More

    ಗುರುವಿನ ಸತ್ಯಾಗ್ರಹಕ್ಕೆ ಸಾಥ್ ನೀಡಲು ಮೈಸೂರಿಗೆ ಬಂದಿದ್ದ ಇರ್ಫಾನ್‌ ಖಾನ್

    ಮೈಸೂರು: ಅನಾರೋಗ್ಯದಿಂದ ಬುಧವಾರ ನಿಧನರಾದ ಖ್ಯಾತ ಬಾಲಿವುಡ್ ನಟ ಇರ್ಫಾನ್‌ಖಾನ್ ಅವರಿಗೆ ಮೈಸೂರಿನ ನಂಟಿತ್ತು. ತಮ್ಮ ನಟನೆಯ ಗುರುಗಳು ನಡೆಸಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಗುರುಕಾಣಿಕೆ ಸಮರ್ಪಿಸಿದ್ದ ಅವರು, ರಂಗಾಯಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.

    ರಂಗಕರ್ಮಿ ಪ್ರಸನ್ನ ಅವರೇ ಇರ್ಫಾನ್‌ಖಾನ್ ಅವರ ಗುರುಗಳು. ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ನಗರಗಳತ್ತ ಗಮನಹರಿಸಿ ಹಳ್ಳಿಯ ಸೊಗಡನ್ನೇ ಸೊರಗುವಂತೆ ಮಾಡಿವೆ. ಹಳ್ಳಿಗರಿಗೆ ಸುಸ್ಥಿರ ಬದುಕು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯಂತ್ರ ನಾಗರಿಕತೆ ನಿಗ್ರಹಿಸೋಣ, ಶ್ರಮಸಹಿತ ಬದುಕನ್ನು ಪೋಷಿಸೋಣ ಎಂಬ ಉದ್ದೇಶದೊಂದಿಗೆ 2015ರ ಏಪ್ರಿಲ್‌ನಲ್ಲಿ ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ಹಾಗೂ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು. ಇದಕ್ಕೆ ಪ್ರಸನ್ನ ಅವರು, ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು.

    1925ರಲ್ಲಿ ಗಾಂಧಿವಾದಿ ತಗಡೂರು ರಾಮಚಂದ್ರರಾಯರು ನಿರ್ಮಿಸಿದ್ದ ಈ ಕೇಂದ್ರಕ್ಕೆ 1932ರಲ್ಲಿ ಮಹಾತ್ಮ ಗಾಂಧಿ ಅವರು ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದ್ದರು.

    ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಸಂಸ್ಥೆಯಲ್ಲಿ ಅಭಿನಯದ ಪಾಠ ಹೇಳಿಕೊಟ್ಟಿದ್ದ ತನ್ನ ನಟನೆಯ ಗುರು ಗಳಾದ ಪ್ರಸನ್ನ ಅವರು ಮಾಡುತ್ತಿರುವ ಹೋರಾಟದ ಬಗ್ಗೆ ತಿಳಿದ ಇರ್ಫಾನ್‌ಖಾನ್ ಅವರು ತಮ್ಮ ಪತ್ನಿ ಸುತಪ ಸಿಕ್ಲರ್ ಅವರೊಂದಿಗೆ 2015ರ ಏಪ್ರಿಲ್ 10ರಂದು ಬದನವಾಳು ಗ್ರಾಮಕ್ಕೆ ಬಂದು ಒಂದು ದಿನ ಉಳಿದು ಹೋರಾಟಕ್ಕೆ ಬೆಂಬಲ ನೀಡಿದ್ದರು.

    ವಿಶಿಷ್ಟ ನಟನೆಯ ಮೂಲಕ ಬಾಲಿವುಡ್‌ನಲ್ಲಿ ಬಹು ದೊಡ್ಡ ಎತ್ತರಕ್ಕೆ ಏರಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಸಾಮಾನ್ಯರಂತೆಯೇ ಇರ್ಫಾನ್ ನಡೆದುಕೊಂಡಿದ್ದರು. ತಮ್ಮ ಹೋರಾಟ ಬೆಂಬಲಿಸಿ ಬಂದ ಶಿಷ್ಯನನ್ನು ಸ್ವಾಗತಿಸಿದ ಪ್ರಸನ್ನ ಅವರು, ಅಂಗಳ ಕಟ್ಟೆಯ ಮೇಲೆ ಚಾಪೆ ಹಾಸಿ ಅವರನ್ನು ಕೂರಿಸಿದ್ದರು.

    ಪಾಳು ಬಿದ್ದು, ಬೀಳುವ ಸ್ಥಿತಿಯಲ್ಲಿದ್ದ ಕಟ್ಟಡದಲ್ಲಿಯೇ ಸ್ವಲ್ಪ ಸಮಯ ಚಾಪೆಯ ಮೇಲೆ ಕುಳಿತು ವಿಶ್ರಾಂತಿ ಪಡೆದ ಇರ್ಫಾನ್, ಸೌದೆ ಒಲೆಯಲ್ಲಿ ತಯಾರಿಸಿದ ಊಟ ಸವಿದರು. ಆನಂತರ ಬಯಲಿನ ಕಟ್ಟೆಯ ಮೇಲೆ ಸೊಳ್ಳೆ ಪರದೆ ಕಟ್ಟಿಕೊಂಡು ಚಾಪೆಯ ಮೇಲೆ ಅಂದು ರಾತ್ರಿ ನಿದ್ದೆ ಮಾಡಿದ್ದರು.

    ಬೆಳಗ್ಗೆ ಎದ್ದು ಹೆಂಡತಿಯೊಂದಿಗೆ ಗ್ರಾಮದ ಸುತ್ತ ಒಂದು ವಿಹಾರ ಮಾಡಿ ಬಯಲಿನಲ್ಲಿಯೇ ಸ್ನಾನ ನಿತ್ಯಕರ್ಮ ಮುಗಿಸಿದ್ದರು. ಪ್ರಸನ್ನ ಅವರು ಸೌದೆ ಒಲೆಯಲ್ಲಿ ತಯಾರಿಸಿದ್ದ ರಾಗಿ ಅಂಬಲಿ ಹಾಗೂ ಬೆಲ್ಲದ ಟೀ ಸವಿದು ಪ್ರಸನ್ನ ಮತ್ತು ತಂಡದವರೊಂದಿಗೆ ಹಲವು ಹೊತ್ತು ಚರ್ಚೆ ನಡೆಸಿ ಮಧ್ಯಾಹ್ನದವರೆಗೂ ಇದ್ದು ಬೆಂಬಲ ಸೂಚಿಸಿ ಬಂದಿದ್ದರು.

    ಬಳಿಕ ತನ್ನ ನಟನೆಯ ಗೆಳೆಯ ಜನಾರ್ದನ (ಜನ್ನಿ) ಅವರ ಆಹ್ವಾನದ ಮೇರೆಗೆ ಇರ್ಫಾನ್ ಖಾನ್ ಅವರು ಪತ್ನಿಯೊಂದಿಗೆ ರಂಗಾಯಣಕ್ಕೆ ಭೇಟಿ ನೀಡಿ ಕೆಲಕಾಲ ಕಳೆದಿದ್ದರು. ರಂಗಾಯಣದ ಎಲ್ಲ ವಿಭಾಗಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ಆಗ ನಡೆಯುತ್ತಿದ್ದ ಚಿಣ್ಣರ ಮೇಳದಲ್ಲಿ ಮಕ್ಕಳೊಂದಿಗೆ ಬೆರೆತು ಅವರು ಕೇಳಿದ ಪ್ರಶ್ನೆಗಳಿಗೆ ನಸುನಗುತ್ತಲೇ ಉತ್ತರ ನೀಡಿ ಖುಷಿಪಟ್ಟಿದ್ದರು.

    ರಂಗಾಯಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, 2016ರಲ್ಲಿ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮೈಸೂರು ಪ್ರೀತಿ ವ್ಯಕ್ತಪಡಿಸಿದ್ದರು.

    ಐದು ವರ್ಷದ ಹಿಂದೆ ಕನ್ನಡದಲ್ಲಿ ನಟಿಸಬೇಕಿತ್ತು ಇರ್ಫಾನ್ … ನಾಗತಿಹಳ್ಳಿ ಚಂದ್ರಶೇಖರ್ ಬಿಚ್ಚಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts