More

    ಚಹಾ ಭಾರತೀಯ ಸಂಸ್ಕೃತಿಯ ಭಾಗ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿಕೆ

    ಮಂಡ್ಯ: ಭಾರತದಲ್ಲಿ ಟೀ ಮಾಡದ ಮನೆ ಸಿಗುವುದು ತೀರಾ ಅಪರೂಪ. ಚಹಾ ನಮ್ಮ ಸಂಸ್ಕೃತಿಯ ಭಾಗವಾಗಿ ಹೋಗಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
    ಇಲ್ಲಿನ ಸುಭಾಷ್‌ನಗರದ ಟೀ ಡೇ ಆವರಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮತ್ತು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಟೀ ದಿನಾಚರಣೆ ಅಂಗವಾಗಿ ಟೀ ಕಾರ್ಮಿಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
    ದಣಿದ ದೇಹಕ್ಕೆ ಚೈತನ್ಯ ತರುವುದಕ್ಕೂ ಚಹಾ ಸಹಕಾರಿ. ಮುಂಜಾನೆ, ಹತ್ತು ಗಂಟೆ ನಂತರ ಮತ್ತು ಇಳಿ ಸಂಜೆ ಹೊತ್ತಲ್ಲಿ ಟೀ ಕುಡಿಯುವುದು ಕೂಡಾ ಬಹುತೇಕರ ದಿನಚರಿಯಾಗಿದೆ. ಹೀಗೆ, ಟೀ ಜನರ ಜೀವನದ ಪ್ರತಿಕ್ಷಣದಲ್ಲೂ ಹಾಸುಹೊಕ್ಕಾಗಿದೆ. ಮಾತ್ರವಲ್ಲದೆ ಕೋಟ್ಯಂತರ ಜನರಿಗೆ ಉದ್ಯೋಗ ನೀಡುವುದರ ಜತೆಗೆ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
    ಚೀನಾದ ರಾಜ ಶೆನ್ ನುಂಗ್ ಬಿಸಿನೀರು ಕುಡಿಯುತ್ತಿದ್ದಾಗ ಅಚಾನಕ್ಕಾಗಿ ಚಹಾದ ಎಲೆ ಲೋಟದೊಳಗೆ ಬಿದ್ದಿತ್ತಂತೆ. ಅದೇ ನೀರನ್ನು ಕುಡಿದಾಗ ರಾಜನಿಗೆ ಖುಷಿಯಾಗಿದ್ದಂತೆ. ಹೀಗೆ ಶುರುವಾಯಿತು ಚಹಾ ಕುಡಿಯುವ ಪದ್ಧತಿ ಎನ್ನಲಾಗುತ್ತಿದೆ. ಇನ್ನು ಟೀ ಬ್ಯಾಗ್ ಪದ್ಧತಿ ಪ್ರಾರಂಭಿಸಿದ ಥಾಮಸ್ ಸುಲ್ಲಿವಾನ್ ಎಂಬಾತ 1908ರಲ್ಲಿ ಅಮೆರಿಕಾದಲ್ಲಿ ಸಿಲ್ಕ್ ಬ್ಯಾಗಿನಲ್ಲಿ ಚಹಾವನ್ನು ತನ್ನ ಗ್ರಾಹಕರಿಗೆ ಪ್ರಾಯೋಗಿಕವಾಗಿ ನೀಡಿದ್ದರು. ಬಳಿಕ ಇದೇ ಪ್ರತಿಷ್ಠೆಯ ಸ್ಥಾನ ಪಡೆಯಿತು ಎಂದು ಸ್ಮರಿಸಿದರು.
    ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ಚೀನಾದ ಬಳಿಕ ಭಾರತ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಶವಾಗಿದೆ. ಅಸ್ಸಾಂ, ಡಾರ್ಜಿಲಿಂಗ್, ಕರ್ನಾಟಕ ಹೀಗೆ ದೇಶದ ಪ್ರಮುಖ ರಾಜ್ಯಗಳು ಟೀ ಉತ್ಪಾದನೆಯಲ್ಲಿ ವಿಶ್ವದ ಗಮನ ಸೆಳೆದಿವೆ. ಟೀ ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಇದೆ ಎಂದರು.
    ಸಕ್ಕರೆ ನಾಡು ಸಂಸ್ಥೆಯ ಅಧ್ಯಕ್ಷ ಶಶಿಧರ್ ಈಚೆಗೆರೆ, ಪ್ರೊ.ಜೋಗೀಗೌಡ, ಪ್ರೊ.ಭವ್ಯಾ, ಪ್ರೊ.ಸಹನಾ, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್‌ಕುಮಾರ್, ನಂದ ಕಿಶೋರ್, ವೇದಮೂರ್ತಿ, ನಿತಿನ್‌ಗೌಡ, ಶಶಾಂಕ್ ಇತರರಿದ್ದರು. ಇದೇ ಸಂದರ್ಭದಲ್ಲಿ ಟೀ ಅಂಗಡಿ ಕಾರ್ಮಿಕರಾದ ಮಧ್ಯಪ್ರದೇಶದ ಅರವಿಂದ್ ಮತ್ತು ಸಿದ್ದರಾಜು ಎಂಬುವರನ್ನು ಗಣ್ಯರು ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts