೇಲ್​ಸ್ತರ’ದವರೇ, ಅವರನ್ನು ಎಂದಾದರೂ ಮರೆಯಿಂದ ಹೊರಗೆಳೆಯಬಹುದೇ, ಮೇಲಿನಿಂದ ಕೆಳಗಿಳಿಸಬಹುದೇ ಎಂಬ ಪ್ರಶ್ನೆಗಳಿಗೆ ಈಗ ಉತ್ತರಗಳಿಲ್ಲ.

    ಕರೊನಾ, ಕಳಪೆ ಟೆಸ್ಟಿಂಗ್ ಕಿಟ್ಸ್ ಚೀನಾದ ರಫ್ತುಗಳು!ಇಂದು ಚೀನಾ ಜಗತ್ತಿನ ಎದುರು ಬೆತ್ತಲಾಗಿ ನಿಂತಿದೆ. ನವೆಂಬರ್ 17ರಂದು ಮೊದಲಿಗೆ ಕಾಣಿಸಿಕೊಂಡ ಕರೊನಾ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿದೆ ಎಂದು ಡಿಸೆಂಬರ್ ಅಂತ್ಯದ ಹೊತ್ತಿಗೆ ವೂಹಾನ್​ನಲ್ಲಿ ಸಂಬಂಧಪಟ್ಟವರಿಗೆಲ್ಲ ತಿಳಿದು ಅದು ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರಿಗೂ ಜನವರಿ 7ರಂದು ತಲುಪಿತು. ಆದರೆ ವಿಷಯ ಹೊರಬಿದ್ದರೆ ಅರ್ಥವ್ಯವಸ್ಥೆಗೆ ಧಕ್ಕೆ ಒದಗುತ್ತದೆ ಎಂಬ ಕಾರಣವೊಡ್ಡಿ ಅದನ್ನು ಬಹಿರಂಗಪಡಿಸಲು ಅವರು ಹಿಂದೆಗೆದರು. ನಂತರ ಪರಿಸ್ಥಿತಿ ಕೈಮೀರಿಹೋಗಿ ಜನವರಿ 23ರಂದು ವೂಹಾನ್ ನಗರದಲ್ಲಿ ಲಾಕ್​ಡೌನ್ ವಿಧಿಸುವ ಹೊತ್ತಿಗೆ ಲಕ್ಷಾಂತರ ಸೋಂಕಿತರು ಅಲ್ಲಿಂದ ಜಗತ್ತಿನ ವಿವಿಧೆಡೆ ಹೋಗಿ ಸೋಂಕು ಹರಡಿಯಾಗಿತ್ತು. ಸೋಂಕು ಸಾಂಕ್ರಾಮಿಕ ಎಂದು ಗೊತ್ತಿದ್ದೂ ಆ ಬಗ್ಗೆ ಜನರಿಗೆ ಎಚ್ಚರಿಕೆ ಕೊಡಲಿಲ್ಲವೇಕೆ ಎಂಬ ಪ್ರಶ್ನೆಗೆ, ‘ಅದಕ್ಕಾಗಿ ಮೇಲಿನಿಂದ ಅನುಮತಿಯ ಅಗತ್ಯವಿತ್ತು’ ಎಂದು ವೂಹಾನ್ ನಗರದ ಬಡಪಾಯಿ ಮೇಯರ್ ಜನವರಿ 27ರಂದು ಒಪ್ಪಿಕೊಂಡರು! ಇದು ಚೀನಾದಲ್ಲಿ ಪ್ರಚಲಿತವಿರುವ ಕಮ್ಯೂನಿಸ್ಟ್ ಆಡಳಿತವ್ಯವಸ್ಥೆ!

    ಹೀಗೆ ರೋಗದ ಮೂಲವನ್ನು ಮರೆಮಾಚಿ, ಹೊರಜಗತ್ತಿಗೆ ಉದ್ದೇಶಪೂರ್ವಕವಾಗಿ ತಪ್ಪುಮಾಹಿತಿ ನೀಡಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾದ ಚೀನೀ ಕಮ್ಯೂನಿಸ್ಟ್ ಸರ್ಕಾರದ ಮುಖಕ್ಕೆ ಕನ್ನಡಿ ಹಿಡಿಯಲು ಕೆಲವು ಜಾಗತಿಕ ಮಾಧ್ಯಮಗಳು ಮತ್ತು ವಿಶ್ಲೇಷಕರು ಘಾತಕ ಕರೊನಾ ಸೋಂಕನ್ನು ‘ವೂಹಾನ್ ವೈರಸ್’, ‘ಸಿಸಿಪಿ ವೈರಸ್’ ಅಂದರೆ ‘ಚೈನೀಸ್ ಕಮ್ಯೂನಿಸ್ಟ್ ಪಾರ್ಟಿ ವೈರಸ್’ ಎಂದು ಕರೆಯುತ್ತಿದ್ದಾರೆ.

    ಕರೊನಾವೈರಸ್ ಅನ್ನು ಜಗತ್ತಿಗೆ ‘ರಫ್ತು’ ಮಾಡಿ ನಂತರ ತಾನು ಜಗತ್ತಿನ ರಕ್ಷಕ ಎಂದು ಬಿಂಬಿಸಿಕೊಳ್ಳಲು ಟೆಸ್ಟಿಂಗ್ ಕಿಟ್​ಗಳನ್ನೂ ರೋಗಪೀಡಿತ ದೇಶಗಳಿಗೆ ರಫ್ತು ಮಾಡಿ ಹಣ ಕಮಾಯಿಸಲೂ ಲಜ್ಜೆಗೇಡಿ ಕಮ್ಯೂನಿಸ್ಟ್ ಸರ್ಕಾರ ನೋಡಿತು. ಆದರೆ ಅದು ‘ಮಾರಿದ’ ಕಿಟ್​ಗಳು ದೋಷಪೂರ್ಣ ಎಂದು ಸ್ಪೇನ್, ಹಾಲೆಂಡ್, ಇಟಲಿಯಂಥ ‘ಮುಂದುವರಿದ’ ರಾಷ್ಟ್ರಗಳಿರಲಿ ನಮ್ಮ ನೆರೆಯ ನೇಪಾಳ ಸಹ ತಿರಸ್ಕರಿಸಿತು. ಏಪ್ರಿಲ್ 16ರಂದು ನಮ್ಮಲ್ಲಿಗೆ ಆರೂವರೆ ಲಕ್ಷ ರ್ಯಾಪಿಡ್ ಆಂಟಿಬಾಡಿ ಟೆಸ್ಟಿಂಗ್ ಕಿಟ್​ಗಳು ಬಂದವಷ್ಟೇ. ಮೊದಲಿಗೆ ಚೀನೀ ಕಿಟ್​ಗಳ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಈಗ ಆ ಆರೂವರೆ ಲಕ್ಷ ಕಿಟ್​ಗಳಲ್ಲಿ ಶೇಕಡ 94.6 ಕಳಪೆ ಗುಣಮಟ್ಟದವು ಅಂದರೆ ಸರಿಯಾಗಿರುವಂಥವು ಶೇ.5.4 ಮಾತ್ರ ಎಂದು ಹೇಳುತ್ತಿದೆ! ಮೇಲೆ ಉಲ್ಲೇಖಿಸಿದ ದೇಶಗಳಲ್ಲದೆ ಫಿನ್​ಲೆಂಡ್, ಸ್ಲೊವಾಕಿಯಾ, ಟರ್ಕಿ ಸೇರಿ ಹಲವಾರು ದೇಶಗಳು ತಿರಸ್ಕರಿಸಿದ ಮೇಲೂ ಚೀನೀ ಸಾಧನಗಳನ್ನು ಭಾರತ ಖರೀದಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದರಲ್ಲೂ, ಚೀನಾದಿಂದ ಮೊದಲೇ ಬಂದಿದ್ದ, ಕರೊನಾ ಸೋಂಕಿತರನ್ನು ಉಪಚರಿಸುವವರು ಧರಿಸಬೇಕಾದ, 50,000 ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್​ವೆುಂಟ್ಸ್ (ಪಿಪಿಇ) ಕಳಪೆ ಗುಣಮಟ್ಟದವು ಎಂದು ಗೊತ್ತಾದ ಮೇಲೂ ಈ ವ್ಯವಹಾರ ನಡೆದದ್ದು ಯಾಕೆ? ಪ್ರಸಕ್ತ ಸನ್ನಿವೇಶದಲ್ಲಿ ಟೆಸ್ಟಿಂಗ್ ಕಿಟ್​ಗಳು ದೊರೆಯುವುದು ಚೀನಾದಿಂದ ಮಾತ್ರ, ಹೀಗಾಗಿ ಅಲ್ಲಿಂದಲೇ ತರಿಸಬೇಕಾಯಿತು ಎಂದು ಹೇಳಬಹುದಾದರೂ ಅದು ಬೆನ್ನುಮೂಳೆಯಿಲ್ಲದ ವಾದವಾಗುತ್ತದೆ. ನಿರುಪಯುಕ್ತ ವಸ್ತುಗಳಿಗಿಂತ ಏನೂ ಇಲ್ಲದಿರುವುದೇ ಉತ್ತಮ ಅಲ್ಲವೇ? ಈಗೇನಾಗಿದೆ ಎಂದರೆ, ಮಿಲಿಯನ್​ಗಟ್ಟಲೆ ಡಾಲರ್ ವಿದೇಶೀ ವಿನಿಮಯ ನಮ್ಮಿಂದ ಚೀನಾದ ಬೊಕ್ಕಸಕ್ಕೆ ಸೇರಿದೆ.

    ತನ್ನೆಲ್ಲ ಕುಕೃತ್ಯಗಳು ಒಂದೊಂದಾಗಿ ಹೊರಬಿದ್ದು ಜಾಗತಿಕವಾಗಿ ಬೆತ್ತಲಾಗತೊಡಗಿದಂತೆ ಚೀನೀ ಕಮ್ಯೂನಿಸ್ಟ್ ಸರ್ಕಾರದ ವರ್ತನೆ ಹೇಗಿದೆ? ತಾನು ‘ಮಾರಿದ’ ಟೆಸ್ಟಿಂಗ್ ಕಿಟ್​ಗಳು ದೋಷಪೂರ್ಣ ಎಂದು ಸ್ಪೇನ್, ಹಾಲೆಂಡ್ ಮತ್ತು ಇಟಲಿಗಳು ಹೇಳಿದಾಗ ಅದಕ್ಕೆ ಚೀನಾದಿಂದ ಕ್ಷಮಾಪಣೆ ಅಥವಾ ವಿಷಾದ ವ್ಯಕ್ತವಾಗಲಿಲ್ಲ. ಬದಲಿಗೆ, ಕಮ್ಯೂನಿಸ್ಟ್ ಸರ್ಕಾರ ಅಹಂಕಾರದಿಂದ ಹೇಳಿದ್ದು ‘ತಾವೇನು ಕೊಂಡುಕೊಳ್ಳುತ್ತಿದ್ದೇವೆ ಎನ್ನುವುದನ್ನು ಈ ದೇಶಗಳು ಡಬಲ್ ಚೆಕ್ ಮಾಡಬೇಕಾಗಿತ್ತು’ ಎಂದು! ಜವಾಬ್ದಾರಿಯುತವಾಗಿ ಇರಬೇಕಾಗಿದ್ದ ಸರ್ಕಾರವೊಂದರ ನಿರ್ಲಜ್ಜ ವರ್ತನೆಯ ಪರಾಕಾಷ್ಟೆ ಇದು.

    ಇದರ ಜತೆಗೇ, ವಸ್ತುಸ್ಥಿತಿಯನ್ನು ಮುಚ್ಚಿಡುವ ಚೀನೀ ಸರ್ಕಾರದ ಪ್ರಯತ್ನಗಳೂ ಹೊರಜಗತ್ತಿನ ಮುಂದೆ ಅನಾವರಣಗೊಳ್ಳುತ್ತಿವೆ. ವೈರಸ್ ಮೊದಲು ಕಾಣಿಸಿಕೊಂಡ ವೂಹಾನ್​ನಲ್ಲಿ ಜನವರಿ 23ರಂದು ವಿಧಿಸಲಾದ ಲಾಕ್​ಡೌನ್ 76 ದಿನಗಳ ನಂತರ ಏಪ್ರಿಲ್ 8ರಂದು ತೆಗೆದುಹಾಕಿದ್ದನ್ನು, ಆ ಸಂಭ್ರಮಾಚರಣೆಗಾಗಿ ನಗರವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿದ್ದನ್ನೂ ಚೀನಾ ಹೊರಜಗತ್ತಿನ ಮುಂದೆ ದೊಡ್ಡದಾಗಿ ಪ್ರಚಾರ ಮಾಡಿತು. ಆದರೆ ಅದೇ ದಿನ ಅವಕಾಶ ಸಿಕ್ಕಿದ್ದೇ 55 ಸಾವಿರ ಜನ ವೂಹಾನ್ ತೊರೆದು ಓಡಿಹೋದದ್ದನ್ನು ಮಾತ್ರ ಚೀನೀ ಮಾಧ್ಯಮಗಳು ಮುಚ್ಚಿಟ್ಟವು. ನಾಲ್ಕೇ ದಿನದಲ್ಲಿ ಮತ್ತೆ ಲಾಕ್​ಡೌನ್ ವಿಧಿಸಿದ ಬಗ್ಗೆ ಚೀನೀ ಸರ್ಕಾರ ತುಟಿಪಿಟಕ್ಕೆನ್ನಲಿಲ್ಲ. ಹೀಗೆ ಚೀನೀ ಸರ್ಕಾರ ಜಗತ್ತಿನ ಮುಂದೆ ತನ್ನ ಬಗ್ಗೆ ಬಣ್ಣಬಣ್ಣದ ಚಿತ್ರಣವನ್ನು ನೀಡಲು ಅದೆಷ್ಟೇ ಹೆಣಗಾಡಿದರೂ ಅದರ ಕಣ್ಣುತಪ್ಪಿಸಿ ಹೊರಬರುತ್ತಿರುವ ಸುದ್ದಿಗಳು ಭಯಾನಕವಾಗಿವೆ. ಇಡೀ ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡಿಹೋಗಿದೆ. ಸರ್ಕಾರ ಮೈಪರಚಿಕೊಳ್ಳುತ್ತಿದೆ. ಅತ್ತ ವೂಹಾನ್, ಬೀಜಿಂಗ್ ಸೇರಿ ವಿವಿಧ ನಗರಗಳಲ್ಲಿ ಹಿಂಸಾತ್ಮಕ ಕ್ರಮಗಳ ಮೂಲಕ ಲಾಕ್​ಡೌನ್ ಜಾರಿಗೊಳಿಸಿದರೆ ಹಾರ್ಬಿನ್​ನಲ್ಲಿ ಜನ ಹೊರಬರಬಾರದೆಂದು ಪೊಲೀಸರು ಮನೆಬಾಗಿಲುಗಳಿಗೆ ಹೊರಗಿನಿಂದ ಬೀಗ ಹಾಕಿದ್ದಾರೆ! ಗ್ವಾಂಗ್ ಝೌನಲ್ಲಿ ಮಾರುಕಟ್ಟೆ, ಆಸ್ಪತ್ರೆ ಮುಂತಾದೆಡೆ ಸಂಗ್ರಹವಾದ ಕರೆನ್ಸಿ ನೋಟುಗಳನ್ನೆಲ್ಲ ಸೆಂಟ್ರಲ್ ಬ್ಯಾಂಕ್​ನಲ್ಲಿ ಒಟ್ಟುಗೂಡಿಸಿ ಸುಟ್ಟುಹಾಕಲಾಗುತ್ತಿದೆ. ನೋಟ್​ಗಳಿಂದ ಸೋಂಕು ಹರಡುತ್ತಿದೆ ಎಂಬ ಭಯವೇ ಇದಕ್ಕೆ ಕಾರಣ.

    ಸೋಂಕು ಜ್ವಾಲಾಮುಖಿಯಂತೆ ಸ್ಪೋಟಿಸಿರುವ ಇತ್ತೀಚಿನ ನಗರ ಈಶಾನ್ಯದ ಹೇಲೋಂಗ್​ಜಿಯಾಂಗ್ ಪ್ರಾಂತ್ಯದ ಮುಖ್ಯ ಪಟ್ಟಣ ಹಾರ್ಬಿನ್. ಆ ನಗರದ ಆಸ್ಪತ್ರೆಯ ಮುಂದೆ ನೂರಾರು ಸೋಂಕಿತರು ಚಿಕಿತ್ಸೆಗಾಗಿ ಕಾದು ನಿಂತಿರುವ, ಸೋಂಕಿತರು ನಿತ್ರಾಣರಾಗಿ ರಸ್ತೆ ಬದಿಯಲ್ಲಿ ಬಿದ್ದಿರುವ ಮನಕಲಕುವ ದೃಶ್ಯಗಳು ಚೀನೀ ಸರ್ಕಾರದ ಹದ್ದಿನ ಕಣ್ಣು ತಪ್ಪಿಸಿ ಹೊರಜಗತ್ತಿಗೆ ತಲುಪಿಯೇಬಿಟ್ಟಿವೆ. ಆದರೆ, ಅವರೆಲ್ಲರೂ ‘ಹೊರಗಿನಿಂದ’ ಬಂದವರು ಎಂದು ಹೇಳಿ ಚೀನಾ ತಿಪ್ಪೆಸಾರಿಸಲು ನೋಡುತ್ತಿದೆ. ನಿಜವಾಗಿ ನಡೆಯುತ್ತಿರುವುದು ಏನೆಂದರೆ ಸೋಂಕಿತರೆಲ್ಲರೂ ಒಳಗಿನವರೇ, ಹೊರಗಿನಿಂದ ಯಾರನ್ನೂ ಚೀನಾ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ತನ್ನ ಗಡಿಗೆ ಹೊಂದಿಕೊಂಡಿರುವ ಹೇಲೋಂಗ್​ಜಿಯಾಂಗ್ ಪ್ರಾಂತ್ಯಕ್ಕೆ ತನ್ನಲ್ಲಿರುವ ಚೀನೀಯರನ್ನು ಕಳುಹಿಸಲು ರಷ್ಯಾ ಪ್ರಯತ್ನಿಸುತ್ತಿದೆಯೇನೋ ಸರಿ. ಆದರೆ ಚೀನಾ ಅವರನ್ನು ತನ್ನ ಎಲ್ಲೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ ನೂರಾರು ಬಡಪಾಯಿ ಚೀನೀಯರು ಅತ್ತ ರಷ್ಯಾಗೂ ಬೇಡವಾಗಿ ಇತ್ತ ತಾಯ್ನಾಡಿಗೂ ಬೇಡವಾಗಿ ಗಡಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ದಿನಗಳೆಯುತ್ತಿದ್ದಾರೆ. ಇದನ್ನು ಚೀನಾ ಹೊರಜಗತ್ತಿಗೆ ಹೇಳುತ್ತಿಲ್ಲ.

    ಇಲ್ಲಿ ಮತ್ತೊಂದು ಆಸಕ್ತಿಕರ ವಿಷಯ ಹೇಳಬೇಕು. ಕರೊನಾ ಮಾರಿ ಸಾಲದೆಂಬಂತೆ ಹಾರ್ಬಿನ್ ನಗರ ಸೇರಿ ಹೇಲೊಂಗ್​ಜಿಯಾಂಗ್ ಪ್ರಾಂತ್ಯದ ಹಲವೆಡೆ ವಾರದ ಹಿಂದೆ ಅಕಾಲಿಕವಾಗಿ ಭಾರಿ ಹಿಮಪಾತವಾಯಿತು, ಕಾರುಗಳು ಹಿಮದಲ್ಲಿ ಹೂತುಹೋದವು, ಮನೆಬಾಗಿಲ ಮುಂದೆ ಮೂರುನಾಲ್ಕು ಅಡಿಗಳೆತ್ತರ ಹಿಮ ತುಂಬಿಹೊಗಿ ಜನ ಹೊರಬರಲಾಗದೆ ಪರದಾಡಿದರು. ಆಗ ಕೆಲವರ ಬಾಯಿಯಿಂದ ಬಂದದ್ದು ಅಪ್ಪಟ ಸಂಸ್ಕೃತ ಪದ ‘ಕರ್ಮ’! ತಮ್ಮ ಯಾವ ‘ಕರ್ಮ’ಕ್ಕಾಗಿ ತಮಗೀ ಶಿಕ್ಷೆ ಎಂದವರು ಮರುಗುತ್ತಿದ್ದರು.

    ತನ್ನದೇ ಆಂತರಿಕ ಸ್ಥಿತಿ ಹೀಗೆ ದಾರುಣ ಆಗುತ್ತಿರುವಾಗ ಕಮ್ಯೂನಿಸ್ಟ್ ಸರ್ಕಾರದ ಲಜ್ಜೆಗೇಡಿತನದ ಮತ್ತೊದು ಮಜಲಿಗೇರಿದ್ದರ ಎರಡು ಉದಾಹರಣೆಗಳನ್ನಿಲ್ಲಿ ನೀಡುತ್ತೇನೆ. ತನ್ನ ಆದಾಯದ ಒಂದಂಶವನ್ನು ತನ್ನ ಪರವಾಗಿನ ಪ್ರಚಾರಕ್ಕಾಗಿಯೂ ಚೀನಾ ಉಪಯೋಗಿಸುತ್ತಿರುವುದು ಹೊಸ ವಿಷಯವೇನೂ ಅಲ್ಲ. ಹಿಂದೆ ಸೋವಿಯೆತ್ ಯೂನಿಯನ್ ವಿದೇಶಗಳಲ್ಲಿ ರಾಜಕೀಯ ಪಕ್ಷಗಳನ್ನೂ, ರಾಜಕಿಯ ನೇತಾರರನ್ನೂ, ಪತ್ರಿಕೆಗಳನ್ನೂ, ಪತ್ರಕರ್ತರನ್ನೂ, ‘ಬುದ್ಧಿಜೀವಿ’ಗಳನ್ನು ಹಣ ಕೊಟ್ಟು ಸಾಕುತ್ತಿತ್ತು ಮತ್ತು ಆ ಮೂಲಕ ಅವರನ್ನು ತನ್ನ ವಕ್ತಾರರನ್ನಾಗಿಸಿಕೊಂಡು ತನ್ನ ಪರವಾಗಿ ಪ್ರಚಾರ ಮಾಡಿಸಿಕೊಳ್ಳುತ್ತಿತ್ತು. ಅದೇ ಕೆಲಸವನ್ನು ಈಗ ಚೀನಾ ಮತ್ತಷ್ಟು ದೊಡ್ಡದಾಗಿ ಮಾಡುತ್ತಿದೆ. ಚೀನೀ ಹಣಕ್ಕೆ ಕೈಯೊಡ್ಡಿ ಅದರ ಪರವಾಗಿ ಕೆಲಸ ಮಾಡುವವರು, ಪ್ರಚಾರ ಮಾಡುವವರು ಅಮೆರಿಕ ಸೇರಿ ಎಲ್ಲ ದೇಶಗಳಲ್ಲಿಯೂ ಇದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಬಗ್ಗೆ ಉಲ್ಲೇಖಿಸದಿರಲಾಗದು. ಅದರ ಹಾಲಿ ಮಹಾನಿರ್ದೇಶಕನನ್ನೇ ಚೀನಾ ಕೊಂಡುಕೊಂಡಿರುವಂತಿದೆ. ಕರೊನಾ ಸೋಂಕಿನ ಬಗ್ಗೆ ಚೀನಾ ಹೇಳಿದ ಸುಳ್ಳುಗಳಿಗೆ ಅಂಗೀಕಾರದ ಮುದ್ರೆಯೊತ್ತಿ ಜಗತ್ತನ್ನು ಅಡ್ಡದಾರಿಗೆಳೆದ ಗಂಭೀರ ಆಪಾದನೆ ಡಾ. ಟೆಡ್ರೋಸ್ ಮೇಲಿದೆ.

    ಕರೊನಾ ಸೋಂಕಿನ ಉಗಮ ಮತ್ತು ಹರಡುವಿಕೆ ಬಗ್ಗೆ ಚೀನಾವನ್ನು ಜಗತ್ತು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿದೆ. ಟ್ರಂಪ್ ಸರ್ಕಾರದ ಮುಂದೆ ತನ್ನ ಆಟವೇನೂ ನಡೆಯದು ಎಂದರಿತ ಚೀನೀ ಕಮ್ಯೂನಿಸ್ಟ್ ಸರ್ಕಾರ ಅಮೆರಿಕದ ರಾಜ್ಯಗಳತ್ತ ತಿರುಗಿದೆ. ಅದಕ್ಕೊಂದು ಉದಾಹರಣೆಯೆಂದರೆ, ಕರೊನಾ ಸೋಂಕಿನ ವಿರುದ್ಧ ಚೀನೀ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಬೇಕೆಂದು ವಿನಂತಿಸಿ ವಿಸ್ಕಾನ್​ಸಿನ್ ರಾಜ್ಯದ ಸೆನೇಟ್ ಅಧ್ಯಕ್ಷರಿಗೆ ಚೀನೀ ಕಾನ್ಸಲ್ ಜನರಲ್ ಬರೆದ ಇ-ಮೇಲ್. ಚೀನೀಯರಿಗೆ ನಿರಾಸೆ ಆಗುವಂತೆ ವಿಸ್ಕಾನ್​ಸಿನ್ ರಾಜಕಾರಣಿಯಿಂದ ತಕ್ಷಣ ಬಂದದ್ದು ನಕಾರಾತ್ಮಕ ಪ್ರತಿಕ್ರಿಯೆ. ಅತ್ತ ಜರ್ಮನಿಯಲ್ಲೂ ಚೀನಾಗೆ ಅದೇ ಮುಖಭಂಗ. ತನ್ನ ನಿಲುವು ಮತ್ತು ಕ್ರಮಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಚೀನೀ ರಾಜದೂತ ಜರ್ಮನ್ ಸರ್ಕಾರಕ್ಕೆ ಬರೆದ ಇ-ಮೇಲ್ ಸಹ ತಿರುಗುಬಾಣವಾಗಿದೆ. ಚೀನಾದಿಂದ ಬರುವ ಅಂತಹ ಯಾವುದೇ ವಿನಂತಿಗಳನ್ನು ಪುರಸ್ಕರಿಸಬಾರದು ಎಂದು ಜರ್ಮನ್ ಸರ್ಕಾರ ಎಲ್ಲ ಪ್ರಾಂತೀಯ ಸರ್ಕಾರಗಳಿಗೆ ಅಧಿಕೃತ ಪತ್ರದ ಮೂಲಕ ಸೂಚಿಸಿದೆ.

    ಜಗತ್ತು ಕರೊನಾ ಮಾರಿಯ ವಿರುದ್ಧ ಸೆಣಸಾಡುತ್ತಿರುವಾಗ ಚೀನಾದ ನೆಲದಾಹವೂ ಏರಿದಂತಿದೆ. ಇದು ಆರಂಭವಾದದ್ದು ಸೋಂಕು ಚೀನಾದಲ್ಲೇ ವ್ಯಾಪಕವಾಗಿ ಹರಡುತ್ತಿರುವಾಗಲೇ. ಡಿಸೆಂಬರ್ 23ರಂದು ಚೀನೀ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿನ ಇಂಡೋನೇಷ್ಯಾಗೆ ಸೇರಿದ ದ್ವೀಪವೊಂದರ ಸನಿಹಕ್ಕೆ ನುಸುಳಲು ಪ್ರಯತ್ನಿಸಿದವು. ಜಕಾರ್ತ ಅಲ್ಲಿಗೆ ಯುದ್ಧನೌಕೆಗಳನ್ನು ಕಳುಹಿಸಿ ತಾನು ಘರ್ಷಣೆಗೆ ಸಿದ್ಧ ಎಂದು ಸೆಡ್ದುಹೊಡೆದು ನಿಂತಿತು. ಆಗ ಬಾಲ ಮುದುರಿಕೊಂಡು ಪಲಾಯನಗೈದ ಚೀನಾ ನಾಲ್ಕು ತಿಂಗಳ ನಂತರ ಮತ್ತೆ ತಂಟೆ ತೆಗೆಯತೊಡಗಿದೆ. ಪೂರ್ವ ಚೀನಾ ಸಮುದ್ರದಲ್ಲಿನ ಸೆಂಕಾಕು ದ್ವೀಪಗಳಲ್ಲಿ ಜಪಾನ್ ಅನ್ನು ಕೆಣಕುವ ಪ್ರಯತ್ನದಿಂದ ಆರಂಭಿಸಿ ದಕ್ಷಿಣ ಚೀನಾ ಸಮುದ್ರದಲ್ಲಿನ ಐವತ್ತಕ್ಕೂ ಮಿಕ್ಕಿದ ದ್ವೀಪಗಳು, ನಡುಗಡ್ಡೆಗಳು ಹಾಗೂ ಹವಳದ ದಿಬ್ಬಗಳಿಗೆ ಚೀನೀ ಹೆಸರುಗಳನ್ನಿಟ್ಟು ಅವೆಲ್ಲವೂ ತನ್ನವು ಎಂದು ಚೀನಾ ಹೇಳಿಕೊಳ್ಳತೊಡಗಿದೆ. ವಿವಿಧ ದ್ವೀಪಗಳ ಮೇಲೆ ಹಕ್ಕು ಸಾಧಿಸುತ್ತಿರುವ ತೈವಾನ್, ಫಿಲಿಪೀನ್ಸ್, ವಿಯೆಟ್ನಾಮ್ ಮಲೇಷ್ಯಾ, ಇಂಡೋನೇಷ್ಯಾ ಹಾಗೂ ಬ್ರುನೈಗಳು ಉಗ್ರವಾಗಿ ಪ್ರತಿಕ್ರಿಯಿಸಿವೆ. ಚೀನಾದ ಈ ಕುಕೃತ್ಯಗಳಿಗೆ ಪ್ರಭಾವಿ ರಾಷ್ಟ್ರಗಳ ಪ್ರತಿಕ್ರಿಯೆ ಹೇಗಿದೆ? ಅದನ್ನು ಮುಂದಿನವಾರ ವಿಶ್ಲೇಷಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಹೆರಿಗೆಯಾದ ನಂತರ ಕಳೆದುಕೊಂಡಿದ್ದ ಸ್ವಂತ ಮಗನನ್ನು 28 ವರ್ಷಗಳ ಬಳಿಕ ಮರಳಿ ಪಡೆದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts