ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ.
ಖಾಸಗಿ ಹೋಟೆಲ್ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’ ಕುರಿತು ಆಯೋಜಿಸಲಾಗಿದ್ದ ಸಮಾವೇಶದಲ್ಲಿ ವ್ಯೋಮಮಿತ್ರಾವನ್ನು ಪ್ರದರ್ಶಿಸಲಾಗಿದೆ.
ಸ್ತ್ರೀವೇಷಧಾರಿಯಾಗಿರುವ ರೋಬಾಟ್ ವ್ಯೋಮಮಿತ್ರಾ ಮುಖ, ಕೈ, ದೇಹ ಹೊಂದಿದ್ದರೂ ಕಾಲು ಹೊಂದಿಲ್ಲ. ಹಾಗಾಗಿ ಇದನ್ನು ಅರ್ಧ ಹ್ಯೂಮನಾಯ್ಡ್ ಎಂದು ಕರೆಯಲಾಗಿದೆ.
ಈ ಸಮಯದಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದವರ ಜತೆಗೆ ಮಾತನಾಡಿದ ವ್ಯೋಮಮಿತ್ರಾ, ‘ನಾನು ವ್ಯೋಮಮಿತ್ರಾ. ಮೊದಲ ಮಾನವರಹಿತ ಗಗನಯಾನ ಕಾರ್ಯಕ್ರಮಕ್ಕೆ ಮಾಡಲಾಗುವ ಅರ್ಧ ಹ್ಯೂಮನಾಯ್ಡ್ ಮಾದರಿ. ನಿಮ್ಮನ್ನು ಎಚ್ಚರಿಸುವ ಹಾಗೂ ಜೀವರಕ್ಷಕ ಕೆಲಸಗಳನ್ನು ನಿರ್ವಹಿಸಬಲ್ಲೆ. ಪ್ಯಾನೆಲ್ ಸ್ವಿಚ್ ಆನ್ ಮಾಡುವುದು, ವಿಎಲ್ಎಸ್ಎಸ್ ಕ್ರಿಯೆ ಸೇರಿ ಎಲ್ಲ ಮಾನವ ಚಟುವಟಿಕೆಯನ್ನು ನಕಲು ಮಾಡಬಲ್ಲೆ. ನಾನು ಗಗನಯಾನಿಗಳ ಜತೆಗೆ ಸಂಭಾಷಣೆ ನಡೆಸಬಲ್ಲೆ, ಅವರನ್ನು ಗುರುತಿಸಬಲ್ಲೆ ಹಾಗೂ ಅವರ ಪ್ರಶ್ನೆಗಳಿಗೂ ಉತ್ತರಿಸಬಲ್ಲೆ’ ಎಂದು ತಿಳಿಸಿತು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್, 2022ರಲ್ಲಿ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಆಯ್ಕೆ ಮಾಡಲಾಗಿರುವ ನಾಲ್ವರಿಗೆ ತರಬೇತಿ ಆರಂಭವಾಗಲಿದೆ. ಅದಕ್ಕೂ ಮೊದಲು 2020ರ ಅಂತ್ಯದಲ್ಲಿ ಹಾಗೂ 2021ರ ಜೂನ್ನಲ್ಲಿ ಎರಡು ಮಾನವರಹಿತ ಗಗನಯಾನ ನಡೆಯಲಿದೆ. ಈ ಪ್ರಯಾಣದಲ್ಲಿ ಹ್ಯೂಮನಾಯ್ಡ್ ವ್ಯೋಮಮಿತ್ರಾ) ಪ್ರಯಾಣ ಮಾಡಲಿದೆ. ಇದೀಗ ವ್ಯೋಮಮಿತ್ರಾ ತೆರಳಲಿರುವ ಗಗನಯಾನ ಹಾಗೂ ಮಾನವಸಹಿತ ಗಗನಯಾನಕ್ಕೂ ಇರುವ ಒಂದೇ ವ್ಯತ್ಯಾಸವೆಂದರೆ ಮಾನವ ಜೀವ ವಿಜ್ಞಾನ ಹಾಗೂ ಜೀವರಕ್ಷಕ ವ್ಯವಸ್ಥೆ ಇಲ್ಲದಿರುವುದು ಎಂದು ಹೇಳಿದರು.
ಪ್ರದರ್ಶನದಲ್ಲಿ ಏನೇನಿದೆ?
ಸಮ್ಮೇಳನದಲ್ಲಿ ಗಗನಯಾನಕ್ಕೆ ಸಂಬಂಧಿಸಿದ ವ್ಯೋಮಮಿತ್ರಾ ಜತೆಗೆ ಗಗನಯಾನಿಗಳನ್ನು ಕರೆದೊಯ್ಯುವ ಸ್ಪೇಸ್ ಮಾಡ್ಯೂಲ್, ನೌಕೆಯಲ್ಲಿ ಬಳಕೆ ಮಾಡಲಾಗಿರುವ ಅಲ್ಯುಮಿನಿಯಂ ಹಾಗೂ ಟೈಟಾನಿಯಂ ಬಿಡಿಭಾಗಗಳು, ಗಗನಯಾನಿಗಳಿಗೆ ನೀಡಲಾಗುವ ವಿವಿಧ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಬೆಂಗಳೂರಲ್ಲಿ ತರಬೇತಿ ವ್ಯವಸ್ಥೆ
ಗಗನಕ್ಕೆ ಪ್ರಯಾಣ ಮಾಡುವುದಷ್ಟೇ ಮಾತ್ರ ಮುಖ್ಯಗುರಿ ಅಲ್ಲ ಎಂದು ತಿಳಿಸಿದ ಕೆ. ಶಿವನ್, ನಿರಂತರ ಬಾಹ್ಯಾಕಾಶ ಯಾನಕ್ಕೆ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲಾಗುತ್ತದೆ. ತಕ್ಷಣದ ಗುರಿಯಾಗಿ ಎರಡು ಮಾನವರಹಿತ ಗಗನಯಾನ ನಡೆಯುತ್ತದೆ. ಬಾಹ್ಯಾಕಾಶ ಕೇಂದ್ರ ಸ್ಥಾಪನೆಯಾಗುತ್ತದೆ. ಮಧ್ಯಮ ಗುರಿಯಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಸುಸ್ಥಿರತೆ ಹಾಗೂ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವರ ಅಸ್ತಿತ್ವವನ್ನು ಮುಂದುವರಿಸಲಾಗುತ್ತದೆ.
ಇದೆಲ್ಲದರ ಜತೆಗೆ, ಪೂರ್ಣ ಪ್ರಮಾಣದಲ್ಲಿ ಗಗನಯಾನಿಗಳ ತರಬೇತಿ ವ್ಯವಸ್ಥೆಯನ್ನು ಬೆಂಗಳೂರಿಗೆ ಹತ್ತಿರದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ನಾಸಾ ಸೇರಿ ಇನ್ನಿತರ ಬಾಹ್ಯಾಕಾಶ ಸಂಸ್ಥೆಗಳ ಅನುಭವದಿಂದ ಏನು ಕಲಿಯಬಹುದೆಂದು ಎದುರುನೋಡುತ್ತಿದ್ದು, ಮಾತುಕತೆಯಲ್ಲಿದ್ದೇವೆ. ಅಂತರ ಗ್ರಹದ ಪ್ರಯಾಣ ಕಾರ್ಯಕ್ರಮಕ್ಕೂ ಗಗನಯಾನ ಪೂರಕವಾಗಲಿದೆ ಎಂದು ಹೇಳಿದರು.
ವರ್ಷಾಂತ್ಯಕ್ಕೆ ಚಂದ್ರಯಾನ-3 ಸಿದ್ಧ
ಚಂದ್ರಯಾನ-3ರ ಕಾರ್ಯ ಭರದಿಂದ ಸಾಗಿದ್ದು, ವರ್ಷಾಂತ್ಯಕ್ಕೆ ಇಸ್ರೋ ಸಿದ್ಧವಾಗಿರಲಿದೆ. ಮಾನವ ಸಹಿತ ಚಂದ್ರಯಾನಕ್ಕೆ ಸಾಕಷ್ಟು ಸಮಯ ತಗುಲಲಿದೆ ಎಂದು ಕೆ. ಶಿವನ್ ಹೇಳಿದರು. ಈ ಕುರಿತು ಕಳೆದ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಿವನ್, ಚಂದ್ರಯಾನ-2ರಲ್ಲಿ ಆಗಿರುವ ಕುಂದುಕೊರತೆ ಸರಿಪಡಿಸಿಕೊಂಡು ಮತ್ತೊಮ್ಮೆ ಚಂದ್ರನ ದಕ್ಷಿಣ ಧ್ರುವಕ್ಕೆ ಪ್ರಯಾಣಿಸಲಿದ್ದೇವೆ.
ಯೋಜನಾ ನಿರ್ದೇಶಕರಾಗಿ, ಚಂದ್ರಯಾನ-2ರ ಸಹಾಯಕ ಯೋಜನಾ ನಿರ್ದೇಶಕರಾಗಿದ್ದ ವೀರಮುತ್ತುವೇಲ್ ನೇಮಕವಾಗಿದ್ದಾರೆ. ಚಂದ್ರಯಾನ-2ರಲ್ಲಿ ಉಡಾವಣೆಯಾಗಿದ್ದ ಆರ್ಬಿಟರ್ ಉತ್ತಮ ಸ್ಥಿತಿಯಲ್ಲಿದ್ದು, ಚಂದ್ರಯಾನ-3ರಲ್ಲಿ ಕೇವಲ ಲ್ಯಾಂಡರ್ ಹಾಗೂ ರೋವರ್ ಇರಲಿದೆ. ಈ ಬಾರಿಯೂ ಚಂದ್ರನ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದಿದ್ದರು.