More

    ಮುಂಬೈಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಿದ ಕಮ್ಮಿನ್ಸ್ ; ಕೆಕೆಆರ್ ತಂಡಕ್ಕೆ 5 ವಿಕೆಟ್ ಜಯ

    ಪುಣೆ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಸವಾರಿ ನಡೆಸಿದ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-15ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಟೂರ್ನಿಯಲ್ಲಿ ಗೆಲುವಿಗಾಗಿ ಪರದಾಟ ಮುಂದುವರಿಸಿರುವ 5 ಬಾರಿಯ ಚಾಂಪಿಯನ್ ಮುಂಬೈ ತಂಡ ಹ್ಯಾಟ್ರಿಕ್ ಸೋಲಿನ ರುಚಿ ಕಂಡಿತು. ಪ್ರಸಕ್ತ ಲೀಗ್‌ನಲ್ಲಿ ಮೊದಲ ಪಂದ್ಯವಾಡಿದ ಪ್ಯಾಟ್ ಕಮ್ಮಿನ್ಸ್ (56*ರನ್, 14 ಎಸೆತ, 4 ಬೌಂಡರಿ, 6 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಮೂಲಕ ಕೆಕೆಆರ್ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಮುಂಬೈ ತಂಡದ ಡೇನಿಯಲ್ ಸ್ಯಾಮ್ಸ್ ಎಸೆದ ಇನಿಂಗ್ಸ್‌ನ 16ನೇ ಓವರ್‌ನಲ್ಲಿ 4 ಸಿಕ್ಸರ್, 2 ಬೌಂಡರಿ (ನೋಬಾಲ್‌ಗೆ 2 ರನ್) ಒಳಗೊಂಡಂತೆ 35 ರನ್ ಸಿಡಿಸಿದ ಕಮ್ಮಿನ್ಸ್ ಇನ್ನೂ 4 ಓವರ್‌ಗಳು ಬಾಕಿ ಇರುವಂತೆಯೇ ಕೆಕೆಆರ್ ತಂಡವನ್ನು ಗೆಲ್ಲಿಸಿದರು.

    ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮುಂಬೈ ತಂಡ, ಗಾಯದಿಂದ ಚೇತರಿಸಿಕೊಂಡು ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್ (52ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ತಿಲಕ್ ವರ್ಮ (38*ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 161 ರನ್ ಗಳಿಸಿತು. ಪ್ಯಾಟ್ ಕಮ್ಮಿನ್ಸ್ ಎಸೆದ ಕಡೇ ಓವರ್‌ನಲ್ಲಿ 3 ಸಿಕ್ಸರ್ ಒಳಗೊಂಡ 23 ರನ್ ಕಲೆಹಾಕಿದ ಕೈರಾನ್ ಪೊಲ್ಲಾರ್ಡ್ (22*ರನ್, 5 ಎಸೆತ, 3 ಸಿಕ್ಸರ್) ಮೊತ್ತವನ್ನು 160ರ ಗಡಿ ದಾಟಿಸಿದರು. ಪ್ರತಿಯಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ (50*ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಕಮ್ಮಿನ್ಸ್ ಅಬ್ಬರದ ಫಲವಾಗಿ 16 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಮುಂಬೈ ಇಂಡಿಯನ್ಸ್: 4 ವಿಕೆಟ್‌ಗೆ 161 (ಸೂರ್ಯಕುಮಾರ್ ಯಾದವ್ 52, ತಿಲಕ್ ವರ್ಮ 38*, ಕೈರಾನ್ ಪೊಲ್ಲಾರ್ಡ್ 22*, ಬ್ರೆವಿಸ್ 29, ಪ್ಯಾಟ್ ಕಮ್ಮಿನ್ಸ್ 49ಕ್ಕೆ 2, ವರುಣ್ ಚಕ್ರವರ್ತಿ 32ಕ್ಕೆ 1), ಕೋಲ್ಕತ ನೈಟ್ ರೈಡರ್ಸ್‌: 16 ಓವರ್‌ಗಳಲ್ಲಿ 5 ವಿಕೆಟ್‌ಗೆ 162 (ಕಮ್ಮಿನ್ಸ್ 56*, ವೆಂಕಟೇಶ್ ಅಯ್ಯರ್ 50*, ಸ್ಯಾಮ್ ಬಿಲ್ಲಿಂಗ್ಸ್ 17, ಎಂ.ಅಶ್ವಿನ್ 25ಕ್ಕೆ 2, ತೈಮಲ್ ಮಿಲ್ಸ್ 38ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts