More

    ಮರಗಳ ಮಾರಣ ಹೋಮ ತನಿಖೆ: ಖಂಡ್ರೆ

    ಬೆಂಗಳೂರು: ಹಾಸನ ಜಿಲ್ಲೆ ಬೇಲೂರು ತಾಲೂಕು ನಂದಗೋಡನಹಳ್ಳಿ ಗ್ರಾಮದಲ್ಲಿ ನೂರಾರು ಮರ ಕಡಿದಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

    ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಮಾಳ ಜಮೀನಿನಲ್ಲಿರುವ ಬೆಲೆ ಬಾಳುವ ಸಾಗವಾನಿ, ಹೊನ್ನೆ, ಬೀಟೆ, ಹಲಸು ಮುಂತಾದ ಮರಗಳನ್ನು ಕಡಿದು ಹಾಕಿರುವ ಕುರಿತು ತಹಸೀಲ್ದಾರ್ ಮಮತಾ ಅವರು ಗಮನಕ್ಕೆ ತಂದಿದ್ದರು. ಈ ಸಂಬಂಧ ಈಗಾಗಲೇ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಹೇಳಿದರು.

    ಈ ಪ್ರಕಣದ ತನಿಖೆಗೆ ಎಸಿಸಿಎಫ್ ಕುಮಾರ್ ಪುಷ್ಕರ್ ಅವರನ್ನು ನಿಯುಕ್ತಿಗೊಳಿಸಿದ್ದು, ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರು ವರದಿ ಕೊಟ್ಟ ತಕ್ಷಣ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಅರಣ್ಯ ಇಲಾಖೆ ಸಿಬ್ಬಂದಿ ಶಾಮೀಲಾಗಿದ್ದರೂ ಕೂಡ ಯಾವುದೇ ಮುಲಾಜಿಲ್ಲದೇ ಸರ್ಕಾರ ಕ್ರಮ ಜರುಗಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದರು.

    ಘಟನೆ ಹಿನ್ನೆಲೆ

    ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್ 16ರ ಸರ್ಕಾರಿ ಭೂಮಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಬೆಲೆಬಾಳುವ ಸಾಗವಾನಿ, ಹೊನ್ನೆ, ಬೀಟೆ, ಹಲಸು ಸೇರಿದಂತೆ ಇನ್ನಿತರ ಬೆಲೆಬಾಳುವ ಕಾಡು ಜಾತಿ ಮರಗಳನ್ನು ಕಡಿದು ಹಾಕಲಾಗಿದೆ.
    ಅದೇ ಗ್ರಾಮಕ್ಕೆ ಇಂದು ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಗ್ರಾಮಲೆಕ್ಕಿಗ ಹಕ್ಕುಪತ್ರ ನೀಡಲೆಂದು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ತಿಳಿದು ಬಂದಿದ್ದು, ತಕ್ಷಣ ತಹಸೀಲ್ದಾರ್ ಮಮತಾ ಅವರಿಗೆ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೆ ತಹಸೀಲ್ದಾರ್ ಮಮತಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts