More

    ಯುವ ಪೀಳಿಗೆ ಸಂವಿಧಾನ ಜ್ಞಾನ ಹೊಂದುವುದು ಅವಶ್ಯಕ

    ಕುಶಾಲನಗರ: ಭಾರತೀಯ ಸಂವಿಧಾನದ ಪೀಠಿಕೆ ಮತ್ತು ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಕೂಡಿಗೆ ವೃತ್ತದ ಫಾಮ್ ಗೇಟ್ ಬಳಿ ಬುಧವಾರ ಸಂಜೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು.

    ಅಂಬೇಡ್ಕರ್ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಪುಷ್ಪಮಾಲೆ ಅರ್ಪಿಸುವ ಮೂಲಕ ರಥವನ್ನು ಬರಮಾಡಿಕೊಂಡರು. ಕಳಸ ಹೊತ್ತ ಆಶಾ ಕಾರ್ಯಕರ್ತೆಯರು ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಿದರು.

    ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಮಾತನಾಡಿ, ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿದ ಬಳಿಕ ದೇಶಕ್ಕೆ ಹೊಂದುವಂತಹ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ಸಂವಿಧಾನವನ್ನು ಅರಿತುಕೊಳ್ಳುವುದರಿಂದ ದೇಶಕ್ಕೆ ಒಳಿತಾಗುತ್ತದೆ. ಯುವ ಪೀಳಿಗೆ ಸಂವಿಧಾನದ ಬಗ್ಗೆ ಜ್ಞಾನ ಹೊಂದುವುದು ಅವಶ್ಯಕ ಎಂದರು.

    ಗ್ರಾಪಂ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಮಾತನಾಡಿ, ಸಂವಿಧಾನ ನಮ್ಮ ದೇಶದ ಕಾನೂನು. ಹಾಗಾಗಿ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.

    ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಪಾಲಿಸುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು. ಜಾಗೃತಿ ಜಾಥಾಗೆ ಎಲ್ಲೆಡೆ ಸಂಭ್ರಮದ ಸ್ವಾಗತ ಸಿಗುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲರೂ ಸಂವಿಧಾನವನ್ನು ಪಾಲಿಸುವ ಮೂಲಕ ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿಹಿಡಿಯಬೇಕು ಎಂದರು.

    ಕೂಡಿಗೆ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಡಾ.ಬಸಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗ್ರಾ.ಪಂ.ಸದಸ್ಯರಾದ ಜೆ.ಫಿಲೋಮಿನಾ, ಖತಿಜಾ, ಈರಯ್ಯ, ಚಂದ್ರಶೇಖರ್, ಪಿಡಿಒ ಎಂ.ಆರ್.ಸಂತೋಷ್, ಸಿಬ್ಬಂದಿ ಎಂ.ಎಲ್.ಅವಿನಾಶ್ ಇತರರಿದ್ದರು.

    ಸಂವಿಧಾನ ಜಾಗೃತಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳು ಭಾಷಣ, ಹಾಡು, ಲಾವಣಿ ನಡೆಸಿಕೊಟ್ಟರು. ಭಾರತವನ್ನು ಸದೃಢಗೊಳಿಸುವಲ್ಲಿ ಸಂವಿಧಾನ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಂವಿಧಾನ ಮಹತ್ವ ಕುರಿತು ವಿಡಿಯೋ ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts