More

    ನೋಂದಾಯಿತ ಸಂಘದ ಒಬ್ಬ ಪ್ರತಿನಿಧಿಯನ್ನಷ್ಟೇ ಆಹ್ವಾನಿಸಿ

    ಚನ್ನರಾಯಪಟ್ಟಣ: ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಗೆ ತಾಲೂಕಿನಲ್ಲಿ ನೋಂದಾಯಿಸಲ್ಪಟ್ಟ ಸಂಘಗಳ ತಲಾ ಒಬ್ಬ ಪ್ರತಿನಿಧಿಗಷ್ಟೇ ಆಹ್ವಾನ ನೀಡುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ತಹಸೀಲ್ದಾರ್ ಗೀತಾ ಅವರಿಗೆ ಸೂಚಿಸಿದರು.

    ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ನಿಯಮ ಮೀರಿ ಭಾಗವಹಿಸಿದ ದಲಿತ ಸಂಘಟನೆಗಳ ಮುಖಂಡರು, ಯಾವ ವಿಷಯವನ್ನು ತಾರ್ಕಿಕ ಅಂತ್ಯಗೊಳಿಸುವಲ್ಲಿ ಮುಂದಾಗದಿದ್ದ ಹಿನ್ನೆಲೆಯಲ್ಲಿ ಮತ್ತು ಒಬ್ಬೊಬ್ಬರು ಮೈಕ್ ಹಿಡಿದು ಕಾಲಮಿತಿ ಇಲ್ಲದೆ, ವಿಷಯ ಬಿಟ್ಟು ಬೇರೆ ವಿಚಾರಗಳಲ್ಲೆ ಚರ್ಚೆಗೆ ಮುಂದಾಗಿ ಸಭೆ ಸುಸೂತ್ರವಾಗಿ ನಡೆಯಲು ಅಡ್ಡಿಯಾಗುತ್ತಿದ್ದನ್ನು ಅರಿತ ಶಾಸಕರು, ಮುಂದಿನ ಎಸ್ಸಿ, ಎಸ್ಟಿ ಹಿತರಕ್ಷಣಾ ಸಭೆಗೆ ಹೋಬಳಿವಾರು ನೋಂದಾಯಿತ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುವ ಸಂಘಗಳ ಮಾಹಿತಿ ಪಡೆದು, ಆ ಸಂಘದ ತಲಾ ಒಬ್ಬ ಪ್ರತಿನಿಧಿಗೆ ಆಹ್ವಾನ ನೀಡಿ ಇದು 12 ಸಂಘಗಳಿಗಷ್ಟೆ ಮೀಸಲಾಗಿರಲಿ. ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಎರಡು ಸಂಘಗಳಿಗೆ ಅವಕಾಶ ಮಾಡಿಕೊಟ್ಟು ಎಲ್ಲ ಸೇರಿ 20 ಸಂಘಗಳಿಗಷ್ಟೇ ಸೀಮಿತಗೊಳಿಸಿ. ಆಗ ಮಾತ್ರ ಸಮಸ್ಯೆಗೆ ಪರಿಹಾರ ಪಡೆಯಲು ಸಾಧ್ಯ ಎಂದರು.

    ಮಾದಿಗ ದಂಡೂರ ಸಮಿತಿ ಅಧ್ಯಕ್ಷ ಸಿ.ಎನ್.ಮಂಜುನಾಥ್ ಮಾತನಾಡಿ, ಪಟ್ಟಣದ ನಾಗಸಮುದ್ರ ರಸ್ತೆ ಎ.ಡಿ.ಕಾಲನಿಯಲ್ಲಿ ಪರಿಶಿಷ್ಟ ಜಾತಿಗಳ ಜನರೇ ವಾಸವಿದ್ದು, 650ಕ್ಕೂ ಹೆಚ್ಚು ಪಡಿತರ ಕಾರ್ಡುಗಳಿವೆ. ಹೆಚ್ಚುವರಿಯಾಗಿ ನ್ಯಾಯಬೆಲೆ ಅಂಗಡಿಯನ್ನು ಪರಿಶಿಷ್ಟ ಸಮುದಾಯಕ್ಕೆ ಕೋರಿ ಅರ್ಜಿ ಸಲ್ಲಿಸಿದರೂ ಇದುವರೆವಿಗೂ ಯಾವುದೇ ಕ್ರಮವಾಗಿಲ್ಲ. ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಾಗ ರೋಸ್ಟರ್ ಪದ್ಧತಿ ಅಳವಡಿಸದೇ ಇರುವುದರಿಂದ ಪ.ಜಾತಿ ಮತ್ತು ಪ.ಪಂಗಡದವರಿಗೆ ಅನ್ಯಾಯವಾಗಿದೆ ಎಂದು ದೂರಿದರು.

    ಅರಣ್ಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿಯ 8 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸರ್ಕಾರ ನಿಗದಿಗೊಳಿಸಿರುವ 16 ಸಾವಿರ ರೂ. ವೇತನದ ಪೈಕಿ ಅಧಿಕಾರಿ ಅವರಿಗೆ 8 ಸಾವಿರ ರೂ. ವೇತನ ನೀಡುತ್ತಿದ್ದರು. ಸುತ್ತೋಲೆ ಪಡೆದು 16 ಸಾವಿರ ರೂ. ಸಂಬಳ ಕೇಳಿದ 8 ಮಂದಿಯನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ. ದಲಿತ ವಿರೋಧಿ ನೀತಿ ವಿರುದ್ಧ ಕ್ರಮವಾಗಬೇಕೆಂದು ಪಟ್ಟು ಹಿಡಿದರು.

    ವಲಯ ಅರಣ್ಯಾಧಿಕಾರಿ ಪಲ್ಲವಿ ಪ್ರತಿಕ್ರಿಯಿಸಿ, 8 ಜನರನ್ನು ಕೆಲಸದಿಂದ ನಾವು ತೆಗೆದಿದ್ದಲ್ಲ, ಅವರೇ ಬಿಟ್ಟು ಹೋಗಿದ್ದಾರೆ, ಜತೆಗೆ ಅವರು ಹೊರಗುತ್ತಿಗೆ ನೌಕರರಾಗಿರುವುದರಿಂದ ಗುತ್ತಿಗೆದಾರ ವೇತನ ನೀಡುವಲ್ಲಿ ತಪ್ಪಾಗಿರಬಹುದು ಎಂದು ಸಭೆಗೆ ಮನವರಿಕೆ ಮಾಡಲು ಯತ್ನಿಸಿದರಾದರೂ ದಲಿತ ಮುಖಂಡರು ಒಪ್ಪಲಿಲ್ಲ. ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಈ ಬಗ್ಗೆ ಡಿಸಿಎಫ್ ವರದಿ ಕಳಿಸಲಿ. ಎಲ್ಲ ತಾಲೂಕುಗಳಲ್ಲಿಯೂ ಕೆಲಸದಿಂದ ತೆಗೆದಿದ್ದಾರೆಯೇ?. ಇಲ್ಲವೇ ನಮ್ಮಲ್ಲಿ ಮಾತ್ರ ತೆಗೆದಿದ್ದಾರೆಯೇ, ವೇತನ ವಿಚಾರವಾಗಿ ಗುತ್ತಿಗೆದಾರನಿಂದ ತಪ್ಪಾಗಿದ್ದರೆ ಅವನ ವಿರುದ್ಧ ಕ್ರಮಕ್ಕೆ ಬರೆಯಿರಿ ಎಂದರು.

    ಎ.ಡಿ.ಕಾಲನಿಯಲ್ಲಿ ಹೆಚ್ಚುವರಿ ನ್ಯಾಯಬೆಲೆ ಅಂಗಡಿಗೆ ತೆರೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಎರಡು ಪತ್ರ ಬರೆಯಲಾಗಿದೆ. ಇದೀಗ ಸಭೆಯಲ್ಲಿ ಆದ ಚರ್ಚೆಯಂತೆ ಮತ್ತೊಂದು ಪತ್ರ ಬರೆದು ಅಂಗಡಿ ತೆರೆಯಲು ಪ್ರಕಟಣೆ ಹೊರಡಿಸುವಂತೆ ನಿರ್ಣಯಿಸಲಾಯಿತು.
    ತಾಲೂಕಿನ ದಲಿತ ಕಾಲನಿಯ ಮೂಲ ಸೌಲಭ್ಯ, ಸರ್ಕಾರದ ಸವಲತ್ತುಗಳು, ವೈಯಕ್ತಿಕವಾಗಿ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಿತು.

    ತಹಸೀಲ್ದಾರ್ ಸಿ.ಜೆ.ಗೀತಾ, ಡಿವೈಎಸ್‌ಪಿ ರವಿಪ್ರಸಾದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾದಿಕಾರಿ ಹರೀಶ್, ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts