More

    ಹೂಡಿಕೆದಾರರ ಸಂಪತ್ತು 12.56 ಲಕ್ಷ ಕೋಟಿ ರೂ. ವೃದ್ಧಿ; 60 ಸಾವಿರ ರೂ. ಮೀರಿದ ಚಿನ್ನದ ದರ

    ಮುಂಬೈ: ಭಾರತದ ಷೇರು ಮಾರುಕಟ್ಟೆಯಲ್ಲಿ ಸತತ ಏಳನೇ ವಹಿವಾಟು ಧನಾತ್ಮಕವಾಗಿದ್ದು, ಇದರಿಂದ ಒಂದು ವಾರದಲ್ಲಿ ಹೂಡಿಕೆದಾರರ ಸಂಪತ್ತು 12.56 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದೆ. ಲೋಹ, ಬ್ಯಾಂಕ್ ಮತ್ತು ಹಣಕಾಸು ಸ್ಟಾಕ್​ಗಳ ಉತ್ಸಾಹಭರಿತ ಖರೀದಿಗಳಿಂದಾಗಿ ಬೆಂಚ್​ವಾರ್ಕ್ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಕಗಳಿಂದ ಏರಿಕೆ ಕಂಡು ಮಂಗಳವಾರದ ವ್ಯವಹಾರ 60 ಸಾವಿರ ಗಡಿದಾಟಿತು. ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಮುಂದುವರಿದ ಉತ್ಸಾಹ ಹಾಗೂ ವಿದೇಶಿ ಬಂಡವಾಳದ ಒಳ ಹರಿವು ಕೂಡ ಮಾರುಕಟ್ಟೆಯಲ್ಲಿನ ಧನಾತ್ಮಕ ವಿದ್ಯಮಾನಕ್ಕೆ ಕಾರಣವಾಗಿದೆ.

    30 ಷೇರುಗಳ ಬಿಎಸ್​ಇಯಲ್ಲಿ 311.21 ಅಂಕ (0.52) ಏರಿಕೆಯಾಗಿ 60,157.72ರಲ್ಲಿ ಮುಗಿಯಿತು. ಮಧ್ಯಂತರ ವ್ಯವಹಾರದಲ್ಲಿ 421.17 ಅಂಶ ಏರಿಕೆ ಕಂಡಿತು. ವಿಶಾಲ ಎನ್​ಎಸ್​ಇ ನಿಫ್ಟಿ 98.25 ಪಾಯಿಂಟ್ (ಶೇ. 0.56) ಗಳಿಕೆ ಕಂಡು 17,722.30ರಲ್ಲಿ ನಿಂತಿತು. ಕೊಟಕ್ ಮಹಿಂದ್ರ ಬ್ಯಾಂಕ್, ಟಾಟಾ ಸ್ಟೀಲ್, ಐಟಿಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್​ಸರ್ವ್, ಮಾರುತಿ, ಮಹಿಂದ್ರ ಆಂಡ್ ಮಹಿಂದ್ರ, ಎಸ್​ಬಿಐ ಮೊದಲಾದವು ಲಾಭ ಗಳಿಸಿದ ಪ್ರಮುಖ ಸಂಸ್ಥೆಗಳಾಗಿವೆ.

    ಚಿನ್ನ, ಬೆಳ್ಳಿ ದುಬಾರಿ

    ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ದರ 280 ರೂಪಾಯಿ ತುಟ್ಟಿಯಾಗಿ 10 ಗ್ರಾಂ ಬೆಲೆ 60,680 ರೂಪಾಯಿಗೆ ಏರಿದೆ. ಬೆಳ್ಳಿ ಧಾರಣೆಯಲ್ಲೂ 470 ರೂ. ಏರಿಕೆಯಾಗಿ ಕೆಜಿ ಬೆಲೆ 74,950 ರೂ.ಗೆ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎರಡೂ ಅಮೂಲ್ಯ ಲೋಹಗಳ ಬೆಲೆ ಜಾಸ್ತಿಯಾಗಿತ್ತು.

    ಎಚ್​ಡಿಎಫ್​ಸಿ ಬಡ್ಡಿ ದರ ಕಡಿತ: ಎಚ್​ಡಿಎಫ್​ಸಿ ಬ್ಯಾಂಕ್ ಕೆಲವು ಆಯ್ದ ಅವಧಿಗಳಿಗೆ ಲಾಭ ಆಧಾರಿತ ಸಾಲದ ಮೇಲಿನ ಬಡ್ಡಿಯನ್ನು (ಎಂಸಿಎಲ್​ಆರ್) 85 ಮೂಲಾಂಶದವರೆಗೆ ಕಡಿತ ಮಾಡಿರುವುದರಿಂದ ಸಾಲಗಳ ಮಾಸಿಕ ಕಂತಿನ (ಇಎಂಐ) ಮೊತ್ತ ಪ್ರಮಾಣ ಕಡಿಮೆಯಾಗಲಿದೆ.

    ಸಿಬಿಎಸ್​ಇಗೆ ಆದಾಯ ತೆರಿಗೆಯಿಂದ ವಿನಾಯಿತಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಸಂಗ್ರಹಿಸುವ ಪರೀಕ್ಷಾ ಶುಲ್ಕ, ಪಠ್ಯಪುಸ್ತಕಗಳ ಮಾರಾಟ ಇನ್ನಿತರ ಮೂಲದಿಂದ ಗಳಿಸಿದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವಾಲಯ ನೀಡಿದೆ. 2020-21, 2021-22 ಮತ್ತು 2022-23ನೇ ಸಾಲಿಗೆ ಈ ವಿನಾಯಿತಿಯನ್ನು ಘೋಷಿಸಲಾಗಿದ್ದು, 2024-25ಕ್ಕೂ ಇದು ಮುಂದುವರಿಯಲಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

    ಬಿಟ್​ಕಾಯಿನ್ ಏರಿಕೆ

    ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಅತಿ ದೊಡ್ಡ ಕ್ರಿಪ್ಟೊ ಕರೆನ್ಸಿ ಆಗಿರುವ ಬಿಟ್​ಕಾಯಿನ್ 2022ರ ಜೂನ್ ನಂತರ ಇದೇ ಮೊದಲ ಬಾರಿಗೆ 30,000 ಡಾಲರ್ ಮಟ್ಟಕ್ಕಿಂತ ಮೇಲೆ ಹೋಗಿದೆ. ಈ ವರ್ಷದ ಆರಂಭದಿಂದ ಇದು ಶೇಕಡ 80ರಷ್ಟು ಏರಿಕೆ ದಾಖಲಿಸಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಆಕ್ರಮಣಕಾರಿ ಹಣಕಾಸು ನೀತಿಯನ್ನು ಶೀಘ್ರವೇ ಕೊನೆಗೊಳಿಸಬಹುದೆಂದು ಹೂಡಿಕೆದಾರರು ಬಾಜಿ ಕಟ್ಟಲು ಆರಂಭಿಸಿರುವುದರಿಂದ ಈ ಹೆಚ್ಚಳವಾಗಿದೆ.

    ಭಾರತದ ಜಿಡಿಪಿ ಇಳಿಸಿದ ಐಎಂಎಫ್

    ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಪ್ರಸಕ್ತ ಸಾಲಿನ ಜಿಡಿಪಿಯನ್ನು ಶೇ. 5.9ಕ್ಕೆ ಇಳಿಸಿದೆ. ಈ ಹಿಂದಿನ ಅಂದಾಜಿನಲ್ಲಿ ಶೇ. 6.1 ಇರಲಿದೆ ಎಂದು ಹೇಳಿತ್ತು. ವಿಶ್ವ ಆರ್ಥಿಕತೆಯ ವಾರ್ಷಿಕ ಮುನ್ನೋಟವನ್ನು ಬಿಡುಗಡೆ ಮಾಡಿರುವ ಐಎಂಎಫ್, ಜಾಗತಿಕವಾಗಿ ಆರ್ಥಿಕ ಹಿಂಜರಿತದ ಪ್ರವೃತ್ತಿ ಇದ್ದರೂ ಭಾರತ ಆರ್ಥಿಕತೆ ಪ್ರಗತಿದಾಯಕವಾಗಿದೆ. 2024-25ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ. 6.3 ಇರಲಿದೆ ಎಂದು ಅಂದಾಜಿಸಿದೆ. ಚೀನಾದ ಜಿಡಿಪಿ ಪ್ರಸಕ್ತ ಸಾಲಿನಲ್ಲಿ ಶೇ. 5.2 ಮತ್ತು 2024ರಲ್ಲಿ ಶೇ. 4.5 ಇರಲಿದೆ. ಜಾಗತಿಕ ಬೆಳವಣಿಗೆ ದರ 2023ರಲ್ಲಿ ಶೇ. 2.8 ಇದ್ದು, 2024ರಲ್ಲಿ ಇದು ಶೇ. 3ಕ್ಕೆ ಏರಿದೆ ಎಂದು ಐಎಂಎಫ್ ನಿರೀಕ್ಷಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts