More

    ಕೊನೆಗೂ ಆಯಿತು ಇತ್ಯರ್ಥ

    ಎಂದಿನಂತೆ ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತ ಮಾತು ಆರಂಭಿಸಿದ ನಿರ್ದೇಶಕ ಎ.ಜಿ. ಶೇಷಾದ್ರಿ, ‘ನಮ್ಮ ‘ಇತ್ಯರ್ಥ’ ಚಿತ್ರಕ್ಕೆ ಇಂಥದ್ದೇ ಶೈಲಿ ಎಂಬುದಿಲ್ಲ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೆಲ್ಲ ಅಂಶಗಳಿರಬೇಕು ಎಂಬುದನ್ನು ಅರಿತು ಈ ಕಥೆ ಮಾಡಿದ್ದೇನೆ. ರೊಮ್ಯಾನ್ಸ್, ಥ್ರಿಲ್ಲಿಂಗ್ ಅಂಶಗಳಿವೆ. ಕುತೂಹಲ ಮೂಡಿಸುವ ಕಥಾಹಂದರ ಇದೆ. ಪಾತ್ರಧಾರಿಗಳಿಗಿಂತ ಇಡೀ ಕಥೆಯನ್ನೇ ನಾಯಕ ಎನ್ನಬಹುದು’ ಎನ್ನುತ್ತಾರವರು. ಕಳೆದ ಹತ್ತಾರು ವರ್ಷಗಳಿಂದ ಕಿರುತೆರೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿರುವ ಎ.ಜಿ. ಶೇಷಾದ್ರಿ, ‘ಇತ್ಯರ್ಥ’ ಸಿನಿಮಾ ಕೆಲಸಗಳನ್ನು ಮುಗಿಸಿ ಇತ್ತೀಚೆಗಷ್ಟೇ ಹಾಡುಗಳನ್ನು ಕೇಳುಗರಿಗೆ ಅರ್ಪಿಸಿದ್ದಾರೆ. ಚಿತ್ರದಲ್ಲಿನ ಒಟ್ಟು ಆರು ಹಾಡುಗಳಿಗೆ ಗೌತಮ್ ಶ್ರೀವಾಸ್ತವ್ ಸಂಗೀತ ನೀಡಿದ್ದು, ಯೋಗರಾಜ್ ಭಟ್, ಡಾ.ವಿ. ನಾಗೇಂದ್ರ ಪ್ರಸಾದ್ ಸೇರಿ ಹಲವರು ಸಾಹಿತ್ಯ ಬರೆದಿದ್ದಾರೆ. ಬಿ. ಜಯಶ್ರೀ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ.

    ಇನ್ನು ಚಿತ್ರದ ಪ್ರಧಾನ ಪಾತ್ರ ನಿಭಾಯಿಸಿರುವುದು ನಟ ಮೋಹನ್. ‘ಫ್ರೆಶ್ ಕಥೆಯನ್ನೇ ನಿರ್ದೇಶಕರು ಆಯ್ದುಕೊಂಡಿದ್ದಾರೆ. ನಾಯಕ ಎಂಬುದಕ್ಕಿಂತ ಒಂದೊಳ್ಳೆಯ ತೂಕದ ಪಾತ್ರ ನಿಭಾಯಿಸಿದ್ದೇನೆ. ರೆಗ್ಯುಲರ್ ಶೈಲಿಯ ಸಿನಿಮಾ ಇದಲ್ಲ. ವಿಶೇಷ ಏನೆಂದರೆ ಈ ಹಿಂದೆ ಯಾವತ್ತೂ ಮಾಡದಂಥ ಸಾಹಸವೂ ಈ ಸಿನಿಮಾದಲ್ಲಿ ನನ್ನಿಂದಾಗಿದೆ. ನನ್ನ ಜೀವನದಲ್ಲೇ ನಾನು ಮಾಡದಷ್ಟು ನೃತ್ಯ ಮಾಡಿಸಿದ್ದಾರೆ ತ್ರಿಭುವನ್. ಇನ್ನೇನು ಶೀಘ್ರದಲ್ಲಿ ತೆರೆಮೇಲೆ ಬರಲಿದ್ದೇವೆ’ ಎಂದರು.

    ನಾಯಕಿಯಾಗಿ ಮುಂಬೈ ಮೂಲದ ಖುಷಿ ಮುಖರ್ಜಿ, ‘ಇತ್ಯರ್ಥ’ ಮೂಲಕ ಚಂದನವನ ಪ್ರವೇಶಿಸಿದ್ದಾರೆ. ಹೆಚ್ಚೇನೂ ಹೇಳದೆ, ಫೇಸ್​ಬುಕ್ ಮೂಲಕ ನನಗೆ ಈ ಸಿನಿಮಾ ಅವಕಾಶ ಸಿಕ್ಕಿತು’ ಎಂದು ಮಾತು ಮುಗಿಸಿದರು.

    ಈ ಚಿತ್ರಕ್ಕೆ ಎಸ್.ಎಲ್.ಎನ್. ಮೂರ್ತಿ ಬಂಡವಾಳ ಹೂಡಿದ್ದು, ನಟ-ನಿರ್ದೇಶಕ-ಸಂಭಾಷಣೆಗಾರ ನವೀನ್ ಕೃಷ್ಣ, ಹಿರಿಯ ನಟ ಶ್ರೀನಿವಾಸ ಪ್ರಭು ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಪೊಲೀಸ್ ಅಧಿಕಾರಿ ಶಂಕರ್ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು. ‘ಲಹರಿ ಮ್ಯೂಸಿಕ್’ ಸಂಸ್ಥೆ ಆಡಿಯೋ ಹಕ್ಕು ಪಡೆದಿದ್ದು, ವೇಲು ಸಹ ವೇದಿಕೆಯಲ್ಲಿದ್ದರು. ಮೂಡಿಗೆರೆ, ಬೆಂಗಳೂರು ಮುಂತಾದೆಡೆ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೆ ಪ್ರಸಾದ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts