More

    ಬಾಲಾವಸ್ಥೆಯಲ್ಲಿ ಮಕ್ಕಳು ಅಡ್ಡದಾರಿ ಹಿಡಿಯುವುದು ಅಪಾಯಕಾರಿ

    ಶಿವಮೊಗ್ಗ: ಮಕ್ಕಳಲ್ಲಿ ದೇಶದ ಕಾನೂನು ಮತ್ತು ಅವರಿಗಿರುವ ಹಕ್ಕುಗಳ ಕುರಿತು ಮತ್ತಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

    ಕರ್ನಾಟಕ ಸಂಘದಲ್ಲಿ ಭಾನುವಾರ ಗೀತಾಂಜಲಿ ಪ್ರಕಾಶನ ಹೊರತಂದಿರುವ ಶೀಲಾ ಸುರೇಶ್ ಅವರ ತೈಲವಿಲ್ಲದ ಹಣತೆಗಳು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಚಟುವಟಿಕೆಗಳ ಬಗ್ಗೆ ದಿನನಿತ್ಯವೂ ದೂರುಗಳು ಕೇಳಿಬರುತ್ತಿವೆ. ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
    ಜಾಗೃತಿ ಇಲ್ಲದಿರುವುದು ಹಾಗೂ ಪಾಲಕರು ನಿಗಾ ವಹಿಸದಿರುವ ಕಾರಣ ಮಕ್ಕಳು ಬಾಲಾವಸ್ಥೆಯಲ್ಲಿ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿದ್ದು, ಮಕ್ಕಳ ಬಗ್ಗೆ ನಿಗಾ ಇರಿಸುವ ಜತೆಗೆ ಅಪರಾಧ ಚಟುವಟಿಕೆಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ಅದನ್ನು ಮುಚ್ಚಿ ಹಾಕುವ ಬದಲು ಜಾಗೃತಿ ಮೂಡಿಸಬೇಕಿದೆ ಎಂದು ಮನವಿ ಮಾಡಿದರು.
    ಕಳೆದ ಹತ್ತು ವರ್ಷಗಳಲ್ಲಿ ಮಕ್ಕಳ ಹಕ್ಕುಗಳ ಮತ್ತು ರಕ್ಷಣೆ ಬಗ್ಗೆ ಸ್ವಲ್ಪಮಟ್ಟಿನ ಜಾಗೃತಿ ಮೂಡುತ್ತಿದೆ. ಆದರೂ ಆ ಪ್ರಮಾಣ ಸಾಲುತ್ತಿಲ್ಲ. ಮಕ್ಕಳು ಯಾವುದೋ ಮನಸ್ಥಿತಿಯಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಅವುಗಳಿಗೆ ಕಡಿವಾಣ ಹಾಕುವುದು ಅತೀ ಮುಖ್ಯವಾಗಿದೆ. ಈ ಬಗ್ಗೆ ಮಕ್ಕಳ ರಕ್ಷಣಾ ಸಮಿತಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ ಸಮುದಾಯದಲ್ಲಿ ಮತ್ತಷ್ಟು ಕೆಲಸ ಆಗಬೇಕಿದೆ ಎಂದು ಹೇಳಿದರು.
    ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ನೋಡುವ ಸ್ಥಿತಿ ಭಿನ್ನವಾಗುತ್ತದೆ. ಅಂತಹ ಮಕ್ಕಳ ಮನಪರಿವರ್ತನೆ ಮಾಡಬೇಕಿದೆ. ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅದನ್ನು ಹೋಗಲಾಡಿಸಲು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಮಾಡಬೇಕು ಎಂದರು.
    ಮಕ್ಕಳನ್ನು ಅಪರಾಧ ಮನಸ್ಥಿತಿಯಿಂದ ಹೊರತರಲು ಸಾಹಿತ್ಯ ಪರಿಷತ್‌ನಿಂದ ಕೆಲವೊಂದು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಸೃಜನಾತ್ಮಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅಪರಾಧ ಮನೋಭಾವ ಆ ಬಳಿಕ ಆತನಲ್ಲಿ ಆಗುವ ಪರಿವರ್ತನೆ. ಇದರಲ್ಲಿ ಸಮಾಜದ ಜವಾಬ್ದಾರಿ ಏನೆಂಬುದನ್ನು ತಿಳಿಯಬೇಕಿದೆ ಎಂದರು.
    ಲೇಖಕಿ ಶೀಲಾ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೃತಿ ಕುರಿತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ ಮಾತನಾಡಿದರು. ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಮೋಹನ್, ಸಂತೋಷ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts