More

    ಇಂದು ಚೆನ್ನೈ ಸೂಪರ್‌ಕಿಂಗ್ಸ್‌ಗೆ ಪಂಜಾಬ್ ಕಿಂಗ್ಸ್ ಸವಾಲು ; ಗೆಲುವಿನ ಒತ್ತಡದಲ್ಲಿ ಉಭಯ ತಂಡಗಳು

    ಮುಂಬೈ: ಮುಂಬೈ ಇಂಡಿಯನ್ಸ್ ಎದುರು ಕಡೇ ಓವರ್‌ನಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಮಾಡಿದ ಚಮತ್ಕಾರದ ಮೂಲಕ ಗೆಲುವು ಕಂಡಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಅದೇ ಆತ್ಮಸ್ಥೈರ್ಯದೊಂದಿಗೆ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಮತ್ತೊಂದೆಡೆ, ಸಿಎಸ್‌ಕೆಗೆ ಹೋಲಿಸಿದರೆ ಪ್ಲೇಆಫ್ ಹಂತಕ್ಕೇರಲು ಹೆಚ್ಚಿನ ಅವಕಾಶ ಉಳಿಸಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡವೂ ಗೆಲುವಿನ ಹಂಬಲದಲ್ಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್-15ರ ಹಣಾಹಣಿ ಸಿಎಸ್‌ಕೆ ಹಾಗೂ ಪಂಜಾಬ್ ಪಾಲಿಗೆ ಮಹತ್ವ ಪಡೆದಿದೆ. ಟೂರ್ನಿಯಲ್ಲಿ ಇದುವರೆಗೆ ತಂಡದ ಸಂಯೋಜನೆಯೇ ಉಭಯ ತಂಡಗಳ ಪಾಲಿಗೆ ದೊಡ್ಡ ಸವಾಲಾಗುತ್ತಿದೆ.

    *ಸಿಎಸ್‌ಕೆಗೆ ಸೇಡಿನ ತವಕ
    ಮೊದಲ ಹಣಾಹಣಿಯಲ್ಲಿ ಪಂಜಾಬ್‌ಗೆ ಹೀನಾಯವಾಗಿ ಶರಣಾಗಿದ್ದ ಸಿಎಸ್‌ಕೆ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 2 ಜಯ ದಾಖಲಿಸಿರುವ ಸಿಎಸ್‌ಕೆ ಪ್ಲೇಆಫ್ ಹಂತಕ್ಕೇರಲು ಕೂದಲೆಳೆ ಅವಕಾಶವನ್ನು ಉಳಿಸಿಕೊಂಡಿದೆ. ಆರಂಭಿಕ ನಾಲ್ಕು ಸೋಲಿನ ಬಳಿಕ ಗೆಲುವು ಕಂಡಿದ್ದ ಸಿಎಸ್‌ಕೆ ತಂಡಕ್ಕೆ ವೇಗಿ ದೀಪಕ್ ಚಹರ್ ಅಲಭ್ಯತೆಯೇ ದೊಡ್ಡ ಹಿನ್ನಡೆಯಾಗಿದೆ. ಬಳಿಕ ಟೂರ್ನಿ ಮಧ್ಯದಲ್ಲಿಯೇ ಆಡಂ ಮಿಲ್ನೆ ಕೂಡ ಹೊರಬಿದ್ದರು. ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಆರಂಭಿಕರಾಗಿ ವಿಫಲರಾದರೆ, ಅನುಭವಿ ರಾಬಿನ್ ಉತ್ತಪ್ಪ ಅಸ್ಥಿರ ನಿರ್ವಹಣೆ ಮುಂದುವರಿದಿದೆ. ಮೊಯಿನ್ ಅಲಿ, ಶಿವಂ ದುಬೆ ಅವರಂಥ ಆಲ್ರೌಂಡರ್‌ಗಳು ಜವಾಬ್ದಾರಿಯುತ ನಿರ್ವಹಣೆ ತೋರಬೇಕಿದೆ.

    *ಒತ್ತಡದಲ್ಲಿ ಪಂಜಾಬ್ ಕಿಂಗ್ಸ್
    ಪಂಜಾಬ್ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದು, ತಂಡದ ಪಾಲಿಗೆ ಗೆಲುವೊಂದೇ ಮಂತ್ರವಾಗಿದೆ. ತಂಡಕ್ಕೆ ಬ್ಯಾಟರ್‌ಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ನಾಯಕ ಮಯಾಂಕ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಪಂಜಾಬ್‌ಗೆ ಜಾನಿ ಬೇರ್‌ಸ್ಟೋ ಇದುವರೆಗೂ ಸಾಥ್ ನೀಡಿಲ್ಲ. ಸತತ 4 ಅವಕಾಶಗಳಲ್ಲೂ ಬೇರ್‌ಸ್ಟೋ ವಿಫಲರಾಗಿದ್ದಾರೆ. ಕಗಿಸೊ ರಬಾಡ, ಅರ್ಷದೀಪ್ ಸಿಂಗ್ ಹಾಗೂ ರಾಹುಲ್ ಚಹರ್‌ರಂಥ ಬೌಲರ್‌ಗಳು ತಂಡಕ್ಕೆ ಆಧಾರವಾಗುತ್ತಿದ್ದಾರೆ. ವೈಭವ್ ಅರೋರ ಬೌಲಿಂಗ್‌ನಲ್ಲಿ ಮತ್ತಷ್ಟು ಮೊನಚಾಗಬೇಕಿದೆ. ಉತ್ತಮ ಬೌಲಿಂಗ್ ಪಡೆ ಹೊಂದಿರುವ ಪಂಜಾಬ್‌ಗೆ ಬ್ಯಾಟರ್‌ಗಳಿಂದ ಉತ್ತಮ ನಿರ್ವಹಣೆ ಬರಬೇಕಿದೆ.

    ಟೀಮ್ ನ್ಯೂಸ್:
    ಸಿಎಸ್‌ಕೆ: ಗೆಲುವಿನ ಲಯ ಕಂಡಿರುವ ರವೀಂದ್ರ ಜಡೇಜಾ ಬಳಗದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ಪಂಜಾಬ್: ಕನಿಷ್ಠ 2 ಬದಲಾವಣೆಯಾಗುವ ಸಾಧ್ಯತೆಗಳಿವೆ. ಸತತವಾಗಿ ವಿಫಲರಾಗುತ್ತಿರುವ ಜಾನಿ ಬೇರ್‌ಸ್ಟೋ ಬದಲಿಗೆ ಭಾನುಕ ರಾಜಪಕ್ಷ ಮರಳಿ ಕಣಕ್ಕಿಳಿಯಬಹುದು. ನಾಥನ್ ಎಲ್ಲಿಸ್ ಬದಲಿಗೆ ಒಡೆನ್ ಸ್ಮಿತ್ ಮರಳಬಹುದು.

    * ರಾಹುಲ್ ಚಹರ್, ಸಿಎಸ್‌ಕೆ ಎದುರು ಇದುವರೆಗೂ ಸರಾಸರಿ 5.8ರಂತೆ ರನ್ ನೀಡಿದ್ದಾರೆ. ಎದುರಾಳಿ ತಂಡವೊಂದರ ಎದುರು ಬೌಲರ್‌ವೊಬ್ಬ ನೀಡಿದ ಅದ್ಭುತ ನಿರ್ವಹಣೆ ಇದಾಗಿದೆ. ರಾಹುಲ್ ಪಾಲಿಗೆ 50ನೇ ಐಪಿಎಲ್ ಪಂದ್ಯ ಇದಾಗಿದೆ.

    *9: ಡ್ವೇನ್ ಬ್ರಾವೊ ಇನ್ನು 9 ರನ್ ಗಳಿಸಿದರೆ ಐಪಿಎಲ್‌ನಲ್ಲಿ ಸಾವಿರ ರನ್ ಪೂರೈಸಲಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 26, ಸಿಎಸ್‌ಕೆ: 15, ಪಂಜಾಬ್ ಕಿಂಗ್ಸ್: 11

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts