More

    ಗಗನಯಾನ ಪರೀಕ್ಷೆಗೂ ಮುನ್ನ ಏನು ತಪ್ಪಾಯಿತು? ಸರಿಪಡಿಸಿದ್ಹೇಗೆ ಎಂಬುದನ್ನು ವಿವರಿಸಿದ ಇಸ್ರೋ ಅಧ್ಯಕ್ಷ​

    ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಮಿಷಷ್​ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಇಂದು ಯಶಸ್ವಿಯಾಗಿ ನಡೆದಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ನಿಗದಿತ ಸಮಯಕ್ಕೆ ನೆರವೇರಲಿಲ್ಲ. 8 ಸರಿಯಾದ ಸಮಯಕ್ಕೆ ಟಿವಿ-ಡಿ1 ರಾಕೆಟ್ ಇನ್ನೇನು ನಭಕ್ಕೆ ಜಿಗಿಯಬೇಕು ಎನ್ನುವಷ್ಟರಲ್ಲಿ​ ಉಡಾವಣೆಯನ್ನು ತಡೆಹಿಡಿದು 10 ಗಂಟೆಗೆ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಲಾಂಚ್​ ಮಾಡಲಾಯಿತು. ಈ ರೀತಿ ಯಾಕಾಯಿತು ಎಂಬುದನ್ನು ಇಸ್ರೋ ಮುಖ್ಯಸ್ಥ ಎಸ್​. ಸೋಮನಾಥ್​ ವಿವರಿಸಿದ್ದಾರೆ.

    ಲಾಂಚ್​ ಕಮ್ಯಾಂಡ್​ ಅನ್ನು ನಿರ್ವಹಿಸುತ್ತಿದ್ದ ಕಂಪ್ಯೂಟರ್​, ಅಸಮಂಜಸತೆಯನ್ನು ಪತ್ತೆಹಚ್ಚಿದ ಪರಿಣಾಮ ಉಡಾವಣೆಯನ್ನು ತಡೆಹಿಡಿಯಲಾಯಿತು. ಅದನ್ನು ತಕ್ಷಣವೇ ಪತ್ತೆಹಚ್ಚಿ, ಸರಿಪಡಿಸಿ 10 ಗಂಟೆಗೆ ಮರು ನಿಗದಿಯಾಗಿದ್ದ ಎರಡನೇ ಪ್ರಯತ್ನದಲ್ಲಿ ರಾಕೆಟ್​ ಅನ್ನು ಯಶಸ್ವಿಯಾಗಿ ಲಾಂಚ್​ ಮಾಡಲಾಯಿತು ಎಂದು ಸೋಮನಾಥ್​ ತಿಳಿಸಿದ್ದಾರೆ.

    ಈ ಮಿಷನ್​ನ ಮುಖ್ಯ ಉದ್ದೇಶ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್​ ಪರೀಕ್ಷೆಯಾಗಿತ್ತು. ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಅನ್ನು ಪ್ರಾರಂಭಿಸುವ ಮೊದಲು ರಾಕೆಟ್​, ಶಬ್ದದ ವೇಗಕ್ಕಿಂತ ಸ್ವಲ್ಪ ಹೆಚ್ಚಾಯಿತು. ಎಸ್ಕೇಪ್​ ಸಿಸ್ಟಮ್​ನಲ್ಲಿದ್ದ ಕ್ರ್ಯೂ ಮಾಡ್ಯೂಲ್​ ಅನ್ನು ವಾಹನದಿಂದ ಬೇರ್ಪಡಿಸಿ, ಸಮುದ್ರ ಮೇಲೆ ಇಳಿಯುವುದು ಸೇರಿದಂತೆ ನಂತರದ ಕಾರ್ಯಾಚರಣೆಗಳು ಯಶಸ್ವಿಯಾಯಿತು ಎಂದು ಸೋಮನಾಥ್​ ಹೇಳಿದರು.

    ಸಮುದ್ರದಿಂದ ಕ್ರ್ಯೂ ಮಾಡ್ಯೂಲ್​ ಅನ್ನು ವಶಕ್ಕೆ ಪಡೆದ ನಂತರ ಹೆಚ್ಚು ದತ್ತಾಂಶ ಮತ್ತು ವಿಶ್ಲೇಷಣೆಯೊಂದಿಗೆ ಮತ್ತೆ ಬರುತ್ತೇವೆ. ಟೆಸ್ಟ್​ ಫ್ಲೈಟ್​ ವೇಳೆ ಎಲ್ಲ ಸಿಸ್ಟಮ್​ ಚೆನ್ನಾಗಿ ಕಾರ್ಯನಿರ್ವಹಿಸಿವೆ ಎಂದು ತಿಳಿಸಿದರು.

    ಇದೊಂದು ರೀತಿಯಲ್ಲಿ ಹಿಂದೆಂದೂ ನಡೆದಿರದ ಪ್ರಯತ್ನದಂತಿದೆ ಮತ್ತು ಮೂರು ಪ್ರಯೋಗಗಳ ಪುಷ್ಪಗುಚ್ಛದಂತಿದೆ. ಈ ಪ್ರಯೋಗ ಅಥವಾ ಮಿಷನ್ ಮೂಲಕ ನಾವು ಪರೀಕ್ಷಿಸಲು ಬಯಸಿದ್ದ ಎಲ್ಲಾ ಮೂರು ಸಿಸ್ಟಮ್‌ಗಳ ಗುಣಲಕ್ಷಣಗಳನ್ನು ನಾವೀಗ ನೋಡಿದ್ದೇವೆ. ಪರೀಕ್ಷಾ ವಾಹನ, ಸಿಬ್ಬಂದಿ ಎಸ್ಕೇಪ್​ ಸಿಸ್ಟಮ್​ ಮತ್ತು ಕ್ರ್ಯೂ ಮಾಡ್ಯೂಲ್​ ಎಲ್ಲವೂ ಮೊದಲ ಯತ್ನದಲ್ಲೇ ಪರಿಪೂರ್ಣವಾಗಿ ಕಾರ್ಯನಿರ್ವಹಿಸಿವೆ ಎಂದು ಸೋಮನಾಥನ್​ ಖುಷಿ ವ್ಯಕ್ತಪಡಿಸಿದರು.

    ಅಂದಹಾಗೆ ಈ ಮಹತ್ವಾಕಾಂಕ್ಷೆಯ ಗಗನಯಾನವು 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮತ್ತು 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನತ್ತ ಕಳುಹಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಪೂರೈಸುವ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

    ನೌಕೆ ಉಡಾವಣೆ ಪರೀಕ್ಷೆ ನಡೆದಿದ್ದೇಗೆ?: ಶನಿವಾರ ಬೆಳಗ್ಗೆ ಸತೀಶ್‌ ಧವನ್‌ ಉಡಾವಣಾ ಕೇಂದ್ರದಲ್ಲಿರುವ ಒಂದನೇ ಲಾಂಚ್‌ ಪ್ಯಾಡ್‌ನಿಂದ ಈ ಪರೀಕ್ಷೆಗಾಗಿಯೇ ತಯಾರಿಸಲಾಗಿರುವ ರಾಕೆಟ್‌, ಗಗನಯಾನ ನೌಕೆಯ ಮಾಡೆಲನ್ನು ಹೊತ್ತು ಉಡಾವಣೆಯಾಗಿದೆ. 1 ನಿಮಿಷದ ಬಳಿಕ 11.7 ಕಿ.ಮೀ. ಎತ್ತರಕ್ಕೆ ಸಾಗುವ ರಾಕೆಟ್‌ ನೌಕೆಯಿಂದ ಬೇರ್ಪಟ್ಟಿದೆ. ಒಂದೂವರೆ ನಿಮಿಷಕ್ಕೆ 16 ಕಿ.ಮೀ. ಎತ್ತರಕ್ಕೆ ತಲುಪುವ ಗಗನಯಾನ ಕ್ರ್ಯೂ ಮಾಡ್ಯೂಲ್‌ ಇದಾದ ಬಳಿಕ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬೂಸ್ಟರ್‌ನಿಂದಲೂ ಬೇರ್ಪಟ್ಟು ಭೂಮಿಯತ್ತ ಬೀಳಲು ಆರಂಭಿಸುತ್ತದೆ.

    ಈ ಹಂತದಲ್ಲಿ ಗಗನಯಾನ ನೌಕೆ ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ಇರುವ ಉಪಕರಣ ಎರಡೂ ಪ್ರತ್ಯೇಕಗೊಂಡು ಸಮುದ್ರದತ್ತ ಧಾವಿಸಿದೆ. ಹೀಗೆ ರಾಕೆಟ್‌ನಿಂದ ಬೇರ್ಪಟ್ಟ 5 ಸೆಕೆಂಡ್‌ ಬಳಿಕ ನೌಕೆಯಲ್ಲಿರುವ ಪ್ಯಾರಾಚೂಟ್‌ ಬಿಚ್ಚಿಕೊಂಡಿದ್ದು, ನೌಕೆಯ ವೇಗವನ್ನು ನಿಯಂತ್ರಿಸಿ ಭೂಮಿಯತ್ತ ತರಲಿದೆ. 3 ನಿಮಿಷಗಳ ಕಾಲ ಈ ಪ್ಯಾರಾಚೂಟ್‌ನ ಸಹಾಯದಿಂದ ನೌಕೆ ಇಳಿದಿದೆ. ಬಳಿಕ ಮತ್ತೊಂದು ಶಕ್ತಿಶಾಲಿ ಪ್ಯಾರಾಚೂಟ್‌ ತೆರೆದುಕೊಂಡಿದ್ದು, ನೌಕೆಯನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಇಳಿದಿದೆ.

    ಈ ಪರೀಕ್ಷೆ ಕೇವಲ 9 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ಉಡ್ಡಯನ ಸ್ಥಳದಿಂದ 10 ಕಿ.ಮೀ ದೂರದ ಬಂಗಾಳಕೊಲ್ಲಿಯಿಂದ ನೌಕೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪರೀಕ್ಷೆಯನ್ನು ನಡೆಸುವುದಕ್ಕೂ ಮೊದಲೇ ಇಸ್ರೋ, ನೌಕೆಯನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಜೊತೆಗೆ ಎಂಜಿನ್‌, ಪ್ಯಾರಾಚೂಟ್‌ ಮತ್ತು ನೌಕೆಯ ವಶ ಎಲ್ಲದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕೊನೆಯದಾಗಿ ಈ ಮಾನವ ರಹಿತ ಗಗನಯಾನದ ಪರೀಕ್ಷೆ ನಡೆಸಲಾಗಿದೆ. (ಏಜೆನ್ಸೀಸ್​)

    ಭಗವಂತ ಕೇಸರಿ’ ಚಿತ್ರದ 2ದಿನದ ಕಲೆಕ್ಷನ್‌ 27ಕೋಟಿ ರೂ.: ಬಾಲಕೃಷ್ಣ ಸಂಭಾವನೆ ಎಷ್ಟು?

    ಕಡಲತೀರಕ್ಕೆ ತೇಲಿಬಂದ ಮತ್ಸ್ಯಕನ್ಯೆ ಆಕಾರದ ನಿಗೂಢ ಜೀವಿ! ವಿಜ್ಞಾನಿಗಳ ನಡುವೆ ಹೆಚ್ಚಿದ ಕುತೂಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts