More

    ಹೊರ ಜಿಲ್ಲೆಯಿಂದ ಬಂದವರಿಗೆ ತಪಾಸಣೆ

    ಹಾವೇರಿ: ಉದ್ಯೋಗ ಅರಸಿ ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರು ಇದೀಗ ಮರಳಿ ತಮ್ಮ ಸ್ವಂತ ಗ್ರಾಮಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಹೀಗೆ ಜಿಲ್ಲೆಗೆ ಬರುವವರನ್ನು ಕಡ್ಡಾಯವಾಗಿ ಸ್ವಾ್ಯಬ್ ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯದ ಮಾದರಿ ಬರುವವರೆಗೆ ಸರ್ಕಾರಿ ಕ್ವಾರಂಟೈನ್​ನಲ್ಲಿರಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಜಿಲ್ಲೆಯ ಎಲ್ಲ ತಹಸೀಲ್ದಾರ್​ಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ಜಿಲ್ಲೆಯ ತಹಸೀಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ರಾಜ್ಯದ ವಲಸೆ ಕಾರ್ವಿುಕರನ್ನು ಆಯಾ ಜಿಲ್ಲಾಡಳಿತ ತಮ್ಮ ಸ್ವಂತ ಊರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳ ಮೂಲಕ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಜಿಲ್ಲೆಯಲ್ಲಿ ಉಳಿದಿರುವ ಬೇರೆ ಜಿಲ್ಲೆಗಳ ಕಾರ್ವಿುಕರನ್ನು ರಸ್ತೆ ಸಾರಿಗೆ ಬಸ್ ಮೂಲಕ ಸ್ವಂತ ಗ್ರಾಮಗಳಿಗೆ ಕಳುಹಿಸಿಕೊಡಬೇಕು ಎಂದರು.

    ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆ ಗ್ರೀನ್​ವಲಯದಲ್ಲಿದೆ. ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮವಾಗಿ ಹೊರ ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸುವ ಕಾರ್ವಿುಕರನ್ನು ಚೆಕ್​ಪೋಸ್ಟ್​ಗಳಿಂದ ನೇರವಾಗಿ ಆಸ್ಪತ್ರೆಗೆ ಕಳುಹಿಸಬೇಕು. ಕಡ್ಡಾಯವಾಗಿ ಕೋವಿಡ್ ಸೋಂಕು ಕುರಿತು ಎಲ್ಲರ ರಕ್ತದ ಮಾದರಿ ಮತ್ತು ಗಂಟಲ ದ್ರವದ ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸಬೇಕು. ಲ್ಯಾಬ್ ವರದಿ ಬರುವ ತನಕ ಕಡ್ಡಾಯವಾಗಿ ಆಯಾ ತಾಲೂಕಿನ ಸರ್ಕಾರಿ ಕ್ವಾರಂಟೈನ್​ನಲ್ಲಿಡಬೇಕು. ಲ್ಯಾಬ್ ವರದಿ ನೆಗಟಿವ್ ಬಂದರೆ ಅವರವರ ಮನೆಗಳಿಗೆ ಕಳುಹಿಸಬಹುದು ಎಂದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ಉದ್ಯೋಗ ಅರಸಿ ಜಿಲ್ಲೆಗೆ ಬಂದಿರುವ ಕಾರ್ವಿುಕರು ತಮ್ಮ ಊರಿಗೆ ತೆರಳಲು ಇಚ್ಛಿಸಿದಲ್ಲಿ ಸರ್ಕಾರದ ನಿಯಮಾನುಸಾರ ಒಂದು ಬಸ್​ನಲ್ಲಿ 21 ಜನರಿಗೆ ಪ್ರಯಾಣಿಸಲು ಅವಕಾಶವಿದೆ. ಪ್ರಯಾಣಕ್ಕೆ ಮುನ್ನ ಬಸ್​ನ್ನು ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಛಗೊಳಿಸಬೇಕು. ಬಸ್​ನಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್, ಪ್ರಯಾಣಿಕರಿಗೆ ಮಾಸ್ಕ್, ಆಹಾರ ಪೊಟ್ಟಣ ನೀಡಬೇಕು. ಚಾಲಕರ ಜೊತೆಗೆ ಕಡ್ಡಾಯವಾಗಿ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳುಹಿಸಿ ಆಯಾ ಜಿಲ್ಲೆಗೆ ಪ್ರಯಾಣಿಕರನ್ನು ತಲುಪಿಸುವ ಕೆಲಸ ವಹಿಸಬೇಕು ಎಂದರು.

    ಕಾರ್ವಿುಕ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 1,266 ವಲಸೆ ಕಾರ್ವಿುಕರ ಪಟ್ಟಿ ತಯಾರಾಗಿದೆ. ಯಾರು ತಮ್ಮ ಸ್ವಗ್ರಾಮಕ್ಕೆ ತೆರಳುತ್ತಾರೆ ಎಂಬುದನ್ನು ಪಟ್ಟಿ ಮಾಡಿ ಸರ್ಕಾರದ ಮಾರ್ಗಸೂಚಿಯಂತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳ ಮೂಲಕ ಆಯಾ ಜಿಲ್ಲೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದರು.

    ನಗರ ಪ್ರದೇಶದ ಹೊರವಲಯದಲ್ಲಿ ಕಬ್ಬಿಣ, ಸಿಮೆಂಟ್ ಅಂಗಡಿಗಳನ್ನು, ಮೊಬೈಲ್ ಶಾಪ್​ಗಳನ್ನು ತೆರೆಯಲು ಅನುಮತಿ ನೀಡಿದೆ. ಯಾವುದೇ ಜನದಟ್ಟಣೆ ಇಲ್ಲದ ಹೊರ ವಲಯದ ಅಂಗಡಿಗಳನ್ನು ತೆರೆಯಲು ಸ್ಥಳೀಯವಾಗಿ ಕ್ರಮಕೈಗೊಳ್ಳಿ. ತರಕಾರಿ, ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಮಾರ್ಗಸೂಚಿಯಂತೆ ಉಳಿದ ಅಂಗಡಿಗಳಿಗೆ ಸಮಯ ನಿಗಪಡಿಸುವ ಕುರಿತು ತಮ್ಮ ಹಂತದಲ್ಲಿ ಕ್ರಮಕೈಗೊಳ್ಳಬೇಕು. ಎಲ್ಲ ಅಂಗಡಿ ಮಾಲೀಕರು ಹಾಗೂ ಕಾರ್ವಿುಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದು ಕೊಂಡಿರಬೇಕು. ಶೇ. 30ರಷ್ಟು ಕಾರ್ವಿುಕರು ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಹೋಟೆಲ್​ಗಳಲ್ಲಿ ಹಾಗೂ ಜ್ಯೂಸ್ ಅಂಗಡಿಗಳಲ್ಲಿ ಪಾರ್ಸಲ್​ಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಬಟ್ಟೆ ಅಂಗಡಿ, ಕಟಿಂಗ್ ಶಾಪ್​ಗಳಿಗೆ ಅವಕಾಶಗಳಿರುವುದಿಲ್ಲ. ಮಾರಾಟದ ಬೆಲೆ ಹಾಗೂ ಬಿಲ್​ಗಳನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲ ಅಂಗಡಿಗಳು ತಾಕೀತು ಮಾಡಬೇಕು ಎಂದರು.

    ಮಠಗಳು, ವಿವಿಧ ದಾನಿಗಳು, ಸ್ವಯಂ ಸೇವಾ ಸಂಘಗಳಿಂದ ನೀಡುವ ಆಹಾರ ಪೊಟ್ಟಣಗಳನ್ನು ಕಡ್ಡಾಯವಾಗಿ ತಹಸೀಲ್ದಾರ್​ಗಳ ಮೂಲಕವೇ ವಿತರಿಸಬೇಕು. ಯಾರಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ದಾಖಲಿಸಬೇಕು. ರೇಷನ್ ಕಾರ್ಡ್ ಇಲ್ಲದವರು ಹಾಗೂ ರೇಷನ್ ಕಾರ್ಡ್​ಗಾಗಿ ಅರ್ಜಿ ಹಾಕಿದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಬೇಕು. ಯಾರಿಗೆ ಆಹಾರ ಸಾಮಗ್ರಿಯ ಅಗತ್ಯವಿದೆಯೋ ಅಂಥವರಿಗೆ ಆಹಾರ ನೀಡಬೇಕು ಎಂದರು.

    ಸಭೆಯಲ್ಲಿ ಎಸ್​ಪಿ ಕೆ.ಜಿ. ದೇವರಾಜ್, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಡಾ. ದಿಲೀಪ್ ಶಶಿ, ಡಿಎಚ್​ಇ ಡಾ. ರಾಜೇಂದ್ರ ದೊಡ್ಡಮನಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಸಾರಿಗೆ ವಿಭಾಗೀಯ ನಿಯಂತ್ರಕ ಜಗದೀಶ ಲಮಾಣಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿರೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಇತರರಿದ್ದರು.

    ಕೆಲಸದ ಸ್ಥಳದಲ್ಲಿ ಮಾಸ್ಕ್ ಕಡ್ಡಾಯ: ರಸ್ತೆ, ಕಟ್ಟಡ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕೆಲಸದ ಸ್ಥಳದಲ್ಲಿ ಕಾರ್ವಿುಕರಿಗೆ ಮಾಸ್ಕ್ ಹಾಗೂ ಸುರಕ್ಷತಾ ಕ್ರಮಗಳ ಅನುಷ್ಠಾನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರಂತರವಾಗಿ ನಿಗಾವಹಿಸಬೇಕು. ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ ಹಾಗೂ ವೈದ್ಯಕೀಯ ವೃತ್ತಿ ನಿರತರಲ್ಲಿ ಜ್ವರ, ಗಂಟಲ ನೋವು, ಕೆಮ್ಮು, ಸೀನು ಸೋಂಕು ಕುರಿತು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡವರ ಮಾಹಿತಿ ಪಡೆದು ಪ್ರತಿದಿನ ದಿನ ಕಳುಹಿಸಬೇಕು. ತುರ್ತು ಆರೋಗ್ಯ ತಪಾಸಣೆ ವರದಿ ಹಾಗೂ ಮನೆಮನೆ ಆರೋಗ್ಯ ತಪಾಸಣೆಯ ಮಾಹಿತಿಯನ್ನು ತ್ವರಿತವಾಗಿ ಕಳುಹಿಸಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts