More

    ತ್ವರಿತಗತಿಯಲ್ಲಿ ಸೇವೆ ನೀಡಲು ಸೂಚನೆ

    ಬ್ಯಾಡಗಿ: ಕಾಗಿನೆಲೆ ಕಂದಾಯ ಕಚೇರಿ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳ ಅರ್ಜಿದಾರರಿಗೂ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಗುಣಮಟ್ಟದ ಸೇವೆ ನೀಡಬೇಕು. ಎಲ್ಲವೂ ಡಿಜಿಟಲ್ ವ್ಯವಸ್ಥೆಯಾಗಿದ್ದು, ತ್ವರಿತಗತಿಯಲ್ಲಿ ಸೇವೆ ನೀಡುವಂತೆ ತಹಸೀಲ್ದಾರ್ ಹಾಗೂ ಉಪತಹಸೀಲ್ದಾರರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.

    ತಾಲೂಕಿನ ಕಾಗಿನೆಲೆ ಉಪತಹಸೀಲ್ದಾರ್ ಕಾರ್ಯಾಲಯಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ಅವರು, ಸ್ಥಳೀಯ ಅಧಿಕಾರಿಗಳಿಂದ ಇ-ಸ್ವತ್ತು, ಪಹಣಿ ಪತ್ರ ವಿತರಣೆ, ಕೈಬರಹದ ಪಾಣಿ ಇತ್ಯಾದಿಗಳ ಕುರಿತು ಮಾಹಿತಿ ಪಡೆದರು.

    11 ಪಂಚಾಯಿತಿಗೆ ಏಳು ಅಧಿಕಾರಿಗಳು: ಕಾಗಿನೆಲೆ ಕಂದಾಯ ವಿಭಾಗದ ನಾಡಕಚೇರಿ ವ್ಯಾಪ್ತಿಯಲ್ಲಿ 11 ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸೇರ್ಪಡೆಗೊಂಡಿವೆ. ಆದರೆ, ಒಂದೊಂದು ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಗೆ 5-6 ಗ್ರಾಮಗಳನ್ನು ಒಳಗೊಂಡಿದೆ. ಎಲ್ಲರಿಗೂ ಸಮರ್ಪಕ ಸೇವೆ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿದರಲ್ಲದೆ, ಅರ್ಜಿದಾರರಿಗೆ ತೊಂದರೆ ನೀಡುತ್ತ ಓಡಾಡಿಸಬೇಡಿ ಎಂದರು.

    ಈಗ ಭೂಮಿ ಕೇಂದ್ರಕ್ಕೆ ಸಂಬಂಧಿಸಿದ ಭೂ ದಾಖಲೆಗಳೆಲ್ಲ ಆನ್‌ಲೈನ್ ಸಾಫ್ಟ್‌ವೇರ್‌ನಲ್ಲಿ ಲಭ್ಯವಿದ್ದು, ಗ್ರಾಮಲೆಕ್ಕಾಧಿಕಾರಿಗಳಿಗೆ ಭೂ ದಾಖಲೆಯ ಕೆಲಸವಿಲ್ಲವಾಗಿದೆ. ಏನಿದ್ದರೂ ಅರ್ಜಿಗಳ ವಿಲೇವಾರಿ, ಇತ್ಯಾದಿಗಳನ್ನು ಮಾಡಬೇಕಿದೆ. ಇಲ್ಲಿರುವ ದಾಖಲೆಗಳೆಲ್ಲ, ಸೆಕೆಂಡರಿಯಾಗಿ ಬರೆದಿಟ್ಟ ದಾಖಲೆಗಳು, ಎಲ್ಲವೂ ಡಿಜಿಟಲ್ ಆಗಿವೆ ಎಂದರು.

    ಅಭಿಲೇಖಾಲಯಕ್ಕೆ ಖುದ್ದಾಗಿ ತೆರಳಿ, ವಿವಿಧ ದಾಖಲೆಗಳ ಜೋಡಣೆ, ಹೊಸ ಸಾಫ್ಟ್‌ವೇರ್ ಅಳವಡಿಕೆ, ಇ-ಆಡಳಿತ ವ್ಯವಸ್ಥೆ ಮಾಹಿತಿ ಪಡೆದರು. ಅಲ್ಲದೆ, ಕಚೇರಿಗೆ ಬಂದ ಸಾರ್ವಜನಿಕರಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು ವಿನಃ, ಯಾವುದೇ ಕಾರಣಕ್ಕೂ ವಿನಾಕಾರಣ ಅಲೆದಾಡಿಸಬೇಡಿ ಎಂದು ತಾಕೀತು ಮಾಡಿದರು.

    ಬ್ಯಾಡಗಿ ಹೋಬಳಿಗೆ ಸೇರಿಸಲು ಮನವಿ: ಕಾಗಿನೆಲೆ ಹೋಬಳಿಯ ಮಾಸಣಗಿ, ಕೆರೂಡಿ, ಕಾಟೇನಹಳ್ಳಿ, ತಿಪಲಾಪುರ ಕೆಲ ಗ್ರಾಮಗಳು ಬ್ಯಾಡಗಿ ಹದ್ದಿಗೆ ಹೊಂದಿಕೊಂಡಿವೆ. ಆದರೆ, ಹಿಂದಿನ ಅಧಿಕಾರಿಗಳ ತಪ್ಪಿನಿಂದಾಗಿ ಕಾಗಿನೆಲೆ ನಾಡಕಚೇರಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಹೀಗಾಗಿ, ದಾಖಲಾತಿ ಪಡೆಯಲು, ಅರ್ಜಿ ಸಲ್ಲಿಸಲು, ಯೋಜನೆ ಪಡೆಯಲು ಇತ್ಯಾದಿಗಳಿಗೆ ಕಾಗಿನೆಲೆಗೆ ಓಡಾಡಬೇಕಿದೆ. ಬ್ಯಾಡಗಿ ಹೋಬಳಿಗೆ ಗ್ರಾಮಗಳನ್ನು ಸೇರಿಸಲು ಬಹಳ ದಿನಗಳಿಂದ ಗ್ರಾಮಸ್ಥರ ಒತ್ತಾಯವಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ, ಸ್ಥಳೀಯ ಕಂದಾಯ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಆಗ ಸಚಿವರು ಶಾಸಕರು, ಅಧಿಕಾರಿಗಳಿಂದ ಮಾಹಿತಿ ಪಡೆದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.

    ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ತಹಸೀಲ್ದಾರ್ ಎಸ್.ಎ. ಪ್ರಸಾದ, ಉಪತಹಸೀಲ್ದಾರ್ ಸಿದ್ದಲಿಂಗಪ್ಪ ಮಲ್ಲಾಡದ, ಕಂದಾಯ ನಿರೀಕ್ಷಕ ಆರ್.ಸಿ. ದ್ಯಾಮನಗೌಡ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts