More

    ಇರುಳಿಗರಿಗೆ ಸ್ಪಂದಿಸದ ಜಿಲ್ಲಾಡಳಿತ ; 202 ದಿನ ಪೂರೈಸಿದ ಪ್ರತಿಭಟನೆ

    ಕೈಲಾಂಚ: ಒಕ್ಕಲೆಬ್ಬಿಸಿದ ಜಾಗದಲ್ಲೇ ಭೂಮಿ ನೀಡಬೇಕು ಎಂದು ಒತ್ತಾಯಿಸಿ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯ ನಡೆಸುತ್ತಿರುವ ಧರಣಿ ಭಾನುವಾರ 202 ದಿನ ಪೂರೈಸಿದೆಯಾದರೂ ಜಿಲ್ಲಾಡಳಿತ ಮಾತ್ರ ಸಮುದಾಯದ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದೆ.

    24 ಕುಟುಂಬಗಳು ಅರಣ್ಯದಲ್ಲೇ ಟೆಂಟ್ ಹಾಕಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿವೆ. 8 ವರ್ಷಗಳಿಂದ 2006ರ ಅರಣ್ಯಭೂಮಿ ಹಕ್ಕು ಕಾಯ್ದೆ ಅಡಿ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ರಾಮನಗರ ಜಿಲ್ಲಾಡಳಿತ ಜನಾಂಗದ ಮನವಿಗೆ ಸ್ಪಂದಿಸಲು ವಿಲವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮುಂದುವರಿಸಲು ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ.

    1980ರ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಬೇರೆ ಕಡೆ ಭೂಮಿ ನೀಡಿ ಸ್ಥಳಾಂತರಿಸಬೇಕೆಂಬ ಆದೇಶವಿದೆ. ಅರಣ್ಯ ಇಲಾಖೆ ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬ್ಬಿಸಿತ್ತು. ನಂತರ 2008ರಲ್ಲಿ 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯ ಸೆಕ್ಷನ್ 3 (1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿ ಒಳಗೊಂಡಂತೆ ಪುನರ್ವಸತಿ ಕಲ್ಪಿಸಲು ಅವಕಾಶವಿದೆ.

    ವಿಶೇಷ ಗ್ರಾಮಸಭೆಯಲ್ಲಿ ಆಯ್ಕೆಯಾದರೂ, 2019ರ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಭೂಮಿ ನೀಡುವ ಅವಕಾಶವಿದ್ದರೂ, ಅರಣ್ಯ ಇಲಾಖೆ ಆದೇಶಕ್ಕೆ ಮನ್ನಣೆ ನೀಡುತ್ತಿಲ್ಲ. ಹಿಂದೆ ಅರಣ್ಯ ಜಮೀನು ಮಾಡುತ್ತಿದ್ದ ಜಾಗದಲ್ಲಿ ಜಮೀನಿನ ಬದು, ಒರಳುಕಲ್ಲು, ಪೂಜಾ ಸ್ಥಳ 1993-94ರಲ್ಲಿ ರಾಮನಗರ ತಹಸೀಲ್ದಾರ್ ಕಚೇರಿಯ ಹಿಂಬರಹ ಹಾಗೂ ಸ್ಮಶಾನ ಮುಂತಾದ ಸಾಕ್ಷ್ಯಗಳಿದ್ದರೂ ರಾಮನಗರ ವಲಯ ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪದೆ ಕಾನೂನುಬಾಹಿರ ಹಿಂಬರಹ ನೀಡಿದ್ದಾರೆ.

    ರಾಮನಗರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸಲಾಗಿತ್ತು, ಹಲವಾರು ಸಭೆ, ಸ್ಥಳ ಪರಿಶೀಲನೆ ನಂತರ ದಿನಾಂಕ 2021ರ ಜುಲೈ 17ರಂದು ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅರಣ್ಯ ಭೂಮಿ ಮಂಜೂರು ಮಾಡಲು ತೀರ್ಮಾನಕ್ಕೆ ಬರಲಾಯಿತು. ಅರಣ್ಯ ಇಲಾಖೆ ಎಸಿಎಫ್ ಮತ್ತೆ ಸ್ಥಳದಲ್ಲಿ ಪರಿಶೀಲಿಸಿ ಸಹಿ ಮಾಡುವುದಾಗಿ ಹೇಳಿ ಅರಣ್ಯ ಇಲಾಖೆ ಹಳೆಯ ಚಾಳಿ ಮುಂದುವರಿಸಿದೆ. ಬುಡಕಟ್ಟು ಜನಾಂಗದ ಹಕ್ಕು ಕಾಯಲು ಜಿಲ್ಲಾಡಳಿತ ವಿಫಲವಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮುಂದುವರಿಸಲು ಹಾಗೂ ಕಾಯ್ದೆ ವಿರುದ್ಧ ಹೇಳಿಕೆ, ಅಧಿಕಾರಿಗಳ ವಿರುದ್ಧ ವಂಚನೆ ಹಾಗೂ ಕ್ಷುಲ್ಲಕ ಸುಳ್ಳು ಮಾಹಿತಿ ನೀಡಿ ಹಕ್ಕು ತಪ್ಪಿಸಲು ಸಂಚು ರೂಪಿಸಿದ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ಇರುಳಿಗ ಸಮಾಜದ ಮುಖಂಡ ಕೃಷ್ಣಮೂರ್ತಿ.
    ಲಕ್ಷ್ಮಮ್ಮ, ದೇವಯ್ಯ, ನವಣಯ್ಯ, ಈರಮ್ಮ, ಮಹದೇವಮ್ಮ, ಜೆ.ಎನ್. ಶಿವರಾಜು, ಶಿವವಾದಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts