More

    ಇಂದು ಲಖನೌ ಸೂಪರ್‌ಜೈಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿ

    ಮುಂಬೈ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ಹಾಗೂ ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಗಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಭಾನುವಾರ ಎದುರಾಗಲಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಆಡಿದ ಮೂರು ಪಂದ್ಯಗಳಲ್ಲೂ ಜಯ ದಾಖಲಿಸಿರುವ ಎಲ್‌ಎಸ್‌ಜಿ, ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನಾರ್ಹ ನಿರ್ವಹಣೆ ತೋರುತ್ತಾ ಬಂದಿದೆ. ಸತತ 2 ಜಯ ದಾಖಲಿಸಿ ಭರ್ಜರಿ ಆರಂಭ ಕಂಡಿದ್ದ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಮುಗ್ಗರಿಸಿ ಹ್ಯಾಟ್ರಿಕ್ ಜಯ ತಪ್ಪಿಸಿಕೊಂಡಿತ್ತು.

    ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಎಲ್‌ಎಸ್‌ಜಿ ಗೆಲುವಿನ ನಾಗಾಲೋಟ ಮುಂದುವರಿಸುವ ಇರಾದೆಯಲ್ಲಿದೆ. ಆರಂಭಿಕ ಹಂತದಲ್ಲಿ ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್ ಆಸರೆಯಾದರೆ, ಎವಿನ್ ಲೆವಿಸ್, ದೀಪಕ್ ಹೂಡಾ, ಯುವ ಬ್ಯಾಟರ್ ಆಯುಷ್ ಬಡೋನಿ, ಆಲ್ರೌಂಡರ್‌ಗಳಾದ ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯರಂಥ ಆಟಗಾರರನ್ನು ಹೊಂದಿರುವ ಎಲ್‌ಎಸ್‌ಜಿ ಜಯದ ಹಾದಿಯನ್ನು ವಿಸ್ತರಿಸುವ ತವಕದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಆವೇಶ್, ರವಿ ಬಿಷ್ಣೋಯಿ ಭರವಸೆ ಮೂಡಿಸಿದ್ದಾರೆ. ರಾಯಲ್ಸ್ ಪರ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್‌ಗೆ ತಂಡದ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ದಕ್ಕಬೇಕಿದೆ. ದೇವದತ್ ಪಡಿಕಲ್, ಶಿಮ್ರೊನ್ ಹೆಟ್ಮೆಯೆರ್, ಸಂಜು ಸ್ಯಾಮ್ಸನ್ ಮತ್ತಷ್ಟು ಅಬ್ಬರಿಸಬೇಕಿದೆ. ಚಾಹಲ್-ಅಶ್ವಿನ್, ಟ್ರೆಂಟ್ ಬೌಲ್ಟ್, ಕನ್ನಡಿಗ ಪ್ರಸಿದ್ಧ ಕೃಷ್ಣ ಒಳಗೊಂಡ ಬೌಲಿಂಗ್ ಪಡೆ ಎದುರಾಳಿಗೆ ಕಂಟಕವಾದರೂ ಅಚ್ಚರಿಯಿಲ್ಲ.

    ಟೀಮ್ ನ್ಯೂಸ್:
    ಲಖನೌ ಸೂಪರ್‌ಜೈಂಟ್ಸ್: ಗೆಲುವಿನ ಲಯದಲ್ಲಿರುವ ನಡುವೆಯೂ ಏಕಮಾತ್ರ ಬದಲಾವಣೆ ನಿರೀಕ್ಷಿಸಲಾಗಿದೆ. ಆಸೀಸ್ ವೇಗಿ ಆಂಡ್ರೋ ಟೈ ಬದಲಿಗೆ ದುಶ್ಮಾಂತ ಚಮೀರ ವಾಪಸಾಗುವ ಸಾಧ್ಯತೆಗಳಿವೆ.

    ರಾಜಸ್ಥಾನ ರಾಯಲ್ಸ್: ಆಸೀಸ್ ಆಲ್ರೌಂಡರ್ ನಾಥನ್ ಕೌಲ್ಟರ್ ನಿಲ್ ಗಾಯದಿಂದ ತವರಿಗೆ ವಾಪಸಾಗಿದ್ದಾರೆ. ಇದರಿಂದ ಕಳೆದ ಪಂದ್ಯದಲ್ಲಿ 3 ವಿದೇಶಿ ಆಟಗಾರರಷ್ಟೇ ಆಡಿದ್ದರು. ವಿಂಡೀಸ್‌ನ ಎಡಗೈ ವೇಗಿ ಒಬೆಡ್ ಮೆಕ್‌ಕಾಯ್ 4ನೇ ವಿದೇಶಿ ಆಟಗಾರನ ಕೋಟಾದಡಿ ಅವಕಾಶ ಪಡೆದರೆ, ನವದೀಪ್ ಸೈನಿ ಹೊರಗುಳಿಯಬಹುದು.

    ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts