More

    ಇವಿಎಂ-ವಿವಿಪ್ಯಾಟ್ ಬಳಸಬಹುದು: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಅನುಮತಿ

    ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ವರುಣಾ ಕ್ಷೇತ್ರದಲ್ಲಿ ಬಳಸಲಾಗಿದ್ದ ಇವಿಎಂ-ವಿವಿಪ್ಯಾಟ್‌ಗಳನ್ನು ಮುಂದಿನ ಲೋಕಸಭಾ ಚುನಾವಣೆಗೂ ಬಳಸಲು ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸೋಮವಾರ ಅನುಮತಿ ಕೊಟ್ಟಿದೆ.

    ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಚುನಾವಣೆಯಲ್ಲಿ ಗೆದ್ದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧುಗೊಳಿಸಬೇಕೆಂದು ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರ ಏಕ ಸದಸ್ಯ ಪೀಠ ನಡೆಸಿತು.

    ಈ ವೇಳೆ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮಧ್ಯಂತರ ಅರ್ಜಿಯನ್ನು ಚುನಾವಣಾ ಆಯೋಗದ ಪರ ವಕೀಲ ಎಸ್.ಆರ್. ದೊಡ್ಡವಾಡ ನ್ಯಾಯಪೀಠಕ್ಕೆ ಸಲ್ಲಿಸಿದರು. ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಬಾಕಿ ಇರುವುದರಿಂದ ವರುಣಾ ಕ್ಷೇತ್ರದಲ್ಲಿ ಬಳಸಲಾಗಿದ್ದ ಇವಿಎಂ-ವಿವಿಪ್ಯಾಟ್‌ಗಳು ಜಿಲ್ಲಾ ಇವಿಎಂ ವೇರ್‌ಹೌಸ್‌ನಲ್ಲಿ ಇಡಲಾಗಿದೆ.

    ಸನಿಹದಲ್ಲೇ ಲೋಕಸಭಾ ಚುನಾವಣೆ ಬರುವುದರಿಂದ ಇವಿಎಂ-ವಿವಿಪ್ಯಾಟ್‌ಗಳನ್ನು ಬಳಸಿಕೊಳ್ಳಲು ಅವುಗಳನ್ನು ‘ಎಫ್‌ಎಸ್‌ಎಲ್’ ಪ್ರಥಮ ಹಂತದ ತಪಾಸಣೆ ಮಾಡಬೇಕಾಗಿದೆ. ಆದ್ದರಿಂದ ವರುಣಾ ಕ್ಷೇತ್ರದ ಮತದಾನಕ್ಕೆ ಬಳಸಿಕೊಳ್ಳಲಾಗಿದ್ದ 314 ಇವಿಎಂ ಹಾಗೂ 338 ವಿವಿಪ್ಯಾಟ್‌ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

    ಲೋಕಸಭೆ ಚುನಾವಣೆಗೆ ಬಳಸಿಕೊಳ್ಳಲು ಇವಿಎಂ-ವಿವಿಪ್ಯಾಟ್‌ಗಳನ್ನು ಚುನಾವಣಾ ಆಯೋಗ ಕೇಳಿದರೆ ಅದಕ್ಕೆ ತಮ್ಮದೇನು ಆಕ್ಷೇಪಣೆ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.

    ಪ್ರಕರಣದಲ್ಲಿ ವಾದ ಮಂಡನೆಗೆ ಸಿಎಂ ಸಿದ್ದರಾಮಯ್ಯ ಪರ ವಕೀಲರು ಕಾಲಾವಕಾಶ ಕೇಳಿದರು. ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಇದು ನಾಲ್ಕನೆ ಬಾರಿ ಆಗಿದೆ. ಸುಮ್ಮನೆ ಪ್ರಕರಣವನ್ನು ಎಳೆದುಕೊಂಡು ಹೋಗಲಾಗುತ್ತಿದೆ ಎಂದರು. ‘ಪ್ರಕರಣವನ್ನು ಎಳೆದುಕೊಂಡು ಹೋಗಲಾಗುತ್ತಿದೆ ಎಂಬ ಭಾವನೆ ನ್ಯಾಯಾಲಯಕ್ಕೆ ಬರದಂತೆ ನಡೆದುಕೊಳ್ಳಬೇಡಿ’ ಎಂದು ಸಿದ್ದರಾಮಯ್ಯ ಪರ ವಕೀಲರಿಗೆ ಹೇಳಿದ ನ್ಯಾಯಪೀಠ ಫೆ.28ಕ್ಕೆ ವಿಚಾರಣೆ ಮುಂದೂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts