More

    5 ವರ್ಷದಲ್ಲಿ 50 ಗುಪ್ತಚರ ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೋ

    ಮುಂಬೈ: ಭಾರತವು ಮುಂದಿನ ಐದು ವರ್ಷಗಳಲ್ಲಿ 50 ಗುಪ್ತಚರ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ. ಭೌಗೋಳಿಕ ಗುಪ್ತಚರ ಮಾಹಿತಿ ಸಂಗ್ರಹಣೆಗಾಗಿ ವಿವಿಧ ಕಕ್ಷೆಗಳಲ್ಲಿ ಉಪಗ್ರಹಗಳ ಪದರ ರಚಿಸಲು ಯೋಜನೆ ರೂಪಿಸಲಾಗಿದೆ. ಸೈನಿಕರ ಚಲನವಲನವನ್ನು ಪತ್ತೆಹಚ್ಚಲು ಮತ್ತು ಸಾವಿರಾರು ಕಿಲೋಮೀಟರ್ ಪ್ರದೇಶಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಉಪಗ್ರಹಗಳು ಒಳಗೊಂಡಿರುತ್ತವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ ಹೇಳಿದ್ದಾರೆ.

    ಪ್ರಸ್ತುತ ಭಾರತದ ಅಗತ್ಯತೆಯನ್ನು ಸಾಕಾರಗೊಳಿಸಲು ಈಗಿರುವ ಉಪಗ್ರಹಗಳಿಂದ ಸಾಧ್ಯವಾಗುತ್ತಿಲ್ಲ. ಇಂದು ನಾವು ಹೊಂದಿರುವ ಉಪಗ್ರಹಗಳ ಹತ್ತು ಪಟ್ಟು ಹೆಚ್ಚು ಮುಂದಿನ ದಿನಗಳಲ್ಲಿ ಅಗತ್ಯ ಬೀಳಲಿದೆ. ಅದಕ್ಕಾಗಿ ಈಗಿನಿಂದ ಸಿದ್ಧತೆ ನಡೆಯಬೇಕಿದೆ ಎಂದು ಅವರು, ಇಂಡಿಯನ್ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಏರ್ಪಡಿಸಿದ್ದ ‘ಟೆಕ್​ಫೆಸ್ಟ್’ ಕಾರ್ಯಕ್ರಮದಲ್ಲಿ ಹೇಳಿದರು.

    ರಕ್ಷಣಾ ಗುಪ್ತಚರ ಮಾಹಿತಿ ಸಂಗ್ರಹಿಸುವ ಉಪಗ್ರಹಗಳನ್ನು ‘ಸ್ಪೈ-ಸ್ಯಾಟ್’ ಎಂದು ಕರೆಯಲಾಗುತ್ತದೆ. ಇದು ಇತರ ಉಪಗ್ರಹಕ್ಕಿಂತ ಚಿಕ್ಕದಾಗಿರುತ್ತದೆ. ಆಕಾಶದಿಂದಲೇ ಭೂಮಿ ಮೇಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಇದರಿಂದ ಸಾಧ್ಯವಾಗುತ್ತದೆ. ಈ ಉಪಗ್ರಹಗಳ ಸಾಮರ್ಥ್ಯವನ್ನು ಸುಧಾರಿಸುವುದು, ಡೇಟಾವನ್ನು ವಿಶ್ಲೇಷಿಸಲು ಎಐ- ಸಂಬಂಧಿತ ವಿಧಾನಗಳನ್ನು ಜಾರಿಗೆ ತರುವುದು, ಡೇಟಾ ಡೌನ್​ಲೋಡ್​ಗಳನ್ನು ಕಡಿಮೆ ಮಾಡಿ ಅಗತ್ಯ ಮಾಹಿತಿಯನ್ನು ಮಾತ್ರ ಪಡೆಯುವ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

    ಸಾಮರ್ಥ್ಯ ಮತ್ತಷ್ಟು ಹೆಚ್ಚಳ: ಬಾಹ್ಯಾಕಾಶ ನೌಕೆಗಳು ದೇಶದ ಗಡಿ ಮತ್ತು ನೆರೆಯ ಪ್ರದೇಶಗಳ ಮೇಲೆ ಕಣ್ಣಿಡಲು ಸಮರ್ಥವಾಗಿವೆ. 50 ಉಪಗ್ರಹಗಳನ್ನು ಮುಂದಿನ ಐದು ವರ್ಷಗಳಲ್ಲಿ ಕಾರ್ಯಗತಗೊಳಿಸಲು ಯೋಜನೆ ಸಿದ್ಧವಾಗಿದೆ. ಭಾರತದ ಭೂ-ಗುಪ್ತಚರ ಸಾಮರ್ಥ್ಯ ಮತ್ತಷ್ಟು ಹೆಚ್ಚಳ ಕಾಣಲಿದೆ. ಇದರಿಂದ ಗಡಿ ಸುರಕ್ಷತೆ ಜತೆಗೆ ನೆರೆಯ ದೇಶಗಳಿಂದ ಉಂಟಾಗಬಹುದಾದ ಅಪಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ಸೋಮನಾಥ ಹೇಳಿದರು. ಜಿಯೋ ಆರ್ಬಿಟ್​ನಿಂದ ಭೂಮಿಯ ಕೆಳ ಕಕ್ಷೆ ವರೆಗೆ ವಿವಿಧ ಸ್ಥರಗಳಲ್ಲಿ ಉಪಗ್ರಹಗಳ ಉಡಾವಣೆ ಮಾಡುವ ವಿಧಾನವನ್ನು ಕಂಡುಕೊಂಡಿದ್ದೇವೆ. ಇದು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಬರುತ್ತಿರುವ ಹೊಸ ಡೊಮೇನ್ ಆಗಿದೆ. ಉಪಗ್ರಹಗಳ ನಡುವೆಯೂ ಸಂವಹನ ನಡೆಸುತ್ತೇವೆ. ಇದರಿಂದಾಗಿ ಕೆಲವು ಉಪಗ್ರಹಗಳು 36,000 ಕಿಮೀಗಳಷ್ಟು ದೂರದ ವಸ್ತುಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುತ್ತವೆ ಎಂದರು.

    ಜ. 6ರಂದು ಆದಿತ್ಯ ಎಲ್1 ಲಾಗ್ರೇಂಜ್ ಪಾಯಿಂಟ್​ಗೆ: ಇಸ್ರೋದ ಸೌರ ಮಿಷನ್ ಆದಿತ್ಯ ಎಲ್1 ಜನವರಿ 6ರಂದು ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (ಎಲ್ 1) ತಲುಪಲಿದ್ದು, ಯಾವುದೇ ಅಡ್ಡಿ ಇಲ್ಲದೇ ಸೂರ್ಯನನ್ನು ಅಧ್ಯಯನ ಮಾಡಲಿದೆ ಎಂದು ಸೋಮನಾಥ ಹೇಳಿದ್ದಾರೆ. ಜನವರಿ 6ರಂದು ಸಂಜೆ 4 ಗಂಟೆಗೆ ಲಗ್ರೇಂಜ್ ಪಾಯಿಂಟ್ ತಲುಪಲಿದೆ. ನೌಕೆ ಎಂಜಿನ್ ವೇಗಗೊಳಿಸುವ ಮೂಲಕ ಅದು ಹಾಲೋ ಆರ್ಬಿಟ್ ಎಂಬ ಕಕ್ಷೆಯನ್ನು ಪ್ರವೇಶಿಸುತ್ತದೆ. ಲಾಗ್ರೇಂಜ್ ಪಾಯಿಂಟ್ ಎಂದರೆ ಭೂಮಿ ಮತ್ತು ಸೂರ್ಯನ ನಡುವಿನ ಗುರುತ್ವಾಕರ್ಷಣೆಯು ತಟಸ್ಥಗೊಳ್ಳುವ ಪ್ರದೇಶವಾಗಿದೆ. ನೌಕೆಯಲ್ಲಿರುವ ಎಲ್ಲ ಆರು ಪೇಲೋಡ್​ಗಳನ್ನು ಪರೀಕ್ಷಿಸಲಾಗಿದ್ದು, ಇವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಡೇಟಾಗಳನ್ನು ನಿಯಂತ್ರಣ ಕೇಂದ್ರಕ್ಕೆ ರವಾನೆ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts