More

    ಶಿಕ್ಷಣದಲ್ಲಿ ಬದಲಾವಣೆ ತರುವುದು ಅವಶ್ಯಕ: ಮೈಸೂರು ವಿವಿ ಶಿಕ್ಷಣ ಮಂಡಳಿ ಅಧ್ಯಕ್ಷೆ ಡಾ.ಎಂ.ಪುಷ್ಪಾ ಅಭಿಮತ

    ಮೈಸೂರು: ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣದಲ್ಲಿ ಬದಲಾವಣೆ ತರುವುದು ಅವಶ್ಯಕ ಎಂದು ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಅಧ್ಯಕ್ಷೆ ಡಾ.ಎಂ.ಪುಷ್ಪಾ ತಿಳಿಸಿದರು.
    ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಎರಡು ವರ್ಷದ ಬಿ.ಇಡಿ ಪಠ್ಯಕ್ರಮ ಪರಿಷ್ಕರಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಸಮಾಜ ನಿಂತ ನೀರಲ್ಲ. ಸಮಾಜ ಬದಲಾಗುತ್ತ ಹೋಗುತ್ತದೆ. ಸಮಾಜ ಬದಲಾದಂತೆ ನಮ್ಮ ಅಗತ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿಯೂ ಸಮಾಜದ ಅಗತ್ಯತೆಗೆ ಅನುಗುಣವಾಗಿ ಬದಲಾವಣೆ ತರುವ ಅಗತ್ಯವಿದೆ ಎಂದು ಹೇಳಿದರು.
    ಒಂದು ವರ್ಷದ ಅವಧಿಯ ಬಿ.ಇಡಿ ಪಠ್ಯಕ್ರಮವನ್ನು ಎರಡು ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಹತ್ತು ವರ್ಷಗಳಿಗೊಮ್ಮೆ ಬಿ.ಇಡಿ ಪಠ್ಯಕ್ರಮ ಪರಿಷ್ಕರಣೆ ಮಾಡುವುದು ಅವಶ್ಯಕತೆ ಇದೆ. ಎರಡು ವರ್ಷದ ಬಿ.ಇಡಿ ಪಠ್ಯಕ್ರಮದಲ್ಲಿ ಎಲ್ಲ ವಿಷಯಗಳನ್ನು ಪರಿಷ್ಕರಣೆ ಮಾಡುವ ಉದ್ದೇಶದಿಂದ ಈ ಪಠ್ಯಕ್ರಮ ಪರಿಷ್ಕರಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
    ಆರೋಗ್ಯ ಮತ್ತು ದೈಹಿಕ ಶಿಕ್ಷಣ, ವ್ಯಕ್ತಿತ್ವದ ಸ್ವಯಂ ಅಧ್ಯಯನ ಮತ್ತು ಯೋಗ, ಶಿಕ್ಷಣದಲ್ಲಿ ನಾಟಕ ಮತ್ತು ಕಲೆಯನ್ನು ಅರ್ಥ ಮಾಡಿಕೊಳ್ಳುವುದು ಎಂಬ ಮೂರು ವಿಷಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುತ್ತಿದೆ. ಶಿಕ್ಷಣ ಎಂಬುದು ಸರ್ವತೋಮುಖ ಬೆಳವಣಿಗೆ ಆಗಿದೆ. ಜ್ಞಾನಾತ್ಮಕ ವಲಯಕ್ಕೆ ಹೆಚ್ಚು ಗಮನ ನೀಡಿ ಉಳಿದ ವಲಯಗಳನ್ನು ಕಡೆಗಣಿಸುತ್ತಿದ್ದೇವೆ. ಎಲ್ಲರೂ ಮಾನಸಿಕ ನೆಮ್ಮದಿ ಬಯಸುವುದರಿಂದ ಅದನ್ನು ಪಡೆಯಲು ಎಲ್ಲರೂ ಯೋಗದ ಮೊರೆ ಹೋಗುತ್ತಾರೆ ಎಂದರು.
    ಬೋಧನಾ ಪದ್ಧತಿಗಳು ಬದಲಾಗಿರುವುದರಿಂದ ಶಿಕ್ಷಣದಲ್ಲಿ ನಾಟಕ, ಶಿಕ್ಷಣದಲ್ಲಿ ಕಲೆಯನ್ನು ಹೇಗೆ ಬಳಸಬೇಕು ಮತ್ತು ವ್ಯಕ್ತಿತವನ್ನು ಸ್ವಯಂ ಅರ್ಥ ಮಾಡಿಕೊಳ್ಳುವುದು, ನಾನು ಎಂದರೆ ಯಾರು? ಎಂಬ ನನ್ನತನವನ್ನು ಅರಿಯುವುದು ಮತ್ತು ಸ್ವ ಅರಿವನ್ನು ಪಡೆಯುವ ಸಲುವಾಗಿ ಈ ಪಠ್ಯಕ್ರಮ ಇಡಲಾಗಿದೆ ಎಂದು ಹೇಳಿದರು.
    ಪ್ರಾಧ್ಯಾಪಕ ಪ್ರೊ.ಮುದ್ದು ಮಲ್ಲೇಶ್ ಮಾತನಾಡಿ, ಜ್ಞಾನಾತ್ಮಕ ವಲಯಕ್ಕೆ ಮಾತ್ರ ಹೆಚ್ಚಿನ ಒತ್ತು ಕೊಟ್ಟು ಉಳಿದವನ್ನು ಕಡೆಗಣಿಸಿರುವುದು ನಮ್ಮ ದೌರ್ಭಾಗ್ಯ. ಸಂಗೀತ, ಸಾಹಿತ್ಯ, ಕಲೆ, ಇವುಗಳಲ್ಲಿ ಆಸಕ್ತಿ ಇಲ್ಲದವರು ಪಶುವಿಗೆ ಸಮಾನ. ಪರಿಷ್ಕರಣೆ ಕಾರ್ಯದಲ್ಲಿ 7- 8 ವರ್ಷಗಳು ಹಳೆಯದಾದ ಪಠ್ಯಕ್ರಮ ಈಗಲೂ ಪ್ರಾಮುಖ್ಯ ಪಡೆದಿದೆ. ಇದರ ಜತೆಗೆ ಬದಲಾದ ಸಮಾಜಕ್ಕೆ ಹೊಂದಿಕೊಳ್ಳುವಂತೆ ಕೆಲವು ಬದಲಾವಣೆಗಳನ್ನು ಬಯಸುವುದರಿಂದ ಪಠ್ಯಕ್ರಮ ಪರಿಷ್ಕರಣೆಗೆ ಈಗ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟರು.
    ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಶಿಕ್ಷಕನೆಂದರೆ ನಡೆದಾಡುವ ವಿಶ್ವಕೋಶದಂತಿರಬೇಕು. ವಿದ್ವತ್ತಿಗೆ ಮತ್ತು ಪಾಂಡಿತ್ಯಕ್ಕೆ ಹೆಚ್ಚು ಬೆಲೆ ಇರುವುದರಿಂದ ಗಾಂಧೀಜಿ ಶೀಲವಿಲ್ಲದ ಶಿಕ್ಷಣ ಮಹಾ ಶಾಪವೆಂದು ಹೇಳುತ್ತಾರೆ. ಹಾಗೆ ಶಿಕ್ಷಕರು ಪಾಂಡಿತ್ಯ ಪಡೆಯಬೇಕು ಎಂದು ಸಲಹೆ ನೀಡಿದರು.
    ಮುಂದಿನ ದಿನಗಳಲ್ಲಿ ಶಿಕ್ಷಕರಾಗುವ ನೀವು ಕೂಡ ತರಬೇತಿ ಕೊಡಬೇಕಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಿ ಹೋಗಬೇಕಾಗುತ್ತದೆ. ವ್ಯಕ್ತಿತ್ವ ವಿಕಸನ ಹೊಂದಿರುವ ಪಠ್ಯಕ್ರಮ ಸೇರಿಸಿದರೆ ಶಿಕ್ಷಕರು ಒಳ್ಳೆಯ ವ್ಯಕ್ತಿತ್ವ ರೂಪಿಸುತ್ತಾರೆ. ಶಿಸ್ತುಬದ್ಧವಾಗಿರುವ ನಿಯಮ ಅನುಸರಿಸಿ ಪಠ್ಯಕ್ರಮ ತಯಾರಿಸಬೇಕಾಗುತ್ತದೆ. ಒಳ್ಳೆಯ ಚಾರಿತ್ರ್ಯವುಳ್ಳ ಶಿಕ್ಷಕರು ಹುಟ್ಟಿಕೊಳ್ಳುತ್ತಾರೆ ಎಂದರು.
    ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಮಹೇಶ್ ದಳಪತಿ, ಮಹಾವಿದ್ಯಾಲಯದ ಬೋಧಕ ವರ್ಗದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts