More

    “ಸಮೃದ್ಧಿ” ಭರಿತ ಹಲಸು ಮೇಳ

    ಮೂಡುಬಿದಿರೆ: ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ವತಿಯಿಂದ ಕೃಷಿಋಷಿ ಡಾ.ಎಲ್.ಸಿ ಸೋನ್ಸ್ ಸ್ಮರಣಾರ್ಥ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಆರಂಭಗೊಂಡ ಮೂಡುಬಿದಿರೆ ತಾಲೂಕಿನ ಪ್ರಥಮ ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಸಮೃದ್ಧಿ ಮೇಳದ ಪ್ರಥಮ ದಿನ ಸುಮಾರು 5 ಸಾವಿರ ಮಂದಿ ಭೇಟಿ ನೀಡಿದ್ದಾರೆ.

    ರಾಜ್ಯ ವಿವಿಧ ಜಿಲ್ಲೆಗಳ ವೈವಿಧ್ಯಮಯ ತಳಿಗಳ ಹಲಸಿನ ಹಣ್ಣಿನ ಬೃಹತ್ ಸಂಗ್ರಹ ಹೊಂದಿರುವ ಹಾಗೂ ವಿವಿಧ ರೀತಿಯ 168 ಮಳಿಗೆಗಳಲ್ಲಿ ಮೊದಲ ದಿನ ಹಲಸು, ಇತರ ಹಣ್ಣುಗಳು, ಕೃಷಿಗೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ಇನ್ನೂರಕ್ಕೂ ಅಧಿಕ ಮಳಿಗೆಗಳು ತೆರೆಯುವ ನಿರೀಕ್ಷೆ ಇದೆ. ಹಲಸಿನ ಜತೆಗೆ ಮಾವು, ಪಪ್ಪಾಯ, ಪೇರಳೆ, ಅನಾನಸು, ನೇರಳೆ ಸಹಿತ ಪ್ರಾದೇಶಿಕ ಹಣ್ಣುಗಳ ವಿಶೇಷ ಸಂಗ್ರಹ ಗಮನ ಸೆಳೆಯಿತು. ರಂಬುಟಾನ್, ಮ್ಯಾಂಗೋಸ್ಟಿನ್, ಡ್ರಾೃಗನ್, ಬಟರ್ ಫ್ರೂಟ್ ಮತ್ತಿತರ ವಿದೇಶಿ ಹಣ್ಣುಗಳು, ಕಲ್ಲಂಗಡಿ, ಕಬ್ಬು, ತಾಜಾ ಹಣ್ಣುಗಳ ವಿವಿಧ ಜೂಸ್‌ಗಳು ನೋಡುಗರನ್ನು ಆಕರ್ಷಿಸಿತು. ಹಣ್ಣು- ತರಕಾರಿಗಳಿಂದ ತಯಾರಾದ ಸಿದ್ಧ ಖಾದ್ಯಗಳ ಮಳಿಗೆಗಳಲ್ಲಿ ಜನಜಂಗುಳಿ ಕಂಡುಬಂತು. ಜೈನ, ಬ್ರಾಹ್ಮಣ, ಗೌಡ ಸಾರಸತ್ವ ಸಮುದಾಯಗಳ ವಿಶೇಷ ಪ್ರಾದೇಶಿಕ ತಿನಿಸುಗಳ ಮಳಿಗೆಗಳಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳ ಆಹಾರ, ಕೃಷಿಗೆ ಸೀಮಿತವಾಗದೆ ದೇಸಿ ಶೈಲಿಯ ಅಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆಗಳು, ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರಗಳಿಗೂ ಅವಕಾಶ ಕಲ್ಪಿಸಲಾಗಿದೆ. ವೈವಿಧ್ಯಮಯ ಫಲ-ಪುಷ್ಪಗಳ ಗಿಡಗಳ ನರ್ಸರಿಗಳು ಕೂಡ ಗಮನ ಸೆಳೆದವು. ಕೃಷಿ ಯಂತ್ರೋಪಕರಣಗಳು, ಖಾದಿ-ಕೈಮಗ್ಗ ದೇಸಿ ಉತ್ಪನ್ನ, ನವವಿಧ ಸಿರಿಧಾನ್ಯಗಳ ಪ್ರದರ್ಶನ, ಮಾರಾಟ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಕಂಡುಬಂತು.

    ಹಲಸಿನ 14 ಬಗೆಯ ತಿನಿಸು

    ಆಳ್ವಾಸ್ ಸಂಸ್ಥೆ ವತಿಯಿಂದ ಹಲಸಿನ ವಿವಿಧ 14 ಬಗೆಯ ತಿನಿಸುಗಳ ಪ್ರದರ್ಶನ, ಮಾರಾಟ ಮೇಳದ ವಿಶೇಷತೆಗಳಲ್ಲೊಂದು. ನರ್ಸರಿಗಳಲ್ಲಿ ವಿವಿಧ ಜಿಲ್ಲೆಗಳ ಪ್ರಾದೇಶಿಕ ವೈವಿಧ್ಯ ಸಾರುವ 15ಕ್ಕೂ ಹೆಚ್ಚಿನ ಗಿಡಗಳ ಮಾರಾಟವಿದೆ. ವಿವಿಧ ಬಣ್ಣಗಳ ಹಲಸು ನೋಡುಗರನ್ನು ಆಕರ್ಷಿಸಿತು.

    75 ಸಂಘ ಸಂಸ್ಥೆಗಳ ಸಹಭಾಗಿತ್ವ

    ಕೆಲವೇ ದಿನಗಳಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾದ ಮೇಳಕ್ಕೆ 75 ಸಂಘ ಸಂಸ್ಥೆಗಳು ಸಹಭಾಗಿತ್ವ ನೀಡಿವೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ಐಸಿಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಐಸಿಆರ್ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ನವತೇಜ ಟ್ರಸ್ಟ್ ಪುತ್ತೂರು, ಎಂಸಿಎಸ್ ಬ್ಯಾಂಕ್, ಅವಿಭಜಿತ ದ.ಕ ಜಿಲ್ಲೆಯ ವಿವಿಧ ರೈತ ಸಂಘಗಳು, ಅಂತಾರಾಷ್ಟ್ರೀಯ ಕ್ಲಬ್‌ಗಳು, ಮೂಡುಬಿದಿರೆಯ ವಿವಿಧ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಸಾಮಾಜಿಕ, ತಾಲೂಕಿನ ಕ್ರೀಡಾ, ಸಾಂಸ್ಕೃತಿಕ, ಸಾಹಿತ್ಯ ಸಂಘಟನೆಗಳು ಸಹಭಾಗಿತ್ವ ನೀಡಿವೆ.ಮೂಡುಬಿದಿರೆ ವಿದ್ಯಾಗಿರಿಯ ಅಳ್ವಾಸ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಆರಂಭಗೊಂಡ ಹಲಸು, ಹಣ್ಣುಗಳ ಮೇಳದಲ್ಲಿ ಜನಾಕರ್ಷಣೆ ಗಳಿಸುತ್ತಿರುವ ವಿವಿಧ ಮಳಿಗೆಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts