More

    ರಾಮನ ಮೂರ್ತಿ ಕೆತ್ತುವ ಅವಕಾಶ ಸಿಕ್ಕಿದ್ದು ಪುಣ್ಯ

    ಸಾಗರ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಕೆತ್ತುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಶಿಲ್ಪಿ ವಿಪಿನ್ ಭೌದಾರಿಯ ಹೇಳಿದರು.
    ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಕೆತ್ತನೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಜೋಗ ರಸ್ತೆಯ ಶ್ರೀರಾಮ ದೇವಸ್ಥಾನ ಸಮಿತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಳೆದ ಮಾರ್ಚ್‌ನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಲು ನನ್ನ ಗುರುಗಳು ನನ್ನ ಹೆಸರನ್ನು ಸೂಚನೆ ಮಾಡಿದ್ದರು. ನಂತರ ನನಗೆ ಅಲ್ಲಿಂದ ಮೂರ್ತಿ ಕೆತ್ತನೆಗೆ ಕರೆ ಬಂದಿತ್ತು. ಸುಮಾರು ಏಳೂವರೆ ಅಡಿ ಎತ್ತರದ ಮೂರ್ತಿಯನ್ನು ಒಬ್ಬನಿಂದ ಕೆತ್ತಲು ಕಷ್ಟವಾಗುತ್ತದೆ ಎಂದು ನನ್ನ ಇಬ್ಬರು ವಿದ್ಯಾರ್ಥಿಗಳನ್ನು ಜತೆಗೆ ಕರೆದೊಯ್ದು ಸುಮಾರು ಏಳು ತಿಂಗಳು ಶ್ರೀರಾಮನ ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದು ಹೇಳಿದರು.
    ಅಯೋಧ್ಯೆಯ ವಿಪರೀತ ಬಿಸಿಲು, ಚಳಿ, ಮಳೆ ಯಾವುದೂ ನಮಗೆ ಕಷ್ಟ ಎನಿಸಲೇ ಇಲ್ಲ. ಒಂದರ್ಥದಲ್ಲಿ ನಾವು ಮೂರ್ತಿ ಕೆತ್ತನೆ ಮಾಡುವಷ್ಟು ದಿನವೂ ಒಂದು ರೀತಿಯ ಸಾರ್ಥಕ ಭಾವನೆ ಇತ್ತು. ಶ್ರೀರಾಮನ ಸೇವೆ ಮಾಡಲು ನಮಗೆ ಒಂದು ಅವಕಾಶ ಸಿಕ್ಕಿದೆ ಎನ್ನುವ ಮನೋಭಾವ ಜಾಗೃತವಾಗಿತ್ತು. ಜ.22ರಂದು ನಡೆಯುವ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಬಂದಿದ್ದು ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಾನು ಕೆತ್ತಿರುವ ಶ್ರೀರಾಮ ಮೂರ್ತಿಯನ್ನು ಮೊದಲ ಅಂತಸ್ತಿನಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ನನ್ನ ಕೆತ್ತನೆಗೆ ಗೌರವ ಸಿಕ್ಕಂತಾಗಿದೆ. ಸಾಗರ ಜನತೆಯ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
    ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಡಿ.ಜಗದೀಶ್, ಪ್ರಮುಖರಾದ ಎಸ್.ಆರ್.ಪ್ರಭಾಕರ್, ಕೆ.ಜಿ.ಅಣ್ಣಪ್ಪ, ಪ್ರಕಾಶ್, ಮೌನೇಶ್, ನಗರಸಭೆ ಸದಸ್ಯ ಗಣೇಶಪ್ರಸಾದ್, ರಂಗನಾಥ್, ದೀಪಕ್, ಲೋಕೇಶಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts