More

    ಇಂದು ರಾಜಸ್ಥಾನ ರಾಯಲ್ಸ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

    ಮುಂಬೈ: ಗೆಲುವಿನ ಲಯಕ್ಕೆ ಮರಳಿದ ವಿಶ್ವಾಸದಲ್ಲಿರುವ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಶುಕ್ರವಾರ ವಾಂಖೆಡೆ ಸ್ಟೇಡಿಯಂನಲ್ಲಿ ಎದುರಾಗಲಿವೆ. ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ಸಾಧನೆಯಿಂದ ರಾಜಸ್ಥಾನ ಕೆಕೆಆರ್ ತಂಡವನ್ನು ಮಣಿಸಿದ್ದರೆ, ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ನೀರು ಕುಡಿದಷ್ಟೇ ಸುಲಭವಾಗಿ ಸೋಲಿಸಿತ್ತು. ರಾಯಲ್ಸ್ ತಂಡದ ಆಟಗಾರರಾದ ಜೋಸ್ ಬಟ್ಲರ್ ಬ್ಯಾಟಿಂಗ್‌ನಲ್ಲಿ ಆರೆಂಜ್ ಕ್ಯಾಪ್ ಇದ್ದರೆ, ಯಜುವೇಂದ್ರ ಚಾಹಲ್ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಸಂಜು ಸ್ಯಾಮ್ಸನ್ ಪಡೆಗೆ ಇವರಿಬ್ಬರೂ ಪ್ರಮುಖ ಟ್ರಂಪ್ ಕಾರ್ಡ್ ಆಗಿದ್ದಾರೆ. ಮತ್ತೊಂದೆಡೆ, ಕೋವಿಡ್ ಸಂಕಷ್ಟದ ನಡುವೆಯೂ ಭರ್ಜರಿ ನಿರ್ವಹಣೆ ತೋರಲು ಡೆಲ್ಲಿ ಯಶಸ್ವಿಯಾಗಿದೆ. ಟೀಮ್ ಇಂಡಿಯಾದಲ್ಲಿ ಕುಲ್ಚಾ ಜೋಡಿ ಎಂದು ಹೆಸರಾಗಿದ್ದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಎದುರಾಳಿಯಾಗಿದ್ದಾರೆ.

    * ಬಟ್ಲರ್, ಚಾಹಲ್ ಬಲ
    ಪ್ರಸಕ್ತ ಐಪಿಎಲ್‌ನಲ್ಲಿ ಇದುವರೆಗೂ 2 ಶತಕ ಸಿಡಿಸುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್‌ಗೆ ಆರಂಭಿಕ ಹಂತದಲ್ಲಿ ಏಕಾಂಗಿಯಾಗಿಯೇ ಉತ್ತಮ ಆರಂಭ ನೀಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಬಳಿಕ ಕನ್ನಡಿಗ ದೇವದತ್ ಪಡಿಕಲ್‌ಗೆ ಅವಕಾಶ ನೀಡಿದರೂ ನಿರೀಕ್ಷಿತ ಆರಂಭ ಕಾಣಲು ವಿಲರಾಗುತ್ತಿದ್ದಾರೆ. ಸ್ಯಾಮ್ಸನ್ ಲಯದಲ್ಲಿದ್ದರೂ ದೊಡ್ಡ ಹೊಡೆತ ಪೇರಿಸುತ್ತಿಲ್ಲ. ಕರ್ನಾಟಕ ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದರು. ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ ಲಯದಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಕಳೆದ ಪಂದ್ಯದಲ್ಲಿ ನಂಬಿಕಸ್ತ ಟ್ರೆಂಟ್ ಬೌಲ್ಟ್ ದುಬಾರಿಯಾಗಿದ್ದರೆ, ಯಜುವೇಂದ್ರ ಚಾಹಲ್ ಏಕಾಂಗಿ ನಿರ್ವಹಣೆಯಿಂದ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದರು. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ರನ್ ನೀಡುತ್ತಿದ್ದರೂ ವಿಕೆಟ್ ಕಬಳಿಸುತ್ತಿರುವುದು ಸಮಾಧಾನಕರ ಸಂಗತಿ.

    * ಡೆಲ್ಲಿಗೆ ವಾರ್ನರ್, ಪೃಥ್ವಿ ಅಭಯ
    ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಷಾ ಜೋಡಿ ಅದ್ಭುತವಾಗಿ ಇನಿಂಗ್ಸ್ ಕಟ್ಟುತ್ತಿರುವುದು ತಂಡದ ಒತ್ತಡವನ್ನು ಕಡಿಮೆ ಮಾಡಿದೆ. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಜತೆಗೆ ಖಲೀಲ್ ಅಹಮದ್ ಮಿಂಚುತ್ತಿದ್ದರೆ, ಲಲಿತ್ ಯಾದವ್ ಬೌಲಿಂಗ್‌ನಲ್ಲೂ ಗಮನಸೆಳೆಯುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಕೊಂಚ ಸುಧಾರಿಸಬೇಕಿದೆ. ಆರಂಭಿಕ ಶೂರತ್ವದ ಬಳಿಕ ತಂಡದ ದಿಢೀರ್ ಕುಸಿತದ ಭೀತಿ ಎದುರಿಸುತ್ತಿದೆ. ಉಳಿದಂತೆ ಡೆಲ್ಲಿ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲನದಿಂದ ಕೂಡಿದೆ.

    ಟೀಮ್ ನ್ಯೂಸ್:
    ರಾಜಸ್ಥಾನ:
    ಕೆಕೆಆರ್ ಎದುರು ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ರಾಜಸ್ಥಾನ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.

    ಡೆಲ್ಲಿ : ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.

    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 24, ರಾಜಸ್ಥಾನ: 12, ಡೆಲ್ಲಿ ಕ್ಯಾಪಿಟಲ್ಸ್: 12

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts