More

    ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಜಯ; ರಶೀದ್​ ಖಾನ್ ಜತೆ ಮಸ್ತ್​ ಸ್ಟೆಪ್ಸ್​ ಹಾಕಿದ ಇರ್ಫಾನ್ ಪಠಾಣ್

    ಚೆನ್ನೈ: ಇಲ್ಲಿನ ಚೆಪಾಕ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯಗಳಿಸುವ ಮೂಲಕ ಪಾಕ್​ ವಿರುದ್ಧ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

    ಇನ್ನು ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ವಿರುದ್ಧ ಗೆದ್ದ ಬೆನ್ನಲ್ಲೇ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು, ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್​ರೌಂಡರ್, ವೀಕ್ಷಕ ವಿವರಣೆಗಾರ ಇರ್ಫಾನ್​ ಪಠಾಣ್​ ಅಫ್ಘಾನಿಸ್ತಾನದ ಜಯವನ್ನು ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಅಫ್ಘಾನಿಸ್ತಾನ ತಂಡದ ಸ್ಪಿನ್ನರ್​ ರಶೀದ್​ ಖಾನ್​ ಜತೆ ಮೈದಾನದಲ್ಲೇ ಹೆಜ್ಜೆ ಹಾಕಿದ್ದು, ತಂಡದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ರಶೀದ್​ ಖಾನ್ ಅವರ ಮಾತನ್ನು ಉಳಿಸಿಕೊಂಡರು ನಾನು ನನ್ನ ಮಾತಿನ ಪ್ರಕಾರ ನಡೆದುಕೊಂಡೆ ಎಂದು ವಿಡಿಯೋಗೆ ಅಡಿಬರಹ ನೀಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ.

    ಬಾಬರ್ ಪಡೆಗೆ ಹ್ಯಾಟ್ರಿಕ್ ಮುಖಭಂಗ

    ಸೋಮವಾರ ಚೆನ್ನೈನ ಚೆಪಾಕ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು 8 ವಿಕೆಟ್​ಗಳ ಭರ್ಜರಿ ಜಯಗಳಿಸಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ನಅಯಕ ಬಾಬರ್ ಅಜಂ (74 ರನ್, 92 ಎಸೆತ, 4 ಬೌಂಡರಿ, 1 ಸಿಕ್ಸರ್), ಅಬ್ದುಲ್ಲ ಶಫಿಕ್​ (58 ರನ್, 75 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 282ರನ್​ ಗಳಿಸಿತ್ತು.

    283ರನ್​ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡವು ಆರಂಭಿಕರಾದ ಇಬ್ರಾಹಿಂ ಜರ್ದಾನ್ (85 ರನ್, 113 ಎಸೆತ, 10 ಬೌಂಡರಿ), ರೆಹಮಾನುಲ್ಲಾ ಗುರ್ಬಾಜ್ (65 ರನ್, 53 ಎಸೆತ, 9 ಬೌಂಡರಿ, 1 ಸಿಕ್ಸರ್), ರಹಮತ್​ ಷಾ (77 ರನ್, 84 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ವಿಶ್ವಕಪ್​ನಲ್ಲಿ ಬಾಬರ್​ ಪಡೆಗೆ ಹ್ಯಾಟ್ರಿಕ್ ಮುಖಭಂಗವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts