More

    ಸಂಕಷ್ಟ ಕಾಲಕ್ಕಿಲ್ಲ ನಿರ್ವಹಣೆ ಸೂತ್ರ: ನೀರಿನ ಸಂರಕ್ಷಣೆಗೆ ನೀರಾವರಿ ತಜ್ಞರು ಕೊಟ್ಟರು ಅಮೂಲ್ಯ ಸಲಹೆ

    ಮಂಡ್ಯ: ಕಾವೇರಿ ಕಣಿವೆಯಲ್ಲಿ ಅತಿವೃಷ್ಟಿಯಾದಾಗ ಸಿಗುವ ಹೆಚ್ಚುವರಿ ನೀರು ಬಳಸಿಕೊಳ್ಳಲು ಹಾಗೂ ಸಂಕಷ್ಟ ಕಾಲದಲ್ಲಿ ನೀರು ನಿರ್ವಹಣೆ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ನಿವೃತ್ತ ಇಂಜಿನಿಯರ್, ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಅಭಿಪ್ರಾಯಪಟ್ಟರು.
    ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಚ್ಚುವರಿ ನೀರು ಬಳಕೆ ವಿಚಾರದಲ್ಲಿ ಕರ್ನಾಟಕ ಅರ್ಜಿ ಸಲ್ಲಿಸಲು ಮುಂದಾಗಿತ್ತು. ಅಷ್ಟರಲ್ಲಿ ಕಾವೇರಿ ನ್ಯಾಯಾಧಿಕರಣ ರದ್ದಾಗಿದ್ದರಿಂದ ಈ ವಿಚಾರದಲ್ಲಿ ಪರಿಹಾರ ದೊರಕಲಿಲ್ಲ. ಅದೇ ರೀತಿ ಸಂಕಷ್ಟ ಎದುರಾದ ಸನ್ನಿವೇಶದಲ್ಲಿ ನೀರು ನಿರ್ವಹಣೆ ಕುರಿತು ಯಾವುದೇ ಆದೇಶ ಇಲ್ಲದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವವಾಗುತ್ತಿದೆ. ನ್ಯಾಯಾಧೀಕರಣದ ತೀರ್ಪಿನಲ್ಲಿ ಕೆಆರ್‌ಎಸ್ ಡ್ಯಾಂನಿಂದ 52 ಟಿಎಂಸಿ, ಕಬಿನಿಯಿಂದ 60 ಟಿಎಂಸಿ ಹಾಗೂ ಜಲಾಶಯ ಮುಂಭಾಗದ ಪ್ರದೇಶದಿಂದ ಮಳೆಯಾಶ್ರಿತ ನೀರು 80 ಟಿಎಂಸಿ ಬಿಡಬೇಕಾಗಿದೆ. ಮಳೆ ಕೊರತೆ ಯಾದಾಗಲೂ ಜಲಾಶಯಗಳಿಂದ ನೀರು ಬಿಡಿ ಎಂದು ತಮಿಳುನಾಡು ಒತ್ತಡ ಹಾಕುತ್ತಿದೆ ಎಂದು ಹೇಳಿದರು.
    ನ್ಯಾಯಾಧೀಕರಣದ ತೀರ್ಪಿನಲ್ಲಿ ಕರ್ನಾಟಕ ಎಷ್ಟು ಪ್ರದೇಶದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು ಎಂದು ನಿಗದಿ ಮಾಡಿದ್ದು, ಕುಡಿಯುವ ನೀರಿಗೂ ಹಂಚಿಕೆ ಮಾಡಲಾಗಿದೆ. ಸಂಕಷ್ಟ ಸಮಯದಲ್ಲಿ ಕರ್ನಾಟಕ ಇದರ ಜವಾಬ್ದಾರಿ ನಿರ್ವಹಣೆ ಮಾಡಬೇಕಲ್ಲವೇ?. ಅದೇ ರೀತಿ ಅಂತರ್ಜಲದ 10 ಟಿಎಂಸಿ ನೀರನ್ನು ತಮಿಳುನಾಡು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಇದನ್ನು ಜೂನ್, ಜುಲೈ ತಿಂಗಳಿನಲ್ಲಿ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರೆ ಸಮಸ್ಯೆ ಎದುರಾಗುವುದಿಲ್ಲ. ಜತೆಗೆ ಹಿಂಗಾರು ಮಳೆ ನೀರು ಸಂಗ್ರಹಕ್ಕೆ ಯಾವುದೇ ಯೋಜನೆ ರೂಪಿಸದೆ ಕರ್ನಾಟಕದ ಮೇಲೆ ಒತ್ತಡ ಹಾಕುವ ಬಗ್ಗೆ ನೀರು ಬಿಡಿ ಎಂದು ಆದೇಶ ಮಾಡುವವರನ್ನು ಪ್ರಶ್ನಿಸಬೇಕಾಗಿದೆ ಎಂದು ತಿಳಿಸಿದರು.
    ಹೆಚ್ಚುವರಿ ನೀರು ಬಳಕೆಗೆ ಅವಕಾಶ ಸಿಕ್ಕಿದ್ದರೆ ಮೇಕೆದಾಟು ಯೋಜನೆ ಸಾಕಾರಗೊಳ್ಳುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಒಪ್ಪಿಗೆಯಾಗಿರುವ ಯೋಜನೆಗೆ ತಮಿಳುನಾಡು ಸ್ವಾರ್ಥದಿಂದ ಅಡ್ಡಗಾಲಾಗುತ್ತಿದೆ. ಕಾವೇರಿ ಕೊಳ್ಳ ಪ್ರದೇಶದ ಜಲಾಶಯಗಳ ಹೆಚ್ಚುವರಿ ನೀರು ತ.ನಾಡಿಗೆ ಹರಿದು ಹೋಗುತ್ತಿದ್ದು, ಆ ನೀರು ಸಮುದ್ರಕ್ಕೆ ಹರಿದು ಫೋಲಾಗದಂತೆ ತಡೆಯಲು ಕಟ್ಟಿವೈ, ಗುಂಡಾಲ್ ಹಾಗೂ ವೈಗೈ ನದಿಗೆ ಹರಿಸುವ ಯೋಜನೆಯನ್ನು ಆರಂಭಿಸಿದ್ದು, ಆ ಮೂಲಕ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ಮೇಕೆದಾಟು ಯೋಜನೆಗೆ ಅಡ್ಡಿ ಮಾಡುತ್ತಿದೆ ಎಂದು ವಿವರಿಸಿದ ಅವರು, ರಾಜ್ಯಸರ್ಕಾರ ಈ ವಿಚಾರದಲ್ಲಿ ಸೂಕ್ಷ್ಮತೆಯಿಂದ ಹೆಜ್ಜೆ ಇರಿಸಬೇಕಾಗಿದೆ. 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಅನುಮತಿ ಸಿಗುವುದು ಕಷ್ಟವಾಗಬಹುದು. ಹಾಗಾಗಿ ಪರಿಸರಕ್ಕೆ ಹಾನಿಯಾಗದಂತೆ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
    ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಕೀಲರಿಗೆ ತಾಂತ್ರಿಕ ಪರಿಣಿತಿ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ವಕೀಲರಿಂದ ದೊಡ್ಡ ತಪ್ಪಾಗಿದೆ. ಅದೇ ರೀತಿ ರಾಜ್ಯ ಸರ್ಕಾರವು ತಪ್ಪು ಹೆಜ್ಜೆ ಇಡುತ್ತಿದೆ. ನ್ಯಾಯಾಧಿಕರಣದ ತೀರ್ಪಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕೆಂಬ ಷರತ್ತು ಇದೆ. ಆದರೆ ಏಳು ಸಕ್ಕರೆ ಕಾರ್ಖಾನೆ ಆರಂಭಿಸಿ ರೈತರನ್ನು ಕಬ್ಬು ಬೆಳೆಯಿರಿ ಎನ್ನುತ್ತಿದೆ. ಹಲವು ಪ್ರದೇಶದಲ್ಲಿ 15ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಇದಕ್ಕೆಲ್ಲ 15 ಟಿಎಂಸಿ ನೀರು ಬೇಕು. ಅದನ್ನು ಎಲ್ಲಿಂದ ತಂದುಕೊಡುತ್ತಾರೆ, ರೈತರ ಗತಿ ಏನು ಎಂದು ಪ್ರಶ್ನಿಸಿದ ಅವರು, ಕೇರಳದ ಜತೆ ಮಾತುಕತೆ ನಡೆಸಿ ಕುಂಗನಹಳ್ಳಿ ಸಮೀಪ ಸೇತುವೆ ಇರುವ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಾಣ ಮಾಡಿದರೆ 10 ಟಿಎಂಸಿ ನೀರು ಸಿಗಲಿದೆ. ಅಂತರ್ಜಲ ಬಳಕೆ ಜತೆಗೆ ರೈತರು ಬೇಸಾಯಕ್ಕೆ ಕಡಿಮೆ ನೀರು ಬಳಸುವ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ನಾಲೆಯ ನೀರು ರಾತ್ರಿ ವೇಳೆ ಫೋಲಾಗುತ್ತಿದೆ. ಆದ್ದರಿಂದ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಾಲೆಗಳಲ್ಲಿ ನೀರು ಸಂಗ್ರಹವಾಗುವಂತೆ ತಡೆತೂಬು ನಿರ್ಮಿಸಬೇಕು. ಹೀಗೆ ಮಾಡಿದರೆ ನೂರಾರು ಟಿಎಂಸಿ ಉಳಿದು ನೀರು ಸದ್ಬಳಕೆಯಾಗಲಿದೆ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts