More

    50 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಣೆ

    ಮೂಡಿಗೆರೆ: ನನ್ನ ಕ್ಷೇತ್ರದ 49 ಗ್ರಾಪಂ ವ್ಯಾಪ್ತಿಯಲ್ಲಿ 94ಸಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರಾಥಮಿಕ ಹಂತವಾಗಿ 50 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ ಎಲ್ಲ ಫಲಾನುಭವಿಗಳಿಗೆ ಹಂತಹಂತವಾಗಿ ವಿತರಿಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

    94ಸಿಯಲ್ಲಿ ಅರ್ಜಿ ಸಲ್ಲಿಸಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದವರ ಪೈಕಿ 50 ಫಲಾನುಭವಿಗಳಿಗೆ ಬುಧವಾರ ತಾಲೂಕು ಕಚೇರಿಯಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
    ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಜಾಗದ ಸಮಸ್ಯೆಯಿಂದ ನಿವೇಶನ ನೀಡಲು ಸಾಧ್ಯವಾಗಿರಲಿಲ್ಲ. ನಾನು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸಿದಾಗ ನಿವೇಶನ ನೀಡುವಂತೆ ಫಲಾನುಭವಿಗಳು ಕೇಳಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಚರ್ಚಿಸಿ ಡೀಮ್ಡ್ ಫಾರೆಸ್ಟ್ ಜಾಗವನ್ನು ಕಂದಾಯ ಇಲಾಖೆಗೆ ಪಡೆದು ಅದನ್ನು ನಿವೇಶನಕ್ಕೆ ಒದಗಿಸಿಕೊಡುವಂತೆ ಮನವಿ ಮಾಡಿದ್ದೆ. ಸರ್ಕಾರದ ಆದೇಶದಂತೆ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಮುಗಿದಿದೆ. ಡೀಮ್ಡ್ ಜಾಗ ಕಂದಾಯ ಇಲಾಖೆ ಕೈ ಸೇರಿದೆ. ಸದ್ಯದಲ್ಲೇ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ನಿವೇಶನ ಹಾಗೂ ಸ್ಮಶಾನ ಜಾಗ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
    ಮಲೆಮನೆ ಮತ್ತು ಮದುಗುಂಡಿಯ ನೆರೆ ನಿರಾಶ್ರಿತರಿಗೆ ಹಾದಿಓಣಿ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ. ಅವರಿಗೆ ನಿವೇಶನ ಮತ್ತು ಮನೆ ಒದಗಿಸಲು ಸಿದ್ಧತೆ ನಡೆದಿದೆ. 2019ರಲ್ಲಿ ಮಹಾಮಳೆಯಿಂದ ಹೇಮಾವತಿ ನದಿ ನೀರು ಉಕ್ಕಿ ಉಗ್ಗೆಹಳ್ಳಿ ಕಾಲನಿ ಜಲಾವೃತವಾಗಿದ್ದರಿಂದ ಅಲ್ಲಿನ ಮನೆಗಳು ಕುಸಿದಿದ್ದವು. ಕಾಲನಿಯ 51 ಕುಟುಂಬವನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಕಿರುಗುಂದ ಗ್ರಾಪಂ ಬೆಟ್ಟದಮನೆ ಗ್ರಾಮದಲ್ಲಿ 51 ಮನೆಗಳ ನಿರ್ಮಾಣ ಆರಂಭಿಸಿ 4 ವರ್ಷ ಕಳೆದಿದೆ. ಕೆಲ ಮನೆಗಳ ತಳಪಾಯ ಆಗಿದೆ. ಇನ್ನೂ ಕೆಲ ಮನೆಗಳ ಗೋಡೆ ಮಾತ್ರ ನಿರ್ಮಾಣವಾಗಿದೆ. ಹೊಸ ಬಡಾವಣೆಗೆ ಮೂಲ ಸೌಕರ್ಯವಿಲ್ಲದೆ ಮನೆ ನಿರ್ಮಾಣ ಕುಂಠಿತಗೊಂಡಿದೆ. ನ. 6ರಂದು ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯಕ್ಕೆ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.
    ಉಪತಹಸೀಲ್ದಾರ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ, ಹಂತೂರು ಗ್ರಾಪಂ ಸದಸ್ಯ ರಮೇಶ್, ಮುಖಂಡರಾದ ಕೊಣಗೆರೆ ಶಿವಕುಮಾರ್, ರುದ್ರಯ್ಯ ಇತರರಿದ್ದರು.
    ಕುದುರೆಮುಖ ವಿನೋಬನಗರದ 64 ನಿರಾಶ್ರಿತ ಕುಟುಂಬಗಳಿಗೆ ನಿವೇಶನ ಇಲ್ಲ. ಅದಿರು ಕಂಪನಿ ಮುಚ್ಚಿದ ನಂತರ ಜನಸಂಖ್ಯೆ ಕಡಿಮೆಯಾಗಿದ್ದರಿಂದ ಪಟ್ಟಣ ಪಂಚಾಯಿತಿ ಚಾಲ್ತಿಯಲ್ಲಿಲ್ಲ. ಹಾಗಾಗಿ ಆ ಪಟ್ಟಣವನ್ನು ಜಿಪಂ ಕ್ಷೇತ್ರ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿ ಹೊಸದಾಗಿ ಗ್ರಾಪಂ ಸ್ಥಾಪಿಸಿ ನಿರಾಶ್ರಿತರಿಗೆ ನಿವೇಶನ ಮತ್ತು ಮನೆ ಒದಗಿಸಲಾಗುವುದು ಎಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts