More

    ಆಸ್ತಿಗಳ ಇ-ಸ್ವತ್ತಿಗೆ ಒತ್ತಾಯ

    ಸವಣೂರ: ಪಟ್ಟಣದಲ್ಲಿ 9 ಸಾವಿರಕ್ಕೂ ಹೆಚ್ಚು ಆಸ್ತಿಗಳಿದ್ದರೂ, ಇದುವರೆಗೆ ಕೇವಲ 1500 ಆಸ್ತಿಗಳಿಗೆ ಮಾತ್ರ ಇ- ಸ್ವತ್ತು ಮಾಡಲಾಗಿದೆ ಎಂದು ಮಹೇಶ ಮುದಗಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಪಟ್ಟಣ ಪುರಸಭೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಆಸ್ತಿ ಕಾಪಾಡಿಕೊಳ್ಳಲು ಹಾಗೂ ಉತಾರ ಪಡೆಯಲು ನಿತ್ಯ ಪುರಸಭೆಗೆ ಅಲೆದಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ, ಅವಶ್ಯವಿರುವ ಕುಟುಂಬಸ್ಥರಿಗೆ ಉತಾರ ನೀಡಬೇಕು ಹಾಗೂ ಎಲ್ಲ ಆಸ್ತಿಗಳನ್ನು ಇ- ಸ್ವತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ, ಸರ್ವ ಆಸ್ತಿಗಳನ್ನು ಇ- ಸ್ವತ್ತುಗೊಳಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಸಿಬ್ಬಂದಿ ಕೊರತೆಯಿಂದಾಗಿ ತಡವಾಗಿದೆ. ವಿಶೇಷ ಸಿಬ್ಬಂದಿ ನೇಮಕಗೊಳಿಸಿ ಸಾರ್ವಜನಿಕರಿಗೆ ಅವಶ್ಯವಾಗಿರುವ ಉತ್ತಾರ ವಿತರಿಸಲಾಗುವುದು ಎಂದರು.

    ಹೊರ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ವಿುಕರನ್ನು ನೇಮಕ ಮಾಡಿಕೊಳ್ಳಲು ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿ, ‘ಪಟ್ಟಣದ ಸ್ವಚ್ಛತೆಗಾಗಿ ಪೌರ ಕಾರ್ವಿುಕರನ್ನು ನೇಮಿಸುವಂತೆ ಸರ್ಕಾರಕ್ಕೆ ಅಹವಾಲು ಸಲ್ಲಿಸಬೇಕು. ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಲ್ಲಿ ವೇತನ ನೀಡುವುದು ಪುರಸಭೆಗೆ ಹೊರೆಯಾಗಲಿದೆ. ಅಲ್ಲದೆ, ಇವರಿಂದ ಸೂಕ್ತ ಕೆಲಸ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

    2020ನೇ ಸಾಲಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಜಮಾ-ಖರ್ಚು ವಿವರವನ್ನು ಲೆಕ್ಕ-ಪತ್ರ ವಿಭಾಗ ವ್ಯವಸ್ಥಾಪಕಿ ಸುಧಾ ಅರಬಗೊಂಡ ತಿಳಿಸುತ್ತಿದ್ದಂತೆ ಆಕ್ರೋಶಗೊಂಡ ಅದ್ದು ಪರಾಶ, ಖರ್ಚು-ವೆಚ್ಚದ ಬಗ್ಗೆ ಕೆಲ ಅನುಮಾನವಿದ್ದು, ಖರ್ಚಿನ ಸಂಪೂರ್ಣ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು. ನಂತರ, ಎಲ್ಲ ಸದಸ್ಯರಿಗೆ ಖರ್ಚು-ಜಮಾ ಪ್ರತಿ ನೀಡಲಾಯಿತು.

    ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ನಿವೇಶನ ಹಾಗೂ ಉದ್ಯಾನಗಳಿಗೆ ತಂತಿ ಬೇಲಿ ಹಾಕಲು, ಪುರಸಭೆ ಆವರಣದಲ್ಲಿ ಕ್ಯಾಂಟೀನ್ ಮಳಿಗೆ ನಿರ್ಮಾಣ ಹಾಗೂ ತರಕಾರಿ, ಮಾಂಸ ಮಾರಾಟ ಮಳಿಗೆಗಳ ದುರಸ್ತಿಗೆ ಅನುಮೋದನೆ ನೀಡಲಾಯಿತು.

    ಶೈಲಾ ಮುದಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಲ್ಲಾವುದೀನ್ ಮನಿಯಾರ, ಸದಸ್ಯರಾದ ಸದಾನಂದ ಕೆಮ್ಮಣಕೇರಿ, ಶಂಕ್ರಪ್ಪ ದೊಡ್ಡಮನಿ, ಲಿಲಾವತಿ ಗಾಣಗೇರ, ಪೀರಅಹ್ಮದ ಗವಾರಿ, ಸೂಪಿಯಾ ಚುಡಿಗಾರ ಇತರರು ಪಾಲ್ಗೊಂಡಿದ್ದರು. ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ ನಿರ್ವಹಿಸಿದರು.

    ಮಾಧ್ಯಮದವರ ಉಪಸ್ಥಿತಿಗೆ ಆಕ್ಷೇಪ, ಕ್ಷಮೆ

    1ನೇ ವಾರ್ಡ್ ಸದಸ್ಯ ಅತ್ತಾವುಲ್ಲಾಖಾನ್ ಪಠಾಣ ಆರಂಭದಲ್ಲಿ, ‘ಸಭೆಯಲ್ಲಿ ಮಾಧ್ಯಮದವರು ಉಪಸ್ಥಿತರಿರುವ ಬಗ್ಗೆ ಮುಖ್ಯಾಧಿಕಾರಿ ಸರ್ಕಾರದ ಸುತ್ತೋಲೆ ತೋರಿಸಬೇಕು’ ಎಂದು ಪಟ್ಟು ಹಿಡಿದ ಕಾರಣ ಕೆಲಕಾಲ ಗೊಂದಲದ ಗೂಡಾಗಿ, ಪತ್ರಕರ್ತರು ಸಭೆಯಿಂದ ಹೊರ ನಡೆದರು. ಹಿರಿಯ ಸದಸ್ಯರು ಅತ್ತಾವುಲ್ಲಾಖಾನ್ ಪಠಾಣ ವಿರುದ್ಧ ಆಕ್ರೋಶಗೊಂಡು, ‘ನೀವು ಪ್ರಥಮ ಬಾರಿ ಪುರಸಭೆಗೆ ಆಯ್ಕೆಯಾಗಿದ್ದೀರಿ, ಪ್ರಶ್ನೆ ಮಾಡುವ ಮೊದಲು ಸಭೆಯ ಬಗ್ಗೆ ಅರಿತುಕೊಳ್ಳುವುದು ಅವಶ್ಯ’ ಎಂದು ಬುದ್ಧಿಮಾತು ಹೇಳಿದರು. ಆಗ ಪಠಾಣ, ತಮ್ಮ ತಪ್ಪಿನ ಅರಿವಾಗಿ ಮಾಧ್ಯಮದವರ ಕ್ಷಮೆ ಕೋರಿ ಸಭೆಯಲ್ಲಿ ಪಾಲ್ಗೊಳ್ಳಲು ಕೋರಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts