More

    ಇಂದು ಗುಜರಾತ್ ಟೈಟಾನ್ಸ್ -ರಾಜಸ್ಥಾನ ರಾಯಲ್ಸ್ ಪ್ರಶಸ್ತಿ ಕದನ

    ಅಹಮದಾಬಾದ್: 14 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-15ರ ಫೈನಲ್ ಹಣಾಹಣಿಯಲ್ಲಿ ಭಾನುವಾರ ಎದುರಾಗಲಿವೆ. ಇದರೊಂದಿಗೆ ಎರಡು ತಿಂಗಳಿಂದ ಕ್ರಿಕೆಟ್ ಪ್ರಿಯರಿಗೆ ರಸದೌತಣ ಉಣಬಡಿಸಿದ್ದ ಚುಟುಕು ಕ್ರಿಕೆಟ್ ಮಹಾಸಮರಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನದಲ್ಲಿ ತೆರೆ ಬೀಳಲಿದೆ. ಪದಾರ್ಪಣೆ ಆವೃತ್ತಿಯಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿರುವ ಗುಜರಾತ್ ತಂಡ ಮೊದಲ ಯತ್ನದಲ್ಲೇ ಚಾಂಪಿಯನ್‌ಪಟ್ಟ ಅಲಂಕರಿಸುವ ಕನಸಿನಲ್ಲಿದೆ. ಲೀಗ್ ಹಾಗೂ ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ಟೈಟಾನ್ಸ್‌ಗೆ ಶರಣಾಗಿರುವ ರಾಜಸ್ಥಾನ ತಂಡಕ್ಕೆ ಇದೀಗ ಸೇಡು ತೀರಿಸಿಕೊಳ್ಳುವುದರ ಜತೆಗೆ ಪ್ರಶಸ್ತಿ ಜಯಿಸುವ ಅವಕಾಶ ದಕ್ಕಿದೆ.

    * ಆತ್ಮವಿಶ್ವಾಸದಲ್ಲಿ ಟೈಟಾನ್ಸ್ ತಂಡ
    ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಯತ್ನದಲ್ಲೇ ಪ್ರಶಸ್ತಿ ಸುತ್ತಿಗೆ ಕೊಂಡೊಯ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಂಡದ ಸಂಘಟನೆಯ ಜತೆಗೆ ನಾಯಕತ್ವದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವಕ್ಕೂ ಪಾಂಡ್ಯ ಹೆಸರು ಬಲವಾಗಿ ಕೇಳಿಬಂದರೂ ಅಚ್ಚರಿಯಿಲ್ಲ. ನಾಯಕತ್ವ ಒತ್ತಡದ ಜತೆಗೆ ಆಲ್ರೌಂಡ್ ನಿರ್ವಹಣೆಯಿಂದ ಪಾಂಡ್ಯ ಗಮನಸೆಳೆದಿದ್ದಾರೆ. ಪವರ್‌ಪ್ಲೇ ಹಂತದಲ್ಲಿ ವೃದ್ಧಿಮಾನ್ ಸಾಹ, ಶುಭಮಾನ್ ಗಿಲ್, ಮ್ಯಾಥ್ಯೂ ವೇಡ್, ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಸ್ಪಿನ್ನರ್ ರಶೀದ್ ಖಾನ್, ಅನುಭವಿ ಮೊಹಮದ್ ಶಮಿ, ಯಶ್ ದಯಾಳ್, ಅಲ್ಜಾರಿ ಜೋಸೆಫ್ ಒಳಗೊಂಡ ಬೌಲಿಂಗ್ ಪಡೆ ತಂಡಕ್ಕೆ ಆಸರೆಯಾಗುತ್ತಿದೆ. ಇದುವರೆಗಿನ ತಂಡದ ಯಶಸ್ಸಿನಲ್ಲಿ ಬೌಲರ್‌ಗಳೇ ಪ್ರಮುಖ ಪಾತ್ರವಹಿಸಿದ್ದಾರೆ.

    * ರಾಜಸ್ಥಾನಕ್ಕೆ ಸೇಡಿನ ತವಕ
    ಟೈಟಾನ್ಸ್ ಎದುರು ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ ಸೋತಿರುವ ರಾಜಸ್ಥಾನ ರಾಯಲ್ಸ್ ತಂಡ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ದುಬಾರಿಯಾಗಿದ್ದರೂ ಎರಡನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಕುಸಿತದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ತಂಡದ ಪಾಲಿಗೆ ರನ್ ಮೆಷಿನ್ ಆಗಿದ್ದರೆ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಬೇಕಿದೆ. ವೇಗಿಗಳಾದ ಟ್ರೆಂಟ್ ಬೌಲ್ಟ್, ಒಬೆಡ್ ಮೆಕ್‌ಕಾಯ್, ಆರ್.ಅಶ್ವಿನ್. ಯಜುವೇಂದ್ರ ಚಾಹಲ್ ಒಳಗೊಂಡ ಬೌಲಿಂಗ್ ಪಡೆ ಟೈಟಾನ್ಸ್‌ಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ. ಆರ್.ಅಶ್ವಿನ್ ಆಲ್ರೌಂಡ್ ನಿರ್ವಹಣೆ ಮೂಲಕ ತಂಡಕ್ಕೆ ಆಸರೆಯಾಗುತ್ತಾ ಬಂದಿದ್ದಾರೆ.

    * ಟೈಟಾನ್ಸ್ ಗೆದ್ದರೆ ಇತಿಹಾಸ
    ಗುಜರಾತ್ ಟೈಟಾನ್ಸ್ ಪ್ರಶಸ್ತಿ ಜಯಿಸಿದರೆ, ಲೀಗ್‌ಗೆ ಪದಾರ್ಪಣೆ ಮಾಡಿದ ವರ್ಷವೇ ಪ್ರಶಸ್ತಿ ಜಯಿಸಿದ ಮೊದಲ ತಂಡ ಎನಿಸಿಕೊಳ್ಳಲಿದೆ. ಲೀಗ್ ಆರಂಭಗೊಂಡ 2008ರಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್‌ಆಗಿತ್ತು. ಬಳಿಕ ಲೀಗ್‌ಗೆ ಎಂಟ್ರಿ ಕೊಟ್ಟ ಯಾವ ತಂಡಗಳು ಮೊದಲ ಯತ್ನದಲ್ಲಿ ಪ್ರಶಸ್ತಿ ಜಯಿಸಿಲ್ಲ.
    ———
    ಟೀಮ್ ನ್ಯೂಸ್:
    ಗುಜರಾತ್ ಟೈಟಾನ್ಸ್: ಉತ್ತಮ ಲಯದಲ್ಲಿರುವ ಟೈಟಾನ್ಸ್ ತಂಡ ಮೊದಲ ಕ್ವಾಲಿೈಯರ್‌ನಲ್ಲಿ ಆಡಿದ ತಂಡವನ್ನೇ ಬಹುತೇಕ ಕಣಕ್ಕಿಳಿಸಲಿದೆ.
    ಲೀಗ್ ಸಾಧನೆ: ಪಂದ್ಯ: 14, ಜಯ: 10, ಸೋಲು: 4,
    ಅಂಕಪಟ್ಟಿಯಲ್ಲಿ ಅಗ್ರಸ್ಥಾನ

    ರಾಜಸ್ಥಾನ ರಾಯಲ್ಸ್: ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಭರ್ಜರಿ ಗೆಲುವು ಕಂಡಿರುವ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ಲೀಗ್ ಸಾಧನೆ: ಪಂದ್ಯ : 14, ಜಯ: 9, ಸೋಲು: 5
    ಅಂಕಪಟ್ಟಿಯಲ್ಲಿ 2ನೇ ಸ್ಥಾನ
    ———
    ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 2, ಗುಜರಾತ್: 2, ರಾಜಸ್ಥಾನ: 0

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts