More

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ…

    ಬೆಂಗಳೂರು: ಕಳೆದ 13 ವರ್ಷಗಳಿಂದ ಪ್ರತಿ ವರ್ಷದ ಟಿ20 ಜಾತ್ರೆಯಾಗಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತ ಬಂದಿರುವ ಐಪಿಎಲ್ ಈ ಬಾರಿ ಕರೊನಾ ವೈರಸ್ ಹಾವಳಿಯಿಂದಾಗಿ ಸ್ವಲ್ಪ ತಡವಾಗಿ ಬರುತ್ತಿದೆ. ಅಲ್ಲದೆ ಭಾರತಕ್ಕೆ ಬದಲಾಗಿ ದೂರದ ಯುಎಇಯಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಆದರೆ ಟೂರ್ನಿ ಮೇಲೆ ನಿರೀಕ್ಷೆ, ಕಾತರ ಕಡಿಮೆಯಾಗಿಲ್ಲ. ಒಂದಕ್ಕಿಂತ ಒಂದು ಭಿನ್ನ, ಆಕರ್ಷಕ, ಅಚ್ಚರಿ, ಶ್ರೀಮಂತ ಮತ್ತು ರೋಚಕವಾದ ಹಿಂದಿನ 12 ಐಪಿಎಲ್‌ಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ…

    2008: ರಾಜಸ್ಥಾನ ‘ರಾಯಲ್’
    ತಂಡ: 8, ಪಂದ್ಯ: 59, ಕ್ರೀಡಾಂಗಣ: 9

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಚೊಚ್ಚಲ ಐಪಿಎಲ್‌ನಲ್ಲಿ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಎಲ್ಲರ ನಿರೀಕ್ಷೆ ಮೀರಿ ಚಾಂಪಿಯನ್ ಆಗಿತ್ತು. ಅತ್ಯಂತ ಕಡಿಮೆ ಮೌಲ್ಯದ ಈ ತಂಡ ಚಾಂಪಿಯನ್ ಆಗುತ್ತದೆ ಎಂದು ಟೂರ್ನಿಗೆ ಮುನ್ನ ಯಾರೂ ಊಹಿಸಿರಲಿಲ್ಲ. ಆದರೆ ಸ್ಪಿನ್ ದಿಗ್ಗಜ ವಾರ್ನ್ ನಾಯಕತ್ವ, ಮಾರ್ಗದರ್ಶನದ ಜತೆಗೆ ಯೂಸುಫ್ ಪಠಾಣ್‌ರ ಬಿರುಸಿನ ಆಟ ಮತ್ತು ಸೋಹೈಲ್ ತನ್ವೀರ್ ಬೌಲಿಂಗ್ ಬಲದಿಂದ ಫೈನಲ್‌ನಲ್ಲಿ ಚೆನ್ನೈ ವಿರುದ್ಧ ಕೊನೇ ಎಸೆತದಲ್ಲಿ 3 ವಿಕೆಟ್‌ಗಳಿಂದ ರೋಚಕ ಜಯ ದಾಖಲಿಸಿ ಬೀಗಿತ್ತು. ಪಂಜಾಬ್ ಮತ್ತು ಡೆಲ್ಲಿ ಸೆಮಿಫೈನಲ್‌ನಲ್ಲಿ ಎಡವಿದ್ದವು.
    ಸರಣಿಶ್ರೇಷ್ಠ: ಶೇನ್ ವ್ಯಾಟ್ಸನ್ (ರಾಜಸ್ಥಾನ)
    ಆರೆಂಜ್ ಕ್ಯಾಪ್: ಶಾನ್ ಮಾರ್ಷ್ (ಪಂಜಾಬ್, 616 ರನ್)
    ಪರ್ಪಲ್ ಕ್ಯಾಪ್: ಸೋಹೈಲ್ ತನ್ವೀರ್ (ರಾಜಸ್ಥಾನ, 22 ವಿಕೆಟ್)

    2009: ಡೆಕ್ಕನ್ ಚಾಂಪಿಯನ್
    ತಂಡ: 8, ಪಂದ್ಯ: 59, ಕ್ರೀಡಾಂಗಣ: 8

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಲೋಕಸಭಾ ಚುನಾವಣೆ ಮತ್ತು ಭದ್ರತಾ ಕಾರಣಗಳಿಂದಾಗಿ ಕೊನೇಕ್ಷಣದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡ ದ್ವಿತೀಯ ಐಪಿಎಲ್‌ನಲ್ಲೂ ಆಡಂ ಗಿಲ್‌ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್‌ ತಂಡದ ಗೆಲುವು ಅನಿರೀಕ್ಷಿತವಾಗಿತ್ತು. ಯಾಕೆಂದರೆ ಈ ತಂಡ ಹಿಂದಿನ ಐಪಿಎಲ್‌ನಲ್ಲಿ ಕೊನೆಯ 8ನೇ ಸ್ಥಾನ ಪಡೆದಿತ್ತು. ಗಿಲ್‌ಕ್ರಿಸ್ಟ್ ಬ್ಯಾಟಿಂಗ್ ಮತ್ತು ಆರ್‌ಪಿ ಸಿಂಗ್ ಬೌಲಿಂಗ್ ಡೆಕ್ಕನ್ ಗೆಲುವಿಗೆ ನೆರವಾಗಿತ್ತು. ಆರ್‌ಸಿಬಿ ತಂಡ ಕೂಡ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಹಿಂದಿನ ಟೂರ್ನಿಯ 7ನೇ ಸ್ಥಾನದಿಂದ ಮೇಲೆದ್ದು ರನ್ನರ್‌ಅಪ್ ಎನಿಸಿತು. ಚೆನ್ನೈ ಮತ್ತು ಡೆಕ್ಕನ್ ಸೆಮಿಫೈನಲ್‌ನಲ್ಲಿ ಎಡವಿದ ತಂಡಗಳು.
    ಸರಣಿಶ್ರೇಷ್ಠ: ಆಡಂ ಗಿಲ್‌ಕ್ರಿಸ್ಟ್ (ಡೆಕ್ಕನ್)
    ಆರೆಂಜ್ ಕ್ಯಾಪ್: ಮ್ಯಾಥ್ಯೂ ಹೇಡನ್ (ಚೆನ್ನೈ, 572 ರನ್)
    ಪರ್ಪಲ್ ಕ್ಯಾಪ್: ರುದ್ರಪ್ರತಾಪ್ ಸಿಂಗ್ (ಡೆಕ್ಕನ್, 23 ವಿಕೆಟ್)

    2010: ಚೆನ್ನೈ ‘ಸೂಪರ್’
    ತಂಡ: 8, ಪಂದ್ಯ: 80, ಕ್ರೀಡಾಂಗಣ: 12

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಹಿಂದಿನೆರಡು ಟೂರ್ನಿಗಳಲ್ಲಿ ಕೊನೇಕ್ಷಣದಲ್ಲಿ ಅದೃಷ್ಟ ಕೈಕೊಟ್ಟ ಬಳಿಕ ಧೋನಿ ನೇತೃತ್ವದ ಚೆನ್ನೈ ‘ಥರ್ಡ್ ಟೈಮ್ ಲಕ್ಕಿ’ ಎನಿಸಿತು. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದ ಮುಂಬೈಗೆ ಫೈನಲ್‌ನಲ್ಲಿ ಚೆನ್ನೈ ಶಾಕ್ ನೀಡಿತು. ಧೋನಿ ನಾಯಕತ್ವ ಕೌಶಲ್ಯದ ಜೊತೆಗೆ ಚೆನ್ನೈ ತಂಡದ ಸಂಘಟಿತ ನಿರ್ವಹಣೆ ಗೆಲುವಿನಲ್ಲಿ ಮಿನುಗಿತು. ಆರ್‌ಸಿಬಿ ಮತ್ತು ಡೆಕ್ಕನ್ ಸೆಮಿಫೈನಲ್‌ನಲ್ಲಿ ಎಡವಿದವು.
    ಸರಣಿಶ್ರೇಷ್ಠ: ಸಚಿನ್ ತೆಂಡುಲ್ಕರ್ (ಮುಂಬೈ)
    ಆರೆಂಜ್ ಕ್ಯಾಪ್: ಸಚಿನ್ (ಮುಂಬೈ, 618 ರನ್)
    ಪರ್ಪಲ್ ಕ್ಯಾಪ್: ಪ್ರಜ್ಞಾನ್ ಓಜಾ (ಡೆಕ್ಕನ್, 21 ವಿಕೆಟ್)

    2011: ಚೆನ್ನೈ ‘ಸೂಪರ್ ಕಿಂಗ್’
    ತಂಡ: 10, ಪಂದ್ಯ: 74, ಕ್ರೀಡಾಂಗಣ: 12

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಏಕದಿನ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆದ ಐದೇ ದಿನಗಳಲ್ಲಿ ಶುರುವಾದ 4ನೇ ಐಪಿಎಲ್‌ನಲ್ಲಿ ಧೋನಿ ನಾಯಕತ್ವ ಮತ್ತೊಮ್ಮೆ ವಿಜೃಂಭಿಸಿತು ಮತ್ತು ಚೆನ್ನೈ ತಂಡ ಸತತ 2ನೇ ಬಾರಿ ಪ್ರಶಸ್ತಿ ಎತ್ತಿ ಬೀಗಿತು. ಲೀಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್‌ಸಿಬಿ ತಂಡ ಫೈನಲ್‌ನಲ್ಲಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಟೂರ್ನಿಯುದ್ದಕ್ಕೂ ಮಿಂಚಿದ್ದ ಕ್ರಿಸ್ ಗೇಲ್ ಫೈನಲ್‌ನಲ್ಲಿ ಕೈಕೊಟ್ಟರು. ಮೊದಲ ಬಾರಿಗೆ ಅಳವಡಿಸಲಾಗಿದ್ದ ಪ್ಲೇ-ಆಫ್ ಮಾದರಿಯ ಎಲಿಮಿನೇಟರ್‌ನಲ್ಲಿ ಕೆಕೆಆರ್ ಮತ್ತು ಕ್ವಾಲಿಫೈಯರ್-2ರಲ್ಲಿ ಮುಂಬೈ ಎಡವಿತು. ಪುಣೆ ವಾರಿಯರ್ಸ್‌ ಮತ್ತು ಕೊಚ್ಚಿ ಟಸ್ಕರ್ಸ್‌ ಕೇರಳ ಎಂಬ 2 ಹೊಸ ತಂಡಗಳು ಟೂರ್ನಿಗೆ ಸೇರ್ಪಡೆಗೊಂಡಿದ್ದರೂ ಪ್ರದರ್ಶನ ನೀರಸವಾಗಿತ್ತು.
    ಸರಣಿಶ್ರೇಷ್ಠ: ಕ್ರಿಸ್ ಗೇಲ್ (ಆರ್‌ಸಿಬಿ)
    ಆರೆಂಜ್ ಕ್ಯಾಪ್: ಕ್ರಿಸ್ ಗೇಲ್ (ಆರ್‌ಸಿಬಿ, 608 ರನ್)
    ಪರ್ಪಲ್ ಕ್ಯಾಪ್: ಲಸಿತ್ ಮಾಲಿಂಗ (28 ವಿಕೆಟ್)

    ಇದನ್ನೂ ಓದಿ: VIDEO | ಆರ್‌ಸಿಬಿ ಹಾಡಿನಲ್ಲಿ ಹಿಂದಿ ಹೇರಿಕೆ ವಿವಾದ, ಕನ್ನಡಿಗರ ಆಕ್ರೋಶ

    2012: ನೈಟ್‌ರೈಡರ್ಸ್‌ ‘ಬಾದ್‌ಶಾ’
    ತಂಡ: 9, ಪಂದ್ಯ: 76, ಕ್ರೀಡಾಂಗಣ: 12

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಕೊನೆಗೂ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ನಿರೀಕ್ಷೆಯಂತೆ ಆಡಿದ ಅವರ ಒಡೆತನದ ಕೆಕೆಆರ್ ತಂಡ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿತು. ಗೌತಮ್ ಗಂಭೀರ್ ನಾಯಕತ್ವ, ಸ್ಪಿನ್ನರ್ ಸುನಿಲ್ ನಾರಾಯಣ್ ಬೌಲಿಂಗ್ ಮತ್ತು ಫೈನಲ್‌ನಲ್ಲಿ ಮಿಂಚಿದ ಮಾನ್ವಿಂದರ್ ಬಿಸ್ಲಾ ಆಟ ನೈಟ್‌ರೈಡರ್ಸ್‌ ಗೆಲುವಿಗೆ ನೆರವಾಯಿತು. ಹೀಗಾಗಿ ಚೆನ್ನೈ ಹ್ಯಾಟ್ರಿಕ್ ಪ್ರಶಸ್ತಿಯಿಂದ ವಂಚಿತವಾಯಿತು. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಫೈನಲ್‌ಗೇರಲು ವಿಫಲವಾಯಿತು. ಮುಂಬೈ ಎಲಿಮಿನೇಟರ್‌ನಲ್ಲಿ ಹೊರಬಿತ್ತು.
    ಸರಣಿಶ್ರೇಷ್ಠ: ಸುನಿಲ್ ನಾರಾಯಣ್ (ನೈಟ್‌ರೈಡರ್ಸ್‌)
    ಆರೆಂಜ್ ಕ್ಯಾಪ್: ಕ್ರಿಸ್ ಗೇಲ್ (ಆರ್‌ಸಿಬಿ, 733 ರನ್)
    ಪರ್ಪಲ್ ಕ್ಯಾಪ್: ಮಾರ್ನ್ ಮಾರ್ಕೆಲ್ (ಡೆಲ್ಲಿ, 25 ವಿಕೆಟ್)

    2013: ಮುಂಬೈಗೆ ಜೈ
    ತಂಡ: 9, ಪಂದ್ಯ: 76, ಕ್ರೀಡಾಂಗಣ: 12

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...

    ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ವಿವಾದ ಎಬ್ಬಿಸಿದ ಕಲಹದ ನಡುವೆಯಲ್ಲಿ ಕ್ರಿಕೆಟ್ ರಸದೌತಣಕ್ಕೆ ಬರವಿರಲಿಲ್ಲ. ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಮೂಡಿಬಂದಿತು. ಕೊನೆಯ ಐಪಿಎಲ್ ಆಡಿದ ಸಚಿನ್ ತೆಂಡುಲ್ಕರ್‌ಗೆ ಗೆಲುವಿನ ವಿದಾಯ ಲಭಿಸಿದರೆ, ಚೆನ್ನೈ ಮತ್ತೊಮ್ಮೆ ರನ್ನರ್‌ಅಪ್ ಪಟ್ಟಕ್ಕೆ ತೃಪ್ತಿಪಟ್ಟಿತು. ಶ್ರೀಶಾಂತ್ ಸಹಿತ 3 ಆಟಗಾರರು ಫಿಕ್ಸಿಂಗ್‌ಗಾಗಿ ಬಂಧಿತರಾದ ನಡುವೆಯೂ ಮೈದಾನದಲ್ಲಿ ಮಿಂಚಿದ ರಾಹುಲ್ ದ್ರಾವಿಡ್ ಸಾರಥ್ಯದ ರಾಜಸ್ಥಾನ ತೃತೀಯ ಸ್ಥಾನ ಪಡೆಯಿತು. ಡೆಕ್ಕನ್ ಚಾರ್ಜರ್ಸ್‌ ಬದಲಾಗಿ ಆಡಿದ ಸನ್‌ರೈಸರ್ಸ್‌ ತಂಡ ಎಲಿಮಿನೇಟರ್‌ನಲ್ಲಿ ಹೊರಬಿತ್ತು.
    ಸರಣಿಶ್ರೇಷ್ಠ: ಶೇನ್ ವ್ಯಾಟ್ಸನ್ (ರಾಜಸ್ಥಾನ)
    ಆರೆಂಜ್ ಕ್ಯಾಪ್: ಮೈಕೆಲ್ ಹಸ್ಸೆ (ಚೆನ್ನೈ, 733 ರನ್)
    ಪರ್ಪಲ್ ಕ್ಯಾಪ್: ಡ್ವೇಯ್ನ ಬ್ರಾವೊ (ಚೆನ್ನೈ, 32 ವಿಕೆಟ್)

    2014: ಕೆಕೆಆರ್ ಮತ್ತೆ ಕಿಂಗ್
    ತಂಡ: 8, ಪಂದ್ಯ: 60, ಕ್ರೀಡಾಂಗಣ: 12

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಲೋಕಸಭಾ ಚುನಾವಣೆಯಿಂದಾಗಿ ಟೂರ್ನಿಯ ಮೊದಲ ಭಾಗ ಅಂದರೆ 20 ಪಂದ್ಯಗಳು ಯುಎಇಯ ಅಬುಧಾಬಿ, ದುಬೈ ಮತ್ತು ಶಾರ್ಜಾ ಕ್ರೀಡಾಂಗಣಗಳಲ್ಲಿ ನಡೆದವು. ಪುಣೆ ವಾರಿಯರ್ಸ್‌ ಹೊರನಡೆದ ಕಾರಣ ತಂಡಗಳ ಸಂಖ್ಯೆ ಮತ್ತೆ 8ಕ್ಕೆ ಇಳಿಯಿತು. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆಕೆಆರ್ 2ನೇ ಬಾರಿ ಚಾಂಪಿಯನ್ ಆಯಿತು. ಕರ್ನಾಟಕದ ಮನೀಷ್ ಪಾಂಡೆ 94 ರನ್ ಸಿಡಿಸಿ ಫೈನಲ್ ಗೆಲುವಿನಲ್ಲಿ ಮಿಂಚಿದರು. ಲೀಗ್ ಹಂತದಲ್ಲಿ ಟಾಪ್ ಆಗಿದ್ದ ಪಂಜಾಬ್ ಫೈನಲ್‌ನಲ್ಲಿ ಎಡವಿತು. ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಸೇಡು ತೀರಿಸಿಕೊಂಡರೂ ಕ್ವಾಲಿಫೈಯರ್-2ನಲ್ಲಿ ಚೆನ್ನೈ ಎಡವಿತು.
    ಸರಣಿಶ್ರೇಷ್ಠ: ಗ್ಲೆನ್ ಮ್ಯಾಕ್ಸ್‌ವೆಲ್ (ಪಂಜಾಬ್)
    ಆರೆಂಜ್ ಕ್ಯಾಪ್: ರಾಬಿನ್ ಉತ್ತಪ್ಪ (ಕೆಕೆಆರ್, 660 ರನ್)
    ಪರ್ಪಲ್ ಕ್ಯಾಪ್: ಮೋಹಿತ್ ಶರ್ಮ (ಚೆನ್ನೈ, 23 ವಿಕೆಟ್)

    2015: ಮುಂಬೈ ಮತ್ತೊಮ್ಮೆ ಪರಾಕ್ರಮ
    ತಂಡ: 8, ಪಂದ್ಯ: 60, ಕ್ರೀಡಾಂಗಣ: 12

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಮುಂಬೈ ಇಂಡಿಯನ್ಸ್ ತಂಡ 2ನೇ ಪ್ರಶಸ್ತಿ ಗೆದ್ದು ಬೀಗಿತು. ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ರೋಹಿತ್ ಶರ್ಮ ಬಳಗ 2013ರ ಬಳಿಕ ಮತ್ತೊಮ್ಮೆ ಫೈನಲ್ ಪಂದ್ಯದಲ್ಲಿ ಆಘಾತ ನೀಡುವಲ್ಲಿ ಸಲವಾಯಿತು. ಲೀಗ್ ಹಂತದಲ್ಲಿ ಟಾಪ್ ಆಗಿದ್ದ ಚೆನ್ನೈ ತಂಡ 3ನೇ ಬಾರಿ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ಎಡವಿತು. ಆರ್‌ಸಿಬಿ ತಂಡ 3 ಮತ್ತು ರಾಜಸ್ಥಾನ ರಾಯಲ್ಸ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಒಟ್ಟಾರೆ ಯಾವುದೇ ವಿವಾದಗಳಿಲ್ಲದ ಸರಳ ಟೂರ್ನಿ ಇದಾಗಿತ್ತು. ಟೂರ್ನಿಗೆ ಮುನ್ನ ಯುವರಾಜ್ ಸಿಂಗ್ ಆಟಗಾರರ ಹರಾಜಿನಲ್ಲಿ ದಾಖಲೆಯ 16 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.
    ಸರಣಿಶ್ರೇಷ್ಠ: ಆಂಡ್ರೆ ರಸೆಲ್ (ಕೆಕೆಆರ್)
    ಆರೆಂಜ್ ಕ್ಯಾಪ್: ಡೇವಿಡ್ ವಾರ್ನರ್ (ಸನ್‌ರೈಸರ್ಸ್‌, 562 ರನ್)
    ಪರ್ಪಲ್ ಕ್ಯಾಪ್: ಡ್ವೇಯ್ನ ಬ್ರಾವೊ (ಚೆನ್ನೈ, 26 ವಿಕೆಟ್)

    2016: ಹೊಸ ಸನ್ ಉದಯ
    ತಂಡ: 8, ಪಂದ್ಯ: 60, ಕ್ರೀಡಾಂಗಣ: 10

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು 2 ವರ್ಷಗಳ ಅವಧಿಗೆ ನಿಷೇಧಕೊಳಗಾಗಿದ್ದ ಕಾರಣ ಪುಣೆ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ಎಂಬ 2 ಹೊಸ ತಂಡಗಳು ಸೇರ್ಪಡೆಗೊಂಡಿದ್ದವು. ಜತೆಗೆ 3 ವರ್ಷಗಳ ಬಳಿಕ ಹೊಸ ತಂಡವೊಂದು ಐಪಿಎಲ್ ಪ್ರಶಸ್ತಿ ಜಯಿಸಿತು. ಅದುವೇ ಡೇವಿಡ್ ವಾರ್ನರ್ ಸಾರಥ್ಯದ ಸನ್‌ರೈಸರ್ಸ್‌ ಹೈದರಾಬಾದ್. ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ 4 ಶತಕಗಳ ಸಹಿತ ಸಾವಿರದ ಸನಿಹ ರನ್ ಸಿಡಿಸಿದರು. ಇದರಿಂದಾಗಿ ಆರ್‌ಸಿಬಿ ತಂಡ ಸರಾಗವಾಗಿ ಫೈನಲ್‌ಗೇರಿತು. ಲೀಗ್ ಹಂತದ ಟಾಪರ್ ಗುಜರಾತ್ ಲಯನ್ಸ್ ತಂಡಕ್ಕೆ ಕ್ವಾಲಿೈಯರ್‌ನಲ್ಲಿ ಆರ್‌ಸಿಬಿ ಆಘಾತ ನೀಡಿತ್ತು. ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್‌ ವಿರುದ್ಧ ಎಡವಟ್ಟು ಮಾಡಿಕೊಂಡಿತು. ಸುರೇಶ್ ರೈನಾ ಸಾರಥ್ಯದ ಗುಜರಾತ್ ತಂಡ ಟೇಬಲ್ ಟಾಪರ್ ಆಗಿದ್ದರೂ ಫೈನಲ್‌ಗೇರಲಾಗದೆ ನಿರಾಸೆ ಅನುಭವಿಸಿದರೆ, ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಪ್ಲೇಆಫ್​ ಪ್ರವೇಶ ಕಾಣಲಿಲ್ಲ. ಕೆಕೆಆರ್ ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಐಸಿಸಿಯ ಎಲ್ಲ ಟ್ರೋಫಿ ಗೆದ್ದಿರುವ ಆಲ್ರೌಂಡರ್ ಯುವರಾಜ್ ಸಿಂಗ್ ಸನ್‌ರೈಸರ್ಸ್‌ ತಂಡದೊಂದಿಗೆ ಮೊದಲ ಬಾರಿ ಐಪಿಎಲ್ ಪ್ರಶಸ್ತಿಗೂ ಮುತ್ತಿಟ್ಟ ಸಾಧನೆ ಮಾಡಿದರು.
    ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ (ಆರ್‌ಸಿಬಿ)
    ಆರೆಂಜ್ ಕ್ಯಾಪ್: ವಿರಾಟ್ ಕೊಹ್ಲಿ (ಆರ್‌ಸಿಬಿ, 973 ರನ್)
    ಪರ್ಪಲ್ ಕ್ಯಾಪ್: ಭುವನೇಶ್ವರ್ ಕುಮಾರ್ (ಸನ್‌ರೈಸರ್ಸ್‌, 23 ವಿಕೆಟ್)

    2017: ಮುಂಬೈಗೆ ಮೂರನೇ ಕಿರೀಟ
    ತಂಡ: 8, ಪಂದ್ಯ: 60, ಕ್ರೀಡಾಂಗಣ: 10

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ದಶಕ ಪೂರೈಸಿದ ಸಂಭ್ರಮದಲ್ಲಿದ್ದ ಐಪಿಎಲ್‌ನಲ್ಲಿ 3 ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡವೆಂಬ ಇತಿಹಾಸವನ್ನು ಮುಂಬೈ ಇಂಡಿಯನ್ಸ್ ತಂಡ ಬರೆಯಿತು. ಎಂಎಸ್ ಧೋನಿ ಮತ್ತೆ ಟ್ರ್ಯಾಕ್‌ಗೆ ಬಂದು ಈ ಬಾರಿ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಫೈನಲ್‌ಗೇರಿಸಿದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಕೇವಲ 1 ರನ್‌ನಿಂದ ಮುಂಬೈಗೆ ಮಣಿದರು. ಲೀಗ್ ಟೇಬಲ್ ಟಾಪರ್ ಆಗಿದ್ದ ಮುಂಬೈ ತಂಡ ಕ್ವಾಲಿಫೈಯರ್‌ನಲ್ಲಿ ಪುಣೆ ವಿರುದ್ಧ ಆಘಾತ ಎದುರಿಸಿದ್ದರೂ, 2ನೇ ಕ್ವಾಲಿಫೈಯರ್‌ನಲ್ಲಿ ಗೆದ್ದು ಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿತು. ಕೆಕೆಆರ್ 3 ಮತ್ತು ಸನ್‌ರೈಸರ್ಸ್‌ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಆರ್‌ಸಿಬಿ ತಂಡ ಆಡಿದ 14 ಪಂದ್ಯಗಳಲ್ಲಿ 3ರಲ್ಲಷ್ಟೇ ಗೆದ್ದು ಕೊನೆಯ ಸ್ಥಾನದ ಮುಖಭಂಗ ಎದುರಿಸಿತು.
    ಸರಣಿಶ್ರೇಷ್ಠ: ಬೆನ್ ಸ್ಟೋಕ್ಸ್ (ಪುಣೆ ಸೂಪರ್‌ಜೈಂಟ್ಸ್)
    ಆರೆಂಜ್ ಕ್ಯಾಪ್: ಡೇವಿಡ್ ವಾರ್ನರ್ (ಸನ್‌ರೈಸರ್ಸ್‌, 641 ರನ್)
    ಪರ್ಪಲ್ ಕ್ಯಾಪ್: ಭುವನೇಶ್ವರ್ ಕುಮಾರ್ (ಸನ್‌ರೈಸರ್ಸ್‌, 26 ವಿಕೆಟ್)

    2018: ಚೆನ್ನೈ ಸೂಪರ್ ಪುನರಾಗಮನ
    ತಂಡ: 8, ಪಂದ್ಯ: 60, ಕ್ರೀಡಾಂಗಣ: 10

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ನಿಷೇಧ ಶಿಕ್ಷೆ ಮುಗಿಸಿ ವಾಪಸ್ ಆಗುವುದರೊಂದಿಗೆ ಪುಣೆ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳು ಹೊರಬಿದ್ದವು. ಅದರಲ್ಲೂ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಪ್ರಶಸ್ತಿ ಗೆಲುವಿನೊಂದಿಗೆ ಪುನರಾಗಮನವನ್ನು ಸಾರಿದ್ದು ವಿಶೇಷ. ರಾಜಸ್ಥಾನ ತಂಡ ಕೂಡ 4ನೇ ಸ್ಥಾನ ಪಡೆದು ಗಮನ ಸೆಳೆಯಿತು. ಲೀಗ್ ಹಂತದ ಟಾಪರ್ ಸನ್‌ರೈಸರ್ಸ್‌ ತಂಡ ಫೈನಲ್‌ನಲ್ಲಿ ಚೆನ್ನೈ ತಂಡಕ್ಕೆ ಶರಣಾಯಿತು. ಕೆಕೆಆರ್ 3ನೇ ಸ್ಥಾನ ಗಳಿಸಿತು. ಕಾವೇರಿ ಗಲಾಟೆಯಿಂದಾಗಿ ಸಿಎಸ್‌ಕೆ ತಂಡದ ತವರು ಪಂದ್ಯಗಳು ಚೆನ್ನೈನಿಂದ ಸ್ಥಳಾಂತರಗೊಂಡು ಪುಣೆಯಲ್ಲಿ ನಡೆದವು. ಐಪಿಎಲ್ ಪಂದ್ಯಗಳು ಮೊದಲ ಬಾರಿಗೆ ಸೆಟ್ ಮ್ಯಾಕ್ಸ್‌ಗೆ ಬದಲಾಗಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರಗೊಂಡವು. 5 ವರ್ಷಗಳಿಗೆ 16,347 ಕೋಟಿ ರೂ. ಮೊತ್ತಕ್ಕೆ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಹಕ್ಕು ಬಾಚಿಕೊಂಡಿತ್ತು.
    ಸರಣಿಶ್ರೇಷ್ಠ: ಸುನೀಲ್ ನಾರಾಯಣ್ (ಕೆಕೆಆರ್)
    ಆರೆಂಜ್ ಕ್ಯಾಪ್: ಕೇನ್ ವಿಲಿಯಮ್ಸನ್ (ಸನ್‌ರೈಸರ್ಸ್‌, 735 ರನ್)
    ಪರ್ಪಲ್ ಕ್ಯಾಪ್: ಆಂಡ್ರೋ ಟೈ (ಪಂಜಾಬ್, 24 ವಿಕೆಟ್)

    2019: ಮುಂಬೈಗೆ ಮತ್ತೆ ವರವಾದ 1 ರನ್
    ತಂಡ: 8, ಪಂದ್ಯ: 60, ಕ್ರೀಡಾಂಗಣ: 9

    ಅಚ್ಚರಿಗಳ ಹಿಸ್ಟರಿ, 2008ರಿಂದ ಐಪಿಎಲ್ ನಡೆದು ಬಂದ ಹಾದಿ...
    ರೋಹಿತ್ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು. 2017ರಂತೆ ಮತ್ತೊಮ್ಮೆ ಮುಂಬೈ ತಂಡಕ್ಕೆ ಫೈನಲ್‌ನಲ್ಲಿ 1 ರನ್ ವರದಾನವಾಗಿ ಪರಿಣಮಿಸಿತು. ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡ ಗೆಲುವಿನ ಹಾದಿಯಲ್ಲಿದ್ದರೂ ಧೋನಿ ರನೌಟ್ ಆದ ಬಳಿಕ ಪಂದ್ಯದ ಚಿತ್ರಣದ ಬದಲಾಗಿ ಮುಂಬೈಗೆ 1 ರನ್ ಗೆಲುವು ಒಲಿಯಿತು. ಶೇನ್ ವ್ಯಾಟ್ಸನ್ (80) ಹೋರಾಟವೂ ವ್ಯರ್ಥಗೊಂಡಿತು. ಡೆಲ್ಲಿ ಡೇರ್‌ಡೆವಿಲ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಆಗಿ ಬದಲಾದ ತಂಡ ಚೇತೋಹಾರಿ ನಿರ್ವಹಣೆ ತೋರಿ 3ನೇ ಸ್ಥಾನ ಗಳಿಸಿತು. ಸನ್‌ರೈಸರ್ಸ್‌ 4ನೇ ಸ್ಥಾನಕ್ಕೆ ಸಮಾಧಾನ ಕಂಡಿತು. ಆರ್‌ಸಿಬಿ ತಂಡಕ್ಕೆ ಮತ್ತೊಮ್ಮೆ ಕೊನೇ ಸ್ಥಾನದ ಅವಮಾನ ಎದುರಾಯಿತು. ಈ ಬಾರಿ ಸಾರ್ವತ್ರಿಕ ಚುನಾವಣೆಯ ನಡುವೆಯೂ ಸಂಪೂರ್ಣ ಟೂರ್ನಿ ಭಾರತದಲ್ಲೇ ನಡೆದಿದ್ದು ವಿಶೇಷವಾಗಿತ್ತು. ಜೂನ್‌ನಲ್ಲಿ ಶುರುವಾಗುವ ವಿಶ್ವಕಪ್‌ಗೆ, ಲೋಧಾ ಸಮಿತಿ ಶಿಫಾರಸಿನ ಅನ್ವಯ 15 ದಿನಗಳ ಅಂತರ ನೀಡುವ ಸಲುವಾಗಿ ಮೇ 12ರಂದೇ ಟೂರ್ನಿಗೆ ತೆರೆಬಿದ್ದಿತು.
    ಸರಣಿಶ್ರೇಷ್ಠ: ಆಂಡ್ರೆ ರಸೆಲ್ (ಕೆಕೆಆರ್)
    ಆರೆಂಜ್ ಕ್ಯಾಪ್: ಡೇವಿಡ್ ವಾರ್ನರ್ (ಸನ್‌ರೈಸರ್ಸ್‌, 692 ರನ್)
    ಪರ್ಪಲ್ ಕ್ಯಾಪ್: ಇಮ್ರಾನ್ ತಾಹಿರ್ (ಚೆನ್ನೈ, 26 ವಿಕೆಟ್)

    ಐಪಿಎಲ್​ ಮೊದಲ ಪಂದ್ಯದಲ್ಲೇ ಸಹೋದರರ ಮುಖಾಮುಖಿ, ಇಕ್ಕಟ್ಟಿನಲ್ಲಿ ಮಾಲತಿ ಚಹರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts