More

    ಬೆಳೆ ವಿಮೆಗೆ ‘ಎಫ್‌ಐಡಿ’ ಪೀಕಲಾಟ

    ನರೇಗಲ್ಲ: ರೈತರಿಗೆ ಸಹಾಯವಾಗಲಿ ಎಂದು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ. ಆದರೆ, ಪ್ರಸಕ್ತ ಸಾಲಿನಿಂ ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ನೋಂದಣಿ ಕಡ್ಡಾಯ ಮಾಡಿರುವುದರಿಂದ ವಿಮೆ ತುಂಬಲು ರೈತರು ಪರದಾಡುತ್ತಿದ್ದಾರೆ.

    ಸರ್ಕಾರ ಫಸಲ್ ಬಿಮಾ ಯೋಜನೆಯ ವಿವಿಧ ಬೆಳೆಗಳಿಗೆ ವಿಮೆ ತುಂಬುವ ಕೊನೆಯ ದಿನಾಂಕ ಘೋಷಿಸಿದೆ. ಅದರಂತೆ, ಹೆಸರು ಬೆಳೆಗೆ ಜುಲೈ 15, ಶೇಂಗಾ, ಹತ್ತಿ, ಗೋವಿನ ಜೋಳ, ಮುಂಗಾರು ಬಿಳಿ ಜೋಳಕ್ಕೆ ಜುಲೈ 31 ಕೊನೆಯ ದಿನವಾಗಿದೆ. ನರೇಗಲ್ಲ ಹೋಬಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಹಲವು ವರ್ಷಗಳಿಂದ ರೈತರ ಕೈಗೆ ದೊರೆಯುತ್ತಿಲ್ಲ. ಈ ವರ್ಷವೂ ಅದೇ ಸಂಪ್ರದಾಯ ಮುಂದುವರಿದಿದೆ.
    ಬಹುತೇಕ ಮುಂಗಾರು ಬೆಳೆಗಳು ಸರಿಯಾಗಿ ಕೈಸೇರದೆ ವರ್ಷಗಳೇ ಉರುಳಿವೆ. ಬೆಳೆ ವಿಮೆ ನಂಬಿಕೊಂಡು ಹಲವರು ಸಾಲಮಾಡಿ ಹೆಸರು ಬಿತ್ತನೆ ಮಾಡಿದ್ದಾರೆ. ಆದರೆ, ಈ ವರ್ಷವೂ ಬೆಳೆ ಬಹುತೇಕ ಕೈಕೊಟ್ಟಿದೆ. ವಿಮೆ ಮಾಡಿಸಿಯಾದರೂ ನಷ್ಟದಿಂದ ಪಾರಾಗಬೇಕು ಎಂದುಕೊಂಡಿದ್ದ ರೈತರಿಗೆ ಈಗ ತಾಂತ್ರಿಕ ಸಮಸ್ಯೆ ಎದುರಾಗಿದೆ.
    ಎನ್‌ಐಸಿ (ನ್ಯಾಷನಲ್ ಇನ್‌ಫಾರ್ಮೇಷನ್ ಸೆಂಟರ್) ನಿರ್ವಹಿಸುವ ಬೆಳೆ ವಿಮೆ ತಂತ್ರಾಂಶದಲ್ಲಿ ಪ್ರಸಕ್ತ ಸಾಲಿನಲ್ಲಿ ಎಫ್‌ಐಡಿ ಸಂಖ್ಯೆ ನೋಂದಣಿ ಸಕ್ರಿಯವಾಗಿದ್ದರೆ ಮಾತ್ರ ವಿಮೆ ತುಂಬಲು ಅವಕಾಶ ಆಗುವಂತೆ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

    ಈ ಹಿಂದೆ ರೈತರ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಪಹಣಿಯನ್ನು ದಾಖಲಿಸಲಾಗುತ್ತಿತ್ತು. ಪಹಣಿ ಮೃತರ ಅಥವಾ ಇತರ ಕುಟುಂಬ ಸದಸ್ಯರ(ಜಂಟಿ) ಹೆಸರಿನಲ್ಲಿದ್ದರೂ ಒಪ್ಪಿಗೆ ಪತ್ರದೊಂದಿಗೆ ಬೆಳೆ ವಿಮೆ ತುಂಬಬಹುದಾಗಿತ್ತು. ಆದರೆ, ಈಗ ಎಫ್‌ಐಡಿ ಸಂಖ್ಯೆ ಕಡ್ಡಾಯ ಮಾಡಿದ್ದರಿಂದ, ಬೆಳೆ ವಿಮೆ ತುಂಬುವುದು ಅಸಾಧ್ಯ ಎಂಬಂತಾಗಿದೆ.

    ಬೆಳೆ ವಿಮೆಯಲ್ಲಿ ಅವ್ಯವಹಾರಗಳಾಗುತ್ತಿವೆ. ಜಮೀನಿನ ಬೆಳೆವಿಮೆಯನ್ನು ಜಂಟಿದಾರರರಲ್ಲಿ ಒಬ್ಬರು ತುಂಬಿ ತಾವೇ ಹಣ ಪಡೆಯುತ್ತಿದ್ದಾರೆ ಅಥವಾ ಮೃತರ ಹೆಸರಿನಲ್ಲಿ ಜಮೀನು ಇದ್ದು, ಅವರ ವಾರಸುದಾರರ ಪೈಕಿ ಒಬ್ಬರು ತಮ್ಮ ದಾಖಲೆಗಳನ್ನು ಸಲ್ಲಿಸಿ ಬೆಳೆವಿಮೆ ಪಡೆದಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆಯು ನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಕಡ್ಡಾಯವಾಗಿ ಎಫ್‌ಐಡಿ ಮತ್ತು ಇ- ಕೆವೈಸಿ ಮಾಡಿಸಬೇಕಿದೆ. ಆಗ ಮಾತ್ರ ಬೆಳೆ ವಿಮೆ ತುಂಬಲು ಬರುತ್ತದೆ. ಸ್ವಲ್ಪ ಕಷ್ಟ ಎನಿಸಿದರೂ ಇದರಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.
    -ರವೀಂದ್ರಗೌಡ ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts