More

    ಜಗದಗಲ: ಭಾರತ ಗಣರಾಜ್ಯ ಏಳು ದಶಕಗಳ ಏಳುಬೀಳುಗಳು 

    ಜಗದಗಲ: ಭಾರತ ಗಣರಾಜ್ಯ ಏಳು ದಶಕಗಳ ಏಳುಬೀಳುಗಳು 1991ರಲ್ಲಿ ನರಸಿಂಹರಾವ್ ರಾಷ್ಟ್ರದ ಚುಕ್ಕಾಣಿ ಹಿಡಿದದ್ದಂತೂ ಸ್ವತಂತ್ರ ಭಾರತದ ಇತಿಹಾಸದಲ್ಲಿನ ನಿರ್ಣಾಯಕ ಬೆಳವಣಿಗೆ. ಆ ಘಳಿಗೆಯಿಂದ ದೇಶ ಆರ್ಥಿಕವಾಗಿ ಬೇರೆಯದೇ ಆಗಿಹೋದದ್ದಕ್ಕೆ ಈ 3 ದಶಕಗಳು ಸಾಕ್ಷಿ. 1996ರಲ್ಲಿ ದೇವೇಗೌಡರು ಪ್ರಧಾನಿಯಾಗದಿದ್ದರೆ ಲಾಲೂ ಆ ಸ್ಥಾನಕ್ಕೇರುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರೇ ಭಯವಾಗುತ್ತದೆ.

    ಭಾರತ ಗಣರಾಜ್ಯಕ್ಕೆ ಈಗಷ್ಟೇ ಎಪ್ಪತ್ತು ತುಂಬಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಮತ್ತು ಅತಿ ದೊಡ್ಡ ಗಣರಾಜ್ಯವೆಂಬ ಪರಸ್ಪರ ಪೂರಕವಾದ ಎರಡೂ ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ಈ ಪುರಾತನ ನಾಡು ಈ ಏಳು ದಶಕಗಳಲ್ಲಿ ಸಾಗಿಬಂದ ಹಾದಿಯ ವಿಹಂಗಮ ನೋಟ ಈ ಲೇಖನದ ವಸ್ತುವಿಷಯ.

    ಇತಿಹಾಸದಲ್ಲಿ ‘ರೆ’ಗೆ ಸ್ಥಾನವಿಲ್ಲ. ಆದರೂ ನಮ್ಮೀ ಪುರಾತನ, ವಿಶಾಲ, ಜನನಿಬಿಡ ನಾಡಿಗೆ ಸಮರ್ಥ ಹಾಗೂ ಸಕಾರಾತ್ಮಕ ನಾಯಕತ್ವ ನೀಡುವ ಸಾಮರ್ಥ್ಯ ಹಾಗೂ ಬದ್ಧತೆ ಜವಾಹರ್​ಲಾಲ್ ನೆಹರೂ ಅವರಿಗಿಂತಲೂ ನೇತಾಜಿ ಸುಭಾಶ್​ಚಂದ್ರ ಬೋಸ್, ಮಹಮದ್ ಆಲಿ ಜಿನ್ನಾ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರುಗಳಿಗಿತ್ತು ಅನಿಸುತ್ತದೆ. ನಮ್ಮದೆಂತಹ ದುರದೃಷ್ಟವಾಗಿತ್ತು ಅಂದರೆ ನೇತಾಜಿ ಕಾಣದೂರಿನಲ್ಲಿ ಕಣ್ಮರೆಯಾಗಿಹೋದರು.

    ‘ನಾನು ಮೊದಲು ಭಾರತೀಯ, ನಂತರ ಮುಸ್ಲಿಂ’ ಎಂದು ಘೊಷಿಸಿದ್ದ ಜಿನ್ನಾ ಅದೆಲ್ಲವನ್ನೂ ಮರೆತು ಒಂದು ಬೆಳಗ್ಗೆ ವಿದೇಶಿಯರಾಗಿಹೋದರು. ಹದಿನೈದರಲ್ಲಿ ಹನ್ನೆರಡು ಕಾಂಗ್ರೆಸ್ ಪ್ರಾಂತೀಯ ಸಮಿತಿಗಳಿಂದ ನಾಮಾಂಕಿತರಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತನ್ಮೂಲಕ ಪ್ರಥಮ ಪ್ರಧಾನಮಂತ್ರಿಯ ಸ್ಥಾನಕ್ಕೆ ಹಕ್ಕುದಾರರಾಗಿದ್ದ ಸರ್ದಾರರು ನೆಹರೂ ಮತ್ತು ಗಾಂಧೀಜಿಯವರ ಕುತಂತ್ರಕ್ಕೆ ಬಲಿಯಾಗಿ ಗೃಹಮಂತ್ರಿಯಾಗಷ್ಟೇ ಉಳಿದರು. ಬಾಬಾಸಾಹೇಬರು ‘ರಾಷ್ಟ್ರನಾಯಕ’ ಎಂಬ ಪಟ್ಟದಿಂದ ವಂಚಿತರಾಗಿ ‘ದಲಿತ ನಾಯಕ’ ಎಂಬ ಸೀಮಿತ ಹಣೆಪಟ್ಟಿ ಹಚ್ಚಿಸಿಕೊಂಡು ಮೂಲೆಗೆ ಸರಿಸಲ್ಪಟ್ಟರು.

    ತನ್ನದಲ್ಲದ ಪ್ರಧಾನಮಂತ್ರಿ ಸ್ಥಾನವನ್ನು ಅಪ್ರಜಾಪ್ರಭುತ್ವ ವಿಧಾನದಿಂದ ಕೈಗೆಟುಕಿಸಿಕೊಂಡು ಪಟ್ಟಾಗಿ ಕೂತ ನೆಹರೂ ಸಂಸತ್ತಿನ ಹೊರಗೆ ದೆಹಲಿಯ ಬೋಟ್ ಕ್ಲಬ್​ನಲ್ಲೋ, ಮದ್ರಾಸ್​ನ ಮರೀನಾ ಬೀಚಿನಲ್ಲೋ ನೀಡಿದ ಹೇಳಿಕೆಗಳು ಸರ್ಕಾರದ ನೀತಿಗಳಾಗತೊಡಗಿದವು. ಅಷ್ಟೇ ಅಲ್ಲ, ಈ ದೇಶ ನಾಳೆ ಯಾವ ದಾರಿ ಹಿಡಿಯುತ್ತದೆಂದು ಸಂಸತ್ತಿನಲ್ಲಿದ್ದ ನಮ್ಮ ಜನಪ್ರತಿನಿಧಿಗಳಿಗೆ ತಿಳಿಯುವುದಕ್ಕೆ ಮೊದಲೇ ಲೇಡಿ ಎಡ್ವಿನಾ ಮೌಂಟ್​ಬ್ಯಾಟನ್​ರಿಗೆ ನಮ್ಮ ಆಗಿನ ಪ್ರಧಾನಮಂತ್ರಿಗಳ ವೈಯಕ್ತಿಕ ಪತ್ರಗಳ ಮೂಲಕ ತಿಳಿದುಹೋಗುತ್ತಿತ್ತು!

    ಹಾಗೆ ನೋಡಿದರೆ, ಹುಳು ಹಿಡಿದ ಬೀಜದಿಂದ ಮೊಳಕೆಯೊಡೆದಂತಿದ್ದ ಸ್ವತಂತ್ರ ಭಾರತ ಬೆಳೆದು ಹೆಮ್ಮರವಾಗುತ್ತದೆಂಬ ನಿರೀಕ್ಷೆ ಹೊರಗಿನ ಯಾರಿಗೂ ಇರಲಿಲ್ಲ. ರಾಜಕೀಯವಾಗಿ ಒಂದಾಗಿದ್ದರೂ ಭಾವನಾತ್ಮಕವಾಗಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದ ಭಾರತ ಅನತಿ ಕಾಲದಲ್ಲಿ ಒಡೆದು ಚೂರುಚೂರಾಗುತ್ತದೆ ಎಂಬ ‘ನಂಬಿಕೆ’ 1950-60ರ ದಶಕಗಳಲ್ಲಿ ಪಶ್ಚಿಮದ ದೇಶಗಳಲ್ಲಿ ವ್ಯಾಪಕವಾಗಿತ್ತು.

    ಸ್ವತಂತ್ರ ಭಾರತದ ಬಗ್ಗೆ ಇಂತಹ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯೂ ಇಲ್ಲದೆ ಹೊರಹಾಕುತ್ತಿದ್ದವರಲ್ಲಿ ಗೌರವಾನ್ವಿತ ವಿದ್ವಾಂಸ ಸೆಲಿಗ್ ಹ್ಯಾರಿಸನ್​ರಿಂದ ಹಿಡಿದು ಭವಿಷ್ಯ ಹೇಳುವುದರಲ್ಲಿ ಬಲು ಪ್ರಸಿದ್ಧಳಾಗಿದ್ದ ‘ಅಮೆರಿಕನ್ ಕೊರವಂಜಿ’ ಜೀನ್ ಡಿಕ್ಸನ್ ಸಹಾ ಇದ್ದರು. ಬ್ರಿಟಿಷರು ಮೊದಲೇ ತುಂಡಾಗಿಸಿಹೊದ ಈ ದೇಶದಲ್ಲಿ ಮತ್ತಷ್ಟು ವಿಭಜನೆಗಳ ಸಾಧ್ಯತೆಗಿದ್ದ ಅವಕಾಶಗಳನ್ನು ಊಹಿಸಿಕೊಂಡು ಅದಕ್ಕಾಗಿ ಕೆಲವು ವಿದೇಶೀ ಶಕ್ತಿಗಳೂ ಪ್ರಯತ್ನ ಪಟ್ಟಿದ್ದವು. ಕಾಶ್ಮೀರವನ್ನು, ಪಂಜಾಬ್ ಅನ್ನು ಭಾರತದಿಂದ ಪ್ರತ್ಯೇಕಿಸಲು ಪಾಕಿಸ್ತಾನ ಹೆಣಗಾಡಿದರೆ ನಕ್ಸಲ್ ಹಿಂಸಾಚಾರದ ಮೂಲಕ ಈ ದೇಶವನ್ನು ಹಲವುಹತ್ತು ಚೂರಾಗಿಸಲು ಚೀನಾ ಹವಣಿಸಿತ್ತು.

    ಅಮೆರಿಕವಂತೂ ಕಾಶ್ಮೀರದಿಂದ ಹಿಡಿದು ಅರುಣಾಚಲ ಪ್ರದೇಶದವರೆಗೆಗಿನ ಎಲ್ಲ ಪರ್ವತರಾಜ್ಯಗಳನ್ನೂ ಭಾರತದಿಂದ ಪ್ರತ್ಯೇಕಿಸಿ ಅವುಗಳ ಜತೆ ನೇಪಾಳ ಮತ್ತು ಭೂತಾನ್​ಗಳನ್ನೂ ಸೇರಿಸಿ ‘ಹಿಮಾಲಯನ್ ಫೆಡರೇಷನ್’ ಎಂಬ ಸ್ವತಂತ್ರ ಆದರೆ ತನ್ನ ಮಾತು ಕೇಳುವ ದೇಶವೊಂದನ್ನು ಸೃಷ್ಟಿಸಲು 1980ರ ದಶಕದ ಆದಿಯಲ್ಲಿ ಹಂಚಿಕೆ ಹಾಕಿತ್ತು ಎಂಬ ಮಾತಿದೆ.

    ಈ ಎಲ್ಲ ವಿದೇಶೀ ಸಂಚುಗಾರರಿಗೆ ಒಂದಷ್ಟು ಭಾರತೀಯರು ಪೂರಕವಾಗಿ ಸ್ಪಂದಿಸಿದರೂ, ಆ ಕಾರಣದಿಂದಾಗಿಯೇ ಕಳೆದ ನಾಲ್ಕು ದಶಕಗಳಲ್ಲಿ“Land of the Rising Gun” ಎಂಬ ಕಾಳಜಿ ಬೆರೆತ ಅಪಹಾಸ್ಯಕ್ಕೆ ಗುರಿಯಾಗಿದ್ದರೂ ಭಾರತ ಒಂದಾಗಿ ಉಳಿದಿದೆ. ಈ ದೇಶ ಒಂದಾಗಿ ಉಳಿದರೂ ಹೆಚ್ಚು ಕಾಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದೂ ಕೆಲವು ವಿದೇಶೀ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದೂ ಉಂಟು. ಆದರೆ ಪಶ್ಚಿಮದ ಪಾಕಿಸ್ತಾನ, ಪೂರ್ವದ ಬರ್ವಗಳು ಹಿಡಿದ ಸೇನಾಡಳಿತದ ಹಾದಿಯನ್ನು ಭಾರತ ಹಿಡಿಯಲಿಲ್ಲ.

    ತಾನು ಅಪ್ರಜಾಪ್ರಭುತ್ವ ವಿಧಾನದಿಂದ ಪ್ರಧಾನಮಂತ್ರಿ ಸ್ಥಾನವನ್ನು ಗಳಿಸಿಕೊಂಡರೂ, ಹಲವು ವಿಷಯಗಳಲ್ಲಿ ಸರ್ವಾಧಿಕಾರಿ ಮನೋಭಾವವನ್ನು ಪ್ರದರ್ಶಿಸಿದರೂ ನಂತರದಲ್ಲಿ ಸಂವಿಧಾನದ ಮೂಲಕ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬೇರೂರಿಸಲು ನೆಹರೂ ಅಸ್ತಿಭಾರ ಹಾಕಿದ್ದೊಂದು ಆಸಕ್ತಿಕರ ಹಾಗೂ ನೆಮ್ಮದಿಪೂರ್ಣ ಬೆಳವಣಿಗೆ. ಅದಾಗಿ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ಕಳೆದುಹೋಗಿದೆ, ಪ್ರಜಾಪ್ರಭುತ್ವವಿಲ್ಲಿ ದಿನೇದಿನೇ ಆಳವಾಗಿ ಬೇರೂರುತ್ತಿದೆ. ಭಾರತೀಯರು ಪ್ರಜಾಸತ್ತಾತ್ಮಕ ವಿಧಾನದಲ್ಲಿ ಹದಿನೇಳು ಲೋಕಸಭೆಗಳನ್ನು ರಚಿಸಿದ್ದಾರೆ.

    ಭಾರತದ ಭವಿಷ್ಯದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ವಿದೇಶೀ ವಿದ್ವಾಂಸರು, ಭಾರತದ ಭವಿಷ್ಯವನ್ನು ನಕಾರಾತ್ಮವಾಗಿಸಲು ಹಂಚಿಕೆ ಹೂಡುತ್ತಿದ್ದ ವಿದೇಶೀ ಸರ್ಕಾರಗಳು ಪಾಕಿಸ್ತಾನದ ಬಗ್ಗೆ ವಿಶೇಷ ಮಮತಾಪೂರ್ಣ ಆಸಕ್ತಿ ತೋರಿದ್ದೊಂದು ಗಮನಿಸಬೇಕಾದ ಸಂಗತಿ. ಧಾರ್ವಿುಕ ಏಕತೆಯಿಂದಾಗಿ ಸದೃಢ ರಾಷ್ಟ್ರವಾಗಿ ಬೆಳೆದು ಏಷ್ಯಾದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆಂದು ಪಶ್ಚಿಮದ ಮಹಾಮಹಾ ಬುದ್ಧಿವಂತರು ಪಾಕಿಸ್ತಾನವನ್ನು ಕೊಂಡಾಡಿದ್ದರು.

    ಆದರೆ ಹುಟ್ಟಿ ದಶಕ ಪೂರೈಸುತ್ತಿದ್ದಂತೇ ಸೇನಾಧಿಕಾರಕ್ಕೆ ಸಿಲುಕಿದ ಆ ದೇಶ ಮುಂದಿನ ಒಂದೂವರೆ ದಶಕಕ್ಕೂ ಕಡಿಮೆ ಅವಧಿಯಲ್ಲಿ ಎರಡು ತುಂಡಾಯಿತು! ಈಗಂತೂ ‘ದಕ್ಷಿಣ ಏಷ್ಯಾದ ರೋಗಿಷ್ಟ’ನಾಗಿ ನರಳುತ್ತಿರುವ ಪಾಕಿಸ್ತಾನ ಒಂದರ್ಥದಲ್ಲಿ ಏಷ್ಯಾ ಅಷ್ಟೇ ಏಕೆ ಅಮೆರಿಕ ಸೇರಿ ಇಡೀ ಪ್ರಪಂಚದ ಇತಿಹಾಸದಲ್ಲೇ ಬಲು ಮಹತ್ವದ ಪಾತ್ರ ನಿರ್ವಹಿಸುತ್ತಿರುವುದೇನೋ ನಿಜ. ಆದರೆ ಅದು ನಕಾರಾತ್ಮಕ ಹಾಗೂ ವಿನಾಶಕಾರೀ ಪಾತ್ರ ಎನ್ನುವುದಷ್ಟೇ ದುರಂತ.

    ಗಣರಾಜ್ಯವಾಗಿ ಏಳು ದಶಕಗಳನ್ನು ಫೂರೈಸಿರುವ ಭಾರತ ವಿಶ್ವ ಅಚ್ಚರಿ ಪಡುವ ಹಲವು ಗಮನಾರ್ಹ ಬೆಳವಣಿಗೆಗಳನ್ನು ಸಾಧಿಸಿದೆ. ಮೊದಲೇ ಹೇಳಿರುವಂತೆ ನಮ್ಮ ದೇಶವೀಗ ರಾಜಕೀಯವಾಗಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಗಣರಾಜ್ಯ ಮತ್ತು ಆರನೆಯ ಅತಿ ದೊಡ್ಡ ಅರ್ಥವ್ಯವಸ್ಥೆ. Purchasing Power Parityಯನ್ನು ಆಧಾರವಾಗಿ ತೆಗೆದುಕೊಂಡರೆ ಭಾರತವೀಗ ವಿಶ್ವದ ಮೂರನೆಯ ಬೃಹತ್ ಅರ್ಥವ್ಯವಸ್ಥೆ ಎಂದೂ ಹೇಳಲಾಗುತ್ತಿದೆ. ವೈದ್ಯಕೀಯ ವಿಜ್ಞಾನ, ಅಣುಭೌತಶಾಸ್ತ್ರ, ಖಗೋಳ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಗಳೂ ಸೇರಿ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಭಾರತ ಸಾಧಿಸಿರುವ ಪ್ರಗತಿ ಅಸಾದೃಶವಾದುದು.

    ಜಾಗತಿಕ ಮಾಹಿತಿ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಹಲವು ಸಂಸ್ಥೆಗಳ ಕರ್ಣಧಾರತ್ವ ಭಾರತೀಯರ ಕೈಗಳಲ್ಲಿದೆ. ಭಾರತವೀಗ ವಿದೇಶೀ ಉಪಗ್ರಹಗಳನ್ನು ತನ್ನ ರಾಕೆಟ್​ಗಳ ಮೂಲಕ ಅಂತರಿಕ್ಷಕ್ಕೆ ಉಡಾಯಿಸುತ್ತಿದೆ. 1950-60ರ ದಶಕಗಳಲ್ಲಿ ವಿಶ್ವಮಟ್ಟದಲ್ಲಿ ಆಹಾರಧಾನ್ಯಗಳ ಭಾರೀ ಆಯಾತಕ ದೇಶವಾಗಿದ್ದ ಭಾರತವೀಗ ಆಹಾರಧಾನ್ಯಗಳನ್ನು ರಫ್ತು ಮಾಡುತ್ತಿದೆ. ಪ್ರತಿಕೂಲ ಹಿನ್ನೆಲೆ ಮತ್ತು ಗೊಂದಲಮಯ ವರ್ತಮಾನದಲ್ಲೂ ಈ ದೇಶ ಸಾಧಿಸಿದ ಈ ಬಗೆಯ ಅಸಾಧಾರಣ ಪ್ರಗತಿಗೆ ಸ್ಪಷ್ಟ ಕಾರಣಗಳಿವೆ.

    ಸಮರ್ಥ ಉತ್ತರಾಧಿಕಾರಿಯನ್ನು ತಯಾರು ಮಾಡದ ಮೊಘಲ್ ಅರಸರ ಸಂಪ್ರದಾಯವನ್ನು ತಿಳಿದೋ ತಿಳಿಯದೆಯೋ ಅನುಸರಿಸಿದ ನೆಹರೂ ನಿಧನಾನಂತರ ಸೀಮಿತ ಆಯ್ಕೆಗಳಲ್ಲಿ ಇದ್ದುದರಲ್ಲಿ ಉತ್ತಮವಾದ ನಾಯಕತ್ವವನ್ನು ಗುರುತಿಸಿ ಒಪ್ಪಿಕೊಳ್ಳುವಂತಹ ಪಕ್ವತೆಯನ್ನು ಕಾಲಕಾಲಕ್ಕೆ ಸ್ವಂತವಾಗಿ ಕೆಲವೊಮ್ಮೆ ವಿಧಿಯ ಸಹಕಾರದಿಂದ ಈ ದೇಶ ರೂಢಿಸಿಕೊಂಡಿದೆ. ‘ನೆಹರೂ ನಂತರ ಯಾರು?’ ಎಂಬ ಕೃತಕ, ನಕಾರಾತ್ಮಕ ಹಾಗೂ ನಾಚಿಕೆಗೇಡಿನ ಪ್ರಶ್ನೆ ನಡುವೆಯೇ ಲಾಲ್ ಬಹಾದುರ್ ಶಾಸ್ತ್ರಿ ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆಯಾದದ್ದೊಂದು ಅಸಾಧಾರಣ ರಾಜಕೀಯ ಬೆಳವಣಿಗೆ.

    ಆ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದ ಮೊರಾರ್ಜಿ ದೇಸಾಯಿ ತಾವದಕ್ಕೆ ಯೋಗ್ಯರಾಗಿರಲಿಲ್ಲವೆನ್ನುವುದನ್ನು ಹದಿನಾಲ್ಕು ವರ್ಷಗಳ ನಂತರ ದೇಶಕ್ಕೆ ಸಾರಿಬಿಟ್ಟರು. ವಿಧಿ ತಮಗೆ ನೀಡಿದ ಸೀಮಿತ ಅವಧಿಯಲ್ಲೇ ಪ್ರಶಂಸನೀಯ ಆಂತರಿಕ ನೀತಿ ಹಾಗೂ ಅದ್ಭುತವೆನಿಸುವ ವಿದೇಶೀ ಹಾಗೂ ರಕ್ಷಣಾನೀತಿಗಳನ್ನು ಅನುಸರಿಸಿ ಕ್ಷಣಕಾಲ ವಿಶ್ವಾಸ ಮೂಡಿಸಿದ ಶಾಸ್ತ್ರಿಯವರ ನಿರ್ಗಮನದ ನಂತರ ರಾಷ್ಟ್ರನಾಯಕಿಯಾದ ಇಂದಿರಾ ಗಾಂಧಿ ಸಹಾ ಅಂದು ಇದ್ದುದರಲ್ಲಿ ಉತ್ತಮ ಆಯ್ಕೆ. ಅದನ್ನವರು ಹಲಬಾರಿ ಸಾಬೀತುಪಡಿಸಿ ಮಂತ್ರಿಮಂಡಲದ ಏಕೈಕ ಗಂಡಾದರು. ವಿದೇಶ ನೀತಿಯಲ್ಲಂತೂ ಅವರನ್ನು ಮೀರಿಸಬಲ್ಲ ಮತ್ತೊಬ್ಬ ಪ್ರಧಾನಿಯನ್ನು ಈ ದೇಶ ಕಾಣುತ್ತಿರುವುದು ಈಗ, ಮೂರು ದಶಕಗಳ ನಂತರ.

    ತುರ್ತಪರಿಸ್ಥಿತಿಯಿಂದ ವಿಚಲಿತವಾಗಿದ್ದ ಜನತೆ ಅಲ್ಪಕಾಲ ಬೇರೆ ಆಯ್ಕೆಯತ್ತ ತಿರುಗಿದರೂ ಮೂರೇ ವರ್ಷಗಳಲ್ಲಿ ಇಂದಿರಾರ ಕೈಗೆ ಮತ್ತೆ ದೇಶದ ಚುಕ್ಕಾಣಿಯಿತ್ತರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅದೊಂದು ಆಶಾವಾದವನ್ನಷ್ಟೇ ಅಲ್ಲ ಅತಂಕ ಹುಟ್ಟಿಸುವ ಸಂಕ್ರಮಣ ಘಟ್ಟವೂ ಸಹಾ. ವಂಶಪಾರಂಪರ್ಯ ನಾಯಕತ್ವವನ್ನು ನಿರಾಕರಿಸಲಾಗದ ಇಕ್ಕಟ್ಟಿನಲ್ಲಿ ದೇಶ ಸಿಲುಕಿಹೋಗಿದೆಯೆಂಬ ಸೂಚನೆಯನ್ನು ನೀಡಿದ ಆ ಕಾಲಘಟ್ಟದಲ್ಲಿ ಸಂಜಯ್ ಗಾಂಧಿ ಬದಲಿಗೆ ರಾಜೀವ್ ಗಾಂಧಿ ದೇಶದ ಚುಕ್ಕಾಣಿ ಹಿಡಿಯುವಂತಹ ಪರಿಸ್ಥಿತಿ ನಿರ್ವಣವಾದದ್ದು ಅದೆಷ್ಟು ಉತ್ತಮ ಬೆಳವಣಿಗೆ ಎನ್ನುವುದು ಅವರಿಬ್ಬರು ಇಂದಿರಾ ಸಂತಾನಗಳ ಸ್ವಭಾವಗಳ ಪರಿಚಯವಿದ್ದವರಿಗೆ ತಿಳಿದೇ ಇದೆ.

    1991ರಲ್ಲಿ ಪಿ.ವಿ. ನರಸಿಂಹರಾವ್ ರಾಷ್ಟ್ರದ ಚುಕ್ಕಾಣಿ ಹಿಡಿದದ್ದಂತೂ ಸ್ವತಂತ್ರ ಭಾರತದ ಇತಿಹಾಸದಲ್ಲಿನ ಅತ್ಯಂತ ನಿರ್ಣಾಯಕ ಬೆಳವಣಿಗೆ. ಆ ಘಳಿಗೆಯಿಂದ ಈ ದೇಶ ಆರ್ಥಿಕವಾಗಿ ಬೇರೆಯದೇ ಆಗಿಹೋದದ್ದಕ್ಕೆ ಈ ಮೂರು ದಶಕಗಳು ಸಾಕ್ಷಿಯಾಗಿವೆ. ಅಂತಹ ಒಂದು ಪವಾಡಕ್ಕಾಗಿ ದಶಕಗಳಿಂದ ಕಾದಿದ್ದ ದೇಶದ ಒಳಹೊರಗಿನ ಹಿತೈಷಿಗಳ ಮನಸ್ಸು ಮುದುಡುವುದೇನಿದ್ದರೂ ನರಸಿಂಹರಾವ್ ಪ್ರಧಾನಿಯಾಗಲು ವೇದಿಕೆ ಸಿದ್ಧಪಡಿಸಿದ ದುರಂತದ ಬಗ್ಗೆ ಮಾತ್ರ. 1996ರಲ್ಲಿ ದೇವೇಗೌಡರು ಪ್ರಧಾನಿಯಾಗದೇ ಹೋಗಿದ್ದರೆ ಲಾಲೂ ಪ್ರಸಾದ್ ಯಾದವ್ ಆ ಸ್ಥಾನಕ್ಕೇರುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರೇ ಭಯವಾಗುತ್ತದೆ.

    ವರ್ಷದಲ್ಲೇ ಉರುಳಿದ ಆ ಸರ್ಕಾರ ದೇಶದ ಮುಂದಿಟ್ಟ ಆಯ್ಕೆ ಐ.ಕೆ. ಗುಜ್ರಾಲ್ ಮತ್ತು ಮುಲಾಯಂ ಸಿಂಗ್ ಯಾದವ್! ಆ ಎರಡೂ ಸಂದರ್ಭಗಳಲ್ಲಿ ಇದ್ದುದರಲ್ಲಿ ಉತ್ತಮ ಆಯ್ಕೆ ತಾನಾಗಿಯೋ, ವಿಧಿಯ ಕೈವಾಡದಿಂದಲೋ ದೇಶಕ್ಕೆ ದಕ್ಕಿತು. ನಂತರ ಎನ್​ಡಿಎ ಸಂಘಟನೆಯ ಮೊದಲ ಇನ್ನಿಂಗ್ಸ್​ನಲ್ಲೂ ಅಷ್ಟೇ. ‘ಉಗ್ರಗಾಮಿ’ ಎಲ್.ಕೆ.ಆಡ್ವಾಣಿ ಬದಲು ‘ಮಂದಗಾಮಿ’ ಎ.ಬಿ. ವಾಜಪೇಯಿ ಸರ್ಕಾರದ ಸೂತ್ರಗಳನ್ನು ವಹಿಸಿಕೊಂಡದ್ದು ಸುಡುಬೇಸಗೆಯಲ್ಲಿ ಸಿಕ್ಕಿದ ತಂಪುಪೇಯ. ಹಾಗೆ ನೋಡಿದರೆ, 1998ರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರಕ್ಕೆ ಬಂದದ್ದೇ ರಾಜಕೀಯ ಸಂಕಟವೊಂದನ್ನು ಪರಿಹರಿಸಲು ಕಾಣದ ಕೈಗಳು ಸೇರಿ ಹೂಡಿದ ರಾಜಕೀಯ ಪವಾಡದಂತೆ ಕಾಣುತ್ತದೆ.

    1990ರ ದಶಕದ ದ್ವಿತೀಯಾರ್ಧದಲ್ಲಿ ಸೀತಾರಾಮ್ ಕೇಸರಿ ನಾಯಕತ್ವದ ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತದ ನೊಗ ಹೊರುವ ಸಾಮರ್ಥ್ಯವನ್ನೇ ಕಳೆದುಕೊಂಡಿತ್ತು. ಜತೆಗೆ ಕಾಂಗ್ರೆಸ್ ಮತ್ತು ಇತರ ಬಿಜೆಪಿಯೇತರ ಪಕ್ಷಗಳ ನಡುವಿನ ಅಗಾಧ ಅಪನಂಬಿಕೆ ರಾಷ್ಟ್ರ ರಾಜಕಾರಣದಲ್ಲಿ ಉಂಟುಮಾಡಿದ್ದ ಶೂನ್ಯವನ್ನು ತುಂಬಲು ಮತದಾರರು ಬಿಜೆಪಿ ನೇತೃತ್ವದ ಎನ್​ಡಿಎ ಮೊರೆಹೊಕ್ಕದ್ದು ಇದ್ದುದರಲ್ಲಿ ಉತ್ತಮವಾದದ್ದನ್ನು ಆಯ್ಕೆಮಾಡಿಕೊಳ್ಳುವ ಜಾಣತನಕ್ಕೊಂದು ಉದಾಹರಣೆ.

    ಆದರೆ ಅಂತಹದೇ ಜಾಣ್ಮೆಯನ್ನು, ವಿವೇಕವನ್ನು ಭಾರತೀಯರು 2004ರಲ್ಲಿ ಕಳೆದುಕೊಂಡರು. ಅದರಿಂದಾಗಿ ದೇಶ ಹಿಂದೆಂದೂ ಕಂಡಿರದ ಕತ್ತಲಯುಗಕ್ಕೆ ಜಾರಿತು. ದಿಗ್ಭ›ಮೆಗೊಳಿಸುವಷ್ಟು ಪ್ರಮಾಣದ ಭ್ರಷ್ಟಾಚಾರ ಸರ್ಕಾರಿ ಸ್ತರದಲ್ಲೇ ನಡೆಯತೊಡಗಿದರೆ, ಇಡೀ ದೇಶ ವಿದೇಶೀಪ್ರೇರಿತ ಆತಂಕವಾದಿಗಳ ಆಡಂಬೋಲವಾಗಿ ಪರಿವರ್ತನೆಗೊಂಡಿತು, ಅಗಾಧ ರಕ್ತಪಾತವನ್ನು ಕಂಡಿತು.

    ಇಂತಹ ನಿರಾಶಾದಾಯಕ ಸ್ಥಿತಿ ಅಂತ್ಯವಾಗಲೇಬೇಕಿತ್ತು. ಅದಾದದ್ದು 2014ರಲ್ಲಿ. ಅಂದಿನಿಂದೀಚೆಗೆ ಸರ್ಕಾರಿ ಸ್ತರದ ಭ್ರಷ್ಟಾಚಾರ ಇತಿಹಾಸವಾಗಿದೆ ಮತ್ತು ಕಾಶ್ಮೀರದ ಹೊರತಾಗಿ ಬೇರೆಲ್ಲೂ ಭಯೋತ್ಪಾದಕ ರಕ್ತಪಾತವನ್ನು ದೇಶ ಕಂಡಿಲ್ಲ. ವಿದೇಶಗಳ ದೃಷ್ಟಿಯಲ್ಲಿ ಭಾರತದ ಸ್ಥಾನಮಾನ ಹಿಂದೆಂದೂ ಇಲ್ಲದಷ್ಟು ಉನ್ನನ ಮಟ್ಟಕ್ಕೇರಿ, ನಮ್ಮ ವಿರೋಧಿಗಳ ಸ್ಥಾನಮಾನ ಅಷ್ಟೇ ಕುಸಿದಿದೆ. ಇದು ನೆಮ್ಮದಿಯ ಬೆಳವಣಿಗೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts