More

    ಜಗದಗಲ ಅಂಕಣ: ಮುಸ್ಲಿಂ ಸಮುದಾಯ ವಿವೇಕ ಪ್ರದರ್ಶಿಸಬೇಕಿದೆ

    2014ರಲ್ಲಿ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳನ್ನು ತಲ್ಲಣಿಸಿದ್ದು ಬಿಜೆಪಿಗೆ ಸಂದ ಮುಸ್ಲಿಂ ಮತಗಳು. ಸಮಾಜದ ಮುಖ್ಯವಾಹಿನಿಗೆ ಸೇರಿ ರಾಷ್ಟ್ರನಿರ್ವಣದಲ್ಲಿ ತೊಡಗುವುದರಿಂದಷ್ಟೇ ತಮ್ಮ ಉನ್ನತಿ ಸಾಧ್ಯ ಎಂದರಿತ, ಮುಖ್ಯವಾಗಿ ಉತ್ತರಪ್ರದೇಶದ, ಮುಸ್ಲಿಂ ಸಮುದಾಯದ ಒಂದು ದೊಡ್ಡ ಭಾಗ ಬಿಜೆಪಿಗೆ ಮತ ನೀಡಿದ್ದನ್ನು ನೆನಪಿಸಿಕೊಳ್ಳಿ.

    ಜಗದಗಲ ಅಂಕಣ: ಮುಸ್ಲಿಂ ಸಮುದಾಯ ವಿವೇಕ ಪ್ರದರ್ಶಿಸಬೇಕಿದೆಕಾಂಗ್ರೆಸ್ ಮತ್ತದರ ಪರ ಮಾಧ್ಯಮ ಮತ್ತು ತಥಾಕಥಿತ ವಿಚಾರವಾದಿಗಳು ಸತತ ಹನ್ನೊಂದು ವರ್ಷಗಳು ನಡೆಸಿಕೊಂಡು ಬಂದ ಉನ್ಮಾದಕರ ಅಪಪ್ರಚಾರವನ್ನು ಅಣಕಿಸುವಂತೆ ಬಿಜೆಪಿ ನರೇಂದ್ರ ಮೋದಿಯವರನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಸೆಪ್ಟೆಂಬರ್ 2013ರಲ್ಲಿ ಘೊಷಿಸಿತು. ಪ್ರಮುಖ ವಿರೋಧಪಕ್ಷದ ಈ ನಡೆ ಅದರ ವಿರೋಧಿಗಳಿಗೆ ಸಂತಸವನ್ನೇ ಉಂಟುಮಾಡಿದಂತಿತ್ತು. ತಮ್ಮ ದಶಕಕ್ಕೂ ಮೀರಿದ ಅಪಪ್ರಚಾರ ಜನತೆಯ ಮನಸ್ಸಿನಲ್ಲಿ ಬಲವಾಗಿ ಬೇರೂರಿದೆ, ಮತದಾರರು ಮೋದಿಯವರನ್ನು ನರರಾಕ್ಷಸನಂತೆ ಕಾಣುತ್ತಿದ್ದಾರೆ, ಅಂತಹ ವ್ಯಕ್ತಿಯನ್ನು ಮುಂದೆ ನಿಲ್ಲಿಸಿಕೊಂಡು ಚುನಾವಣಾ ಕಣಕ್ಕಿಳಿಯುತ್ತಿರುವ ಬಿಜೆಪಿ ತನ್ನ ವಿರುದ್ಧ ತಾನೇ ಗೋಲ್ ಹೊಡೆದುಕೊಳ್ಳುತ್ತಿದೆ ಎಂದು ನೆಮ್ಮದಿಯ ಉಸಿರುಗರೆದದ್ದೂ ಉಂಟು.

    ಆದರೆ ಜನತೆಯ ಮನೋಭಾವ ಬೇರೆಯೇ ಆಗಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನೌಟಂಕಿಗಳಿಗೆಲ್ಲ ಮಾಧ್ಯಮ ನೀಡುತ್ತಿದ್ದ ಸಕಾರಾತ್ಮಕ ಪ್ರಚಾರ ಬೂಮರ್ಯಾಂಗ್ ಆಗಿ, ಸೆಲ್ಪ್ ಗೋಲ್ ಬಾರಿಸಿಕೊಳ್ಳುತ್ತಿರುವುದರಲ್ಲಿ ರಾಹುಲ್ ಗಾಂಧಿ ವಿಶೇಷ ಪರಿಣಿತಿ ಪಡೆದಿದ್ದಾರೆ ಎಂಬ ಅಭಿಪ್ರಾಯ ಜನಜನಿತವಾಗತೊಡಗಿತು. ಆ ವ್ಯಕ್ತಿ ಕೈಗೆ ಆಡಳಿತವನ್ನಿಟ್ಟರೆ ಸೆಲ್ಪ್ ಗೋಲ್ ಬಾರಿಸಿಕೊಳ್ಳುವ ದುರದೃಷ್ಟ ದೇಶದ್ದಾಗುತ್ತದೆ ಎಂಬ ಆತಂಕ ಚುನಾವಣೆಗಳು ಐದಾರು ತಿಂಗಳಿರುವಾಗಲೇ ಜನಮನದಲ್ಲಿ ವೇಗವಾಗಿ ಹರಡತೊಡಗಿತು. ಮುಖ್ಯವಾಗಿ, ಮೋದಿಯೊಬ್ಬ ನರಹಂತಕ, ಕೋಮುವಾದಿ ಎಂಬ ಅದುವರೆಗಿನ ಅಪಪ್ರಚಾರವೇ ಬೂಮರ್ಯಾಂಗ್ ಆಗಿ ಹಿಂದೂಗಳು ಮೋದಿಯವರನ್ನು ತಮ್ಮ ಧರ್ಮದ ರಕ್ಷಕ ಎಂದು ನಂಬತೊಡಗಿದ ಪರಿ ಮಾಧ್ಯಮಗಳನ್ನೂ, ಬುದ್ಧಿಜೀವಿಗಳನ್ನೂ ಕಂಗೆಡಿಸಿಬಿಟ್ಟಿತು.

    ಮೋದಿ-ವಿರೋಧಿಗಳ ಉನ್ಮಾದ ತಾರಕಕ್ಕೇರಿ, ‘ಮೋದಿ ಪ್ರಧಾನಿಯಾದರೆ ದೇಶದಲ್ಲಿ ರಕ್ತದ ಹೊಳೆ ಹರಿಯುತ್ತದೆ, ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಇರುವುದಿಲ್ಲ’ ಎಂಬ ಹತಾಶ ಗೋಳಾಟಗಳು ನಮ್ಮ ಕಿವಿಗೆ ಬೀಳತೊಡಗಿದ್ದು ಆಗ. ಅಷ್ಟರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಚುನಾವಣೆಗಳಲ್ಲಿ ಅಲ್ಪಬಹುಮತ ಗಳಿಸಬಹುದೆಂಬ ಸೂಚನೆಗಳು ಕಾಣತೊಡಗಿದಂತೆ ಅದನ್ನು ಅರಗಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ ಇವರೆಲ್ಲರೂ ರಾಗ ಬದಲಾಯಿಸಿ ‘ಬಿಜೆಪಿ ಅಧಿಕಾರಕ್ಕೆ ಬಂದರೂ ಪರವಾಗಿಲ್ಲ, ಆದರೆ ಮೋದಿ ಪ್ರಧಾನಮಂತ್ರಿಯಾಗಕೂಡದು’ ಎಂದು ಹೇಳಿ ನಗೆಪಾಟಲಿಗೀಡಾದರು.

    ಜಗದಗಲ ಅಂಕಣ: ಮುಸ್ಲಿಂ ಸಮುದಾಯ ವಿವೇಕ ಪ್ರದರ್ಶಿಸಬೇಕಿದೆಬಾಬ್ರಿ ಕಟ್ಟಡ ಧ್ವಂಸಕ್ಕೆ ಸಂಬಂಧಿಸಿದಂತೆ ಆಡ್ವಾಣಿಯವರನ್ನು ಖಳನಾಯಕನಂತೆ ಬಿಂಬಿಸಿ 1996 ಮತ್ತು 1998ರಲ್ಲಿ ಅವರು ಪ್ರಧಾನಿಯಾಗುವುದನ್ನು ಉಗ್ರವಾಗಿ ವಿರೋಧಿಸಿದ್ದ ಇವರು ಈಗ ಏಕಾಏಕಿ ಆಡ್ವ್ವಾಣಿಯವರೇ ಪ್ರಧಾನಿಯಾದರೆ ಸಾಕೆನ್ನತೊಡಗಿದರು! ಇದರ ಹಿಂದಿದ್ದದ್ದು ಮೋದಿ-ವಿರೋಧಿ ಭಾವನೆಯಷ್ಟೇ ಅಲ್ಲ, ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ಒಳಜಗಳವನ್ನು ಹುಟ್ಟುಹಾಕುವ ಹುನ್ನಾರ ಸಹ. ಆದರೆ ಇದಾವುದೂ ನಡೆಯಲಿಲ್ಲ. 2014ರ ಮೇನಲ್ಲಿ ಮೋದಿ ಜನಬೆಂಬಲದೊಂದಿಗೆ ಪ್ರಧಾನಮಂತ್ರಿಯಾದರು. ಬಿಜೆಪಿಯ ಉತ್ಕರ್ಷಕ್ಕೆ ವಿರುದ್ಧವಾಗಿ ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲನ್ನನುಭವಿಸಿ ಲೋಕಸಭೆಯಲ್ಲಿ ಅಧಿಕೃತ ವಿರೋಧಪಕ್ಷದ ಸ್ಥಾನ ಗಳಿಸಲೂ ಪರದಾಡುವಂತಾಯಿತು.

    ದೇಶದೊಳಗೆ ಹೀಗೆ ಜನಬೆಂಬಲ ದಕ್ಕಿದರೆ, ಸಕಾರಾತ್ಮಕ ವಿದೇಶನೀತಿಯಿಂದಾಗಿ ಮೋದಿ ಮುಂದಿನ ಒಂದು ವರ್ಷದಲ್ಲಿ ಪಾಕಿಸ್ತಾನ ಹಾಗೂ ಚೀನಾಗಳ ಹೊರತಾಗಿ, ಮುಸ್ಲಿಂ ದೇಶಗಳೂ ಸೇರಿ ಉಳಿದೆಲ್ಲೆಡೆ ಸ್ವೀಕೃತವಾಗಿ, ವರ್ಚಸ್ವಿ ಜಾಗತಿಕ ನಾಯಕರಾಗಿ ಬೆಳೆಯತೊಡಗಿದರು. ಆಗ ಮೋದಿ ವಿರುದ್ಧದ ಅಸಹಿಷ್ಣುತೆ ಮತ್ತೊಂದು ರೂಪ ಪಡೆದುಕೊಂಡಿತು. ಇದಕ್ಕೆ ಕಾರಣ ಸ್ಪಷ್ಟ. ಒಂದು ವರ್ಷದಲ್ಲಿ ಮೋದಿ ಅಷ್ಟೆಲ್ಲ ಸಾಧಿಸಬಹುದಾದರೆ ತಮ್ಮ ಅವಧಿಯ ಇನ್ನುಳಿದ ನಾಲ್ಕು ವರ್ಷಗಳಲ್ಲಿ ಮತ್ತೇನೆಲ್ಲ ಮಾಡಬಹುದು ಎಂದು ಕಂಗಾಲಾದ ಕಾಂಗ್ರೆಸ್ ಮೋದಿಯವರ ಯೋಜನೆಗಳನ್ನೆಲ್ಲ ಹಾಳುಗೆಡವಲು ನಕಾರಾತ್ಮಕ ಮಾರ್ಗಗಳನ್ನು ಹುಡುಕತೊಡಗಿತು. ಲೋಕಸಭೆಯಲ್ಲಿ ತನ್ನ ನಲವತ್ತನಾಲ್ಕು ಸಂಸದರಿಂದ ಸಾಧ್ಯವಾಗದ್ದನ್ನು ತಾನು ಇದುವರೆಗೆ ಪೋಷಿಸಿದ್ದ ನೂರಾರು ತಥಾಕಥಿತ ಸಾಹಿತಿಗಳಿಂದ, ಸಾಂಸ್ಕೃತಿಕ ನೇತಾರರಿಂದ, ಪ್ರಾಧ್ಯಾಪಕರಿಂದ ಸಾಧಿಸಿಕೊಳ್ಳಲು ಹಂಚಿಕೆ ಹಾಕಿತು. ಈ ತಯಾರಿ ಸ್ಪಷ್ಟ ರೂಪ ಪಡೆದುಕೊಂಡದ್ದು 2015ರ ಬೇಸಿಗೆಯಲ್ಲಿ ದೆಹಲಿಯಲ್ಲಿ ರಹಸ್ಯವಾಗಿ ನಡೆದ ಮೂರು ಸಭೆಗಳಲ್ಲಿ.

    ಆಯ್ದ ಕಾಂಗ್ರೆಸ್ ನೇತಾರರು ಮತ್ತು ಕಾಂಗ್ರೆಸ್ ಆಡಳಿತವಿದ್ದಾಗ ವಿವಿಧ ಕೇಂದ್ರೀಯ ಅಕಾಡೆಮಿಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಕೆಲ ಸಾಹಿತಿಗಳಿದ್ದ ಈ ಸಭೆಗಳಲ್ಲಿ ಅವರ ಜತೆಗೂಡಿದವರು ಉತ್ತರದ ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳ ಕೆಲ ಪ್ರಾಧ್ಯಾಪಕರುಗಳು. ಕಾಂಗ್ರೆಸ್ ಸರ್ಕಾರದ ಸಮರ್ಥಕರಾಗಿದ್ದುಕೊಂಡು ಯುಪಿಎ ಸರ್ಕಾರದ ವಿವಿಧ ಇಲಾಖೆಗಳಿಗೆ ಸಲಹೆಗಾರರಾಗಿದ್ದ, ಆ ಕಾರಣದಿಂದಾಗಿಯೇ ಅಡಿಗಡಿಗೆ ವಿದೇಶ ಸುತ್ತುತ್ತಿದ್ದ, ಪ್ರಾಜೆಕ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುತ್ತಿದ್ದ ಇವರುಗಳಿಗೆ ಬಿಜೆಪಿ ಸರ್ಕಾರ ಬಂದಾಗಿನಿಂದ ಶನಿದೆಸೆ ವಕ್ಕರಿಸಿಬಿಟ್ಟಿತ್ತು. ಹೀಗಾಗಿ ಇವರೆಲ್ಲ ಸಹಜವಾಗಿಯೇ ತಮ್ಮ ಆಶ್ರಯದಾತ ಕಾಂಗ್ರೆಸ್​ನ ಷಡ್ಯಂತ್ರಕ್ಕೆ ವ್ಯೂಹ ರಚಿಸಿದರು. ಇದರ ಪರಿಣಾಮವೇ ‘ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂಬ ಕೂಗು. ಇವರ ಕೈಗೆ ದಾಳವಾಗಿ ಒದಗಿದ್ದು ಮುಖ್ಯವಾಗಿ ಸಂಶೋಧಕ ಎಂ.ಎಂ. ಕಲಬುರ್ಗಿಯವರ ಹತ್ಯೆ.

    ಇದೇ ದಿನಗಳಲ್ಲಿ, ಅಧಿಕಾರಕ್ಕೆ ಬಂದರೆ ಮೋದಿ ತಮ್ಮ ವಿರುದ್ಧ ಪ್ರತೀಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಹೆದರಿ ವರ್ಷದ ಹಿಂದೆ ಬಿಜೆಪಿ ಸಮರ್ಥಕರಾಗಿ ಬದಲಾಗಿದ್ದ ಅಥವಾ ಮಧ್ಯಮ ನೀತಿ ಅನುಸರಿಸತೊಡಗಿದ್ದ ಕೆಲ ಮಾಧ್ಯಮಗಳು ವರ್ಷವಾದರೂ ಅಂತಹ ಯಾವ ಕ್ರಮವನ್ನೂ ಮೋದಿ ಸರ್ಕಾರ ಕೈಗೊಳ್ಳದ್ದರಿಂದ ಧೈರ್ಯಗೂಡಿಸಿಕೊಂಡು ಮತ್ತೆ ಬಿಜೆಪಿ-ವಿರೋಧಿ ಪ್ರಚಾರವನ್ನು ಆರಂಭಿಸಿದ್ದವು. ಈ ಮಾಧ್ಯಮಗಳು ಸಹಜವಾಗಿಯೇ ಕಾಂಗ್ರೆಸ್-ಸಾಹಿತಿ-ವಿಚಾರವಾದಿ-ಪ್ರಾಧ್ಯಾಪಕ ಚತುಷ್ಟಯರಿಗೆ ಪ್ರಚಾರ ನೀಡುವ ವೇದಿಕೆಗಳಾದವು. ಕರ್ನಾಟಕದೊಳಗೇ ಅಸಹಿಷ್ಣು ಬೊಬ್ಬೆ ಅದೆಷ್ಟು ದೊಡ್ಡದಾಯಿತೆಂದರೆ ಮೂರೇ ವರ್ಷಗಳ ಹಿಂದೆ ಕಲಬುರ್ಗಿ ತೋರಿಸಿದ್ದ ವೈಚಾರಿಕ ಅಸಹಿಷ್ಣುತೆ ರಾಜ್ಯದಲ್ಲೇ ಸೀಮಿತ ವಲಯದ ಹೊರತಾಗಿ ಇತರೆಡೆ ಸುದ್ದಿಯಾಗಲೇ ಇಲ್ಲ.

    ಇನ್ನು, ಅಸಹಿಷ್ಣುತೆ ಹುಯಿಲನ್ನು ನಾಟಕೀಯಗೊಳಿಸಿ ಜನರನ್ನು ಮೋದಿ ಸರ್ಕಾರದ ವಿರುದ್ಧ ಉದ್ರಿಕ್ತಗೊಳಿಸಲು ‘ಪ್ರಶಸ್ತಿ ಹಿಂತಿರುಗಿಸುವಿಕೆ’ಯ ನಾಟಕವೂ ಆರಂಭವಾಯಿತು. ನೆಹರೂ-ಗಾಂಧಿ ಕುಟುಂಬದ ರಕ್ತಸಂಬಂಧಿ ನಯನತಾರಾ ಸೆಹಗಲ್ ಮತ್ತು ಕಾಂಗ್ರೆಸ್ ಆಡಳಿತವಿದ್ದಾಗ ಅಧಿಕಾರದ, ಸವಲತ್ತುಗಳ ರುಚಿ ಸವಿದಿದ್ದ ಅಶೋಕ ವಾಜಪೇಯಿಯವರಿಂದ ಆರಂಭವಾದ ಪ್ರಶಸ್ತಿ ವಾಪಸಾತಿಯನ್ನು ವ್ಯಾಪಕಗೊಳಿಸಲು ಹಲವಾರು ಸಾಹಿತಿಗಳನ್ನು ಹಳ್ಳಕ್ಕೆ ಕೆಡಹುವ ಹೂಟ ಆರಂಭವಾಯಿತು. ಪ್ರಶಸ್ತಿ ಗಳಿಸಿದ್ದ ಬಗೆಯನ್ನು ಬಯಲು ಮಾಡುವುದಾಗಿ ಕೆಲವರನ್ನು ಹೆದರಿಸಲಾಯಿತು. ಮೋದಿಯವರ ಭಾರತವನ್ನು ಅಸಹಿಷ್ಣುವೆಂದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಿಂಬಿಸಲು ನೂರಕ್ಕೂ ಮಿಕ್ಕಿದ ವಿದೇಶಿ ಪತ್ರಕರ್ತರನ್ನೂ ವಿವಿಧ ವಿಧಾನಗಳ ಮೂಲಕ ಒಪ್ಪಿಸಲಾಯಿತು. ಬಿಜೆಪಿ ಆಡಳಿತದಲ್ಲಿ ಭಾರತ ಅಶಾಂತಿಯಲ್ಲಿ ಬೇಯುತ್ತಿದೆಯೆಂದು ಬಿಂಬಿಸಿ ವಿದೇಶಗಳು ನಮ್ಮಲ್ಲಿ ಬಂಡವಾಳ ಹೂಡುವುದನ್ನು ತಡೆಯುವುದು, ಆ ಮೂಲಕ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ಹಾಳುಗೆಡವುವುದು ಇದರ ಹಿಂದಿದ್ದ ಕರಾಳ ಉದ್ದೇಶ.

    ಪರಿಣಾಮವಾಗಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಾಗ, ಕಾಂಗ್ರೆಸ್ ಆಂಡ್ ಕೋ ಹೂಡಿದ ಅಸಹಿಷ್ಣುತಾ ನಾಟಕ ಯಶಸ್ವಿಯಾಯಿತೇನೋ ನಿಜ. ಆದರೆ ಅಷ್ಟರಲ್ಲಾಗಲೆ ಪಿತೂರಿಗಾರರ ಹುನ್ನಾರಗಳು ಮಾಧ್ಯಮದ ಒಂದು ವರ್ಗದ ತನಿಖಾತ್ಮಕ ವರದಿಗಾರಿಕೆ ಮೂಲಕ ಜನತೆಗೆ ತಿಳಿಯತೊಡಗಿದ ಪರಿಣಾಮ ಅಸಹಿಷ್ಣುತೆ ನಾಟಕ ನಿಧಾನವಾಗಿಯಾದರೂ ಬಂದ್ ಆಗುವಂತಾಯಿತು. ಪರಿಣಾಮವಾಗಿ, ಕೆಲವು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಬಿಜೆಪಿಗೆ ಪ್ರತಿಕೂಲವಾದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಸಶಕ್ತವಾಗಿ ಹೊರಹೊಮ್ಮಿತು.

    ಇದು ಅಸಹಿಷ್ಣುತೆ ನಾಟಕದ ಎರಡನೆಯ ಅಂಕಕ್ಕೆ ನಾಂದಿ ಹಾಡಿತು. ಎರಡನೆಯ ಬಾರಿಗೆ ಅಧಿಕಾರಕ್ಕೇರಿದ ಎರಡೇ ತಿಂಗಳಲ್ಲಿ ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿಗಳ ರದ್ದತಿ ಹಾಗೂ ರಾಜ್ಯದ ವಿಭಜನೆಯಂತಹ ಮಹತ್ವದ ಕ್ರಮಗಳನ್ನು ಒಂದೂ ಗುಂಡು ಬಳಸದೆ ಮೋದಿ ಸರ್ಕಾರ ಸಾಧಿಸಿದ ಬಗೆ ಅಸಹಿಷ್ಣುತಾ ನಾಟಕದ ಎರಡನೆಯ ಅಂಕವನ್ನು ತಕ್ಷಣಕ್ಕೆ ಅಗತ್ಯಗೊಳಿಸಿತು. ಅದಕ್ಕಾಗಿ ಕಾಂಗ್ರೆಸ್ ಆಂಡ್ ಕೋಗೆ ಸಿಕ್ಕಿದ ರೆಡಿಮೇಡ್ ಅಸ್ತ್ರಗಳು ಎನ್​ಸಿಆರ್ ಮತ್ತು ಸಿಎಎ. ಯಾಕೆಂದರೆ ಮುಸ್ಲಿಂ ಸಮುದಾಯವನ್ನು ಉದ್ರೇಕಿಸಲು ಅವು ಸಮರ್ಥ ಕಾರಣಗಳಾಗಬಲ್ಲುವಾಗಿದ್ದವು.

    2014ರಲ್ಲಿ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳನ್ನು ತಲ್ಲಣಿಸಿದ್ದು ಬಿಜೆಪಿಗೆ ಸಂದ ಮುಸ್ಲಿಂ ಮತಗಳು. ಸಮಾಜದ ಮುಖ್ಯವಾಹಿನಿಗೆ ಸೇರಿ ರಾಷ್ಟ್ರನಿರ್ವಣದಲ್ಲಿ ತೊಡಗುವುದರಿಂದಷ್ಟೇ ತಮ್ಮ ಉನ್ನತಿ ಸಾಧ್ಯ ಎಂದರಿತ, ಮುಖ್ಯವಾಗಿ ಉತ್ತರಪ್ರದೇಶದ, ಮುಸ್ಲಿಂ ಸಮುದಾಯದ ಒಂದು ದೊಡ್ಡ ಭಾಗ ಬಿಜೆಪಿಗೆ ಮತ ನೀಡಿದ್ದನ್ನು ನೆನಪಿಸಿಕೊಳ್ಳಿ. ಮುಸ್ಲಿಂ ಸಮುದಾಯವನ್ನು ಬಿಜೆಪಿಯಿಂದ ವಿಮುಖಗೊಳಿಸುವುದರಿಂದ ಮೋದಿ-ವಿರೋಧಿಗಳು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದುರುಳಿಸಬಹುದಾಗಿತ್ತು. ಒಂದು-ದೇಶದೊಳಗೆ ಬಿಜೆಪಿಯನ್ನು ಅಲ್ಪಸಂಖ್ಯಾತ-ವಿರೋಧಿ ಹಾಗೂ ಕೋಮುವಾದಿ ಎಂದು ಬಿಂಬಿಸಬಹುದು, ಎರಡು- ಮುಸ್ಲಿಂ ರಾಷ್ಟ್ರಗಳು ಮೋದಿಯವರ ಭಾರತದೊಡನೆ ಆರ್ಥಿಕ ಸಹಭಾಗಿತ್ವದಿಂದ ಹಿಂದೆಗೆಯುವಂತೆ ಮಾಡುವುದು.

    ಮುಸ್ಲಿಂ ಸಮುದಾಯ ಒಳಿತು ಕೆಡುಕುಗಳ ವಿವೇಚನೆಯಿಲ್ಲದೆ ಉದ್ರಿಕ್ತಗೊಳ್ಳುತ್ತದೆ ಎನ್ನುವುದು ಐತಿಹಾಸಿಕ ಸತ್ಯ. ಅದು ಮೊದಲ ಬಾರಿಗೆ ಸಾಬೀತಾದದ್ದು 1947ರಲ್ಲಿ. ಜಿನ್ನಾ, ಲಿಯಾಖತ್, ಸುಹ್ರವರ್ದಿಯಂತಹ ಕೆಲವೇಕೆಲವು ಅಧಿಕಾರಲಾಲಸಿ ನಾಯಕರ ಅಪಪ್ರಚಾರಗಳಿಗೆ ಬಲಿಯಾಗಿ ಉದ್ರೇಕಗೊಂಡ ಉಪಖಂಡದ ಮುಸ್ಲಿಂ ಸಮುದಾಯ 1947ರಲ್ಲಿ ತನ್ನನ್ನು ತಾನು ಎರಡಾಗಿ ವಿಭಜಿಸಿಕೊಂಡಿತು, 1971ರಲ್ಲಿ ಅದು ಮೂರಾಯಿತು. ಸ್ವಾತಂತ್ರಾ್ಯನಂತರ ವಿಭಜಿತ ಭಾರತದಲ್ಲಿ ಅದು ಕರ್ನಾಟಕ ಸೇರಿ ಹಲವೆಡೆ ಸಣ್ಣ ಪ್ರಮಾಣದಲ್ಲಿಯಾದರೂ ಮತ್ತೆಮತ್ತೆ ಪುನರಾವರ್ತನೆಗೊಂಡಿದೆ.

    ಹೀಗಾಗಿ, ಸುಳ್ಳು ಕಾರಣಗಳನ್ನು ಮುಂದೆ ಮಾಡಿ ಈ ಸಮುದಾಯವನ್ನು ಯಾರದೇ ವಿರುದ್ಧ ಉದ್ರೇಕಿಸುವುದು ಸುಲಭ ಎಂದು ಮೋದಿ-ವಿರೋಧಿಗಳಿಗೆ ಗೊತ್ತೆ ಇದೆ. ಈ ಅರಿವೇ ಅವುಗಳ ಸಮಾಜಕಂಟಕ ಹುನ್ನಾರಗಳು ಸುಲಭವಾಗಿ ಕಾರ್ಯರೂಪಕ್ಕಿಳಿಯುವಂತಹ ಸನ್ನಿವೇಶವನ್ನು ನಿರ್ವಿುಸಿವೆ, ಸಿಎಎ ಮುಸ್ಲಿಂವಿರೋಧಿ ಎಂದು ಬಿತ್ತಿದ ಸುಳ್ಳು ಹುಲುಸಾಗಿ ಬೆಳೆಯುತ್ತಿದೆ. ಅಸಹಿಷ್ಣುತೆ ನಾಟಕದ ಎರಡನೆಯ ಅಂಕ ‘ಅಮೋಘ’ ನಾಲ್ಕನೆಯ ವಾರಕ್ಕೆ ಭರದಿಂದ ಮುನ್ನುಗ್ಗುತ್ತಿದೆ.

    ಕಾಶ್ಮೀರದಂಥ ಕಗ್ಗಂಟನ್ನೇ ನಿಭಾಯಿಸಿದ ಮೋದಿ ಸರ್ಕಾರಕ್ಕೆ ಈ ಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ. ಪ್ರಸಕ್ತ ನಾಟಕ ಮುಗಿದ ನಂತರ ಕಾಂಗ್ರೆಸ್ ತನ್ನ ಬೆಂಬಲದ ಮೂಲವನ್ನು ಲಾಗಾಯ್ತಿನಂತೆ ಬೇರೊಂದೆಡೆ ಹುಡುಕಿಕೊಂಡು ತನ್ನ ಹಿತವನ್ನು ತಾತ್ಕಾಲಿಕವಾಗಿಯಾದರೂ ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಬಹುದು. ಪ್ರಸಕ್ತ ಅಶಾಂತಿ ಮುಂದುವರಿದಷ್ಟೂ ಅದರಿಂದ ಅಂತಿಮವಾಗಿ ಹಾನಿಗೊಳಗಾಗುವುದು ಮುಸ್ಲಿಂ ಸಮುದಾಯವೇ. ಹದಿನೇಳನೇ ಶತಮಾನದಿಂದ ಇಲ್ಲಿಯವರೆಗಿನ ಇತಿಹಾಸದಲ್ಲಿ ಗುಜರಾತ್​ನ ಮುಸ್ಲಿಮರು ಮೊದಲ ಬಾರಿಗೆ ಆತಂಕರಹಿತ ಹದಿನೆಂಟು ವರ್ಷಗಳನ್ನು ಪೂರೈಸುತ್ತಿದ್ದಾರೆ, ಕಾಶ್ಮೀರದ ಮುಸ್ಲಿಮರು ಎಪ್ಪತ್ತೆರಡು ವರ್ಷಗಳಲ್ಲಿ ಮೊದಲ ಬಾರಿಗೆ ರಾಷ್ಟ್ರದ ಮುಖ್ಯವಾಹಿಗೆ ಬಂದು ಅದರ ಫಲವನ್ನು ಅನುಭವಿಸಲು ಸಿದ್ಧರಾಗುತ್ತಿದ್ದಾರೆ.

    ಕಾಂಗ್ರೆಸ್ ಮಾಡುವಂತೆ ಬಿಜೆಪಿ ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ನೋಡುತ್ತಿಲ್ಲ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಯೋಜನೆ ಮೂಲಕ ಮುಸ್ಲಿಮರನ್ನು ಮೋದಿ ಸರ್ಕಾರ ಅಭಿವೃದ್ಧಿಯ ಭಾಗವಾಗಿಸುತ್ತಿದೆ. ದೇಶದ ಮುಸ್ಲಿಮರ ಬದುಕಿನಲ್ಲಿ ಇಂತಹ ಸಕಾರಾತ್ಮಕ ಬದಲಾವಣೆಗಳನ್ನು ತಂದ ಈ ಸರ್ಕಾರ ನಿಜಕ್ಕೂ ತಮ್ಮ ಹಿತೈಷಿ ಎಂದು ಮುಸ್ಲಿಂ ಸಮುದಾಯ ಅರಿತಷ್ಟೂ ಅದರ ಭವಿಷ್ಯ ಒಳ್ಳೆಯದಾಗುತ್ತದೆ. ಬದಲಾಗಿ, ತನ್ನನ್ನು ಕೇವಲ ಒಂದು ಮತಬ್ಯಾಂಕ್ ಆಗಷ್ಟೇ ಇಟ್ಟುಕೊಂಡಿದ್ದ, ಮುಂದೆಯೂ ಇಟ್ಟುಕೊಳ್ಳಬಯಸುತ್ತಿರುವ ಕಾಂಗ್ರೆಸ್ ಹಿಂದೆ ಮುಸ್ಲಿಂ ಸಮುದಾಯ ಹೋದಷ್ಟೂ ರಾಷ್ಟ್ರದ ಮುಖ್ಯವಾಹಿನಿಯಿಂದ ಅದು ದೂರದೂರವೇ ಸಾಗಿಹೋಗುತ್ತದೆ. ಅದು ಅಂತಿಮವಾಗಿ ಯಾವ ಹಂತಕ್ಕೆ ತಲುಪಬಹುದೆಂದರೆ, ದೇಶವಿಭಜನೆ ಸಂದರ್ಭದಲ್ಲಿ ತಾನು ಅನುಭವಿಸಿದ ಸಂದಿಗ್ಧ ಹಾಗೂ ಅತಂತ್ರತೆಗೆ ಮುಸ್ಲಿಂ ಸಮುದಾಯ ಹಿಂತಿರುಗುವಂತಾಗಬಹುದು. ಮುಸ್ಲಿಂ ಸಮುದಾಯ ವಿವೇಕ ಪ್ರದರ್ಶಿಸಬೇಕಾದ ಸಂದರ್ಭ ಇದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts