More

    ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ

    ಶೃಂಗೇರಿ: ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ 173 ಕಡೆ ಸಕಾರಿ ಜಾಗಕ್ಕೆ ಅನಧಿಕೃತವಾಗಿ ಈ ಹಿಂದೆ ಉಪನೋಂದಣಿ ಇಲಾಖೆ ದಾಖಲೆ ಸೃಷ್ಟಿಸಿದೆ. ಅನಧಿಕೃತ ಕಟ್ಟಡಗಳಿಗೂ ನಕಲಿ ದಾಖಲೆ ಸೃಷ್ಟಿಸಲಾಗಿದ್ದು ಈ ಕುರಿತು ಪೊಲೀಸ್ ತನಿಖೆ ಮಾಡಬೇಕಿದೆ ಎಂದು ಉಪನೋಂದಣಾಧಿಕಾರಿ ಚೆಲುವರಾಜ್ ಒತ್ತಾಯಿಸಿದರು.

    ತಾಪಂನಲ್ಲಿ ಬುಧವಾರ ಆಯೋಜಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿಯವರು ಸರ್ಕಾರದ ಕಂಪ್ಯೂಟರ್ ಬಳಸಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಉತ್ತರ ದೊರಕಲಿಲ್ಲ. ಪ್ರಕರಣ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಈ ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಯಬೇಕಿದೆ ಎಂದು ಸಭಾಧ್ಯಕ್ಷ ಟಿ.ಡಿ.ರಾಜೇಗೌಡ ಅವರನ್ನು ಆಗ್ರಹಿಸಿದರು.

    ಟಿ.ಡಿ.ರಾಜೇಗೌಡ ಮಾತನಾಡಿ, ಈ ಕುರಿತು ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಅಧಿಕಾರಿಗಳ ಹಾಜರಾತಿ ಕಡಿಮೆ ಇದೆ. ಮಾಹಿತಿ ನೀಡುವ ಅಧಿಕಾರಿಗಳು ಕಚೇರಿ ಸಿಬ್ಬಂದಿಯನ್ನು ಕಳುಹಿಸುತ್ತಿದ್ದಾರೆ. ಅವರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ? ಎಂದು ಎಂ.ಎಸ್.ರಂಗನಾಥ್ ಪ್ರಶ್ನಿಸಿದರು. ಟಿ.ಡಿ.ರಾಜೇಗೌಡ ಮಾತನಾಡಿ, ಕೆಡಿಪಿ ಸಭೆಗೆ ಅಧಿಕಾರಿಗಳು ಮಾತ್ರ ಬರಬೇಕು. ತಾಲೂಕಿನಲ್ಲಿ ಯಾವುದೇ ಸರ್ಕಾರಿ ಸಭೆಗಳು ಇಂತಹ ಸಮಯದಲ್ಲಿ ನಡೆಯುವಂತಿಲ್ಲ. ಇದರ ಕುರಿತು ನಿರ್ಣಯ ಕೈಗೊಳ್ಳಿ ಎಂದು ಇಒ ಜಯರಾಂ ಅವರಿಗೆ ಸೂಚಿಸಿದರು. ತಹಸೀಲ್ದಾರ್ ಅಂಬುಜಾ, ಮೆಸ್ಕಾಂ ಅಧಿಕಾರಿ ಪ್ರಶಾಂತ್ ಇತರರಿದ್ದರು.

    ಹಣ ಪಾವತಿಗೆ 2 ದಿನದ ಗಡುವು: ತಾಪಂನಿಂದ ಬ್ಯಾಂಕಿಗೆ ವಿಶೇಷ ಅನುದಾನವಾಗಿ 50 ಸಾವಿರ ರೂ. ಬಿಡುಗಡೆಗೊಂಡಿದೆ. ಅದನ್ನು ನಾವು ಬ್ಯಾಂಕಿನಲ್ಲಿ ಸಾಲ ಮಾಡಿದ ಪರಿಶಿಷ್ಟ ಜಾತಿ ಅವರ ಸಾಲದ ಖಾತೆಗೆ ಜಮಾ ಮಾಡಬೇಕಿದೆ. ಆದರೆ ಉಪಖಜಾನಾಧಿಕಾರಿ ಪ್ರಮೀಳಾ ಅವರು ಹಣ ನೀಡುತ್ತಿಲ್ಲ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ ಆರೋಪಿಸಿದರು.

    ಜಿಪಂ ಸದಸ್ಯ ಬಿ.ಶಿವಶಂಕರ್ ಮಾತನಾಡಿ, ಈ ಹಿಂದಿನ ವರ್ಷದ 53 ಲಕ್ಷ ರೂ. ಇವರ ಬೇಜವಾಬ್ದಾರಿಯಿಂದ ಸರ್ಕಾರಕ್ಕೆ ವಾಪಸ್ ಹೋಗಿದೆ ಎಂದು ದೂರಿದರು. ಕರೊನಾ ಸಂದರ್ಭದಲ್ಲಿ ಬಂದ ಅನುದಾನ ಇನ್ನೂ ಇಲಾಖೆಗೆ ನೀಡಿಲ್ಲ ಎಂದು ಸಬ್​ರಿಜಿಸ್ಟ್ರಾರ್ ಚೆಲುವರಾಜ್ ಆರೋಪಿಸಿದರು.

    ಮೇಲಾಧಿಕಾರಿಗಳ ಆದೇಶ ಪರಿಪಾಲಿಸುತ್ತಿದ್ದೇನೆ ಎಂದು ಪ್ರಮೀಳಾ ಸಮರ್ಥಿಸಿಕೊಂಡಾಗ, ಅಸಮಾಧಾನಗೊಂಡ ಎ.ಎಸ್.ನಯನ ಮಾತನಾಡಿ, ಬ್ಯಾಂಕ್​ನ ಹಣ ಎರಡು ದಿನಗಳ ಒಳಗೆ ಪಾವತಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಮಯಕ್ಕೆ ಸರಿಯಾಗಿ ಅನುಪಾಲನಾ ವರದಿ ನೀಡಿ: ಇಲಾಖೆಯ ಅನುಪಾಲನಾ ವರದಿ ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಸಭೆಗೆ ಬಂದಾಗ ಅನುಪಾಲನಾ ವರದಿ ತಂದು ಕೊಡುತ್ತಿದ್ದೀರಿ. ಕಾನೂನು ಬದ್ಧವಾಗಿ ಏಳು ದಿನಗಳ ಮೊದಲು ವರದಿಯನ್ನು ಸದಸ್ಯರಿಗೆ ನೀಡಬೇಕು. ಸದಸ್ಯರು ಅದರ ಮಾಹಿತಿಯನ್ನು ಸಭೆಯಲ್ಲಿ ಕುಳಿತು ಓದಬೇಕೇ? ಎಂದು ಜಿಪಂ ಸದಸ್ಯ ಬಿ.ಶಿವಶಂಕರ್ ಅವರು ತಾಪಂ ಇಒ ಜಯರಾಮ್ ಅವರನ್ನು ಪ್ರಸ್ನಿಸಿದರು. ಟಿ.ಡಿ.ರಾಜೇಗೌಡ ಮಾತನಾಡಿ, ತ್ರೖೆಮಾಸಿಕ ಸಭೆ ಮಹತ್ವದ್ದಾಗಿದೆ. ಹಾಗಾಗಿ ಸದಸ್ಯರಿಗೆ ಸೂಕ್ತ ಕಾಲಕ್ಕೆ ಅನುಪಾಲನಾ ವರದಿ ನೀಡಬೇಕು ಎಂದು ತಾಪಂ ಇಒ ಅವರಿಗೆ ಸೂಚಿಸಿದರು.

    ಹೆದ್ದಾರಿ ಅಭಿವೃದ್ಧಿಗೊಳಿಸಿ: ಹೊನ್ನೇಕೂಡಿಗೆ ಧರೆ ಕುಸಿದು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ವಣಗೊಂಡಿದೆ. ಹೆಮ್ಮಿಗೆ ಸೇತುವೆ ನಿರ್ವಣಕ್ಕೆ ವನ್ಯಜೀವಿ ವಿಭಾಗದವರ ಆಕ್ಷೇಪಣೆ ಇದೆ. ಆದರೆ ವನ್ಯಜೀವಿ ವಿಭಾಗದವರು ಯಂತ್ರ ಬಳಸಿ ಕಾಮಗಾರಿ ನಡೆಸಬಹುದು. ಲಕ್ಷಾಂತರ ಜನರು ಓಡಾಡುವ ರಾಷ್ಟ್ರೀಯ ಹೆದ್ದಾರಿ-169ರ 20 ಕಿಮೀ ಅಭಿವೃದ್ಧಿ ಯಾವಾಗ? ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ನವೀನ್ ಕಿಗ್ಗಾ ಪ್ರಶ್ನಿಸಿದರು.

    ವನ್ಯಜೀವಿ ವಿಭಾಗದವರು ಕೆರೆಕಟ್ಟೆ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಯಾವುದೇ ಮಾಹಿತಿ ನೀಡದೆ ಭಾನುವಾರದಿಂದ ವಿಳಂಬವಾಗಿ ಹಾಗೂ ವೇಗವಾಗಿ ಸಂಚರಿಸಿದರೂ 300 ರೂ. ದಂಡ ವಸೂಲಾತಿ ಮಾಡುತ್ತಿದ್ದಾರೆ. ಈ ಕುರಿತು ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ ಹಿರಿಯ ಅಭಿಯಂತ ನಟೇಶ್​ಕುಮಾರ್ ಮಾತನಾಡಿ, ರಾ.ಹೆದ್ದಾರಿ-169 ಅನಧಿಕೃತ ರಸ್ತೆ ಎಂದು ಇಲಾಖೆ ಮೇಲಾಧಿಕಾರಿಗಳು ಹೇಳುತ್ತಾರೆ. ಈ ಕುರಿತ ಆದೇಶ ಪತ್ರ ನೀಡಲು ಅವರನ್ನು ಕೇಳಿದರೆ ಉತ್ತರ ನೀಡುತ್ತಿಲ್ಲ ಎಂದು ತಿಳಿಸಿದರು. ಎಎಸ್​ಎಫ್ ಹುಸೇನ್ ಮಾತನಾಡಿ, ಈ ವಿಷಯದ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts