More

    ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಟೀಮ್​ ಇಂಡಿಯಾ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ವಿದಾಯ: ದಿಗ್ಗಜರಿಂದ ಶುಭಹಾರೈಕೆ

    ಮುಂಬೈ: ಟೀಮ್​ ಇಂಡಿಯಾದ ಆಲ್​ರೌಂಡರ್​ ಆಟಗಾರ ಇರ್ಫಾನ್​ ಪಠಾಣ್(35)​ ಅವರು ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವ ಮೂಲಕ ಸುದೀರ್ಘ ಕ್ರಿಕೆಟ್​ ಜರ್ನಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಇರ್ಫಾನ್​ ವಿದಾಯ ಅಚ್ಚರಿಯೇನಲ್ಲ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದ ಬಳಿಕ ಮತ್ತೆ ತಂಡವನ್ನು ಸೇರಿಕೊಳ್ಳಲೇ ಇಲ್ಲ. ಅದಕ್ಕೆ ಕಾರಣ ತಂಡದಲ್ಲಾದ ಹಲವು ಬದಲಾವಣೆಗಳು ಎನ್ನಬಹುದಾಗಿದೆ. ಯುವರಾಜ್​ ವಿದಾಯವು ಇದಕ್ಕೆ ಹೊರತಾಗಿಲ್ಲ.

    ಅಂದಹಾಗೆ ಪಠಾಣ್​ 2019ರ ಫೆಬ್ರವರಿ ತಿಂಗಳಲ್ಲಿ ನಡೆದ ಸೈಯದ್​ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಆಡಿದ್ದೇ ಕೊನೆಯ ಪಂದ್ಯವಾಗಿದೆ. ಇನ್ನುಳಿದಂತೆ ಕಳೆದ ತಿಂಗಳು ನಡೆದ 2020ನೇ ಸಾಲಿನ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲೂ ಪಠಾಣ್​ ಬಿಕರಿಯಾಗದೇ ಉಳಿದಿದ್ದಾರೆ. ಹೀಗಾಗಿ ವಿದಾಯಕ್ಕೆ ಇದು ಸೂಕ್ತ ಸಮಯವೆಂದು ಭಾವಿಸಿ ಪಠಾಣ್​ ಕ್ರಿಕೆಟ್​ ಗುಡ್​ಬೈ ಹೇಳಿದ್ದಾರೆ.

    ಪಠಾಣ್​ 2003ರಲ್ಲಿ ಅಡಿಲೇಡ್​ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಟೀಮ್​ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿದರು. ತಮ್ಮ ಸ್ವಿಂಗ್​ ಬಾಲ್​ ಸಾಮರ್ಥ್ಯದಿಂದಲೇ ಪಠಾಣ್​ ಬಹುಬೇಗನೇ ಯಶಸ್ಸು ಗಳಿಸಿದರು. ಪ್ರಾರಂಭದಲ್ಲಿ ಎಡಗೈ ಬೌಲರ್​ ಆಗಿ ಬಂದ ಪಠಾಣ್​ ಬಳಿಕ ಆಲ್​ರೌಂಡರ್​ ಆಗಿ ಬದಲಾಗಿದ್ದು, ತುಂಬಾ ವಿಶೇಷವೇ ಸರಿ. ಅಲ್ಲದೆ, ಕ್ರಿಕೆಟ್​ ದಿಗ್ಗಜ ಕಪಿಲ್​ ದೇವ್​ರೊಂದಿಗೆ ಪಠಾಣ್​ ಹೋಲಿಕೆ ಮಾಡುವಷ್ಟರ ಮಟ್ಟಿಗೆ ಬೆಳೆದರು.

    ಟೀಮ್​ ಇಂಡಿಯಾ ಪರ 29 ಟೆಸ್ಟ್​ ಪಂದ್ಯಗಳನ್ನಾಡಿರುವ ಪಠಾಣ್​ 1105 ರನ್​ ನೀಡಿ 100 ವಿಕೆಟ್​ ಕಬಳಿಸಿದ್ದಾರೆ. 120 ಏಕದಿನ ಪಂದ್ಯಗಳಲ್ಲಿ 1544 ರನ್​ಗೆ 173 ವಿಕೆಟ್ ಮತ್ತು 24 ಟಿ20 ಪಂದ್ಯಗಳಲ್ಲಿ 172 ರನ್​ಗೆ 28 ವಿಕೆಟ್​​ ಉರುಳಿಸಿದ್ದಾರೆ.

    ಟೀಮ್​ ಇಂಡಿಯಾದ 2007ರ ಟಿ20 ವಿಶ್ವಕಪ್ ಗೆಲುವಿನಲ್ಲೂ ಪಠಾಣ್​ ಭಾಗಿಯಾಗಿದ್ದರು.​ ಪಾಕ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಪಠಾಣ್​ ಭಾಜನರಾಗಿದ್ದರು.

    ಇರ್ಫಾನ್​ಗೆ ಶುಭಕೋರಿದ ಕ್ರಿಕೆಟ್​ ದಿಗ್ಗಜರು
    ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇರ್ಫಾನ್​ ಪಠಾಣ್​ಗೆ ಹರ್ಭಜನ್​ ಸಿಂಗ್​, ಗೌತಮ್​ ಗಂಭೀರ್​, ಮಹಮ್ಮದ್​ ಕೈಫ್​ ಸೇರಿದಂತೆ ಅನೇಕ ಕ್ರಿಕೆಟ್​ ದಿಗ್ಗಜರು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts